ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತೂಹಲ ಘಟ್ಟದಲ್ಲಿ ರಣಜಿ ಪಂದ್ಯ

ಕ್ರಿಕೆಟ್‌: ಮುಂಬೈಗೆ ಇನಿಂಗ್ಸ್‌ ಮುನ್ನಡೆ, ‘ಸಮರ್ಥ’ ಆಟಕ್ಕೆ ಮನೀಷ್‌ ಶತಕದ ಬಲ
Last Updated 24 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪಶ್ಚಿಮದಂಚಿಗೆ ಮುಖಮಾಡಿದ್ದ ಸೂರ್ಯನ ಕಿರಣಗಳ ಜೊತೆ ಕಮರಿ ಹೋಗುತ್ತಿದ್ದ ಗೆಲುವಿನ ಆಸೆಗೆ ಜೀವ ತುಂಬಿದ್ದು ಮನೀಷ್‌ ಪಾಂಡೆ. ತಮ್ಮ ಚೊಚ್ಚಲ ರಣಜಿ ಪಂದ್ಯದಲ್ಲಿಯೇ ಸೊಗಸಾದ ಆಟದ ಮೂಲಕ ಭರವಸೆ ಮೂಡಿಸಿದ್ದು ಆರ್‌. ಸಮರ್ಥ್‌. ಹೀಗೆ ಅನುಭವಿ ಮತ್ತು ಅನನುಭವಿಯ ಜುಗಲ್‌ಬಂದಿ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯವನ್ನು ಕುತೂಹಲ ಘಟ್ಟಕ್ಕೆ ಕೊಂಡೊಯ್ದಿದೆ.

ರಣಜಿ ಕ್ರಿಕೆಟ್‌ನಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಎದುರು ಕರ್ನಾಟಕ ಒಮ್ಮೆಯೂ ಜಯಿಸಿಲ್ಲ. ಆಡಿ ರುವ 21 ಪಂದ್ಯಗಳಲ್ಲಿ 11 ಪಂದ್ಯ ಡ್ರಾ ಆಗಿದ್ದರೆ, 10 ಪಂದ್ಯಗಳಲ್ಲಿ ಮುಂಬೈ ಗೆಲುವು ಪಡೆದಿದೆ. ಆದರೆ, ಈ ಬಾರಿ ಹಾಲಿ ಚಾಂಪಿಯನ್ನರನ್ನು ಮಣಿಸುವ ಅವಕಾಶ ಆತಿಥೇಯರಿಗೆ ಲಭಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಎ’ ಗುಂಪಿನ ರಣಜಿ ಪಂದ್ಯದಲ್ಲಿ ಮುಂಬೈ ಮೊದಲ ಇನಿಂಗ್ಸ್‌ನಲ್ಲಿ 89.4 ಓವರ್‌ಗಳಲ್ಲಿ 269 ರನ್‌ ಕಲೆ ಹಾಕಿ ಇನಿಂಗ್ಸ್‌ ಮುನ್ನಡೆ ಪಡೆಯಿತು. ‘ಇನಿಂಗ್ಸ್‌ ಮುನ್ನಡೆ ಗಳಿಸಿದರೆ ಸಾಕು, ಒಂದೇ ಒಂದು ರನ್‌ ಹೆಚ್ಚಿಗೆ ಬೇಡ’ ಎಂದು ಸೋಮವಾರ ಹೇಳಿದ್ದ ಸಿದ್ದೇಶ್‌ ಲಾಡ್‌ ಮುಂಬೈ ತಂಡದ ಇನಿಂಗ್ಸ್‌ ಮುನ್ನಡೆಗೆ ಕಾರಣರಾದರು.

18 ರನ್‌ ಮುನ್ನಡೆ ಗಳಿಸಿ ಆಲ್‌ಔಟ್‌ ಆದ ಹಾಲಿ ಚಾಂಪಿಯನ್‌ ತಂಡಕ್ಕೆ ಕರ್ನಾಟಕ ತಕ್ಕ ಪ್ರತ್ಯುತ್ತರ ನೀಡಿದೆ. ವಿನಯ್‌ ಕುಮಾರ್‌ ಸಾರಥ್ಯದ ತಂಡ ಎರಡನೇ ಇನಿಂಗ್ಸ್‌ನಲ್ಲಿ ಮಂಗಳವಾರದ ಅಂತ್ಯಕ್ಕೆ 74 ಓವರ್‌ಗಳಲ್ಲಿ ಎಂಟು ವಿಕೆಟ್‌ ಕಳೆದುಕೊಂಡು 287 ರನ್‌ ಕಲೆ ಹಾಕಿದೆ. ಮೊದಲ ಇನಿಂಗ್ಸ್‌ನಲ್ಲಿ 251 ರನ್‌ ಪೇರಿಸಿತ್ತು.

ಶರತ್‌ ಮಿಂಚು: ಒಂದು ವರ್ಷದ ಹಿಂದೆಯಷ್ಟೇ ರಣಜಿಗೆ ಪದಾರ್ಪಣೆ ಮಾಡಿದ ವೇಗಿ ಎಚ್‌.ಎಸ್. ಶರತ್‌ ಮುಂಬೈ ತಂಡದ ಮೊದಲ ಇನಿಂಗ್ಸ್‌ನ ಹೋರಾಟಕ್ಕೆ ತೆರೆ ಎಳೆದರು. ಆದರೆ, ಇನಿಂಗ್ಸ್‌ ಮುನ್ನಡೆ ಗಳಿಸುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಸೋಮವಾರದ ಆಟದಲ್ಲಿ 76 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 217 ರನ್‌ ಕಲೆ ಹಾಕಿದ್ದ ವಾಸಿಮ್‌ ಜಾಫರ್‌ ಬಳಗ ಮೂರನೇ ದಿನ 52 ರನ್‌ ಗಳಿಸಿ ನಿಟ್ಟುಸಿರು ಬಿಟ್ಟಿತು.

‘ಬಾಲಂಗೋಚಿ’ ಜಾವೇದ್‌ ಖಾನ್‌ (48, 91 ನಿಮಿಷ, 91 ಎಸೆತ, 7 ಬೌಂಡರಿ, 1 ಸಿಕ್ಸರ್‌) ಗಳಿಸಿ ಸಿದ್ದೇಶ್‌ (93, 248 ನಿ., 168 ಎಸೆತ, 12 ಬೌಂ, 2 ಸಿಕ್ಸರ್‌) ಅವರಿಗೆ ನೆರವಾದರು. ಈ ಬ್ಯಾಟ್ಸ್‌ಮನ್‌ ಶತಕ ಗಳಿಸಲು ಏಳು ರನ್‌ ಅಗತ್ಯವಿದ್ದಾಗ ಶರತ್‌ ವಿಕೆಟ್‌ ಪಡೆದರು. ಇದರೊಂದಿಗೆ ಮುಂಬೈ ಪ್ರಥಮ ಇನಿಂಗ್ಸ್‌್ ಹೋರಾಟಕ್ಕೆ ತೆರೆ ಬಿತ್ತು. ಸೋಮವಾರ ಮೂರು ವಿಕೆಟ್‌ ಕಬಳಿಸಿದ್ದ ಮಂಡ್ಯದ ಶರತ್‌ ಮೂರನೇ ದಿನದಾಟದಲ್ಲಿ ಸಿದ್ದೇಶ್‌ ಮತ್ತು ಸೌರಭ್‌ ನೇತ್ರವಾಲ್ಕರ್‌ ವಿಕೆಟ್‌ ಪಡೆದರು.

ನೀರಸ ಆರಂಭ: ಬಲಿಷ್ಠ ತಂಡ ಮುಂಬೈಗೆ ಎರಡನೇ ಇನಿಂಗ್ಸ್‌ನಲ್ಲಿ ಸವಾಲಿನ ಗುರಿ ನೀಡುವ ಆಸೆ ಹೊಂದಿದ್ದ ಆತಿಥೇಯರಿಗೆ ಆರಂಭದಲ್ಲಿ ನಿರಾಸೆ ಕಾಡಿತು. ಕೆ.ಎಲ್‌. ರಾಹುಲ್‌ ಗಾಯಗೊಂಡಿದ್ದ ಕಾರಣ ಸಮರ್ಥ್‌ ಜೊತೆ ಕರುಣ್‌ ನಾಯರ್‌ ಇನಿಂಗ್ಸ್‌್ ಆರಂಭಿಸಿದರು.

ಕರುಣ್‌ ಕ್ರೀಸ್‌ಗೆ ಬಂದು 14 ನಿಮಿಷವಷ್ಟೇ ಕಳೆದಿತ್ತು. ಅಷ್ಟರಲ್ಲಿ ಅವರು ಔಟಾದರು. ಪದಾ ರ್ಪಣೆ ಪಂದ್ಯವಾಡಿದ ಆಲ್‌ರೌಂಡರ್‌ ಶ್ರೇಯಸ್‌ ಗೋಪಾಲ್‌ ಕೂಡಾ ಕ್ರೀಸ್‌ಗೆ ಬಂದು ಒಂದೇ ನಿಮಿಷದಲ್ಲಿ ಡ್ರೆಸ್ಸಿಂಗ್‌ ಕೊಠಡಿಗೆ ವಾಪಸ್ಸಾದರು. ಮೊದಲ 11 ಓವರ್‌ ಪೂರ್ಣಗೊಳ್ಳುವುದರ ಒಳಗೆ ಎರಡು ವಿಕೆಟ್‌ ಕಳೆದುಕೊಂಡ ಕರ್ನಾಟಕ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಒಳಗಾಗಿತ್ತು. ಆದರೆ, ಸಮುದ್ರದಲ್ಲಿ ಮುಳುಗಿ ಹೋಗುತ್ತಿದ್ದ ಹಡಗನ್ನು ರಕ್ಷಿಸುವ ದಿಟ್ಟ ನಾವಿಕನಂತೆ ಸ್ಪೋಟಕ ಬ್ಯಾಟ್ಸ್‌ಮನ್‌ ಮನೀಷ್‌ ಬಂದರು.

ದಿಕ್ಕು ಬದಲಿಸಿದ ಜೊತೆಯಾಟ: ಐಪಿಎಲ್‌ನಲ್ಲಿ ಶತಕ ಗಳಿಸಿದ ಮೊದಲ ಆಟಗಾರ ಎನ್ನುವ ದಾಖಲೆ ಹೊಂದಿರುವ ಮನೀಷ್‌ ಪಂದ್ಯದ ದಿಕ್ಕು ಬದಲಿಸಿದರು. ಆರಂಭಿಕ ಬ್ಯಾಟ್ಸ್‌ಮನ್‌ ಸಮರ್ಥ್‌ ಜೊತೆ ಸೇರಿ ಮೂರನೇ ವಿಕೆಟ್‌ಗೆ 133 ರನ್‌ ಕಲೆ ಹಾಕಿ ತಂಡದ ಮೇಲೆ ಆವರಿಸಿದ್ದ ಆತಂಕದ ಕಾರ್ಮೋಡಗಳನ್ನು ದೂರ ಮಾಡಿದರು.

ಮೂಲತಃ ಉತ್ತರಾಂಚಲದವರಾದ ಮನೀಷ್‌ ಏಕದಿನ ಪಂದ್ಯವನ್ನು ನೆನಪಿಸುವ ರೀತಿಯಲ್ಲಿ ಬ್ಯಾಟ್‌್ ಬೀಸಿದರು. ಮೂರೂವರೆ ಗಂಟೆ ಕ್ರೀಸ್‌ನಲ್ಲಿದ್ದು ಕ್ರೀಡಾಂಗಣದ ಮೂಲೆ ಮೂಲೆಗಳಿಗೆ ಚೆಂಡನ್ನು ಬಾರಿಸಿದರು. 147 ಎಸೆತಗಳನ್ನು ಎದುರಿಸಿದ ಈ ಬಲಗೈ ಬ್ಯಾಟ್ಸ್‌ಮನ್‌ 13 ಬೌಂಡರಿ ಮತ್ತು ಎರಡು ಸಿಕ್ಸರ್‌ ಸೇರಿದಂತೆ 119 ರನ್‌ ಕಲೆ ಹಾಕಿದರು.

ಮನೀಷ್‌ 47.1ನೇ ಓವರ್‌ನಲ್ಲಿ ಜಾವೇದ್‌ ಖಾನ್‌ ಎಸೆತದಲ್ಲಿ ಎಕ್ಸ್‌ಟ್ರಾ ಕವರ್‌ನಲ್ಲಿ ಬೌಂಡರಿ ಬಾರಿಸಿ ರಣಜಿಯಲ್ಲಿ 11ನೇ ಶತಕ ದಾಖಲಿಸಿದರು. 71 ರನ್‌ ಗಳಿಸಿದ್ದ ವೇಳೆ ರಣಜಿಯಲ್ಲಿ ಒಟ್ಟು 3000 ರನ್‌ ಗಳಿಸಿದ ಸಾಧನೆಯನ್ನೂ ಮಾಡಿದರು. 

ಭರವಸೆ ಮೂಡಿಸಿದ ಸಮರ್ಥ್‌: ಮೊದಲ ಇನಿಂಗ್ಸ್‌ನಲ್ಲಿ 18 ರನ್‌ಗೆ ಔಟ್‌ ಆಗಿದ್ದ ಸಮರ್ಥ್‌ ಎರಡನೇ ಇನಿಂಗ್ಸ್‌ನಲ್ಲಿ ಅನುಭವಿ ಮನೀಷ್‌ಗೆ ಉತ್ತಮ ಬೆಂಬಲ ನೀಡಿದರು. 111 ಎಸೆತಗಳಲ್ಲಿ 10 ಬೌಂಡರಿ ಸೇರಿದಂತೆ ಸಮರ್ಥ್‌ 75 ರನ್‌ ಕಲೆ ಹಾಕಿ ಭರವಸೆ ಮೂಡಿಸಿದರು. ಈ ಜೋಡಿಯ ಜುಗಲ್‌ಬಂದಿ ಗ್ಯಾಲರಿಯಲ್ಲಿದ್ದ ಕೆಲ ಕ್ರಿಕೆಟ್‌ ಪ್ರೇಮಿಗಳಿಗೆ ಭರಪೂರ ಮನರಂಜನೆ ನೀಡಿತು.

ಬೀಗಿದ ಬೌಲರ್‌ಗಳು: ಜಾವೇದ್‌ ಖಾನ್‌, ಸೌರಭ್‌ ನೇತ್ರವಾಲ್ಕರ್‌ ಮತ್ತು ವಿಶಾಲ್‌ ತಲಾ ಎರಡು ವಿಕೆಟ್‌ ಪಡೆದು ಆತಿಥೇಯರನ್ನು ಬೇಗನೆ ಕಟ್ಟಿ ಹಾಕಲು ಯತ್ನಿಸಿದರು. ಆದರೆ, ಮನೀಷ್‌ ಮತ್ತು ಸಮರ್ಥ ಜೊತೆಯಾಟ ಇದಕ್ಕೆ ಅವಕಾಶ ನೀಡಲಿಲ್ಲ. 

ಕುತೂಹಲ ಘಟ್ಟದಲ್ಲಿ: 269 ರನ್‌ ಮುನ್ನಡೆ ಹೊಂದಿರುವ ಕರ್ನಾಟಕ ಕೊನೆಯ ದಿನವಾದ ಬುಧವಾರ ವೇಗವಾಗಿ ರನ್ ಕಲೆ ಹಾಕಿ ಮೊದಲ ಅವಧಿಯಲ್ಲಿಯೇ ಎದುರಾಳಿ ತಂಡಕ್ಕೆ ಬ್ಯಾಟ್‌ ಮಾಡಲು ಅವಕಾಶ ನೀಡುವ ಲೆಕ್ಕಾಚಾರದಲ್ಲಿದೆ. ಹೆಚ್ಚು ಬಾರಿ ಟ್ರೋಫಿ ಗೆದ್ದಿರುವ ಮುಂಬೈ ಬಲಿಷ್ಠ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ಆದರೆ, ಆತಿಥೇಯರ ‘ವೇಗದ ಸಾಮರ್ಥ್ಯ’ ಚೆನ್ನಾಗಿದೆ.  ಬೌಲರ್‌ಗಳ ಮೇಲೆ  ಸೋಲು–ಗೆಲುವಿನ ಲೆಕ್ಕಾಚಾರ ಅವಲಂಬಿತವಾಗಿದೆ.

ಆದ್ದರಿಂದ ಕೊನೆಯ ದಿನದಾಟ ಕುತೂಹಲಕ್ಕೆ ಕಾರಣವಾಗಿದೆ. ಪಾಯಿಂಟ್‌ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಹೊಂದಿರುವ ಕರ್ನಾಟಕ ಮತ್ತು ಮುಂಬೈ ನಡುವಿನ ಜಿದ್ದಾಜಿದ್ದಿಯಲ್ಲಿ ಯಾರಿಗೆ ಗೆಲುವು ಎನ್ನುವ ಪ್ರಶ್ನೆಗೆ ‘ಬಾಕ್ಸಿಂಗ್‌ ಡೇ’ಗೆ ಒಂದು ದಿನದ ಮುನ್ನವೇ ಉತ್ತರ ಸಿಗಲಿದೆ.

ಕರ್ನಾಟಕ ಮೊದಲ ಇನಿಂಗ್ಸ್‌ 98.3 ಓವರ್‌ಗಳಲ್ಲಿ 251
ಮುಂಬೈ ಪ್ರಥಮ ಇನಿಂಗ್ಸ್‌ 89.4 ಓವರ್‌ಗಳಲ್ಲಿ 269
(ಸೋಮವಾರದ ಅಂತ್ಯಕ್ಕೆ 76 ಓವರ್‌ಗಳಲ್ಲಿ 7 ವಿಕೆಟ್‌ಗೆ 217)
ಸಿದ್ದೇಶ್‌ ಲಾಡ್‌ ಸಿ. ಸಿ.ಎಂ. ಗೌತಮ್‌ ಬಿ ಎಚ್.ಎಸ್.ಶರತ್‌  93
ಜಾವೇದ್‌ ಖಾನ್ ಸಿ ಕೆ.ಎಲ್‌. ರಾಹುಲ್‌ ಬಿ ಮನೀಷ್‌ ಪಾಂಡೆ 48
ಸೌರಭ್‌ ನೇತ್ರವಾಲ್ಕರ್‌ ಸಿ ಸಿ.ಎಂ. ಗೌತಮ್‌ ಬಿ ಎಚ್‌.ಎಸ್‌. ಶರತ್‌
03
ವಿಶಾಲ್‌ ದಾಭೋಳ್ಕರ್‌ ಔಟಾಗದೆ  00
ಇತರೆ: (ಲೆಗ್‌ ಬೈ-5, ವೈಡ್‌-3)  08
ವಿಕೆಟ್ ಪತನ: 8-241 (ಜಾವೇದ್‌; 80.6), 9-262 (ನೇತ್ರವಾಲ್ಕರ್‌; 87.4), 10-269 (ಲಾಡ್‌; 89.4)
ಬೌಲಿಂಗ್‌: ಆರ್‌. ವಿನಯ್‌ ಕುಮಾರ್‌ 8-2-16-0, ಅಭಿಮನ್ಯು ಮಿಥುನ್‌ 15-2-58-1, ಎಚ್‌.ಎಸ್‌. ಶರತ್‌ 21.4-6-57-5, ಸ್ಟುವರ್ಟ್‌ ಬಿನ್ನಿ 15-6-38-0, ಕೆ.ಪಿ. ಅಪ್ಪಣ್ಣ 14-1-36-0, ಶ್ರೇಯಸ್‌ ಗೋಪಾಲ್‌ 15-3-52-3, ಮನೀಷ್‌ ಪಾಂಡೆ 1-0-4-1.

ಕರ್ನಾಟಕ ಎರಡನೇ ಇನಿಂಗ್ಸ್‌ 74 ಓವರ್‌ಗಳಲ್ಲಿ 8 ವಿಕೆಟ್‌ಗೆ 287
ಆರ್‌. ಸಮರ್ಥ್‌ ಎಲ್‌ಬಿಡಬ್ಲ್ಯು ಬಿ ಕೌಸ್ತುಬ್‌ ಪವಾರ್‌  75
ಕರುಣ್‌ ನಾಯರ್‌ ಸಿ ಸೂರ್ಯಕುಮಾರ್‌ ಯಾದವ್‌ ಬಿ ಜಾವೀದ್‌ ಖಾನ್‌  07
ಶ್ರೇಯಸ್‌ ಗೋಪಾಲ್‌ ಬಿ ಜಾವೇದ್‌ ಖಾನ್‌  00
ಮನೀಷ್‌ ಪಾಂಡೆ ಸಿ ವಾಸಿಮ್‌ ಜಾಫರ್‌ ಬಿ ವಿಶಾಲ್‌ ದಾಭೋಳ್ಕರ್‌  119
ಸಿ.ಎಂ. ಗೌತಮ್‌ ಸಿ ಸೂರ್ಯ ಕುಮಾರ್‌ ಯಾದವ್‌ ಬಿ ಶಾರ್ದುಲ್‌ ಠಾಕೂರ್‌  11
ಸ್ಟುವರ್ಟ್‌ ಬಿನ್ನಿ  ಸಿ ಜಾವೇದ್‌ ಖಾನ್‌ ಬಿ ವಿಶಾಲ್‌ ದಾಭೋಳ್ಕರ್‌
18
ಕೆ.ಎಲ್‌. ರಾಹುಲ್‌ ಬಿ ಸೌರಭ್‌ ನೇತ್ರವಾಲ್ಕರ್‌  32
ಆರ್‌. ವಿನಯ್‌ ಕುಮಾರ್‌ ಎಲ್‌ಬಿಡಬ್ಲ್ಯು ಬಿ ಸೌರಭ್‌ ನೇತ್ರವಾಲ್ಕರ್‌  08
ಕೆ.ಪಿ. ಅಪ್ಪಣ್ಣ ಬ್ಯಾಟಿಂಗ್‌  05
ಎಚ್‌.ಎಸ್‌. ಶರತ್‌ ಬ್ಯಾಟಿಂಗ್‌  06
ಇತರೆ: (ಲೆಗ್‌ ಬೈ-4, ನೋ ಬಾಲ್‌-2)  06
ವಿಕೆಟ್‌ ಪತನ: 1-32 (ಕರುಣ್‌; 10.2), 2-32 (ಶ್ರೇಯಸ್‌; 10.3), 3-165 (ಸಮರ್ಥ್‌; 38.2), 4-185 (ಗೌತಮ್‌; 44.1), 5-222 (ಬಿನ್ನಿ; 55.2), 6-250 (ಮನೀಷ್‌; 61.6), 7-269 (ವಿನಯ್‌; 66.3), 8-276 (ರಾಹುಲ್‌; 68.1).
ಬೌಲಿಂಗ್‌: ಜಾವೇದ್‌ ಖಾನ್ 13-0-68-2, ಸೌರಭ್‌ ನೇತ್ರವಾಲ್ಕರ್‌ 14-4-42-2, ವಿಶಾಲ್‌ ದಾಭೋಳ್ಕರ್‌ 21-0-89-2, ಶಾರ್ದುಲ್‌ ಠಾಕೂರ್‌ 14-0-61-1, ಕೌಸ್ತುಬ್‌ ಪವಾರ್‌ 8-4-11-1, ಸೂರ್ಯಕುಮಾರ್ ಯಾದವ್‌          4-0-12-0.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT