ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತೂಹಲದ ಕಡಲು

Last Updated 10 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕಂಡದ್ದೆಲ್ಲದರ ಬಗ್ಗೆಯೂ ಕುತೂಹಲಗೊಂಡು, ಉತ್ಸಾಹದಿಂದ ಅದರ ಆದ್ಯಂತ ಮಾತ್ರವಲ್ಲ ಸಮೂಲ ಅಗೆದು ಶೋಧಿಸಿ - `ಕಂಡು~, ಹಾಗೆ ತಾನೇ ಕಂಡದ್ದರ ಬಗ್ಗೆ ಮಾತ್ರ ಅಷ್ಟಿಷ್ಟು ಬರೆದವರು `ಗೋಕರ್ಣ~ದ ನಮ್ಮ ದಿ. ಗೌರೀಶ ಕಾಯ್ಕಿಣಿ (`ಆರ್ಣವದ ಘೋಷಕ್ಕೆ ಗೋಕರ್ಣವೇ ಬೇಕು~ - ಬೇಂದ್ರೆ).

ವೃತ್ತಿಯಲ್ಲಿ ಶಾಲೆಯ ಅಧ್ಯಾಪಕರಾಗಿದ್ದ ಅವರು ತಮ್ಮ ಸಂಪೂರ್ಣ ಸಮಯವನ್ನೂ ಅಭ್ಯಾಸ ಅಧ್ಯಯನ ಶೋಧಗಳಿಗಾಗಿ ಮೀಸಲಿಟ್ಟವರು. ಅವರ ಅಧ್ಯಯನದ ವ್ಯಾಪ್ತಿ ವಿಶಾಲವಾದದ್ದು.

ವೇದೋಪನಿಷತ್ತು ಶಾಸ್ತ್ರಪುರಾಣ ಕಾವ್ಯಾದಿಗಳಿಂದ ಮೊದಲುಗೊಂಡು ಅತ್ಯಾಧುನಿಕ ಕನ್ನಡ ಮತ್ತು ಭಾರತೀಯ ವಾಙ್ಮಯಗಳ ತನಕ ಹಾಗೂ ಪ್ಲೇಟೋನಿಂದ ಹಿಡಿದು ಆಧುನಿಕ ಪಾಶ್ಚಿಮಾತ್ಯ ವಾಙ್ಮಯಗಳ ತನಕ - ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದವರು.

ಸಂಸ್ಕೃತ ಕನ್ನಡಗಳಲ್ಲಿ ವಿಶೇಷ ಪಾಂಡಿತ್ಯ, ಇಂಗ್ಲಿಷ್‌ನಲ್ಲಿ ವಿಶೇಷ ಪರಿಶ್ರಮ (ಕ್ರಮೇಣ ಇಂಗ್ಲಿಷ್‌ನಲ್ಲಿ ಯೋಚಿಸಿಯೇ ಕನ್ನಡದಲ್ಲಿ ಬರೆಯುವುದು ರೂಢಿಯಾಗುವಷ್ಟು) ಅವರಿಗಿತ್ತು; ಕೊಂಕಣಿ - ಮರಾಠಿ - ಹಿಂದಿಗಳಲ್ಲೂ ಅವರು ಸಲೀಸಾಗಿ ಈಜಾಡಬಲ್ಲವರಾಗಿದ್ದರು. ಅವರ ಓದು ಪಾಂಡಿತ್ಯಗಳಿಗೆ ಹೋಲಿಸಿದರೆ, ಬರವಣಿಗೆಯ ಪ್ರಮಾಣ ಕಡಿಮೆಯೇ. ಯಾರಾದರೂ ಪ್ರೇರಿಸಿದಾಗ ಮಾತ್ರವೇ ಅವರು ಬರೆಯುತ್ತಿದ್ದುದು, ಹಾಗಿದ್ದೂ ಸುಮಾರು ಆರೇಳು ಸಾವಿರ ಪುಟಗಳಷ್ಟು ಬರೆದಿದ್ದಾರೆ ಅವರು.

ಗೌರೀಶರ ಬರವಣಿಗೆಯಲ್ಲಿ ಅರ್ಧಭಾಗಕ್ಕಿಂತ ಹೆಚ್ಚು ಪತ್ರಿಕಾ ಲೇಖನಗಳು! ಬರೆಯಲು ತೊಡಗಿದಾಗಿನಿಂದ ಅವರಿಗೆ ಹೊರ ಪ್ರೇರಣೆ ದೊರಕಿದ್ದು ಹೆಚ್ಚಾಗಿ ಪತ್ರಿಕೆಗಳಿಂದಲೇ. `ಪತ್ರಿಕೆಯು ನನಗೆ ಮಾಧ್ಯಮವಾಗಿ ದೊರಕಿತು~ ಎಂದಿದ್ದಾರೆ ಅವರೇ.

ಪತ್ರಿಕಾ ಸಾಹಿತ್ಯವೆಂದರೆ ಸಾಮಾನ್ಯವಾಗಿ, ಚಿಕ್ಕದಾಗಿ ಅಡಕವಾಗಿರಬೇಕು. ಸರಳವಾಗಿರಬೇಕು, ನೇರವಾಗಿರಬೇಕು. ಈ ಗುಣಗಳ ಮೂಲಕ ಅವರ ಒಟ್ಟೂ ಬರವಣಿಗೆಯ `ಶೀಲ~ವೇ (ಶೈಲಿ) ರೂಪಗೊಳ್ಳುತ್ತಾ ಹರಳುಗಟ್ಟಿಕೊಂಡಿತ್ತು.
ಅವರ ಎಲ್ಲಾ ಬರವಣಿಗೆಗಳಲ್ಲೂ ಪತ್ರಿಕಾಸಾಹಿತ್ಯಗುಣಗಳ ಗಂಧ ಸೂಸುತ್ತದೆ.

ಆದರೆ ಪತ್ರಿಕಾ ಸಾಹಿತ್ಯವು ಅಗತ್ಯವೆಂದು ತಿಳಿಯುವ ಕೆಲವು ಅಂಶಗಳನ್ನು ಅವರು ಇಚ್ಛಾಪೂರ್ವಕ ಉಚ್ಚಾಟಿಸಿಬಿಟ್ಟರು. ಬುಡ - ನಡು - ತಲೆಗಳೆಂಬ ಕ್ರಮದಲ್ಲಿ ವಿಷಯವನ್ನು ಅಚ್ಚುಕಟ್ಟಾಗಿ ತಟ್ಟನೆ ಮುಗಿಸಿಬಿಡುವುದು ಅವರಲ್ಲಿ ತುಂಬ ಸಾಮಾನ್ಯ.

ತನ್ನ ಓದುಗರು ಮತ್ತು ಅವರ ಆಸಕ್ತಿ ಅರ್ಹತೆ ಮಿತಿಗಳನ್ನು ತನ್ನೊಳಗೆ ಮೊದಲೇ ತೂಗಿ ನಿರ್ಧರಿಸಿಕೊಂಡು ಆ ಅಳತೆಗೆ ಸೀಮಿತಗೊಳಿಸಿ ಬರೆಯುವ ಕ್ರಮ ಅವರಲ್ಲಿ ಕಾಣಿಸುವುದೇ ಇಲ್ಲ. ಯಾವತ್ತೂ ಅವರು ಓದುಗರನ್ನು ತನ್ನ ಸರೀಕರೆಂದು ನಂಬಿ ಬರೆದರು.

ಎಲ್ಲಕ್ಕೂ ಮುಖ್ಯವಾಗಿ, ಸರಳತೆ ಋಜುತೆಗಳನ್ನು ಮನಸಾ ಒಪ್ಪಿಕೊಳ್ಳುತ್ತಲೇ ಭಾಷೆಯನ್ನು ಮಾತ್ರ ಇಚ್ಛಾಪೂರ್ವಕ `ಆಲಂಕಾರಿಕ~ ವಾಗಿಸಿಕೊಂಡರು. ಅವರ ಭಾಷೆಯು ಶಬ್ದಾರ್ಥಾಲಂಕಾರಗಳ ಸಿಂಗಾರ ಸಮೃದ್ಧಿಯಿಂದಲೇ ವಿಷಯದ ಮಡುವಿನೊಳಗೆ ಧುಮುಕಿ ಜಲಕ್ರೀಡೆಯಾಡುತ್ತದೆ.

ಅಲ್ಲದೆ, ಮೂಲತಃ ತಾನು `ವಿಚಾರವಾದಿ~ ಎಂಬುದನ್ನು ಅವರು ಮೊದಲಿಗೇ ಘೋಷಿಸಿಕೊಂಡರು. ಕಳೆದ ಶತಮಾನದ ನಮ್ಮ ಕನ್ನಡ ಲೇಖಕರು ಬಹುತೇಕ, ತಮ್ಮನ್ನು `ವಿಚಾರವಾದಿ~ಗಳೆಂದು ಗುರುತಿಸಿಕೊಂಡವರೇ. ಆದರೆ ಅಂಥ ಲೇಖಕರ ಅನೇಕ ಬರವಣಿಗೆಗಳನ್ನು ಓದುವಾಗ, ಈ ಶಬ್ದಗುಚ್ಛದ ಅರ್ಥವೇ ಗೊಂದಲಕಾರಿಯಾಗಿ ಕಾಡುತ್ತದೆ;

ದೇವರು - ಬ್ರಹ್ಮ - ರಸ - ಭಾವ - ಕ್ರಾಂತಿ ಎಂಬ ಅನೇಕಾನೇಕ ಪದಗಳ ಹಾಗೆ ಇದೂ ನಿಶ್ಚಿತ ಅರ್ಥವಿಲ್ಲದೆ ಆಕಾಶ ಶಬ್ದವೆನಿಸುತ್ತದೆ. `ವಿಚಾರವಾದ~ವೆಂಬ ಪದಾರ್ಥವನ್ನು ಬೇರುಮಟ್ಟ ನಿಶ್ಶೇಷ ಖಚಿತವಾಗಿ ವಿಶ್ಲೇಷಿಸಿ ಲಕ್ಷಣ ರಚಿಸಿಕೊಂಡ ಏಕೈಕ ಕನ್ನಡ ಲೇಖಕ, ಗೌರೀಶರು.

ಗೌರೀಶರ ಪ್ರಕಾರ ಇದನ್ನು `ಬುದ್ಧಿವಾದ~ ಎನ್ನಬೇಕು; ಮರಾಠಿಯಲ್ಲಿ ಹಾಗೇ ಇದೆಯಂತೆ; ನಮ್ಮಲ್ಲಿ ಆ ಪದಕ್ಕೆ ಈಗಲೇ ಒಂದು ರೂಢಾರ್ಥವಿರುವ ಕಾರಣ ಅದನ್ನು ಬಳಸಲಿಕ್ಕಾಗಲಿಲ್ಲ. `ವಿಚಾರವಾದ~ ಎಂದು ಕರೆದುಕೊಂಡೆವು. ನಮಗೆ ತಿಳಿಯುವ ಮಟ್ಟಿಗೆ ಮನುಷ್ಯರು ಪಶುವರ್ಗದಿಂದ ಬೇರೆಯಾಗಿರುವುದು, ಬೆಳೆದುಕೊಂಡ `ಬುದ್ಧಿ~ಯಿಂದಲೇ.

ಉಳಿದ ಪಶುತತ್ತ್ವ (ಜಡ - ಪ್ರಾಣ - ಮನಸ್ಸು) ಆತನಲ್ಲಿ ಮೈಗೂಡಿಯಾಗಿದೆ. ವಿಕಾಸ ಕ್ರಮದಲ್ಲಿ ಮನುಷ್ಯನಿಗೆ ಲಭ್ಯವಾಗಿರುವ ಈ `ಬದ್ಧಿವಿಶೇಷ~ವನ್ನು ಆತ ಪ್ರಯತ್ನಪೂರ್ವಕವಾಗಿ ರೂಢಿಸಿಕೊಳ್ಳುತ್ತ, ತನ್ನ ಮನುಷ್ಯತ್ವವನ್ನು ಸ್ಥಾಪಿಸಿಕೊಳ್ಳಬೇಕು. 

 `ಧಿಯೋ ಯೋ ನಃ ಪ್ರಚೋದಯಾತ್~ ಎಂಬ ಪ್ರಾಚೀನ ಮಂತ್ರವು, ಕೂಡ ಅದೇ ಸಂಕಲನವನ್ನು ಘೋಷಿಸುತ್ತದೆ - ಇದು ಅದರ ತಳಹದಿ. (ಇದು ಡಾರ್ವಿನ್‌ನ ವಿಕಾಸವಾದ ಮತ್ತು ಅರವಿಂದರ ಉತ್ಕ್ರಾಂತಿ ಕಲ್ಪನೆಗಳೆರಡಕ್ಕೂ ಸಂಬಂಧಿಸಿಕೊಂಡಿದೆ).

ವಿಜ್ಞಾನ (ಬುದ್ಧಿ)ವೇ ಮಾನವನಿಗೆ ಅಂತಿಮ ಹಂತವೆ? ಅಲ್ಲ. ಗಮ್ಯವಾದ ಮೇಲಿನ ಹಂತವಿದೆ. ಅದು ಪ್ರಜ್ಞಾನ, ತೈತ್ತಿರೀಯ ಬ್ರಾಹ್ಮಣದ ಕಲ್ಪನೆಗಳನ್ನು ಎತ್ತಿಕೊಂಡು ಗೌರೀಶರು ಹೀಗೆ ಗುರುತಿಸುತ್ತಾರೆ: (1) ಸಂಜ್ಞಾನ (ಸಂವೇದನೆ), (2) ವಿಜ್ಞಾನ (ಬೌದ್ಧಿಕ ಪ್ರಕ್ರಿಯೆ), (3) ಪ್ರಜ್ಞಾನ (ಸಮತ್ವದ ಸಮ್ಯಕ್ ಜ್ಞಾನ). ಅಲ್ಲದೆ ಬುದ್ಧಿಯ ಎರಡು ಕವಲುಗಳನ್ನು ಅವರು ಗುರುತಿಸುತ್ತಾರೆ. ಒಂದು, ವಿನಿಯುಕ್ತ ಬುದ್ಧಿ (ವ್ಯಾವಹಾರಿಕ). ಇನ್ನೊಂದು ವಿಶುದ್ಧ (ತಿಳಿಯಲಿಕ್ಕೇ ಮೀಸಲಾದ್ದು).

ವಿನಿಯುಕ್ತ ಬುದ್ಧಿಯು ಅನೇಕ ಸಲ, ವ್ಯಾವಹಾರಿಕ ಲಾಭ, ಸ್ವಾರ್ಥದ ಸಮರ್ಥನೆ ಇತ್ಯಾದಿಗಳಿಗೆ ಬಳಕೆಯಾಗುತ್ತದೆ. ಇಂಥ ವ್ಯಭಿಚಾರದಲ್ಲಿ ಅದು ವಿಪರೀತ ಬುದ್ಧಿ (ಗೀತೆಯ `ಪ್ರಜ್ಞಾವಾದಿ~ದಂತೆ ಇ.,) ಯಾಗುತ್ತದೆ. ಆಗ ವಿಜ್ಞಾನದಿಂದಲೇ ಪ್ರಜ್ಞಾನಕ್ಕೆ ಹ್ರಾಸವಾಗುತ್ತದೆ. ಬುದ್ಧಿಯೇ ಬುದ್ಧಿಯ ವಿನಾಶಕ್ಕೆ, ಸ್ವಯಂಹತ್ಯೆಗೆ ಅಸ್ತ್ರವಾಗುತ್ತದೆ.

ಅವರೇ ಹೇಳುತ್ತಾರೆ: `ಮನುಷ್ಯನಿಗೆ ಎಂಥ ತಿಳಿಗೇಡಿತನದಿಂದ ನಡೆಯಲೂ ಕಠಿಣವೆನ್ನಿಸುವುದಿಲ್ಲ. ಆದರೆ ತನ್ನ ಅಂಥ ನಡತೆಗೂ ಬುದ್ಧಿವಂತಿಕೆಯ ಹೇತುವನ್ನೋ ಹೊದಿಕೆಯನ್ನೋ ಕೊಡದೇ ಇರುವುದು ಮಾತ್ರ ಆತನಿಗೆ ಅಶಕ್ಯವೆನಿಸುತ್ತದೆ, ಅಸಹ್ಯವೆನಿಸುತ್ತದೆ.

`ನಿಜವಾದ ವಿಚಾರವಾದಿಗೆ ತಾನು ಕಂಡದ್ದು ಸತ್ಯದ ಅಂಶವೆಂದು ಮನಗಂಡಾಗ ಅದನ್ನು ಕುರಿತು ಪ್ರತಿಪಾದನೆ ಅಗತ್ಯವಾಗುವುದಿಲ್ಲ, ವಿವೇಚನೆ ಸಾಕಾಗುತ್ತದೆ ... ಶಾಸ್ತ್ರೀಯ ವೈಜ್ಞಾನಿಕ ಸತ್ಯಗಳ ಕುರಿತು ಚರ್ಚೆ ಮಾಡುವವರು ಕೂಗಾಡುವುದಿಲ್ಲ, ರೇಗಾಡುವುದಿಲ್ಲ, ಹಿಗ್ಗಾಮುಗ್ಗಾ ಹೆಣಗಾಡುವುದೂ ಇಲ್ಲ ...~ ಮತ್ತು `ವಿಚಾರವಾದಿಯು ಪ್ರಾಮಾಣಿಕನಿದ್ದಷ್ಟೂ ತನ್ನ ವಿಚಾರ ಉಚಿತ ಖಚಿತವೆಂದು ಎಷ್ಟೆಷ್ಟು ಅಂಟಿಕೊಳ್ಳುತ್ತಾನೋ ಅಷ್ಟಷ್ಟು ಆ ವಿಚಾರದ ಮೂಲದ ಕುರಿತು, ಬೆಲೆ ಕುರಿತು ಸಂದೇಹ ಪಟ್ಟುಕೊಳ್ಳುವುದು ಅವನ ಮಾನಸಿಕ ಆರೋಗ್ಯಕ್ಕೆ ಹಿತವಾದ್ದು~.

ಇದಲ್ಲದೆ, ಬುದ್ಧಿಗೆ ಪೂರ್ತಾ ಒಳಪಡದ ಒಂದು ಕ್ಷೇತ್ರವನ್ನೂ ಅವರು ಗುರುತಿಸುತ್ತಾರೆ: ಅದು, ಮನುಷ್ಯ, ಪ್ರವೃತ್ತಿ ಮತ್ತು ಭಾವನೆಗಳ ಕ್ಷೇತ್ರ. `ಇದು ಇಂದಿಗೂ ಮಹತ್ವದವೇ~. `ಬುದ್ಧಿವಾದಿಯು ಮೊದಲು ಒಪ್ಪಿಕೊಳ್ಳಬೇಕಾದ ಅಂಶ ಬುದ್ಧಿಯ ಪರಿಮಿತಿ ... ಆದರೆ, ಅವು (ಪ್ರವೃತ್ತಿ - ಭಾವನೆ) ಗಳನ್ನು ಬುದ್ಧಿಯ ನಿಯಾಮಕವಾಗಿ ನಿರ್ಣಾಯಕವಾಗಿ ಆಳಬೇಕು.

ಭಾವನೆ ಕುರುಡು, ಬುದ್ಧಿ ಕುಂಟು~. ಪ್ರವೃತ್ತಿ - ರಸಪ್ರಪಂಚ (ಕಲೆ ಕಾವ್ಯ ಸಾಹಿತ್ಯ ಇತ್ಯಾದಿ) ಮೈದಾಳುವುದು ಬಹುಶಃ ಪ್ರವೃತ್ತಿ ಕ್ಷೇತ್ರದಲ್ಲೇ. `ಪೂರ್ಣ ಪ್ರಜ್ಞೆಯನ್ನು ಬೆಳೆಸಿಕೊಳ್ಳಲೆತ್ನಿಸುವವನು ಜೀವನದ ತತ್ತ್ವಭಾಷ್ಯದ ಭಾಮತಿಯೂ ಆಗಬೇಕು, ಅದರ ಕೌತುಕದ ರಸಾನುಭೂತಿಯ ಭವಭೂತಿಯೂ ಆಗಬೇಕು. ಮತ್ತು ರಸಭಾವ ಕಲಾಪ್ರಪಂಚವನ್ನು ಆಳುವ ನಿಯಮಕ ಸತ್ತೆ ಸೌಂದರ್ಯದ್ದು, ರಸಿಕತೆಯದು. ಅಲ್ಲಿ ವಿಚಾರವಾದ ಕೇವಲ ಪರಿಚಾರಿಕೆ~. ಹೀಗೆ ಅವರು ಬುದ್ಧಿಯ ಪರಿಮಿತಿಗಳನ್ನೂ ವಿಕೃತಿಗಳನ್ನೂ ನಿಸ್ಸಂದಿಗ್ಧವಾಗಿ ಹೇಳಿಕೊಂಡಿದ್ದಾರೆ ಮತ್ತು ಆ ಮೂಲಕ ತನ್ನ ನೆಲೆಯನ್ನು ನಿಸ್ಸಂದಿಗ್ಧವಾಗಿ ಘೋಷಿಸಿಕೊಂಡಿದ್ದಾರೆ.

ಕೊಂಚ ಗೊಂದಲ ಹುಟ್ಟಿಸಬಹುದಾದ್ದೆಂದರೆ, ಅವರ ಬರವಣಿಗೆಯ `ಅಲಂಕಾರಿಕ~ ಶೈಲಿ, ವಿಚಾರವಾದದ ನಿರೂಪಣೆಗೆ `ಬಣ್ಣವಿಲ್ಲದ ಭಾಷೆ~ ಸಾಕು. ಅಂತ ಅವರೇ ಬಣ್ಣಿಸುತ್ತಾರೆ; ಮುಂದುವರಿದು, ಪೂರ್ಣಪ್ರಜ್ಞೆಯೆಂಬುದು ಭಾಮಿತಿತ್ವ ಭವಭೂತಿತ್ವಗಳ (ತತ್ವ - ಕಾವ್ಯಗಳ) ಸಂಪೃಕ್ತಿಯಾಗಿರುತ್ತದೆ ಅಂತಲೂ ಹೇಳುತ್ತಾರೆ. ಪ್ರಾಯಶಃ ವಿಚಾರವೆಂಬುದು ಅವರ ಚಿಂತನಪ್ರಕ್ರಿಯೆಗೆ ಸಂಬಂಧಿಸಿದ್ದು, ಅಭಿವ್ಯಕ್ತಿಮಾರ್ಗಕ್ಕಲ್ಲ. ಅದು ಬೇರೆಯೇ ವಿಚಾರವನ್ನು ಹೇಳುವುದರ ಜೊತೆ, ಅದು `ಹಟ~ವಾಗದಂತೆ ನೋಡಿಕೊಳ್ಳಬೇಕು ಎಂಬ ಎಚ್ಚರ ಅವರಿಗಿತ್ತು.

ಗೌರೀಶರು ಅಲಂಕಾರಿಕ ಅಭಿವ್ಯಕ್ತಿ ಮಾರ್ಗವನ್ನು ಅವಲಂಬಿಸುವುದಕ್ಕೆ ಒಂದು ಐತಿಹಾಸಿಕ ಹಿನ್ನೆಲೆಯೂ ಕಾಣಿಸುವಂತಿದೆ. ಮಾರ್ಕ್ಸ್‌ವಾದ ಮತ್ತು ಕಮ್ಯುನಿಸ್ಟ್ ಸಂಘಟನೆಗಳೆರಡೂ ಆ ಕಾಲಕ್ಕಿದ್ದ ಮಾನವ ಶೋಷಣೆಯ ಭೀಕರತೆ ಕಂಡು ವಿಹ್ವಲಗೊಂಡವು ಮತ್ತು ಅದನ್ನು ನಿವಾರಿಸಲು ಕಟಿಬದ್ಧವಾದವು.
 
ಈ ಬುದ್ಧಿ-ಬದ್ಧತೆಗಳೆರಡೂ ಆಳವಾದ ಮಾನವ ಪ್ರೀತಿಯಿಂದ ಪುಟಿದವು. ಆದರೆ ಅಂತಿಮ ಪರಿಣಾಮದಲ್ಲಿ ಘಟಿಸಿದ್ದು, ಅಪಾರ ಹಿಂಸೆ ಮತ್ತು ಕೆಲವೇ ಮಂದಿಯ ಸ್ವಾರ್ಥ, ತನ್ನ ಬುದ್ಧಿಯು ನಿಚ್ಚಳವಾಗಿ ಕಂಡಿರುವ ಸತ್ಯವು ಜಗತ್ತನ್ನೇ ಉದ್ಧರಿಸುತ್ತದೆ ಎಂಬ ಗಾಢ ವಿಶ್ವಾಸ ಮತ್ತು ಹಟಪ್ರಯತ್ನವೇ ಈ ದುರಂತಕ್ಕೆ ಕಾರಣವಾಯಿತು.

ಹಿರಿಯ ಚಿಂತಕ-ನಾಯಕ ಮಾನವೇಂದ್ರನಾಥ ರಾಯ್ ಆಗಲೇ ಅದನ್ನು ವಿಶ್ಲೇಷಿಸಿದ್ದರು. ಮತ್ತು ತನ್ನ ನೆಚ್ಚಿನ ಮಾರ್ಕ್ಸ್‌ವಾದದಿಂದ ದೂರಾಗಿ `ನವಮಾನವತಾವಾದ~ವನ್ನು ಪ್ರತಿಪಾದಿಸಿದ್ದರು. ಗೌರೀಶರು ರಾಯ್‌ರಿಂದ ಪ್ರಭಾವಿತರಾಗಿದ್ದವರು.

ಈ ಹಿನ್ನೆಲೆಯಲ್ಲಿ, ಅವರ ಬರವಣಿಗೆ ವಾದಿಸಿ ಜನರನ್ನು ಒತ್ತಾಯಿಸುವಂಥದಾಗದೆ, ವಿಷಯವನ್ನು ಜನಮಧ್ಯದಲ್ಲಿ ಇಟ್ಟುಕೊಂಡು ಶೋಧಿಸುತ್ತ ವಿವೇಚಿಸುತ್ತ ಹೋಗುವ `ಲೀಲಾಮಾರ್ಗ~ವಾಗಿ ರೂಪುಗೊಂಡಿತು. ಅಥವಾ - ಅವರೇ ಶಬ್ದ ವಿವರಣೆ ಸಮೇತ ಹೇಳುವ `ಕುತೂಹಲ~ ಮತ್ತು `ಜಿಜ್ಞಾಸೆ~ಗಳು ಅವರ ಬದುಕು - ಬರಹಗಳ ಸೆಲೆ.

ಕುತೂಹಲ = ಕುತ - ಊಹ್ (ಎಲ್ಲಿಂದ ಎಂಬ ಊಹೆ) ಮತ್ತು ಅದಕ್ಕೆ `ಲ~ ಪ್ರತ್ಯಯ. ಜಿಜ್ಞಾಸೆ = ಜ್ಞಾ (ತಿಳಿ) ಎಂಬ ಧಾತುವಿನ ಇಚ್ಛಾರ್ಥಕರೂಪ; ತಿಳಿಯುವ ಅಪೇಕ್ಷೆ.
ಈ `ವಿಚಾರ~ವೆಂಬುದರ ಬಗ್ಗೆ ಕೂಡಾ ಕೊಂಚ ವಿಚಾರ ಮಾಡಬೇಕು. ಗೌರೀಶರು ಯಾವುದೇ ಶಬ್ದವನ್ನು ಬಳಸುವಾಗಲೂ ಅದರ ನಿರುಕ್ತವನ್ನು ನಿರ್ಣಯಿಸಿಕೊಂಡೇ ಬಳಸುವ ಶಾಸ್ತ್ರಶುದ್ಧಿಯನ್ನು ರೂಢಿಸಿಕೊಂಡವರು.

`ವಿಚಾರ~ವೆಂಬ ಪದವು ಚರತ್ವವನ್ನು ಸೂಚಿಸುವಂಥದು, ಸ್ಥಿರತ್ವವನ್ನಲ್ಲ. ವಿಚಾರವು ಸಾಧನೆಯ ದಾರಿ, ಸಿದ್ಧಾಂತದ ನೆಲೆಯಲ್ಲ. ಚಾರಣವಾದ್ದರಿಂದ ಅದನ್ನು ಭಾಷೆಯಲ್ಲಿ- ಅದೂ ಬರವಣಿಗೆಯಲ್ಲಿ- ಸ್ಥಿರಗೊಳಿಸುವಾಗಲೇ ಅದರ ಚಾರಣಶೀಲವು ಊನಗೊಳ್ಳುತ್ತದೆ. ಆದರೆ ಅದಕ್ಕೆ ಪರಿಹಾರವೂ ಭಾಷೆಯಲ್ಲಿ ಉಂಟು. ಮೂಲತಃ ವಿರುದ್ಧ ದ್ವಂದ್ವಗಳನ್ನು ಒಳಗೊಂಡಿರುವ ನಮ್ಮ ವಿಶ್ವದ ಹಾಗೇ.

ಭಾಷೆಯೂ ದ್ವಂದ್ವಗಳನ್ನೊಳಗೊಂಡಿದ್ದು, (ಭಾಷೆಯು ವಿಶ್ವದ ಪ್ರತಿಬಿಂಬ ಅಥವಾ ಕೆಲವರ ಪ್ರಕಾರ ಅದೇ ಬಿಂಬ, ಕಾವ್ಯವು ಪ್ರತಿಬಿಂಬ) ಒಂದೊಂದು ಶಬ್ದವೂ ನಿರ್ದಿಷ್ಟ (ರಾಚನಿಕ) ವಾಗಿರುವಂತೆ, ಅನಿರ್ದಿಷ್ಟ (ವಿ - ರಾಚನಿಕ)ವೂ ಆಗುವ ಸಾಧ್ಯತೆಯನ್ನು ಹೊಂದಿರುತ್ತದೆ. ಶಾಸ್ತ್ರದ ಬಂಧದಲ್ಲಿ ಭಾಷೆಯು ನಿಶ್ಚಿತ ಅರ್ಥವಾಗಲು ಹೆಣಗುವಂತೆ ಕಾವ್ಯದ (ಕಲೆಯ) ಬಂಧದಲ್ಲಿ ಅನಿಶ್ಚಿತ `ಧ್ವನಿ~ಯಾಗಲೂ ಕೈ ನೀಡಿಕೊಳ್ಳುತ್ತದೆ.

(ವ್ಯವಹಾರ ಭಾಷೆಯು ಇವೆರಡರ ಮಾಧ್ಯಮಿಕ ಸ್ಥಿತಿ ಎನ್ನೋಣ) ಈ ಕಾರಣ, ವಿಚಾರವೆಂಬುದು ಕಲಾಭಾಷೆಯ ಒಲುಮೆಯ ಮೂಲಕ ತನ್ನ ಚಾರಣತ್ವವನ್ನು ಕಾಪಾಡಿಕೊಳ್ಳಬೇಕು; ಜಿಜ್ಞಾಸೆಯೆಂಬುದು ಕಾವ್ಯಗಂಧಿಯಾದ ಭಾಷೆಯ ಮೂಲಕ ವಾದದ ಗುಣವನ್ನು ಬಿಟ್ಟು ಸಂವಾದದ, ಆಟದ ಗುಣವನ್ನು ತಂದುಕೊಳ್ಳಬೇಕು.

ಹೊರಗಿನಿಂದ ವಿಧಿಸುವ ವಿಧಿಯಲ್ಲ ಇದು, ವಿಚಾರವೇ ವಿಧಿಸುವಂಥದು.
ಗೌರೀಶರು ಹೇಳಿರುವ ಇನ್ನೊಂದು ಉದ್ಬೋಧಕ ಸಂಗತಿಯನ್ನೂ ಇಲ್ಲಿ ಗಮನಿಸಬೇಕು: ಅದು, ಸತ್ಯ ಮತ್ತು ಋತ ಎಂಬ ಎರಡು ಶಬ್ದಗಳನ್ನು ಕುರಿತದ್ದು.

`ಸತ್ಯಮೇವಜಯತೇ ನಾನೃತಮ್~ ಎಂಬ ಹಳೆಯ ಮಾತಿನ ರೂಢಿಯ ವ್ಯಾಖ್ಯಾನಗಳನ್ನು- ನಮ್ಮ `ಶ್ರಿ~ ಅವರ, `ಋತಮೊಂದೆ ಗೆಲ್ಲುವುದು ಅನೃತಮಲ್ತು~ ಎಂಬ ಅನುವಾದ ಕೂಡಾ- ಸರಿಯಲ್ಲ ಎನ್ನುತ್ತಾರೆ ಗೌರೀಶರು. ಋತ ಮತ್ತು ಸತ್ಯ ಸಮಾನಾರ್ಥಕ ಪದಗಳಲ್ಲ ಎನ್ನುತ್ತಾರೆ ಅವರು. ಸತ್ಯವೆಂಬುದು ತಾತ್ವಿಕ ನೆಲೆಯಲ್ಲೂ ನಿರುಕ್ತದ ಪ್ರಕಾರವೂ ಸ್ಥಿರವಾದದ್ದು. ಮನುಷ್ಯನಿಗೆ ಹಾಗೆ `ಸ್ಥಿರ~ವಾದುದು ದಕ್ಕಲಾರದು; ಇಡೀ ವಿಶ್ವಜೀವನವು ಕಾಲವೆಂಬ ಚರದಲ್ಲಿ ಚಲಿಸುತ್ತಿರುವಂಥದು.

ಇಂಥ ಚಲನೆಯಲ್ಲಿ ನಾವು ಕಾಣುವ ಸತ್ಯದ ಅಂಶಾಂಶಗಳೇ ಋತ (ಋ ಧಾತು ಗತ್ಯರ್ಥಕ). (ಚಿತ್ರಗಳಲ್ಲಿ ಕಾಂಪೋಸಿಷನ್ ಎಂಬ ಮಾತನ್ನು ಬಳಸುತ್ತಾರೆ, ಚಲನಚಿತ್ರಗಳಲ್ಲೂ ಅದೇ ಮಾತನ್ನು ಬಳಸುತ್ತಾರೆ. ಆದರೆ ಚಿತ್ರದಲ್ಲಿನ ವಿನ್ಯಾಸ ಸ್ಥಿರವಾದ್ದು ಮತ್ತು ಚಲನಚಿತ್ರಗಳಲ್ಲಿ ಕ್ಷಣಕ್ಷಣವೂ ಬದಲಾಗುವಂಥದ್ದು. ಹಾಗೆ-) ಸತ್ಯವು ಸ್ಥಿರ, ಋತವೂ ಸಾಂದರ್ಭಿಕ ಕ್ಷಣಿಕ. (`ನಿಜವ ಕಂಡವರಿಲ್ಲ...~ ಎಂಬ ಬೇಂದ್ರೆಯವರ `ಆರ್ಷ ವಾಣಿಯ ಅಧಿಕಾರ~ದ ಉಕ್ತಿಯನ್ನು ಒಪ್ಪಿಕೊಳ್ಳುತ್ತಾರೆ) ಈ ವ್ಯಾಖ್ಯೆಯಂತೆ, `ಸತ್ಯಮೇವ...~ದ ಅರ್ಥವು, `ಅನೃತವಲ್ಲದ ಸತ್ಯವು ಮಾತ್ರವೇ ಗೆಲ್ಲುತ್ತದೆ~ ಎಂಬುದು.
 
ಕಾಣುವ ಸತ್ಯದ ಅಂಶಕ್ಕೆ (ಋತಕ್ಕೆ) ನಾವು ಬದ್ಧರಾಗಿರಬೇಕು; ಲಾಭಲೋಭಗಳಲ್ಲಿ ಅನೃತಕ್ಕೆ ಬಲಿಯಾಗಕೂಡದು. ಹಾಗೆ ನಮಗೆ ಅನೃತವಾಗದ ಸತ್ಯವೇ, ನಮಗೆ ಎಟುಕಬಹುದಾದ ಸತ್ಯ. ಅಲ್ಲಿ, ನನ್ನ ಋತವೇ ಎಲ್ಲರಿಗೂ ಸತ್ಯವಾಗಬೇಕು ಎನ್ನುವ ಹಟಕ್ಕೆ ಅವಕಾಶವಿಲ್ಲ. ಇದನ್ನು ಅರಿತಿರುವುದರಿಂದಲೇ ಕಾವ್ಯ ಭಾಷೆಯು `ಅರ್ಥ~ಕ್ಕಿಂತ ಹೆಚ್ಚಾಗಿ `ಧ್ವನಿ~ಯ ಕಡೆಗೆ ತುಡಿಯುತ್ತದೆ.

ಗೌರೀಶರ ವಿಚಾರವಾದದ ಬೆನ್ನು ಹತ್ತಿದಾಗ, ಸದ್ಯದ ಸ್ಥಿತಿಯಲ್ಲಿ ಇಷ್ಟುದ್ದ ಬೆಳೆಸುವುದು ಅನಿವಾರ್ಯ ಎನಿಸಿತು. ಇವತ್ತಿನ ನಮ್ಮ ಬಹುಪ್ರಚುರ ಬರವಣಿಗೆಗಳಲ್ಲಿ ವಿಚಾರವಾದವೆಂಬ ಮಾತು ತುಂಬ ಬಳಕೆಯಾಗುತ್ತಿದೆ: ಜತೆಗೆ, ಜನಪರ ಜೀವಪರ ಇತ್ಯಾದಿ ಮಾತುಗಳೂ ಧಾರಾಳವಾಗಿ ಬಳಕೆಯಾಗುತ್ತಿದೆ. ಅವುಗಳ ಅರ್ಥ ಜಾರಿಹೋಗಿ ಅವು ಕೇವಲ ಹೊಗಳು-ಬೈಗುಳುಗಳಾಗಿ ಮಾತ್ರ ಬೋಧವಾಗುತ್ತವೆ (ಬೈಗಳು ಅಥವಾ ಹೊಗಳು ಮಾತುಗಳಲ್ಲಿ ಅಲ್ಲಿನ ಶಬ್ದಾರ್ಥ ವ್ಯಂಜನಗಳು ಮುಖ್ಯವಾಗದೆ ಅವು ಖಂಡನೆ ಪುರಸ್ಕಾರಗಳಷ್ಟೇ ಆಗಿ ಪರಿಣಮಿಸುತ್ತವೆ).

ಈ ಸ್ಥಿತಿಯಲ್ಲಿ ವಿಚಾರವಾದ ಇತ್ಯಾದಿಗಳು, ಸಾಮಾಜಿಕ ನರಮಾತ್ರರೆಲ್ಲರೂ ತಪ್ಪದೇ ಒಪ್ಪಿ ಪರಿಪಾಲಿಸಬೇಕಾದ ಗುಣಧರ್ಮಗಳಾಗಿ ಬಿಡುತ್ತವೆ: ವಿಚಾರವು ಹಠವಾಗಿ, ಹಳೆಯ ಮೂಲಭೂತ ವಾದವನ್ನು ಧಿಕ್ಕರಿಸುವ ಹೊಸ ಮೂಲಭೂತವಾದ ಆಗುತ್ತದೆ.

ಇಂಥದೊಂದು ಜನಪರ ವಕೀಲಿಯ ನೆಲೆಯಲ್ಲಿ ಗೌರೀಶರ ಯಾವುದೇ ಮಾತುಗಳನ್ನೆತ್ತಿಕೊಂಡು, ಇದು ನಮ್ಮ ವಿಚಾರವಾದವೇ ಅಂತ ಪ್ರಮಾಣ ಮಾಡಿ ವಾದಿಸಬಹುದು ಅಥವಾ, ಇವರಲ್ಲಿ ಬಲು ಸೂಕ್ಷ್ಮವಾದ ಮೂಲಭೂತವಾದವಿದೆ ಅಂತಲೂ ಪ್ರತಿಪಾದಿಸಲೂ ಬಂದೀತು.

ಗೌರೀಶರದೊಂದು ಪುಟ್ಟ ಬರವಣಿಗೆಯಿಂದ ಎತ್ತಿಕೊಳ್ಳುತ್ತೇನೆ: ಸಂಜೆ ಮಬ್ಬಿನಲ್ಲಿ ದೋಣಿ ಮುದುಕನೊಬ್ಬ ಇನ್ನಾರಿಗೋ ಇನ್ನಾವುದೋ ಅರ್ಥದಲ್ಲಿ ಕೂಗಿ ಹೇಳಿದ್ದು- `ಕಲ್ತವರು ಅವರು, ದಾರಿ ತಪ್ತಾರೆ~ ಅಂತ- ಅದು ಈ ಕಲಿಕೆಯ ಕಲಿಯ ಕಿವಿ ತಾಗಿದ್ದೇ ಬಾಣ ಎದೆ ಹೊಕ್ಕಂತೆ ಸ್ತಂಭನಗೊಂಡು ಮೌನದಲ್ಲಿ ಒಳಕ್ಕೆರಗಿಕೊಳ್ಳುತ್ತ, ಅದರ ಅರ್ಥವಲ್ಲದೆ ಅರ್ಥೋತ್ತರಗಳಿಗೆ ತಡಕುವ ಅಂಥ ಕಟ್ಟೆಚ್ಚರವೇ ಗೌರೀಶರ `ವಿಚಾರವಾದ~.

ನಮ್ಮ ತರುಣ ವಿದ್ಯಾರ್ಥಿಗಳು, ಅದರಲ್ಲೂ ಸಾಹಿತ್ಯಾಸಕ್ತಿ ಉಳ್ಳವರು ಗೌರೀಶರ ಬಿಡಿ ಬರಹಗಳನ್ನಾದರೂ- ಕನಿಷ್ಠ ಪಕ್ಷ ಒಂದು ನೂರಿನ್ನೂರು ಪುಟಗಳಷ್ಟು- ಓದಬೇಕು ಅಂತ ನನ್ನ ಆಸೆ. ಮತ್ತು ನಾವೆಲ್ಲ ಅವರ ಬರಹಗಳನ್ನು ಇನ್ನೊಮ್ಮೆ ಸಾವಧಾನವಾಗಿ ಓದಿ, ಅಲೈಸಿಕೊಳ್ಳುತ್ತ ಅರಿತುಕೊಳ್ಳುತ್ತ ಜಿಜ್ಞಾಸೆಯಲ್ಲಿ ಆರೈಕೆ ಮಾಡಿಕೊಳ್ಳುತ್ತ ಪಡೆದುಕೊಳ್ಳಬೇಕು ಅಂತಲೂ ನನ್ನ ಆಸೆ.

2
ಗೋಕರ್ಣವು ನನಗೆ ಸಮೀಪದ, ಹಲವು ಬಗೆಯ ಸಂಬಂಧಗಳಿರುವ ಊರು. ಅಲ್ಲಿಗೆ ನಾನು ಹೋದದ್ದು ಮೂರು ನಾಲ್ಕು ಸಲವಷ್ಟೇ. ಅಲ್ಲಿದ್ದ ಮಹರ್ಷಿ ದೈವರಾತರನ್ನು ಬಾಲ್ಯದಲ್ಲಿ ನಾನು ಬೆರಗಾಗಿ ನೋಡಿದ್ದುಂಟು; ಆಮೇಲೆ ಕ್ರಮೇಣ ಅವರ ನೆನಪು ಮಸಳಿಸಿತು. ಮುಂದೆ ದೀರ್ಘಕಾಲ ಈತನಕ ಗೌರೀಶರು ನನಗೆ ಗೋಕರ್ಣದ ಆಕರ್ಷಣೆಯಾದರು. ಆದರೆ ಅವರನ್ನೂ ನಾನು ಭೇಟಿಯಾದ್ದು ಕಡಿಮೆಯೇ.

ಕುಮಟಾ ಸಾಹಿತ್ಯ ಸಮ್ಮೇಳನದಲ್ಲಿ ಮೊದಲು ಭೇಟಿಯಾದಂತೆ ನೆನಪು. 1956ರಲ್ಲಿ ಒಮ್ಮೆ ಎಂಟು ದಿನ ಗೋಕರ್ಣದಲ್ಲಿ ಉಳಿದಿದ್ದಾಗ ಒಂದು ಬೆಳಿಗ್ಗೆ ಅವರ ಮನೆಗೆ ಹೋಗಿ ಅವರನ್ನು ಭೇಟಿಯಾದೆ; ಅವರ ನಿಜ ಸಖೀಗೀತದ ಸಖಿಯಾಗಿದ್ದ ಸೌ. ಶಾಂತಾ ಕಾಯ್ಕಿಣಿಯವರ ಜತೆಯಲ್ಲಿ.

ಶಾಂತಮ್ಮನವರ ಆತಿಥ್ಯದ ನವಿರು ಮತ್ತು ಗೌರೀಶರ ನಿರರ್ಗಳ ಮಾತುಗಳಲ್ಲಿ ಸುಖಿಸಿದೆ. ಎರಡನೇ ದಿನ ಸಂಜೆ ಪೂರ್ತಾ ಅವರ ಮನೆಸೆರಗಿನ ಬಿಳಿಮರಳಿನ ಸುಂದರ ಕಡಲಬೇಲೆಯಲ್ಲಿ ನನ್ನನ್ನು ತಿರುಗಾಡಿಸಿದ್ದರು; ಆಗಲೇ ಕುಸಿಯ ತೊಡಗಿದ್ದ ದೈವರಾತರ ಆಶ್ರಮ ಅಶೋಕವನ ಗೋಶಾಲೆಗಳನ್ನು ತೋರಿಸಿದ್ದರು.
 
ಮೂರನೆಯ ದಿನ, ಬಳಿಯ ಬಂಕಿಕೊಡ್ಲಿಗೆ ಕವಿ ಎಕ್ಕುಂಡಿಯವರಿದ್ದಲ್ಲಿಗೆ ಕರೆದೊಯ್ದರು. ಅದಾದ ಮೇಲೆ ಅವರನ್ನು ಭೆಟ್ಟಿಯಾದದ್ದು ಎರಡು ಮೂರು ಸಲವಿದ್ದೀತು, ಸಾಹಿತ್ಯ ಸಮ್ಮೇಳನಗಳಲ್ಲಿ. ಕಡೆಯ ಭೇಟಿ 1997ರಲ್ಲಿ ಉಡುಪಿಯಲ್ಲಿ ಅನಾರೋಗ್ಯದಿಂದ ಅವರು ಚಿಕಿತ್ಸೆ ಪಡೆಯಲಿಕ್ಕಿದ್ದ ಆಯುರ್ವೇದ ಆಸ್ಪತ್ರೆಯ ಕೊಠಡಿಯಲ್ಲಿ.

ಆಗ ಯಥಾವತ್ ಶಾಂತಮ್ಮನವರೂ ಜತೆಗಿದ್ದರು; ಯಾವತ್ತೂ ಗೌರೀಶರ ಕಣ್ಣಾಗಿದ್ದ ಅವರು ಈಗ ಕೆಲಮಟ್ಟಿಗೆ ಕೈಕಾಲೂ ಆಗಿ ಶುಶ್ರೂಷೆ ಮಾಡುತ್ತಿದ್ದರು (ಅದು ಅಚಾನಕವಾಗಿ ನಮಗೆಲ್ಲರಿಗೂ ದೊಡ್ಡ ಆತಂಕದ ದಿನವೂ ಆಗಿತ್ತು; ಮಾನ್ಯ ಕಾರಂತರು ಮಣಿಪಾಲ್ ಆಸ್ಪತ್ರೆ ಸೇರಿ ಆನಂತರ ಅಲ್ಲಿ ಕೋಮಾ ಸ್ಥಿತಿಗಿಳಿದಿದ್ದರು.

ಎಚ್ಚರಳಿದ ಅವರನ್ನು ನೋಡಿ ಬಂದು ಆಮೇಲೆ ಗೌರೀಶರನ್ನು ಕಾಣಲು ಹೋಗಿದ್ದೆ, ಹೋದದ್ದೇ ಕಾರಂತರ ಬಗ್ಗೆ ಕೇಳಿಕೊಂಡರು. ತುಂಬ ಹೊತ್ತು ಅವರ ಬಗ್ಗೆಯೇ ಮಾತಾಡಿದರು). ಮುಖತಃ ನಮ್ಮ ಸಂಬಂಧ ಇಷ್ಟೇ. 60-70ರ ದಶಕದಲ್ಲಿ ಹೆಚ್ಚಾಗಿ, ನಮ್ಮಿಬ್ಬರ ಮಧ್ಯೆ ಸಾಕಷ್ಟು ಪತ್ರ ವ್ಯವಹಾರ ನಡೆದಿತ್ತು ನನ್ನ ಪ್ರಶ್ನೆ, ಅವರ ಜಿಜ್ಞಾಸೆ ಇತ್ಯಾದಿ.

ಆದರೆ ಮೊದಲ ಸಲ ಅವರನ್ನು ಕಂಡದ್ದಕ್ಕೆ ಮೊದಲೇ, ಅವರ ಬರವಣಿಗೆಗಳಲ್ಲದೆ ಬದುಕಿನ ಸಂಗತಿಗಳೂ ನನಗೆ ವಿವರವಾಗಿ ಪರಿಚಿತವಾಗಿದ್ದವು. ನಲವತ್ತನೇ ದಶಕದ ತುತ್ತ ತುದಿಯಲ್ಲಿ ಸಹಪಾಠಿ ಪ.ಸು. ಭಟ್ಟ, ಗೌರೀಶರ ಬಗ್ಗೆ ಬಲು ಗೌರವದಿಂದ ಎಲ್ಲವನ್ನೂ ನನಗೆ ಹೇಳುತ್ತಿದ್ದ; ಒಟ್ಟಿಗೇ ಕೂತು ಅವರ ಬರವಣಿಗೆ ಗಳನ್ನೋದಿದ್ದೆವು.

ಮುಂದೆ ಆಪ್ತ ಹಿರಿಯ ಕುಳಕುಂದ ಶಿವರಾಯ (ನಿರಂಜನ)ರು ಪುನಃ ತುಂಬ ಗೌರವದಿಂದ ಗೌರೀಶರ ಬಗ್ಗೆ ಹೇಳುತ್ತಿರುತ್ತಿದ್ದರು. ಆಮೇಲೆ ನನ್ನ ಸಹಪಾಠಿ ಚಿದಂಬರಮೂರ್ತಿ ಗೋಕರ್ಣ ಭದ್ರಕಾಳಿ ಪ್ರೌಢಶಾಲೆಯ ಮುಖ್ಯಾಧ್ಯಾಪಕನಾಗಿದ್ದು, ಗೌರೀಶರ ನೆಲೆಗೆ ನನಗೆ ಒಂದು ಸಂಕವಾಗಿದ್ದ. ಅದಾದ ಮೇಲೆ ಶಿವರಾಮ ಕಾರಂತರು ಗೌರೀಶರ ಬಗ್ಗೆ ಸದಾ ಹೇಳುತ್ತಿದ್ದರು.
 
ಗೌರೀಶರು ಅವರಿಗೆ ತುಂಬ ಆತ್ಮೀಯರು. (ಗೌರೀಶರ ಬರಹದಲ್ಲಿನ `ಪ್ರಾಸತ್ರಾಸ~ಗಳನ್ನು ಕುರಿತು, ಅವರ ಪುಸ್ತಕ ಮುದ್ರಿಸುವ ಪ್ರಿಂಟರ್ ತನ್ನ ಟೈಪ್‌ಕೇಸಿನಲ್ಲಿ ಅರ್ಧ ಕಿಲೋ ಹೆಚ್ಚು ಆಶ್ಚರ್ಯ ಚಿಹ್ನೆಗಳನ್ನಿಟ್ಟುಕೊಂಡಿರಬೇಕು ಅಂತ ತಮಾಷೆ ಮಾಡುತ್ತಿದ್ದರು). ಹೀಗೆ ಗೌರೀಶರು ನನಗೆ ಹತ್ತಿರದವರೇ ಆಗಿಬಿಟ್ಟಿದ್ದರು.

ಗೋಕರ್ಣದಲ್ಲಿ ಹುಟ್ಟಿದ ಗೌರೀಶರು ತಮ್ಮ ದೀರ್ಘಾಯುಷ್ಯವನ್ನೂ ಅಲ್ಲೇ ಕಳೆದರು- ಅದಕ್ಕಾಗಿ ಆಗರ್ಭ ಸಂಕಲ್ಪ ಮಾಡಿಕೊಂಡಿದ್ದ ಹಾಗೆ. ವೃದ್ಧಾಪ್ಯದ ಶಿಥಿಲಾರೋಗ್ಯದಲ್ಲೂ- ಊರು ಬದಲಿಸಿ, ದೂರವಿರುವ ಒಬ್ಬನೇ ಮಗನ ಬಳಿ ಹೋಗಿ ಸೇರಿಕೊಳ್ಳುವ ಆಸೆ ಒತ್ತಾಯ ಆಯ್ಕೆಗಳನ್ನು ಮಿದುವಾದ ಉಪಾಯದಿಂದ ಅವರು ನಿವಾರಿಸಿಕೊಂಡರು.

ಅಧ್ಯಾಪಕರಾಗಿ ಸೇರಿಕೊಂಡ ಶಾಲೆಯಲ್ಲೇ ಅವರು ಸೇವಾವಧಿ ಯಷ್ಟನ್ನೂ ತೀರಿಸಿದರು, ಬೇರೆ ಕರೆಗಳಿಗೆ ಕಿವಿಗೊಡದೆ, ತನ್ನ ಜ್ಞಾನ ಪ್ರಬುದ್ಧತೆಯಷ್ಟನ್ನೂ ಆ ಪುಟ್ಟ ಮಕ್ಕಳ ಪ್ರೀತಿಯಲ್ಲೇ ಒರೆಹಚ್ಚಿಕೊಳ್ಳುತ್ತ ತೃಪ್ತರಾಗಿದ್ದರು.

ಪಂಪ-ಬನವಾಸಿಯ ಗೋಷ್ಠಿಗಳು ಹಿಂದಿನ ಕಾಲದ್ದು; ಮುಂದೆ ಬಂದ ಕಾವ್ಯಕಥಾಶ್ರವಣ ವ್ಯಾಖ್ಯಾನ ಇತ್ಯಾದಿ ರೂಢಿಗಳೂ ಸವಕಲಾಗಿ ಬಿಟ್ಟಿದ್ದವು. ಆದರೇನು, ಸಮೀಪದಲ್ಲಿ ನಾಲ್ಕೈದು ಪುಟ್ಟ ಜಿಲ್ಲಾ ಪತ್ರಿಕೆಗಳಿದ್ದವು; ಅವುಗಳ ಮೂಲಕ ತನ್ನ ಸಾಮಾಜಿಕರನ್ನು ಸೃಷ್ಟಿಸಿಕೊಳ್ಳುತ್ತ, ಅವರ ಜತೆ ಮಾತುಕತೆ ಜಿಜ್ಞಾಸೆ ನಡೆಸಿಕೊಳ್ಳುತ್ತ, ನಿಮಿಷ ಬಿಡುವಿಲ್ಲದೆ ದುಡಿದುಕೊಂಡಿದ್ದರು.

ಗೌರೀಶರು ಹೊರಗೆ ದೂರದೂರ ವಿಶೇಷವಾಗಿ ಸಂಚರಿಸಿದ್ದೂ ಇಲ್ಲ. ಅಡಿಗರ `ಕೂಪಮಂಡೂಕ~ವು ತುದಿಯಲ್ಲಿ ಈ `ಹೊಸ ಠರಾವು~ ಕೈಗೊಂಡರೆ ಇವರದ್ದು ಅದೇ ಮೂಲ ಠರಾವಾಗಿತ್ತು.

ಅವರ ಸಂಚಾರವೇನಿದ್ದರೂ ವಿಚಾರ ಪ್ರತಿಭೆಯ ವಿಶ್ವದಲ್ಲಿ: ಭೂಮಂಡಲ ಮಾತ್ರವಲ್ಲ, ಬಹಿರ್ಮಂಡಲ ಅಂತರ್ಮಂಡಲ ಗಳನ್ನೆಲ್ಲಾ ಜಾಲಾಡಿ ಸಂಚರಿಸಿದರು; ಪೂರ್ವ ಪಶ್ಚಿಮ ಪ್ರಾಚೀನ ಆಧುನಿಕ ಎಲ್ಲ ಕಾಲಗಳಲ್ಲಿ ಮೇರೆಯಿಲ್ಲದೆ ಸ್ವಚ್ಛಂದ ಸಂಚರಿಸಿದರು - ಇವಷ್ಟೂ ಸ್ವಂತ ಹಕ್ಕುದಾರಿಕೆಯ (ಕೊಡವಲಿಕ್ಕಾಗದಂತೆ ಬೆನ್ನಿಗಂಟಿರುವ ಬೇತಾಳ ಕೂಡಾ) ಎಂದು ಸ್ಥೈರ್ಯ ಜವಾಬ್ದಾರಿಗಳಿಂದ. ಇದಕ್ಕೆ ಕಡಿಮೆಯಿಲ್ಲದೆ ಬದುಕಿದರು ಕೂಡಾ.

ಊರಿನ ಬಹುಜನರ ಆಸಕ್ತಿ ಆಕಾಂಕ್ಷೆಗಳು ಬೇರೆ, ತನ್ನವು ಬೇರೆ ಎಂಬುದು ನಿಚ್ಚಳ ಗೊತ್ತಿದ್ದೂ ಅವರು ಜನಸಮುದಾಯದಿಂದ ಪ್ರತ್ಯೇಕಗೊಳ್ಳಲಿಲ್ಲ. ಪ್ರೀತಿಯಿಂದ ಎಲ್ಲರ ಜತೆ ಪಾಲುಗೊಂಡು ನಿತ್ಯ ಒಡನಾಡಿಕೊಂಡೇ ಇದ್ದರು. ಹಾಗೇ ಗೋಕರ್ಣದ ಕರ್ಮಠ ವ್ಯಾಪಾರ ಕೂಪ ಕುರಿತು ಮುಚ್ಚಿಲ್ಲದೆ ಹೇಳಿದರು, ಬರೆದರು ಕೂಡಾ.

ತನ್ನ ವಿಚಾರಗಳಲ್ಲಿ ರಾಜಿ ಮಾಡಿಕೊಂಡದ್ದು ಇಲ್ಲ ಅವರು, ಯಾವತ್ತೂ ಊರಿನ ಸಮಸ್ತರು ಸಮಸ್ತವನ್ನೂ ಎಲ್ಲ ವಿರೋಧ ವಿಕಾರಗಳನ್ನೂ ಪ್ರೀತಿಯಿಂದ, `ಪ್ರತಿ~ ಎಂದುಕೊಳ್ಳದೆ `ಸಹ~ ಅಸ್ತಿತ್ವವೆಂದು ಭಾವಿಸಿ ಸಹಿಸಿ ಸಮತ್ವಚಿತ್ತದಲ್ಲಿ ನೆಮ್ಮದಿಯಾಗಿ ಬಾಳಿದರು.

ಅಂಥ ಗೋಕರ್ಣದ ನಡುವೆಯೂ ಆ ಪ್ರಾಚೀನ ಸಮುದಾಯವು ಇವತ್ತು ಕೂಡಾ ತನ್ನಲ್ಲಿ ಸೃಷ್ಟಿಸಿಕೊಂಡು ಕಾದಿಟ್ಟುಕೊಳ್ಳುತ್ತಿರುವ ಮಿಂಚಿನ ತೆಳು ರೇಖುಗಳನ್ನು ತಮ್ಮ ಸೂಕ್ಷ್ಮೇಂದ್ರಿಯ ಮೂಲಕ ಅವರು ಗ್ರಹಿಸಿದ್ದರು- ಏಕಕಾಲಕ್ಕೆ ಎಲ್ಲರಂತೆ ಹುಳಿಯುಪ್ಪಿನ ಸಂಸಾರಿಯೂ ಆಧುನಿಕ ವೈದಿಕ ಮಹಾದರ್ಶಕರೂ ಆದ ಸಂಕೀರ್ಣ ದೈವರಾತರು, ತನ್ನ ಕರ್ಮಾನುಷ್ಠಾನ ಶ್ರಾದ್ಧ ಶ್ರದ್ಧೆಗಳಿಗೆ ಊನವಿಲ್ಲದಂತೆ ಬಿಷಪ್ಪರಿಗೆ ಹಸ್ತೋದಕ ಹಾಕಿ ಉಪಚರಿಸಿದ ಪುರೋಹಿತರು, ಮಹಾಪಂಡಿತರು, ಮಹಾಸಾಧಕರು ಇತ್ಯಾದಿ ಇತ್ಯಾದಿ.

ನಾನೇ ಎನ್ನುವ ಸ್ವತಂತ್ರ ಹಕ್ಕಿನಿಂದ ಚಿಂತಿಸುವುದು ಮತ್ತು `ನಾವು~ ಎಂಬ ಸಮತ್ವ ಹೊಣೆಗಾರಿಕೆಯಿಂದ ತಾಳಿ ಬೆರೆತು ಬಾಳುವುದು- ಇಂಥ ಹದದ ಬದುಕು ನನಗೆ ದೊಡ್ಡ ಬೆರಗು; ಸಮುದಾಯತಂತ್ರ ಜನತಂತ್ರವೆಂಬ ನನ್ನ ತುದಿ ನಂಬಿಕೆಗೆ ದೊಡ್ಡ ಭರವಸೆ, ನಾನು ಊರಿಂದ ದೂರ ಹೋಗಿ ಓದಿ ತಲೆ ಬೀಗಿಕೊಂಡು, ಊರಿಗೆ ಮರಳಿ ಬಂದು ಬದುಕಬೇಕಾದಾಗ, ಹಾಗೆ ಬದುಕುವುದು ಅಸಾಧ್ಯವೇ ಎಂಬ ಭ್ರಮೆ ಹತಾಶೆಗಳ ಸಂದರ್ಭದಲ್ಲಿ, ಹತ್ತಾರು ವರ್ಷ, ಅವರ ಬದುಕೇ ನನಗೆ ಒಂದು ಮಾದರಿಯೆನಿಸಿ ಆಸರೆ ನೀಡಿತ್ತು.

ಆಗಿನ ನನ್ನ ಕಾತರದಲ್ಲಿ ಆ ಕಡೆಯಿಂದ ಬಂದವರನ್ನೆಲ್ಲ ಹಿಡಿದು ಗೌರೀಶರ ಬಗ್ಗೆ ಕೇಳಿಕೊಳ್ಳುತ್ತಿದ್ದೆ; ವರ್ಷ ಸಂಭಾವನೆಗಾಗಿ ಪ್ರಾಕ್ಕಿನಿಂದಲೂ ನಮ್ಮ ಭಾಗಕ್ಕೆ ಬರುತ್ತಿದ್ದ ಪುರೋಹಿತ ಭಟ್ಟರುಗಳನ್ನೆಲ್ಲ ಸಸಿದು ಸಸಿದು ಕೇಳಿಕೊಳ್ಳುತ್ತಿದ್ದೆ. ಒಟ್ಟಿನಲ್ಲಿ, ಗೋಕರ್ಣ ಸಮುದಾಯದ ಯಾರೊಬ್ಬರಿಂದಲೂ ನಾನು ಅವರ ಬಗ್ಗೆ ಅಪಸ್ವರ ಕೇಳಿದ್ದಿಲ್ಲ.

ಸಾರ್ವತ್ರಿಕವಾಗಿ ಛಲೋ ಮಾಸ್ತರರಾಗಿದ್ದರು, ಒಳ್ಳೇ ಮಾತುಗಾರ ರಾಗಿದ್ದರು, ಸಜ್ಜನರಾಗಿದ್ದರು, ಸಾಹಿತಿ (ಅವರನ್ನೋದದೆ ಇದ್ದವರಿಗೂ)ಯಾಗಿ ಊರಿಗೆ ಕೀರ್ತಿ ತಂದವರಾಗಿದ್ದರು.

ಗೋಕರ್ಣ ಕುರಿತು ಗೌರೀಶರು ಬರೆದ ಒಂದು ಪತ್ರಿಕಾ ಲೇಖನವನ್ನು ನೋಡಬೇಕು. ತನ್ನೊಳಗೆ ಒಂದು ಅನಿರ್ವಾಚ್ಯ `ಗೋಕರ್ಣ ಸೂಕ್ತ~ವನ್ನು ಬೈತಿಟ್ಟುಕೊಂಡಿರುವ ಬರಹ ಅದು. ಗೋಕರ್ಣವೆಂಬುದು ಅವರಿಗೆ ಯಾವತ್ಕಾಲದಿಂದ ಹರಿದಿರುವ ಒಂದು ಪ್ರವಾಹ, ಅಂಬಿಕಾತನಯರ ಗಂಗಾ ಪ್ರವಾಹದಂತೆ;

ಗಂಗೆಯು ತ್ರಿಪಥಗೆ, ಸ್ವರ್ಗದಲ್ಲಿ ಹರಿದು ಭೂಮಿಯಲ್ಲಿ ಹರಿದು ಪಾತಾಳದಲ್ಲೂ ಮುಂದುವರಿಯುವವಳು; ಸ್ವರ್ಗದ ಸ್ತ್ರೀಪುರುಷರು ಬೆಳಿಗ್ಗೆ ಎದ್ದು ಈ ಪವಿತ್ರ ಗಂಗೆಯಲ್ಲಿ ಮುಖ, ಮುಖಕ್ಕೆ ಬರೆದುಕೊಂಡ ಮಕರಿಕಾಪತ್ರ ವರ್ಣಭಂಗಗಳನ್ನು ತೊಳೆದುಕೊಳ್ಳುತ್ತಾರೆ; ಆಗ ಅವರ ಮುಖದಲ್ಲಿ ಪ್ರತಿಫಲಿಸುವ ಕಳೆದ ರಾತ್ರಿಯ ಅವರ ಸುಖಸ್ವಪ್ನಗಳ ಚೂರುಗಳು ಗಂಗೆಯಲ್ಲಿ ಬಿಂಬಿಸುತ್ತವೆ; ಆಕೆ ದಿವದ ಕನಸಿನ ಚೂರುಗಳನ್ನೆಲ್ಲಾ ಹೊತ್ತು ತಂದು ನಮಗೆ ತಲುಪಿಸುತ್ತಾಳೆ. (ಸುರಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ದುದ್ದ ಶುದ್ಧ ನೀರೇ....) ಗೌರೀಶರ ಗೋಕರ್ಣವು ಅದರ ಈ ತನಕದ ಐತಿಹ್ಯವೂ ಹೌದು, ಮುಂದಣ ದರ್ಶನವೂ ಹೌದು.

ಗೋಕರ್ಣ ಕಡಲತೀರದಲ್ಲಿ ಬರೆದಿಟ್ಟಂತಿದ್ದ ಅವರ ಪುಟ್ಟ ಮನೆಯ ಚಿತ್ರ ಕಣ್ಣಿಗೆ ಕಟ್ಟುತ್ತಿದೆ.... ಇಲ್ಲಿ, ಆಚೆ ಜಲಕಡಲು-ಈಚೆ ಜನತುಂಬಿದ ನೆಲಕಡಲು- ಮೇಲಿರುವ ಆಕಾಶ ಕಡಲು ಇವುಗಳ ಮಧ್ಯೆ, ಈ ಸುಹೃತ್ ಗೃಹಸ್ಥ ತಾನೂ ಒಂದು ಪುಟ್ಟ ಕುತೂಹಲದ ಕಡಲಾಗಿ ಬಾಳಿ ಅಳಿದರು; ಕನ್ನಡಕ್ಕೊಂದು ಪುಟ್ಟ ಕುತೂಹಲದ ಕಡಲಾಗಿ ಬಾಳಿಕೊಳ್ಳಲಿಕ್ಕೆ ಉಳಿದರು-ಬರವಣಿಗೆ ಐತಿಹ್ಯಗಳ ಒಡಲಿನಲ್ಲಿ.

ನಾಳೆ (ಸೆ. 12, 2011) ಸಾಹಿತಿ, ಶಿಕ್ಷಕ, ಕವಿ, ಚಿಂತಕ, ವಾಜ್ಞಯಕಾರ, ಅಂಕಣಕಾರ, ಮಾನವತಾವಾದಿ ಗೌರೀಶ ಕಾಯ್ಕಿಣಿಯವರ ನೂರನೇ ಹುಟ್ಟುಹಬ್ಬ. ಇಂದು ಗೋಕರ್ಣದ, ಅವರು ಬರೆದು ಬಾಳಿದ ಮನೆಯ `ಪರ್ಣಕುಟಿ~ ಚಪ್ಪರದಲ್ಲಿ  ಶತಮಾನೋತ್ಸವದ ಆರಂಭ, ಆಪ್ತ ನೆನಪಿನ ಸಂಕಿರಣ, ಗೌರೀಶರ ಸಮಗ್ರ ಸಾಹಿತ್ಯ ಸಮೀಕ್ಷಾ ಕೃತಿ `ಕಟಾಂಜನ~ದ ಬಿಡುಗಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT