ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದುರೆ, ಡೊಳ್ಳು, ಹೆಜ್ಜೆ ಕುಣಿತ...

Last Updated 12 ಅಕ್ಟೋಬರ್ 2011, 10:45 IST
ಅಕ್ಷರ ಗಾತ್ರ

ಸಿಂಧನೂರು: ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಮಂಗಳವಾರ ನಾಯಕ ಸಮಾಜದಿಂದ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ರಾಮಾಯಣದ ವಿವಿಧ ಪಾತ್ರದ ವೇಷಧರಿಸಿದ ಬಹರೂಪಿಗಳು ಪ್ರೇಕ್ಷಕರ ಗಮನ ಸೆಳೆದರು.

ಕುದುರೆ ಕುಣಿತ, ಹೆಜ್ಜೆ ಕುಣಿತ, ಡೊಳ್ಳು ಕುಣಿತ, ಬಾಗಲಕೋಟೆಯ ಭಜನಾ ನೃತ್ಯ,  ಎತ್ತಿನ ಬಂಡಿ ಮೆರವಣಿಗೆ, ಸಾಗರದಿಂದ ಆಗಮಿಸಿದ್ದ ಮಹಿಳೆಯರ ಡೊಳ್ಳು ಕುಣಿತ ಮೆರವಣಿಗೆಗೆ ವಿಶೇಷ ಕಳೆ ಕಟ್ಟಿದವು.

ರಾಯಚೂರು ರಸ್ತೆಯಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಸ್ಥಾನದಿಂದ ಬೆಳಗಿನ 11 ಗಂಟೆಯಿಂದ ಆರಂಭವಾದ ಮೆರವಣಿಗೆ ತಹಸೀಲ್ದಾರ್ ಕಚೇರಿಗೆ ತಲುಪುವುದರೊಳಗೆ ಮಧ್ಯಾಹ್ನ 12 ಗಂಟೆಯಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಸಹಸ್ರಾರು ನಿಂತು ಮೆರವಣಿಗೆ ವೀಕ್ಷಿಸಿ ಆನಂದಿಸಿದರು.

ಶಾಸಕರಾದ ವೆಂಕಟರಾವ್ ನಾಡಗೌಡ, ಪ್ರತಾಪಗೌಡ ಪಾಟೀಲ್, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಬಿಜೆಪಿ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಎನ್.ಶಿವನಗೌಡ ಗೊರೇಬಾಳ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೆ.ಕರಿಯಪ್ಪ, ನಾಯಕ ಸಮಾಜದ ಮುಖಂಡರಾದ ಅಯ್ಯನಗೌಡ ಆಯನೂರು, ದೇವೇಂದ್ರಪ್ಪ ಯಾಪಲಪರ್ವಿ, ಆರ್.ತಿಮ್ಮಯ್ಯನಾಯಕ, ಪುಲದಿನ್ನಿ ಹನುಮಂತಪ್ಪ, ಹರಟೆನೂರು ಹನುಮೇಶ, ವೆಂಕಟೇಶ ರಾಗಲಪರ್ವಿ ಮತ್ತಿತರರು ಭಾಗವಹಿಸಿದ್ದರು.

ಸಂಚಾರಕ್ಕೆ ವ್ಯತ್ಯಯ: ನಾಲ್ಕು ತಾಸುಗಳಕಾಲ ರಾಯಚೂರು -ಗಂಗಾವತಿ ರಸ್ತೆಯಲ್ಲಿ ನಡೆದ ಬೃಹತ್ ಮೆರವಣಿಗೆಯಿಂದ ಸಾರ್ವಜನಿಕ ಸಂಚಾರಕ್ಕೆ ತೀವ್ರ ತೊಂದರೆಯುಂಟಾಯಿತು. ಸಹಸ್ರಾರು ವಾಹನಗಳು ತಾಸುಗಟ್ಟಲೆ ರಸ್ತೆಯಲ್ಲಿ ನಿಂತ ಪ್ರಯುಕ್ತ ಪ್ರಯಾಣಿಕರು ಬಿಸಿಲಿನ ತಾಪದಿಂದ ಪರಿತಪಿಸಿದರು. ಪೊಲೀಸರು ಪರಿಸ್ಥಿತಿ ಹತೋಟಿಗೆ ತರಲು ಹರಸಾಹಸಪಡಬೇಕಾಯಿತು.

ತಾಲ್ಲೂಕು ಆಡಳಿತ: ರಾಮನ ಪಿತೃವಾಕ್ಯ, ಸೀತೆ ತ್ಯಾಗ ಮತ್ತು ಲಕ್ಷ್ಮಣನ ಸ್ವಾಮಿನಿಷ್ಠೆ ಪ್ರತಿಯೊಂದು ಕುಟುಂಬಗಳು ಜೀವನದಲ್ಲಿ ಅಳವಡಿಸಿಕೊಂಡರೆ ವಾಲ್ಮೀಕಿ ಜಯಂತಿ ಅರ್ಥಪೂರ್ಣವಾಗುತ್ತದೆ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅಭಿಪ್ರಾಯಪಟ್ಟರು.

ಅವರು ಮಂಗಳವಾರ ತಾಲ್ಲೂಕಾಡಳಿತದಿಂದ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ತಹಶೀಲ್ದಾರ್ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದರು. ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್, ಮಾಜಿ ಶಾಸಕ ಬಾದರ್ಲಿ ಹಂಪನಗೌಡ, ಉಪನ್ಯಾಸಕ ವೆಂಕನಗೌಡ ವಟಗಲ್ ಮಾತನಾಡಿದರು.

ಶಾಸಕ ವೆಂಕಟರಾವ್ ನಾಡಗೌಡ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷೆ ಎನ್.ಶಾಂತಾ ಭೀಮನಗೌಡ, ನಗರಸಭೆ ಅಧ್ಯಕ್ಷೆ ಪದ್ಮಾವತಿ ಕರಿಯಪ್ಪ, ತಾ.ಪಂ.ಅಧ್ಯಕ್ಷೆ ಬಾಲಪ್ಪ ಚೆಲುವಾದಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಲಂಕೆಪ್ಪ, ನಗರಸಭೆ ಪೌರಾಯುಕ್ತ ಕೊಪ್ರೇಶಾಚಾರ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ವೇದಿಕೆ ಮೇಲೆ ಉಪಸ್ಥಿತರಿದ್ದರು.

ತಹಶೀಲ್ದಾರ ಕೆ.ನರಸಿಂಹ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಸಿಇಒ ಶರಣಬಸವರಾಜ ಕೆಸರಟ್ಟಿ ಸ್ವಾಗತಿಸಿದರು. ವೀರೇಶ ಗೋನವಾರ, ದುರುಗಪ್ಪ ಹಸಮಕಲ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT