ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತೂಹಲದ ಕಥಾನಕ

Last Updated 5 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಇನ್ನೇನು ಹಸೆಮಣೆ ಹತ್ತಿ ಬೇರೆಯವನನ್ನು ಮದುವೆಯಾಗಲಿರುವ ಹುಡುಗಿಯಲ್ಲಿ ಪ್ರೇಮದ ಬೀಜ ಬಿತ್ತುವ ನಾಯಕ ನಮ್ಮ ಭಾರತೀಯರ ಪಾಲಿಗೆ ದೊಡ್ಡ ಹೀರೋ. ಈ ಕಾಯಕದಲ್ಲಿ ಯಶಸ್ವಿಯಾಗಿ, ಜನಪ್ರಿಯರೂ ಆದ ಅನೇಕ `ನಾಯಕ ಮಾದರಿ~ಗಳು ನಮ್ಮ ಮುಂದಿವೆ.

ನಿರ್ದೇಶಕ ಸುನೀಲ್‌ಕುಮಾರ್ ಸಿಂಗ್ ತಮ್ಮ ಚೊಚ್ಚಲ ಚಿತ್ರವಾದ `ಮದುವೆ ಮನೆ~ಯಲ್ಲೂ ಅರ್ಧಭಾಗ ಉಣಬಡಿಸುವುದು ಇದನ್ನೇ. ಆದರೆ, ಪ್ರೇಮಕಥೆಗೆ ಸಸ್ಪೆನ್ಸ್ ಕಥನವನ್ನು ಒಗ್ಗಿಸುವ ಮೂಲಕ ಅವರು ಸಿನಿಮಾ ಪಯಣವನ್ನು ಅನಿರೀಕ್ಷಿತವಾಗಿಸಿದ್ದಾರೆ. ತೆಲುಗು, ಹಿಂದಿಯಲ್ಲಿ ಈಗಾಗಲೇ ಬಂದಿರುವ ಕೆಲವು ಚಿತ್ರಗಳ ಧಾಟಿಯನ್ನೇ ಒಪ್ಪಿಕೊಂಡರೂ ಪ್ರಸಂಗಗಳ ಸೃಷ್ಟಿಯಲ್ಲಿ ತಮ್ಮತನ ಮೆರೆದಿದ್ದಾರೆ.

ಚಿತ್ರ ಪ್ರಾರಂಭವಾಗುವುದು ರೈಲು ಪ್ರಯಾಣದಲ್ಲಿ. ಅಂತ್ಯಗೊಳ್ಳುವುದೂ ರೈಲಿನಲ್ಲೇ. ನಡುವೆ ಭಾವನದಿಯಲ್ಲಿ ಸಾಕಷ್ಟು ನೀರು ಹರಿದು ಹೋಗುತ್ತದೆ. ಚಿತ್ರದ ಬಹುಪಾಲು ನಿರುದ್ಯೋಗಿ ಪ್ರೇಮಿಯಂತೆ ಪ್ರಕಟಗೊಳ್ಳುವ ನಾಯಕನ ವರ್ತನೆಗೆ ನಿರ್ದೇಶಕರು ಸಿನಿಮೀಯ ತರ್ಕವನ್ನು ಮೂಡಿಸಿದ್ದಾರೆ. ಹೀಗಾಗಿ ಚಿತ್ರವು `ಮದುವೆ ಮನೆ~ಯ ಚೌಕಟ್ಟಿನ ಆಚೆಗೂ ಜಿಗಿಯುತ್ತದೆ. ನಾಯಕ-ನಾಯಕಿ ಕಾಡಿನಲ್ಲಿ ಪಯಣಿಸುತ್ತಾರೆ. ಅಲ್ಲಿ ನಡೆಯುವ ಪ್ರಸಂಗಗಳಿಗೆ ತೆಲುಗಿನ `ಕ್ಷಣ ಕ್ಷಣಂ~ ಅಥವಾ ಹಿಂದಿ ಹಾಗೂ ತಮಿಳಿನಲ್ಲಿ ಬಂದ `ರಾವಣ್~ ಚಿತ್ರಗಳಿಗೆ ಇರುವಷ್ಟು ಕಾಡುವ ಗುಣ ಇಲ್ಲ. ಆದರೂ ಮಾತುಗಳಲ್ಲೇ ಎಲ್ಲಾ ದೃಶ್ಯಗಳನ್ನು ಸಮರ್ಥವಾಗಿ ದಾಟಿಸುವ ಯತ್ನವನ್ನು ಸುನೀಲ್‌ಕುಮಾರ್ ಮಾಡಿದ್ದಾರೆ.

ಬದಲಾಗುವ ಲೊಕೇಷನ್‌ಗಳ ಜೊತೆಗೆ ಮುಂದೇನಾದೀತು ಎಂಬ ಕುತೂಹಲವನ್ನೂ ನಿರೂಪಣೆ ಕಾಯ್ದುಕೊಳ್ಳು ವುದರಿಂದ ಚಿತ್ರ ಕಷ್ಟ ಕೊಡದೆ ನೋಡಿಸಿ ಕೊಳ್ಳುತ್ತದೆ. ಚಿತ್ರಕಥೆಯ ರೂಪುರೇಷೆಯಲ್ಲಿ ತಮಿಳಿನ ಶಂಕರ್ ಒಪ್ಪಿಕೊಂಡಿರುವ ಮಾದರಿಯ ನೆರಳೂ ಇದೆ.

`ಗಾಳಿಪಟ~ ಚಿತ್ರದ ನಂತರ ಚಿತ್ರಕಥೆಯ ದೃಷ್ಟಿಯಿಂದ ನಾಯಕ ಗಣೇಶ್‌ಗೆ ಸಿಕ್ಕಿರುವ ಬಲವಾದ ಸಿನಿಮಾ ಇದು. ಪಟಪಟನೆ ಮಾತನಾಡುವ ಎಂದಿನ ಅವರ ಶೈಲಿಯನ್ನು ಇಲ್ಲಿಯೂ ಕಾಯ್ದುಕೊಂಡಿದ್ದಾರೆ. ಅವರ ಇಮೇಜಿನ ಹದಕ್ಕೆ ತಕ್ಕಂತೆಯೇ ಸುನೀಲ್‌ಕುಮಾರ್ ಸಂಭಾಷಣೆಯನ್ನು ಬರೆದಿದ್ದಾರೆ. ಕೆಲವೇ ಕೆಲವು ಹಾಸ್ಯ ದೃಶ್ಯಗಳು ನೀರಸ ಎನ್ನಿಸುವುದು ಬಿಟ್ಟರೆ ಚಿತ್ರದಲ್ಲಿ ಲವಲವಿಕೆಗೆ ಕೊರತೆ ಇಲ್ಲ. ದೊಡ್ಡ ಭಾವಕೊಳದಲ್ಲಿ ಈಜಾಡುವುದು ತಮಗೆ ಸಲೀಸು ಎಂಬುದನ್ನು ನಟರಾಗಿ ಗಣೇಶ್ ಮರು ನಿರೂಪಿಸಿದ್ದಾರೆ. ಅವರ ದೇಹಭಾಷೆ, ಅಭಿನಯ ಚಿತ್ರಕ್ಕೆ ಹೇಳಿಮಾಡಿಸಿದಂತಿದೆ. ಆ್ಯಕ್ಷನ್ ಹಾಗೂ ನೃತ್ಯ ಮಾತ್ರ ಅವರಿಗೆ ಹೊಂದುವುದಿಲ್ಲ.

ತಾರಾಬಳಗದಲ್ಲೂ ಹೊಸಮುಖಗಳು ಹೆಚ್ಚಾಗಿವೆ. ಇದು ಕೂಡ ನಿರ್ದೇಶಕರ ಬದಲಾವಣೆಗಾಗಿ ಹಾತೊರೆಯುವ ಮನಸ್ಥಿತಿಗೆ ಸಾಕ್ಷಿ. ಆದರೆ, ನಾಯಕಿಯ ಆಯ್ಕೆ ಸಮರ್ಪಕವಾಗಿಲ್ಲ. ಶ್ವೇತ ವನಿತೆ ಶ್ರದ್ಧಾ ಆರ್ಯ ನಾಯಕನಿಗಿಂತ ವಯಸ್ಸಿನಲ್ಲಿ ದೊಡ್ಡವರಂತೆ ಕಾಣುತ್ತಾರೆ. ದೃಶ್ಯಗಳು ಬೇಡುವ ಭಾವವನ್ನು ಮೊಗೆದುಕೊಡಲು ಕೂಡ ಅವರಿಗೆ ಸಾಧ್ಯವಾಗಿಲ್ಲ. ಅಷ್ಟೇನೂ ಗ್ಲಾಮರಸ್ ಆಗಿಯೂ ಇಲ್ಲದಿರುವುದು ಚಿತ್ರಕ್ಕೆ ದೊಡ್ಡ ಹಿನ್ನಡೆ. ಖಳನಾಯಕ ಪಾತ್ರದಲ್ಲಿ ಅವಿನಾಶ್ (ಜುಗಾರಿ) ನಟನೆಯೂ ಗಮನಾರ್ಹ.

ಶೇಖರ್ ಚಂದ್ರ ತಮ್ಮ ಕ್ಯಾಮೆರಾ ಕೆಲಸದಲ್ಲಿ ಮತ್ತೊಮ್ಮೆ ಕಸುಬುದಾರಿಕೆ ಪ್ರಕಟ ಪಡಿಸಿದ್ದಾರೆ. ಹಿನ್ನೆಲೆ ಸಂಗೀತದಲ್ಲಿ ವೃತ್ತಿಪರತೆಯ ಛಾಯೆ ಉಳಿಸಿರುವ ಮಣಿಕಾಂತ್ ಕದ್ರಿ, ಹಾಡುಗಳನ್ನು ಕಾಡುವಂತೆ ಮಾಡುವಲ್ಲಿ ಯಾಕೋ ಸೋತಿದ್ದಾರೆ. ಚಿತ್ರದ ಓಘದಲ್ಲಿ ಸೌಂದರ್‌ರಾಜನ್ ಸಂಕಲನದ ಕಾಣ್ಕೆಗೆ ಒಂದಿಷ್ಟು ಅಂಕಗಳು ಸಲ್ಲಬೇಕು.

ಲಭ್ಯ ಮಾದರಿಗಳಿಂತ ಸ್ಫೂರ್ತಿ ಪಡೆದೂ ಲವಲವಿಕೆಯ ಸ್ವಂತ ಸಿನಿಮಾ ಮಾಡುವುದು ಸಾಧ್ಯವಿದೆ ಎಂಬುದನ್ನು `ಮದುವೆ ಮನೆ~ ಸಾಬೀತು ಪಡಿಸುತ್ತದೆ. ಸುನೀಲ್‌ಕುಮಾರ್ ಸಿಂಗ್ ತಾವು ಕಿರುತೆರೆ ಹ್ಯಾಂಗೋವರ್‌ನ ನಿರ್ದೇಶಕರಷ್ಟೇ ಅಲ್ಲ ಎಂಬುದನ್ನು ಕೂಡ ಈ ಚಿತ್ರದಲ್ಲಿ ರುಜುವಾತು ಮಾಡಿದ್ದಾರೆ. ಹಿರಿತೆರೆಯಲ್ಲಿ ಅವರ ಮುಂದಿನ ಕದಲಿಕೆಗಳ ಕುರಿತು ಕುತೂಹಲ ಇಟ್ಟುಕೊಳ್ಳಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT