ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿವ ನೀರು ಪೂರೈಕೆಗೆ 120 ಬಾಡಿಗೆ ಟ್ಯಾಂಕರ್

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೇಸಿಗೆಯಲ್ಲಿ ನಗರದ ನಾಗರಿಕರಿಗೆ ಸಮರ್ಪಕ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು 120 ಖಾಸಗಿ ಟ್ಯಾಂಕರ್‌ಗಳನ್ನು ಬಾಡಿಗೆ ಪಡೆಯಲು ನಿರ್ಧರಿಸಿದೆ.

ಕುಡಿಯುವ ನೀರಿನ ಸಮಸ್ಯೆಯಿರುವಂತಹ ಕಡೆಗಳಲ್ಲಿ ಪ್ರತಿ ದಿನ ಐದು ಟ್ರಿಪ್‌ಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಖಾಸಗಿ ಟ್ಯಾಂಕರ್‌ಗೆ ದಿನಕ್ಕೆ 1,650 ರೂಪಾಯಿ ಬಾಡಿಗೆ ನೀಡಲು ಮಂಡಳಿಯು ಉದ್ದೇಶಿಸಿದೆ.

ನಗರದಲ್ಲಿ ಬೇಸಿಗೆಯಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು 100 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಪ್ರಕಟಿಸಿರುವ ಹಿನ್ನೆಲೆಯಲ್ಲಿ, ಸರ್ಕಾರ ಬಿಡುಗಡೆ ಮಾಡಲಿರುವ ಗರಿಷ್ಠ ಪ್ರಮಾಣದ ಹಣವನ್ನು ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗಿರುವ ಪ್ರದೇಶಗಳಿಗೆ ಬಳಕೆ ಮಾಡಲು ಜಲಮಂಡಳಿ ಚಿಂತಿಸುತ್ತಿದೆ.

ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ ವಾರ್ಡ್‌ಗಳಲ್ಲಿ ಪೈಪ್‌ಲೈನ್ ಕಾಮಗಾರಿ ಇನ್ನೂ ಪೂರ್ಣಗೊಳ್ಳದ ಕಾರಣ ಸದ್ಯಕ್ಕೆ ಕಾವೇರಿ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಇಂತಹ ಪ್ರದೇಶಗಳಲ್ಲಿ ಕುಡಿವ ನೀರಿನ ಸಮಸ್ಯೆ ಹೆಚ್ಚಾಗಿದೆ.

ಈ ಹಿನ್ನೆಲೆಯಲ್ಲಿ ಕೆಟ್ಟು ನಿಂತ ಸುಮಾರು 8 ಸಾವಿರ ಕೊಳವೆಬಾವಿ ದುರಸ್ತಿಗೆ ಜಲಮಂಡಳಿ ತೀರ್ಮಾನಿಸಿದೆ. ಸದ್ಯದ ಸ್ಥಿತಿಯಲ್ಲಿ ಹೊಸ ಕೊಳವೆ ಬಾವಿ ಕೊರೆಯುವುದಕ್ಕಿಂತ ದುರಸ್ತಿಪಡಿಸುವುದಕ್ಕೆ ಆದ್ಯತೆ ನೀಡಲು ನಿರ್ಧರಿಸಿದೆ.

`ಒಂದು ವೇಳೆ ಹೊಸದಾಗಿ ಕೊಳವೆಬಾವಿ ಕೊರೆಯುವ ಅಗತ್ಯ ಬಿದ್ದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆಯಲಾಗುವುದು~ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಕೆಟ್ಟು ನಿಂತ ಕೊಳವೆಬಾವಿಗಳನ್ನು ನಿರ್ವಹಣೆಗಾಗಿ ಪಾಲಿಕೆ,ಮಂಡಳಿಗೆ ಹಸ್ತಾಂತರಿಸಬೇಕಿದೆ.

`ಒಂದು ವೇಳೆ ಹೊಸದಾಗಿ ಕೊಳವೆಬಾವಿ ಕೊರೆಯುವ ಅಗತ್ಯ ಬಿದ್ದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆಯಲಾಗುವುದು~ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಕೆಟ್ಟು ನಿಂತ ಕೊಳವೆಬಾವಿಗಳನ್ನು ನಿರ್ವಹಣೆಗಾಗಿ ಪಾಲಿಕೆ, ಮಂಡಳಿಗೆ ಹಸ್ತಾಂತರಿಸಬೇಕಿದೆ.

ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಕಳೆದ ವರ್ಷ ಕೂಡ ಜಲಮಂಡಳಿಯು ನೂರು ಖಾಸಗಿ ಟ್ಯಾಂಕರ್‌ಗಳನ್ನು ಬಾಡಿಗೆ ಪಡೆದಿತ್ತು.

ಬಹಳಷ್ಟು ಕಡೆಗಳಲ್ಲಿ ಖಾಸಗಿ ಗುತ್ತಿಗೆದಾರರು ಹಣಕ್ಕೆ ಕುಡಿಯುವ ನೀರನ್ನು ಮಾರಾಟ ಮಾಡಿದ್ದರು ಎಂಬ ಆರೋಪಗಳು ಕೂಡ ಸಾರ್ವಜನಿಕರಿಂದ ಕೇಳಿ ಬಂದಿದ್ದವು.

ಜಲಮಂಡಳಿ ಟ್ಯಾಂಕರ್ ಮೂಲಕ ಪೂರೈಸುವ ನೀರು ಉಚಿತ ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಇಲ್ಲದಿರುವುದರಿಂದ ಇಂತಹ ಪ್ರಮಾದಗಳಿಗೆ ಅವಕಾಶವಾಯಿತು.

ಈ ಹಿನ್ನೆಲೆಯಲ್ಲಿ ಈ ವರ್ಷ ಸಮರ್ಪಕ ಕುಡಿಯುವ ನೀರು ಪೂರೈಸುವುದಕ್ಕೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಜಲಮಂಡಳಿ ನಿರ್ಧರಿಸಿದೆ.

ಕಳೆದ ವರ್ಷ ಜಲಮಂಡಳಿ ಕುಡಿಯುವ ನೀರಿಗಾಗಿ 22 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿತ್ತು.
ಇದರಲ್ಲಿ 4 ಕೋಟಿ ರೂಪಾಯಿಗಳನ್ನು ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು, ಎಂಟು ಕೋಟಿ ರೂಪಾಯಿಗಳನ್ನು ಕೊಳವೆಬಾವಿಗಳ ನಿರ್ವಹಣೆಗಾಗಿ ಹಾಗೂ 10 ಕೋಟಿ ರೂಪಾಯಿಗಳನ್ನು ವಿದ್ಯುತ್ ಬಿಲ್ ಪಾವತಿಸಲು ಖರ್ಚು ಮಾಡಲಾಗಿತ್ತು.

ಕಳೆದ ವರ್ಷ ಕುಡಿಯುವ ನೀರು ತಲುಪುವ ಕೊನೇ ಭಾಗವಾದ ನಗರದ ಪೂರ್ವ ಪ್ರದೇಶಗಳಿಗೆ 50-60 ಟ್ಯಾಂಕರ್‌ಗಳನ್ನು ಒದಗಿಸಲಾಗಿತ್ತು.

ಆದರೆ, ಈ ವರ್ಷ ತಾರತಮ್ಯವಾಗದಂತೆ ಎಲ್ಲ ಭಾಗಗಳಿಗೂ ಸಮಾನವಾಗಿ ಕುಡಿಯುವ ನೀರು ಪೂರೈಸಲು ಜಲಮಂಡಳಿ ತೀರ್ಮಾನಿಸಿದೆ.

`ಈ ಬಾರಿ ಜಲಮಂಡಳಿಯು ಟ್ಯಾಂಕರ್‌ಗಳ ಮೂಲಕ ಪೂರೈಸುವ ನೀರನ್ನು ಹಣ ನೀಡಿ ಖರೀದಿಸದ ರೀತಿ ಜಾಗೃತರಾಗಿರುವಂತೆ ನಾವು ಸಾರ್ವಜನಿಕರನ್ನು ಕೋರುತ್ತೇವೆ.

ಈ ರೀತಿ ಯಾರಾದರೂ ಹಣ ಪಡೆದಲ್ಲಿ ಕೂಡಲೇ ಅವರ ವಿರುದ್ಧ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಬಹುದು~ ಎಂದು ಜಲಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT