ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದಿ ಕಾಮನೆಗಳ ಮೆರವಣಿಗೆ

ನೂರು ಕಣ್ಣು ಸಾಲದು
Last Updated 21 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವಾತ್ಸಾಯನನ ‘ಕಾಮಸೂತ್ರ’ದಂತಹ ಮಹತ್ವದ ಕೃತಿಯನ್ನು ಜಗತ್ತಿಗೆ ಕೊಟ್ಟ ದೇಶ ನಮ್ಮದು. ನಮ್ಮ ಮಹಾ ಕಾವ್ಯಗಳಲ್ಲಿ, ಸಾಹಿತ್ಯ ಕೃತಿಗಳಲ್ಲಿ ಪ್ರೀತಿ-ಪ್ರಣಯ ತುಂಬಾ ಸಾಮಾನ್ಯ. ಮಹಾ ಕವಿ ಕಾಳಿದಾಸನಿಂದ ಹಿಡಿದು ಭವಭೂತಿ, ಚಾಂಡೀದಾಸ, ವಿದ್ಯಾಪತಿ ಮೊದಲಾದ ಹಲವಾರು ಕವಿಗಳು ಪ್ರೀತಿ-ಪ್ರಣಯದ ಕೃತಿಗಳನ್ನು ಕಟ್ಟಿಕೊಟ್ಟಿದ್ದಾರೆ. ಸಾಹಿತ್ಯದಲ್ಲಿ ಮಾತ್ರವಲ್ಲ ನಮ್ಮ ವಾಸ್ತುಶಿಲ್ಪಗಳಲ್ಲಿ ಲೈಂಗಿಕ ವಿಚಾರಗಳು ಮಾಮೂಲಿ. ಖಜರಾಹೋ, ಕೋನಾರ್ಕ್, ಕರ್ನಾಟಕದ ಬಾಗಳಿ, ಬೇಲೂರು, ಮಹಾಕೂಟ ಸೇರಿದಂತೆ ಹಲವಾರು ಪ್ರದೇಶಗಳ ದೇವಾಲಯಗಳ ಭಿತ್ತಿಗಳಲ್ಲಿ ಹೆಣ್ಣು-ಗಂಡುಗಳ ಆಕರ್ಷಕ ಮೈಮಾಟ, ಮಿಥುನದ ದೃಶ್ಯಗಳನ್ನು ಯಥೇಚ್ಛವಾಗಿ ಕಾಣಬಹುದು. ಹೀಗಿದ್ದರೂ ಒಂದು ಶತಮಾನದ ಹಿಂದೆ ಭಾರತೀಯ ಸಿನಿಮಾ ಕ್ಷೇತ್ರಕ್ಕೆ ಸೆಕ್ಸ್ ಬಂದಿದ್ದು ಹಾಲಿವುಡ್ ಮೂಲಕವೇ. 

ಮೂಕಿ ಸಿನಿಮಾ ಯುಗದಲ್ಲಿ ಚುಂಬನ ಮತ್ತಿತರ ಉದ್ದೀಪಕ ದೃಶ್ಯಗಳು ಸಹಜವಾಗಿ ಮೂಡಿಬಂದವು. ಭಾರತೀಯ ಸಿನಿಮಾದ ಆರಂಭದಲ್ಲಿ ಚಲನಚಿತ್ರ ಕ್ಷೇತ್ರವನ್ನು ಭದ್ರ ಭುನಾದಿಯ ಮೇಲೆ ನಿಲ್ಲಿಸಿದವರಲ್ಲಿ ಒಬ್ಬರಾದ ಮದನ್ ಥಿಯೇಟರ್ಸ್‌ನ ಜೆ.ಎಫ್.ಮದನ್ ಅವರು ನಮ್ಮ ಸಿನಿಮಾಗಳಲ್ಲಿ ಸೆಕ್ಸ್‌ ಅಳವಡಿಸುವಲ್ಲಿ ಮುಂಚೂಣಿಯಲ್ಲಿದ್ದರು. ಅವರು ತಯಾರಿಸಿದ ಹತ್ತಾರು ಮೂಕಿ ಪೌರಾಣಿಕ ಚಿತ್ರಗಳಲ್ಲಿ ಇಂತಹ ದೃಶ್ಯಗಳು ಹಲವಾರಿದ್ದವು. 

ಮದನ್‌ರ ಚಿತ್ರಗಳೂ ಸೇರಿದಂತೆ ಆ ಕಾಲಘಟ್ಟದಲ್ಲಿ ತೆರೆಗೆ ಬಂದ ಬಹುತೇಕ ಎಲ್ಲಾ ಚಿತ್ರಗಳಲ್ಲಿ ಪಾತ್ರ ವಹಿಸುತ್ತಿದ್ದ ಆಂಗ್ಲೋ ಇಂಡಿಯನ್ ಯುವತಿಯರು ನಿರ್ಭಿಡೆಯಿಂದ ಪ್ರೇಕ್ಷಕರನ್ನು ರಂಜಿಸಲು ತಮ್ಮ ಮೈಮಾಟವನ್ನು ಪ್ರದರ್ಶಿಸುತ್ತಿದ್ದರು. ಚಿತ್ರೋದ್ಯಮ ಅಂಬೆಗಾಲಿಡುತ್ತಿದ್ದ ದಿನಗಳು ಅವಾಗಿದ್ದರಿಂದ ಸೆನ್ಸಾರ್ ಕೂಡ ಸೆಕ್ಸ್ ಬಗ್ಗೆ ತೀವ್ರತರವಾದ ಅಡ್ಡಿ ಉಂಟುಮಾಡುತ್ತಿರಲಿಲ್ಲ. ರಾಜಕೀಯ ಚಟುವಟಿಕೆಗಳತ್ತಲೇ ಕೇಂದ್ರೀಕೃತಗೊಂಡಿದ್ದ ಸೆನ್ಸಾರ್ ಕಣ್ಣುಗಳು ಸೆಕ್ಸ್ ಬಗ್ಗೆ ಕುರುಡಾಗಿದ್ದವು.

ಮೂಕಿ ಚಿತ್ರಗಳ ಕಾಲದಲ್ಲಿ ಯಾವುದೇ ರೀತಿಯ ಚಿತ್ರ ತೆಗೆದುಕೊಂಡರೂ ಚುಂಬನ ದೃಶ್ಯಗಳು ಮಾಮೂಲಿಯಾಗಿದ್ದವು. ಆಂಗ್ಲೋ – ಜೂಯಿಷ್ ಯುವತಿಯರು ಚುಂಬನ ದೃಶ್ಯಗಳನ್ನು ಸಹಜವೆಂಬಂತೆ ಪರಿಗಣಿಸುತ್ತಿದ್ದರು. ಇದು ಸರಿ ಸುಮಾರು ಎರಡು ದಶಕಗಳ ಕಾಲ ಯಾವುದೇ ತಡೆಯಿಲ್ಲದೇ ನಡೆದವು.

ಪೌರಾಣಿಕ ಮತ್ತು ಚಾರಿತ್ರಿಕ ಚಿತ್ರಗಳಲ್ಲಿ ಪ್ರೀತಿ ಹಾಗೂ ಸೌಂದರ್ಯದ ಚಿತ್ರಿಕೆಗಳು ತೆರೆಯ ಮೇಲೆ ಬಂದವು. ಪ್ರೇಮಿಗಳ ಚಲನಚಿತ್ರಗಳಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾಗಿ ಕಾಣಸಿಗುತ್ತಿದ್ದವು.  ಪ್ರೇಕ್ಷಕರ ಆಸಕ್ತಿ ಸೆಕ್ಸ್‌ನತ್ತ ತಿರುಗುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದ ಚಿತ್ರ ತಯಾರಕರು ಅಪ್ಪುಗೆ, ಚುಂಬನ ಮುಂತಾದ ಕಾಮೋದ್ರೇಕ ದೃಶ್ಯಗಳನ್ನು ಚಿತ್ರಗಳಲ್ಲಿ ಹೆಚ್ಚು ಹೆಚ್ಚು ತರತೊಡಗಿದರು. ಆಗಿನ ಕಾಲದ ಜನಪ್ರಿಯ ತಾರೆಯೆನ್ನಿಸಿಕೊಂಡ ‘ಸುಲೋಚನಾ’ ಅವರ ಮೈಮಾಟ ಕಾಣುವಂತಹ ಸ್ಥಿರಚಿತ್ರಗಳು ವೃತ್ತ ಪತ್ರಿಕೆಗಳಲ್ಲಿ ಕಾಣಿಸಿಕೊಂಡವು. ಅನಾರ್ಕಲಿ, ಹೀರ್ ರಾಂಜಾ ಮೊದಲಾದ ಚಿತ್ರಗಳಂತೂ ಪ್ರೇಕ್ಷಕರನ್ನು ಮೋಡಿ ಮಾಡಿಬಿಟ್ಟವು. ದಿನ ಬೆಳಗಾಗುವುದರೊಳಗೆ ಭಾರತದ ಮೊಟ್ಟ ಮೊದಲ ಸೆಕ್ಸ್ ಸಿಂಬಲ್ ತಾರೆಯಾಗಿ ಸುಲೋಚನಾ ಖ್ಯಾತರಾದರು.

ಮೂಕಿ ಟಾಕಿಯಾದಾಗಲೂ ಇದೇ ಪರಿಸ್ಥಿತಿ ಚಿತ್ರಗಳಲ್ಲಿ ಮುಂದುವರೆಯಿತು. ಭಾರತದ ಮೊದಲ ಟಾಕಿ ಚಿತ್ರ ‘ಆಲಂ ಅರಾ’ದಲ್ಲಿ ಪ್ರಧಾನ ಪಾತ್ರಧಾರಿ ಜುಬೇದಾ ನೋಡುಗರನ್ನು ಹುಚ್ಚೆಬ್ಬಿಸಿದರು. ಸುಲೋಚನಾ ಹಾಗೂ ಜುಬೇದಾ ಅವರ ಬಿಡುಬೀಸು ದೃಶ್ಯಗಳು ಒಂದು ವರ್ಗದ ಜನರನ್ನು ಸೆಳೆದರೆ, ಇನ್ನೊಂದು ವರ್ಗ ಅದನ್ನು ತೀವ್ರವಾಗಿ ವಿರೋಧಿಸಿತು. ಪ್ರಣಯ ದೃಶ್ಯಾವಳಿ, ಚುಂಬನ ದೃಶ್ಯಗಳನ್ನು ಚಲನಚಿತ್ರಗಳು ಸಾಮಾನ್ಯವಾಗಿ ಹೊತ್ತು ತರುವುದನ್ನು ಕೊನೆಗೊಂದು ದಿನ ಸೆನ್ಸಾರ್ ಮಂಡಲಿ ಕೊನೆಗಾಣಿಸಬೇಕಾಯಿತು. ಇದಕ್ಕೆ ಸೆನ್ಸಾರ್‌ನ ನಿಯಮಾವಳಿಗಳು ಹೆಚ್ಚಿನ ಪಾತ್ರವಹಿಸದಿದ್ದರೂ ಸಮಾಜದ ವಿವಿಧ ಸಂಘ-ಸಂಸ್ಥೆಗಳು, ವಿಶೇಷವಾಗಿ ಧಾರ್ಮಿಕ ಹಾಗೂ ಜನಾಂಗೀಯ ಗುಂಪುಗಳ ತೀವ್ರ ವಿರೋಧವೇ ತೆರೆಯ ಮೇಲೆ ಸೆಕ್ಸ್ ಪ್ರಚೋದನೆ ಬರದಂತೆ ಬಂದ್ ಮಾಡಿದವು. 

ಮೊದಲಿಗೆ ಸೆಕ್ಸ್ ದೃಶ್ಯಾವಳಿಗಳನ್ನು ಅಳವಡಿಸುತ್ತಿದ್ದ ಚಲನಚಿತ್ರ ತಯಾರಕರು ಸೆನ್ಸಾರ್ ಕತ್ತರಿಗೆ ಹೆದರಿ ಅಂತಹ ದೃಶ್ಯಗಳನ್ನು ತೋರಿಸಲು ಹಿಂದೆ ಮುಂದೆ ನೋಡತೊಡಗಿದರು.  ಆದರೆ ಪ್ರೇಕ್ಷಕರು ಇದನ್ನು ಬಯಸುವ ಭಾವನೆಗಳು ವ್ಯಕ್ತವಾಗತೊಡಗಿದ ಮೇಲೆ ಉದ್ರೇಕಕಾರಿ ದೃಶ್ಯಗಳನ್ನು ಬೇರೆ ಬೇರೆ ಬಗೆಯಲ್ಲಿ ತೆರೆಯ ಮೇಲೆ ತರಲು ಶುರುವಿಟ್ಟರು. ನೃತ್ಯ ತಾರೆಯರು, ದುಷ್ಟ ಹೆಂಗಸಿನ ಪಾತ್ರಧಾರಿಗಳು ಚಲನಚಿತ್ರಗಳಲ್ಲಿ ಸೆಕ್ಸ್ ಸಂಕೇತಗಳಾಗಿ ಕಂಡುಬರತೊಡಗಿದರು.  ಖಳನಾಯಕರ ಆಸ್ಥಾನದಲ್ಲಿ ಅರಬೆತ್ತಲೆ ಹೆಣ್ಣುಮಕ್ಕಳು ಕಾಣಿಸಿಕೊಂಡರು. ಅವರ ಮಾದಕ ನೋಟ–ನೃತ್ಯಗಳು ಪ್ರೇಕ್ಷಕರನ್ನು ಸೆಳೆಯತೊಡಗಿದವು. 

ಸಾಂಪ್ರದಾಯಿಕ ನೃತ್ಯಗಳು ಚಲನಚಿತ್ರಗಳಲ್ಲಿ ನಿಧಾನವಾಗಿ ಮರೆಯಾಗಿ ಹೆಣ್ಣಿನ ಮೈಮಾಟವನ್ನೇ ಹೆಚ್ಚಾಗಿ ಕೇಂದ್ರೀಕರಿಸುವಂತಹ ಕ್ಯಾಬರೆ ನರ್ತನಗಳು ಹೆಚ್ಚಾಗಿ ಕಾಣತೊಡಗಿದವು. ಆಸ್ಥಾನ ನೃತ್ಯಗಾರ್ತಿಯರನ್ನು ಅಶ್ಲೀಲವಾಗಿ ತೋರುವ ಪರಿಪಾಠವೂ ಆರಂಭಗೊಂಡಿತು. ವರ್ಷಗಳು ಕಳೆದಂತೆ ನಾಯಕ- ನಾಯಕಿ, ಖಳನಾಯಕ-–ಖಳನಾಯಕಿ ಪಾತ್ರಧಾರಿಗಳೂ ಕೂಡ ಸೆಕ್ಸ್ ಸಂಕೇತಗಳಾಗಿ ಚಿತ್ರಗಳಲ್ಲಿ ಕಾಣಿಸಿಕೊಳ್ಳತೊಡಗಿದವು. 

ಹಾಲಿವುಡ್‌ನ ಮರ್ಲಿನ್ ಮನ್ರೋ, ಗ್ಲೋರಿಯಾ ಸ್ಲಾನ್‌ಸನ್, ಜಾನ್ ರುಸೆಲ್, ಸೋಫಿಯಾ ಲಾರೆನ್ಸ್ ಮೊದಲಾದ ತಾರೆಯರನ್ನು ಅನುಕರಿಸುವ ನಟಿಯರು ಭಾರತೀಯ ಚಲನಚಿತ್ರ ಪರದೆಗಳಲ್ಲಿ ಪ್ರತ್ಯಕ್ಷವಾದರು. ದೇವಾನಂದ್, ರಾಜ್‌ಕಪೂರ್ ಮೊದಲಾದ ಹಿಂದಿ ಚಿತ್ರತೆರೆಯ ಮುಂದಾಳುಗಳೆಲ್ಲಾ ತಮ್ಮ ಚಿತ್ರಗಳಲ್ಲಿ ಸೆಕ್ಸ್ ತಾರೆಯರನ್ನು, ಸೆಕ್ಸ್ ದೃಶ್ಯಗಳನ್ನು ವಿಭಿನ್ನವಾಗಿ ತೋರಿಸುವ ಮೂಲಕ ನೋಡುಗರನ್ನು ಸೆಳೆಯತೊಡಗಿದರು. ಹೀಗಾಗಿ ಜೀನತ್ ಅಮಾನ್, ರೇಖಾ, ಮಮ್ತಾಜ್, ಮಧುಬಾಲಾ, ಪರ್ವಿನ್ ಬಾಬಿ ಮೊದಲಾದವರೆಲ್ಲಾ ಭಾರತೀಯ ಚಲನಚಿತ್ರ ಜಗತ್ತಿನ ಸೆಕ್ಸ್ ಸಿಂಬಲ್‌ಗಳಾಗಿ ಹೊರಹೊಮ್ಮಿದರು. 

ಅರೇಬಿಯನ್ ನೈಟ್ಸ್ ಮಾದರಿಯ ವಸ್ತ್ರಾಲಂಕಾರ ಹಾಗೂ ಪ್ರಸಾಧನಗಳನ್ನು ಭಾರತೀಯ ಪೌರಾಣಿಕ ಹಾಗೂ ಐತಿಹಾಸಿಕ ಚಲನಚಿತ್ರಗಳು ಎರವಲು ಪಡೆದು ನಟ-ನಟಿಯರನ್ನು ಅದರಲ್ಲಿ ಮುಳುಗುವಂತೆ ಮಾಡಿದರು. ಇದು ಒಂದು ಬಗೆಯ ಪ್ರೇಕ್ಷಕರಿಗೆ ಥ್ರಿಲ್ ಎನ್ನಿಸಿದ್ದೂ ಉಂಟು.

ರಾಜ್‌ಕಪೂರ್ ಅವರು ‘ಆಗ್’, ‘ಬರಸಾತ್’ ಮೊದಲಾದ ಚಲನಚಿತ್ರಗಳಲ್ಲಿ ಯುವ ಸಮೂಹವನ್ನು ಸೆಕ್ಸ್ ದೃಶ್ಯಗಳತ್ತ ಸೆಳೆಯುವಂತೆ ನಿರೂಪಣೆ ಮಾಡಿದರು. ತಮ್ಮ ಪುತ್ರನಿಗಾಗಿ ಅವರು ತಯಾರಿಸಿದ ‘ಬಾಬಿ’ ಪ್ರೇಮ-ಕಾಮ ಸೆಳೆಯುವ ದೃಶ್ಯ ಮಾಲಿಕೆಯನ್ನು ಹೊತ್ತು ತಂದಿತ್ತು. ಈ ಚಿತ್ರ ಹದಿಹರೆಯದ ಡಿಂಪಲ್ ಕಪಾಡಿಯಾ ದೇಹ ಸೌಂದರ್ಯವನ್ನು ಪ್ರೇಕ್ಷಕರಿಗೆ ಉಣಬಡಿಸಿತು.

ದೇವಾನಂದ್ ಅವರು ಜೀನತ್ ಅಮಾನ್ ಅವರನ್ನು ‘ಹರೇ ರಾಮ ಹರೇ ಕೃಷ್ಣ’ ಚಿತ್ರದಲ್ಲಿ ಪಾಶ್ಚಿಮಾತ್ಯ ಪೋಷಾಕಿನಲ್ಲಿ ಕಾಣಿಸಿಕೊಳ್ಳುವಂತೆ ಮಾಡುವ ಮೂಲಕ ಚಲನಚಿತ್ರಗಳಲ್ಲಿ ಇನ್ನೊಂದು ಬಗೆಯ ಸೆಕ್ಸ್ ದೃಶ್ಯಗಳನ್ನು ತೋರಿಸಲು ಪ್ರಾರಂಭಿಸಿದರು. ನಾಯಕಿಯರ ದೈಹಿಕ ಸೌಂದರ್ಯವನ್ನು ಪ್ರೇಕ್ಷಕರಿಗೆ ತೋರುವಂತಹ ಮಳೆಯಿಂದ ತೊಯ್ದ ಸನ್ನಿವೇಶಗಳನ್ನು ರಾಜ್‌ಕಪೂರ್ ತಮ್ಮ ‘ಸತ್ಯಂ ಶಿವಂ ಸುಂದರಂ’ ಚಿತ್ರದ ಮೂಲಕ ಆರಂಭಿಸಿದರು. 

ಹೆಣ್ಣಿನ ದೇಹವನ್ನು ಪ್ರೇಕ್ಷಕರಿಗೆ ಕಾಣಿಸುವಂತೆ ಮಾಡುವ ಸಂದರ್ಭದಲ್ಲಿ ಅದಕ್ಕೊಂದು ದೈವಿಕ ಕಲ್ಪನೆಯನ್ನು ಹುಟ್ಟುಹಾಕಿದ ಕೀರ್ತಿಯೂ ರಾಜ್‌ಕಪೂರ್‌ರವರಿಗೆ ಸೇರುತ್ತದೆ. ‘ಜಿಸ್ ದೇಶಮೇ ಗಂಗಾ ಬೆಹ್ತಿ ಹೈ’ ಚಿತ್ರದಲ್ಲಿ ನಗ್ನತೆ ಹಾಗೂ ಅಧ್ಯಾತ್ಮವನ್ನು ಬೆಸುಗೆ ಹಾಕುವುದರ ಮೂಲಕ ಹೊಸ ಆಯಾಮವನ್ನು ಕಪೂರ್ ತೋರಿದರು. ಜೀನತ್ ಅಮಾನ್ ಅವರನ್ನು ಸತ್ಯಂ ಶಿವಂ ಸುಂದರಂನಲ್ಲಿ ತೋರಿಸಿದ್ದಕ್ಕಿಂತ ವಿಭಿನ್ನವಾಗಿ ಮಂದಾಕಿನಿಯವರನ್ನು ನಿಸರ್ಗ ಸುಂದರ ಹಿಮಾಲಯದಲ್ಲಿ ಅವರು ಪ್ರದರ್ಶಿಸಿದರು. 

ಕಥೆಗೆ ಪೂರಕವಾಗಿ ಸೆಕ್ಸ್ ಕಲಾತ್ಮಕವಾಗಿ ಮೂಡಿಬರಬಹುದೆಂದು ನಂಬಿಕೆಯ ಇನ್ನೊಂದು ಗುಂಪು ತಮ್ಮದೇ ಆದ ಮಾದರಿಯಲ್ಲಿ ಚಿತ್ರಗಳನ್ನು ಕಟ್ಟಿಕೊಟ್ಟವು. ಅದಕ್ಕೆ ‘ಮುಜೇ ಜೀನಾ ದೋ’, ‘ಉಮ್ರಾವ್ ಜಾನ್’, ‘ಉತ್ಸವ್’ ಚಿತ್ರಗಳು ಕೆಲವು ಉದಾಹರಣೆಗಳು. ಕಾವ್ಯ ಹಾಗೂ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಶ್ರೇಷ್ಠವೆನ್ನಿಸಿಕೊಂಡ ಅನೇಕ ಕೃತಿಗಳು ಭಾರತದ ಅನೇಕ ಭಾಷೆಗಳಲ್ಲಿ ಸೆಕ್ಸ್ ಸನ್ನಿವೇಶಗಳ ಮೂಲಕ ಪ್ರೇಕ್ಷಕರನ್ನು ತಲುಪಿದವು. 

ದಕ್ಷಿಣ ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲೂ ಕ್ಯಾಬರೆ ಬಗೆಯ ನರ್ತನವಿರುವ ಚಿತ್ರಗಳು ತಯಾರಾದವು. ಜೇಮ್ಸ್ ಬಾಂಡ್ ಮಾದರಿ ಚಿತ್ರಗಳಲ್ಲಂತೂ ಯುವತಿಯರ ಮೈಮೇಲೆ ಕನಿಷ್ಠ ಉಡುಗೆ ತೊಡುಗೆಗಳನ್ನು ಹಾಕಿರಲೇಬೇಕೆಂಬ ಪ್ರವೃತ್ತಿಯೂ ಬೆಳೆಯಿತು. ಜ್ಯೋತಿ ಲಕ್ಷ್ಮೀ, ಹೆಲನ್, ಡಿಸ್ಕೋ ಶಾಂತಿ ಮೊದಲಾದ ಸೆಕ್ಸ್ ಬಾಂಬ್‌ಗಳು ಚಿತ್ರ ಪರದೆಯ ಮೇಲೆ ಅಪ್ಪಳಿಸುತ್ತಿದ್ದವು. ಮಾದಕ ನೋಟದ ಮೈಮಾಟದ ಸಿಲ್ಕ್ ಸ್ಮಿತಾ ಚಿತ್ರ ಪರದೆಯಲ್ಲಿ ಪ್ರೇಕ್ಷಕರನ್ನು ಕುಣಿಸಿ ತಣಿಸುವ ನಟಿಯಾಗಿ ಹೊರಹೊಮ್ಮಿದರು. ಕೊನೆಗೆ ಆಕೆಯ ದುರಂತ ಬದುಕು ಇನ್ನೊಂದು ಚಿತ್ರವಾಗಿಯೂ ತೆರೆಗೆ ಬಂದಿತು.

ಲೈಂಗಿಕ ಶೋಷಣೆಯನ್ನು ಪ್ರತಿಭಟಿಸುವ ಕಲಾತ್ಮಕ ಚಿತ್ರಗಳು ವಿರಳವಾಗಿಯಾದರೂ ಭಾರತೀಯ ಚಿತ್ರರಂಗದಲ್ಲಿ ಸಿಗುತ್ತವೆ. ಕಥೆಗೆ ಅಗತ್ಯವಾದ ನಗ್ನ ಸನ್ನಿವೇಶಗಳನ್ನು ಹೆಣೆಯುವ ಕಥೆಗಾರರು, ಚಿತ್ರ ತಯಾರಕರು ಒಂದೆಡೆಯಾದರೆ ಕೇರಳದಲ್ಲಿ ಲೈಂಗಿಕ ದೃಶ್ಯಾವಳಿಗಳೇ ಪ್ರಧಾನವಾಗಿರುವ ಕಥಾ ಚಿತ್ರಗಳ ಮಹಾಪೂರವೇ ಒಂದು ಕಾಲಕ್ಕೆ ಬಂದವು. ‘ಹರ್ ನೈಟ್ಸ್’ (ನಿರ್ದೇಶನ: ಐ.ವಿ. ಸಸಿ) ಮಲಯಾಳಂ ಚಿತ್ರವಂತೂ ದೇಶದಾದ್ಯಂತ ಯಶಸ್ವಿಯಾಗಿದ್ದಲ್ಲದೇ ಲೈಂಗಿಕ ಚಿತ್ರಗಳ ಸರಮಾಲೆಯನ್ನೇ ಸೃಷ್ಟಿಸಿತು. ಅನೇಕ ಖ್ಯಾತನಾಮ ನಟಿಯರು ಇಂತಹ ಚಿತ್ರಗಳಲ್ಲಿ ಹೆಚ್ಚಿನ ಸಂಭಾವನೆಗಾಗಿ ಅಭಿನಯಿಸಿದ್ದು ಈಗ ಚರಿತ್ರೆಯ ಭಾಗ.

ಸೆಕ್ಸ್‌ನ ನಿಜವಾದ ಅರ್ಥ ಶೃಂಗಾರ ಎನ್ನುತ್ತಾರಾದರೂ ಹಸಿ ಹಸಿ ದೃಶ್ಯಗಳನ್ನು ನಗ್ನತೆ, ಅಶ್ಲೀಲತೆಯನ್ನು ಎಗ್ಗುಸಿಗ್ಗಿಲ್ಲದೇ ಚಿತ್ರ ಪರದೆಯ ಮೇಲೆ ತರುವಂತಹ ಪ್ರಯತ್ನಗಳಿಗೇನೂ ಕಡಿಮೆಯಿಲ್ಲ.  ಸೆನ್ಸಾರ್ ಅಂಕುಶದಲ್ಲಿ ಇಂತಹ ಸೆಕ್ಸ್ ಪ್ರದರ್ಶನವನ್ನು ಪೂರ್ಣವಾಗಿ ನಿಯಂತ್ರಣ ಮಾಡಲು ಇಂದಿಗೂ ಸಾಧ್ಯವಿಲ್ಲ ಎಂಬುದಂತೂ ನಿಜ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT