ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿಗಲ್ ತಾ.ಪಂ: ಅವ್ಯವಹಾರ, ದಾಖಲೆ ನಾಶ

Last Updated 15 ಸೆಪ್ಟೆಂಬರ್ 2011, 9:35 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕು ಪಂಚಾಯಿತಿಯಲ್ಲಿ ಅವ್ಯವಹಾರ ನಡೆದಿರುವುದು ಖಚಿತವಾಗಿದ್ದು, ಸಿಬ್ಬಂದಿ ಉದ್ದೇಶ ಪೂರ್ವಕವಾಗಿಯೆ ದಾಖಲೆಗಳನ್ನು ನಾಶಮಾಡಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಮಣ್ಣ ಕಿಡಿಕಾರಿದರು.

ಬುಧವಾರ ನಡೆದ ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಸಿಬ್ಬಂದಿಗಳ ಕರ್ತವ್ಯ ನಿರ್ಲಕ್ಷ್ಯದಿಂದ ರೋಸಿ ಹೋದ ಅವರು ಈ ವಿಷಯ ಬಹಿರಂಗಪಡಿಸಿ, ವಾರದೊಳಗೆ ದಾಖಲಾತಿ ಒದಗಿಸದಿದ್ದಲ್ಲಿ ಲೊಕಾಯುಕ್ತರಿಗೆ ದೂರು ನೀಡಿ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಸಿಬ್ಬಂದಿಗಳಿಗೆ ಎಚ್ಚರಿಸಿದರು.

ಮದ್ದೂರು ರಸ್ತೆಯ ಮುಸಾಫರ್‌ಖಾನ ನಿವೇಶನದಲ್ಲಿ 1988ರಲ್ಲಿ ತಾಲ್ಲೂಕು ಪಂಚಾಯಿತಿ ವತಿಯಿಂದ ಅಂಗಡಿ ಮಳಿಗೆ ನಿರ್ಮಿಸಿ ಬಾಡಿಗೆಗೆ ನೀಡಲಾಗಿದೆ. ಆದರೆ, ಇದುವರೆವಿಗೂ ಬಾಡಿಗೆ ವಸೂಲಾತಿ ಬಗ್ಗೆಯಾಗಲಿ, ಬಾಡಿಗೆ ಕರಾರು ನವೀಕರಣಗೊಂಡ ಬಗ್ಗೆಯಾಗಲಿ ಯಾವುದೇ ದಾಖಲೆ ಲಭ್ಯವಿಲ್ಲ.

ಕೆಲ ಬಾಡಿಗೆದಾರರು ಮಾತ್ರ ನಿರಂತರವಾಗಿ ಪಾವತಿಸಿರುವ ಸುಮಾರು ರೂ. 8ಲಕ್ಷಕ್ಕೂ ಹೆಚ್ಚು ಬಾಡಿಗೆ ಹಣಕ್ಕೆ ಸಂಬಂಧಿಸಿದ ದಾಖಲೆ ಮಾಯವಾಗಿದೆ. ತಾವು ಅಧ್ಯಕ್ಷರಾಗಿ ಆಯ್ಕೆಯಾಗಿ ಆರು ತಿಂಗಳು ಕಳೆದಿದ್ದು, ಪ್ರತಿ ತಿಂಗಳು ನಡೆಯುವ ಸಭೆಯಲ್ಲಿ ದಾಖಲೆ ಒದಗಿಸುವಂತೆ ಆಗ್ರಹಿಸಿ ಲಿಖಿತವಾಗಿ ಸೂಚಿಸಿದ್ದರೂ; ದಾಖಲೆ ಒದಗಿಸದ ಅಧಿಕಾರಿಗಳು ಅವ್ಯವಹಾರ ಬಯಲಿಗೆ ಬರುತ್ತದೆಂದು ಹೆದರಿ ಉದ್ದೇಶಪೂರ್ವಕವಾಗಿ ಅವುಗಳನ್ನು ನಾಶಪಡಿಸಿದ್ದಾರೆ ಎಂದು ಆರೋಪಿಸಿದರು.

ತಾಲ್ಲೂಕು ಪಂಚಾಯಿತಿಗೆ ಸೇರಿದ ವಸತಿಗೃಹಗಳ ಬಾಡಿಗೆ ವಸೂಲಾತಿಯಲ್ಲಿಯೂ ಬಹಳಷ್ಟು ಅವ್ಯವಹಾರವಾಗಿದ್ದು, ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ವೇತನದಲ್ಲಿ ಬಾಡಿಗೆ ಹಣ ಹಿಡಿದಿದ್ದರೂ ಪಂಚಾಯಿತಿ ಲೆಕ್ಕಕ್ಕೆ ಜಮಾ ಆಗಿಲ್ಲ. ಈ ಬಗ್ಗೆ ಕಡತ ಸಲ್ಲಿಸುವಂತೆ ಆಗ್ರಹಿಸಿದರು.

ನೂತನ ಕಾರ್ಯ ನಿರ್ವಹಣಾಧಿಕಾರಿ ಪುಟ್ಟಶಾಮಯ್ಯ, 15 ದಿನಗಳೊಳಗಾಗಿ ಸಂಪೂರ್ಣ ತನಿಖೆ ನಡೆಸಿ ವರದಿ ನೀಡುವುದಾಗಿ ತಿಳಿಸಿ, ದಾಖಲೆ ಸಲ್ಲಿಸುವಲ್ಲಿ ವಿಫಲರಾದರೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

ಸದಸ್ಯ ಕೆಂಪಗೂಳಿಗೌಡ ಮಾತನಾಡಿ, ಜೆ.ಪಿ.ಡಿಸ್ಟಿಲರೀಸ್‌ನವರು ಶಾಶ್ವತ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸದೆ, ಕಾರ್ಖಾನೆ ತ್ಯಾಜ್ಯವನ್ನು ಕೆರೆಗಳ ವ್ಯಾಪ್ತಿಯಲ್ಲಿ, ರಸ್ತೆಬದಿಯಲ್ಲಿ ವಿಸರ್ಜಿಸುತ್ತಿರುವುದರಿಂದ ಪರಿಸರ ಮಾಲಿನ್ಯ ಉಂಟಾಗಿದೆ. ತಮ್ಮ ಕ್ಷೇತ್ರ ವ್ಯಾಪ್ತಿಯ ಹೊಳಲಗುಂದದಿಂದ ಕೀಲಾರದವರೆಗಿನ ಸುಮಾರು 15ಕೆರೆಗಳಿಗೆ ಕಾರ್ಖಾನೆ ತ್ಯಾಜ್ಯವನ್ನು ಟ್ಯಾಂಕರ್‌ಗಳ ಮೂಲಕ ಸುರಿಯುತ್ತಿದ್ದು, ಕೇಳಿದರೆ ಗ್ರಾಮಸ್ಥರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಉಪಾಧ್ಯಕ್ಷೆ ಜಮುನಾ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎನ್.ಜಗದೀಶ್, ಕಾರ್ಯ ನಿರ್ವಹಣಾಧಿಕಾರಿ ಪುಟ್ಟಶಾಮಯ್ಯ, ಸದಸ್ಯರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT