ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತೂಹಲ ಕಥಾಮಂತ್ರ (ಚಿತ್ರ: ತಂತ್ರ)

Last Updated 10 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಅಪರಾಧದ ಜಾಡು ಬೆನ್ನು ಹತ್ತುವ ಪತ್ತೇದಾರಿ ಅಂಶವಿರುವ ಕಥೆಯ ಸಿನಿಮಾಗಳು ಕನ್ನಡದಲ್ಲಿ ಸಾಕಷ್ಟು ಬಂದುಹೋಗಿವೆ. ಇದೀಗ ಆ ಸಾಲಿಗೆ `ತಂತ್ರ~ವೂ ಸೇರಿಕೊಂಡಿದೆ.

ಮಾಡಿದ ಕೊಲೆಯನ್ನು ಮುಚ್ಚಿ ಹಾಕಲು ಇನ್ನಷ್ಟು ತಪ್ಪು ಮಾಡುವ, ತನ್ನ ಸಾಫ್ಟ್‌ವೇರ್ ಕಂಪೆನಿ ಅಭಿವೃದ್ಧಿಪಡಿಸಿದ `ತಂತ್ರ~ ಎಂಬ ತಂತ್ರಾಂಶಕ್ಕಾಗಿ ಬ್ಲಾಕ್‌ಮೇಲ್‌ಗೆ ಒಳಗಾಗುವ ಹೆಣ್ಣೊಬ್ಬಳ ಕತೆ ಇದು. ಸೈಬರ್ ಅಪರಾಧವನ್ನೂ ಇದು ಒಳಗೊಂಡಿದೆ.

ಇದಕ್ಕೆಲ್ಲ ಯಾರು ಕಾರಣ, ಅದರಿಂದ ಅವಳು ತನ್ನ ಪೊಲೀಸ್ ಅಧಿಕಾರಿ ಸೋದರನ ನೆರವಿನಿಂದ ಹೇಗೆ ಹೊರ ಬರುತ್ತಾಳೆ ಎಂಬ ಕತೆಯನ್ನು ಅತ್ಯಂತ ಸಂಕ್ಷಿಪ್ತವಾಗಿ ನಿರ್ದೇಶಕ ಬಾಲಾಜಿ ಹೇಳಿದ್ದಾರೆ. ಇದಕ್ಕೆ ಅವರದೇ ಕಥೆ, ಚಿತ್ರಕಥೆ ಇದೆ.

ಒಂದು ಪತ್ತೇದಾರಿ ಕತೆಗೆ ಬೇಕಾದ ಮುಖ್ಯ ಅಂಶವನ್ನು, ಅದರ ರೋಚಕತೆಯನ್ನು ಬಾಲಾಜಿ ಸಿನಿಮಾದಲ್ಲಿ ಸರಿಯಾಗಿಯೇ ನಿರ್ವಹಿಸಿದ್ದಾರೆ. ಇದರಿಂದಾಗಿ ಸಿನಿಮಾ ಎರಡು ಗಂಟೆ ಕಾಲ ಕುತೂಹಲ ವನ್ನು ಕ್ಷಣಕ್ಷಣಕ್ಕೆ ಹೆಚ್ಚಿಸುತ್ತ, ಮುಂದೇನು? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುತ್ತಾ ಹೋಗುತ್ತದೆ. ಈ ಕುತೂಹಲಕ್ಕೆ ನಾಯಕಿ ಪಾತ್ರದ ನವ್ಯಾ ನಟರಾಜ್ ಅವರ ಗ್ಲಾಮರ್ ಹದವಾಗಿ ಬೆರೆತಿದೆ.

ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ ಗಿರೀಶ್ ಮಟ್ಟಣ್ಣನವರ್ ನಿಷ್ಠುರ ಅಧಿಕಾರಿಯಾಗಿ, ತಂಗಿಗೆ ಸಹಾಯ ಮಾಡುವ ಅಣ್ಣನಾಗಿ ತಾವು ಇಂಥ ಪಾತ್ರಗಳಿಗೆ ಸೂಕ್ತ ಎಂಬಂತೆ ನಟಿಸಿದ್ದಾರೆ. ಅವರು ತಂಗಿಗೆ ಒಳ್ಳೆಯ ಪೊಲೀಸ್ ಅಣ್ಣನಾಗಿ ನಟಿಸಿರುವುದರಿಂದ ಕನ್ನಡದ ಸಿನಿತಂಗಿಯರಿಗೆ ಮುಂದೆ ದೊರಕುವ ಸಾಧ್ಯತೆಗಳೂ ಹೆಚ್ಚಾಗಿವೆ.

ಪತ್ತೇದಾರಿ ಸಿನಿಮಾ ಆದ್ದರಿಂದಲೋ ಏನೋ ಸಿನಿಮಾದಲ್ಲಿ ಲವಲವಿಕೆಗೆ ಹೆಚ್ಚಿನ ಅವಕಾಶವಿಲ್ಲ. ಸೀಮಿತ ಕತೆಯ ಪುಟ್ಟ ಆವರಣದಲ್ಲಿ ಕತೆ ನಡೆಯವುದರಿಂದ ಚಿಕ್ಕ ಬಜೆಟ್‌ನಲ್ಲಿ ಚೊಕ್ಕ ಸಿನಿಮಾ ಮಾಡಲಾಗಿದೆ. ಅದರ ಸೀಮಿತ ವಾತಾವರಣವೇ ಮಿತಿಯೂ ಆಗಿದೆ. ಹಾಡುಗಳು ಕೂಡ ಇದಕ್ಕೆ ಇಲ್ಲ. ಗಂಭೀರ ಅಪರಾಧಗಳು ಜರುಗುತ್ತ, ಪಾತ್ರಗಳೂ ಗಂಭೀರವಾಗಿ ವರ್ತಿಸುವುದರಿಂದ ಸಿನಿಮಾ ಅತಿ ಗಂಭೀರವಾಗಿದೆ. ಇಲ್ಲಿ ನಾಯಕನ ಸ್ನೇಹಿತ ಹಾಗೂ ಕೆಲಸದವಳ ಪಾತ್ರಗಳೇ ಕೊಂಚ ಚೇತೋಹಾರಿಯಾಗಿವೆ.

ಅಷ್ಟೇನೂ ಪಂಚ್‌ಗಳಿಲ್ಲದ ಸಂಭಾಷಣೆಗಳು (ಅಶ್ವಿನ್‌ಕುಮಾರ್), ಒಳಾಂಗಣವೇ ಹೆಚ್ಚಿರುವ ಛಾಯಾಗ್ರಹಣ (ಶಂಕರ್)ದಿಂದಾಗಿ ಸಿನಿಮಾಕ್ಕೆ ಒಂದಷ್ಟು ಏಕತಾನತೆ ಉಂಟಾಗಿದೆ. ಇದನ್ನು ನಿರ್ದೇಶಕ ಬಾಲಾಜಿ ಮುರಿದಿದ್ದಲ್ಲಿ, ತಮಾಷೆಯಾಗಿ ನಿರೂಪಿಸಿದ್ದಲ್ಲಿ ಪ್ರೇಕ್ಷಕರ ಮನವನ್ನು ಬಹುಬೇಗ ಮುಟ್ಟುವುದು ಸಾಧ್ಯವಿತ್ತು.
ಈ ಬಗೆಯ ಸಿನಿಮಾಗಳಿಗೆ ಇಂಥ ಚೌಕಟ್ಟನ್ನು ಹಾಕಿಕೊಂಡರೆ ಅದು ಕೇವಲ ಮುಂದಿನ ಕುತೂಹಲಕ್ಕೆ ಕಾರಣವಾಗುತ್ತದೆಯೇ ಹೊರತು ಪ್ರೇಕ್ಷಕರು ಅಪೇಕ್ಷಿಸುವ ರಂಜನೆ ಕೊಂಚ ದೂರವೇ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT