ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಿಯ ತೊಡಗಿವೆ ಬಹುವಿಧ ವೇಷಗಳು...

Last Updated 24 ಏಪ್ರಿಲ್ 2013, 9:13 IST
ಅಕ್ಷರ ಗಾತ್ರ

ತುಮಕೂರು: `ಉದರ ನಿಮಿತ್ತಂ ಬಹುಕೃತ ವೇಷಂ' ಎಂಬ ಗಾದೆ ಮಾತೊಂದಿದೆ. ಅದನ್ನೇ ಕೊಂಚ ಬದಲು ಮಾಡಿ ಹೇಳುವುದಾದರೆ `ಮತ ನಿಮಿತ್ತಂ ಬಹುವಿಧ ವೇಷಂ' ಎಂದೇ ಹೇಳಬಹುದು. ಮತದಾರರನ್ನು ಸೆಳೆಯಲು ಜಿಲ್ಲೆಯ್ಲ್ಲಲೆಡೆ ಈಗ ಬಹುಕೃತ ವೇಷಗಳು ಕುಣಿಯಲಾರಂಭಿಸಿವೆ.

ನಾನಾ ಕಸರತ್ತು ಆರಂಭಿಸಿರುವ ವಿವಿಧ ಪಕ್ಷಗಳು ಶಾಲಾ ಮಕ್ಕಳನ್ನೂ ಕೂಡ ಬಿಟ್ಟಿಲ್ಲ. ನಗರದಲ್ಲಿ ಜೆಡಿಎಸ್ ಪ್ರಚಾರಕ್ಕೆ ಮಕ್ಕಳನ್ನೇ ಗುರಾಣಿಯಾಗಿಸಿಕೊಂಡಿದೆ. ಬೇಸಿಗೆ ರಜೆ ಇರುವುದರಿಂದ ರಾಜಕೀಯ ಪಕ್ಷಗಳಿಗೆ ಮಕ್ಕಳು ಸುಲಭವಾಗಿ ಸಿಗತೊಡಗಿದ್ದಾರೆ. `ದೊಡ್ಡವರಿಗೆ ಹೋಲಿಸಿಕೊಂಡರೆ ಮಕ್ಕಳ ಮೇಲೆ ಮಾಡುವ ಖರ್ಚು ಕೂಡ ಕಡಿಮೆ. ಅಲ್ಲದೇ ಮತ ನೀಡುವಂತೆ ಮತದಾರನ್ನು ಮಕ್ಕಳು ಗೋಗರೆಯುವಷ್ಟು ದೊಡ್ಡವರು ಗೋಗರೆಯುವುದಿಲ್ಲ. ದೊಡ್ಡವರಿಗೆ ದಿನಕ್ಕೆ ರೂ. 600 ಕೊಡಬೇಕು.

ಮಕ್ಕಳಿಗಾದರೆ ನೂರು ಕೊಟ್ಟರು ಸಾಕು' ಎನ್ನುತ್ತಾರೆ ಪಕ್ಷವೊಂದರ ಮುಖಂಡರು.  ಪ್ರಚಾರದ ಮೇಲೆ ಚುನಾವಣಾ ಆಯೋಗ ಕಣ್ಗಾವಲು ಇಟ್ಟಿರುವುದರಿಂದ ಪ್ರಚಾರ ಜೋರು ಗದ್ದಲದಿಂದ ಕೂಡಿಲ್ಲ. ಮನೆ ಮನೆಗೆ ತೆರಳಿ ಮತಯಾಚಿಸುವ ಜೊತೆಗೆ ಬೀದಿ ಬೀದಿಗಳಲ್ಲಿ ರೋಡ್ ಶೋ ನಡೆಸುವುದರ ಮೂಲಕವು ಅಭ್ಯರ್ಥಿಗಳು ಮತದಾರರ ಮನತಟ್ಟಲು ಮುಂದಾಗಿದ್ದಾರೆ.

ಕಾಂಗ್ರೆಸ್ ಸಾರೋಟಿನಲ್ಲಿ ಅಲ್ಲಲ್ಲಿ ಪ್ರಚಾರ ನಡೆಸುವ ಮೂಲಕ ಜನರನ್ನು ಸೆಳೆಯುತ್ತದೆ. ಸೈಕಲ್, ರಿಕ್ಷಾಗಳಿಗೆ ದೊಡ್ಡದೊಡ್ಡ ಬಾವುಟ ತೂಗು ಹಾಕಿ ಅಲ್ಲಲ್ಲಿ ಓಡಾಡಿಸುವ ಮೂಲಕವು ಪಕ್ಷದ ಗುರುತು ಜನರ ಮನಸ್ಸಿಗೆ ನಾಟುವಂತೆ ವಿವಿಧ ಪಕ್ಷಗಳು ಕಸರತ್ತಿನಲ್ಲಿ ತೊಡಗಿವೆ.

ಪ್ರಚಾರದ ಜತೆಗೆ ಹಣ ಹಂಚಿಕೆಯೂ ಜೋರಾಗಿದೆ. `ಒಂದೊಂದು ಓಟಿಗೆ ಸಾವಿರ ರೂಪಾಯಿ ಹಂಚುತ್ತಿದ್ದೇವೆ. ಮನೆ ಮನೆಗೆ ಹೋಗಿ ಹಂಚುತ್ತೇವೆ. ಒಟ್ಟು ನಲವತ್ತು ಸಾವಿರ ವೋಟುಗಳಿಗೆ ಹಣ ಹಂಚುವ ಕೆಲಸ ಮಾಡುತ್ತಿದ್ದೇವೆ. ಕ್ಷೇತ್ರದಲ್ಲಿ 1.20 ಲಕ್ಷ ಮತದಾರರು ಇದ್ದಾರೆ. ಉಳಿದವರು ನಮಗೆ ಬೇಕಾಗಿಲ್ಲ. ಅವು ಚೆಲ್ಲಾಪಿಲ್ಲಿಯಾಗುವ ಮತಗಳು' ಎಂದು ಎಂ.ಎಚ್‌ಪಟ್ಟಣದಲ್ಲಿ ಮಾತಿಗೆ ಸಿಕ್ಕ ಪಕ್ಷವೊಂದರ ಕಾರ್ಯಕರ್ತ ಹೇಳಿದರು.
ಮತ ಕೇಳಲು ಕಾರ್ಯಕರ್ತರ ಹೆಸರಿನಲ್ಲಿ ಕೂಲಿಗಳನ್ನು ನೇಮಿಸಿಕೊಳ್ಳಲಾಗಿದೆ. ಯಾರು ಮತ ಹಾಕಲಿ, ಬಿಡಲೀ ಇವರು ಮನೆ ಮನೆಗೂ ತೆರಳಿ ಕರ ಪತ್ರ ನೀಡಿ ಕೈಮುಗಿದು ಹೋಗುವ ಕೆಲಸವಷ್ಟೆ.

ಮತ್ತೊಂದಷ್ಟು ಪಕ್ಷಗಳು ಬಾಡಿಗೆ ಬಂಟರನ್ನು ಹೋಟೆಲ್, ಅಂಗಡಿಗಳ ಬಳಿ ಸುಳಿದಾಡಲು ಬಿಟ್ಟು, ಯಾರು ಗೆಲ್ಲುತ್ತಾರೆ ಎಂಬ ಚರ್ಚೆ ಹುಟ್ಟು ಹಾಕಿ ತಮ್ಮ ನಾಯಕ ಗೆಲ್ಲುತ್ತಾನೆಂಬ ಸುಳ್ಳು ವಿಶ್ಲೇಷಣೆ ಮಾಡಿ ಅಲ್ಲಿಂದ ಜಾಗ ಖಾಲಿ ಮಾಡುವ ಕೆಲಸವನ್ನು ಮಾಡಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT