ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುದುರೆ ಮಹಲು ಮರದ ಅರಮನೆ

Last Updated 20 ಜುಲೈ 2013, 19:59 IST
ಅಕ್ಷರ ಗಾತ್ರ

ಕೇರಳದ ರಾಜಧಾನಿ ತಿರುವನಂತಪುರದಲ್ಲಿನ ಅನಂತ ಪದ್ಮನಾಭ ದೇವಸ್ಥಾನ ತನ್ನೊಳಗೆ ಇರಿಸಿಕೊಂಡಿರುವ ಅಪಾರ ಸಂಪತ್ತಿನಿಂದ ವಿಶ್ವದ ಗಮನ ಸೆಳೆದಿದೆ. ಬಿಗಿಭದ್ರತೆ ನಡುವೆಯೂ ಅಲ್ಲಿ ಪ್ರವಾಸಿಗಳ ಸಂಖ್ಯೆ ಹೆಚ್ಚು. ಸಂಪತ್ತಿನ ಮೇಲೆ ಮಲಗಿರುವ ಪದ್ಮನಾಭನನ್ನು ನೋಡುವ ಕುತೂಹಲ ಜನರದು.

ಪದ್ಮನಾಭ ಮಂದಿರದಲ್ಲಿ ಅಪಾರವಾದ ಸಂಪತ್ತನ್ನು ಶೇಖರಿಸಿಟ್ಟದ್ದು ತಿರವಾಂಕೂರು ಅರಸು ಮನೆತನ. ದೇವಸ್ಥಾನಕ್ಕೆ ಹೊಂದಿಕೊಂಡಂತೆಯೇ ಅರಸರ ಅದ್ಭುತವಾದ ಮರದ ಅರಮನೆಯಿದೆ. 1834ರಲ್ಲಿ ತಿರುವಾಂಕೂರು ರಾಜ ಸ್ವಾತಿ ತಿರುನಾಳ್ ರಾಮವರ್ಮ ನಿರ್ಮಿಸಿದ `ಕುದುರೆ ಮಾಲಿಕ' ಹೆಸರಿನ ಈ ಮರದ ಅರಮನೆ ಅನಂತ ಪದ್ಮನಾಭ ದೇವಸ್ಥಾನಕ್ಕೆ ತಾಗಿಕೊಂಡೇ ಇದೆ.

ಇಡೀ ಅರಮನೆ ಕುದುರೆಯ ಚಿತ್ರಗಳಿರುವ 122 ಕಂಬಗಳಿಂದ ನಿರ್ಮಾಣವಾಗಿದೆ. ಅರಮನೆಗೆ ಈ ಹೆಸರು ಬರಲು ಇದೇ ಕಾರಣವಾಗಿದೆ. (ಕುತಿರ ಎಂದರೆ ಕುದುರೆ, ಮಾಲಿಕ ಎಂದರೆ ಮಹಲು). ಎರಡು ತಲೆಮಾರಿನ ರಾಜಮನೆತನಗಳ ಇತಿಹಾಸವನ್ನು ಈ ಅರಮನೆ ಹೇಳುತ್ತದೆ. ಈ ಅರಮನೆಗೆ `ಪುತೆನ್ ಮಾಲಿಕ' ಎಂದು ಕೇರಳ ಸರ್ಕಾರ ಮರು ನಾಮಕರಣ ಮಾಡಿದೆ.

ಇಡೀ ಅರಮನೆಯ ಮಾಡನ್ನು ಬೀಟೆ ಮತ್ತು ಸಾಗುವಾನಿ ಮರದಿಂದ ನಿರ್ಮಿಸಲಾಗಿದೆ. ಅರಮನೆಯಲ್ಲಿ ಹದಿನಾರು ಕೊಠಡಿಗಳಿದ್ದು ಅವುಗಳ ಛಾವಣಿಯೂ ಹದಿನಾರು ರೀತಿಯಲ್ಲಿದೆ. ಎಲ್ಲೆಲ್ಲೂ ಪ್ರಾಣಿ, ಪಕ್ಷಿ, ಹೂಗಳ ಅಲಂಕಾರಿಕ ಕೆತ್ತನೆ ಇದೆ.

ಕೇರಳದ ಸಾಂಪ್ರದಾಯಿಕ ಶಿಲ್ಪಕಲಾ ವೈಭವಕ್ಕೆ ಈ ಅರಮನೆ ಸಾಕ್ಷಿಯಾಗಿದೆ. ಇಳಿಜಾರಾದ ಛಾವಣಿ, ಆಕರ್ಷಕ ಕಂಬಗಳಿರುವ ಹಜಾರ, ವಿಶಾಲವಾದ ಅಂಗಳ ಮತ್ತು ಎತ್ತರವಾದ ಆವರಣ ಇರುವ ಗೋಡೆಗಳನ್ನು ಕಾಣಬಹುದು. ಎಲ್ಲ ಕೋಣೆಗಳ ಸೀಲಿಂಗ್‌ಗಳು ಕೆತ್ತನೆಗಳಿಂದ ತುಂಬಿವೆ. ಅಲ್ಲದೆ ಗ್ರಾನೈಟ್ ಮತ್ತು ಮಾರ್ಬಲ್‌ಗಳನ್ನು ಬಳಸಲಾಗಿದೆ.

ಸ್ವಾತಿ ತಿರುನಾಳ್ ಅಪ್ಪಟ ಸಂಗೀತ ಪ್ರೇಮಿ, ಕವಿ, ಸಂಗೀತ ಸಂಯೋಜಕ, ಕಲಾವಿದ, ಚಿಂತಕ ಮತ್ತು ಉತ್ತಮ ಆಡಳಿತಗಾರ ಎಲ್ಲವೂ ಆಗಿದ್ದ ಎಂದು ಇತಿಹಾಸ ಹೇಳುತ್ತದೆ. ಹಾಗೆಯೇ  ಅರಮನೆಯಲ್ಲಿ ಆಗಾಗ ಸಂಗೀತ ಕಛೇರಿಗಳನ್ನು ನಡೆಸುತ್ತಿದ್ದ ಎಂಬುದಕ್ಕೆ ಸಾಕ್ಷಿಯಾಗಿ ಸಂಗೀತ ಕಛೇರಿ ನಡೆಸುತ್ತಿದ್ದ ಸುಸಜ್ಜಿತ  ಹಾಲ್ ಇದೆ. ಅಲ್ಲಿ ಸುತ್ತಲೂ ಕುಳಿತುಕೊಳ್ಳಲು ಮರದ ಆಸನಗಳನ್ನಿಡಲಾಗಿದೆ. ರಾಜ ರಾಣಿಯರು ಕುಳಿತುಕೊಳ್ಳುತ್ತಿದ್ದ ತೂಗು ಮಂಚವಿದೆ. ಇಲ್ಲಿನ ಇನ್ನೊಂದು ಆಕರ್ಷಣೆ ಕೊಠಡಿಯ ಸುತ್ತಲೂ ಇರುವ ಮರದ ಆಸನಗಳು.

ಅರಮನೆಯ ಹೊರಗೆ ಸುತ್ತಲೂ ವಿಶಾಲವಾದ ಹಜಾರವಿದೆ. ಇದರ ಬೃಹತ್ ಗಾತ್ರದ ಕಂಬಗಳು ಕೆತ್ತನೆಯಿಂದ ತುಂಬಿವೆ. ಅರಮನೆಯ ಮುಂಭಾಗದಲ್ಲಿ ಅತಿಥಿಗಳು ಕುಳಿತುಕೊಳ್ಳುವ ಪುಟ್ಟ ಕುಟೀರವಿದೆ. ರಾಜನ ಭೇಟಿಗೆ ಬರುವವರೆಲ್ಲ ಮೊದಲು ಅಲ್ಲಿ ಕುಳಿತು ದಣಿವಾರಿಸಿಕೊಳ್ಳುತ್ತಿದ್ದರಂತೆ. ನಂತರ ರಾಜನ ಭೇಟಿಗೆ ಅವಕಾಶ ಕಲ್ಪಿಸಲಾಗುತ್ತಿತ್ತು.

ಈ ಅರಮನೆಯ ಪಕ್ಕದಲ್ಲಿಯೇ ತಿರುವಾಂಕೂರು ಮನೆತನದ ಕೊನೆಯ ರಾಜರು ನಿರ್ಮಿಸಿದ ವೈಭವೋಪೇತ ಅರಮನೆ ಕೂಡಾ ಇದೆ. ಅಲ್ಲಿ `ತಿರುಮಲ ಮಾರ್ತಾಂಡ ವರ್ಮಾ ಚಿತ್ರಾಲಯ'ವಿದೆ. ರಾಜಮನೆತನದ ಅಪೂರ್ವ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಅರಮನೆಯಲ್ಲಿ ನಡೆಯುತ್ತಿದ್ದ ಆಚರಣೆಗಳು, ಸಾವಿನ ಸಂದರ್ಭದ ಆಚರಣೆಗಳ ಚಿತ್ರಗಳೂ ಇವೆ. ರಾಜಮನೆತನದ ಹೆಣ್ಣುಮಕ್ಕಳು ಆಧುನಿಕತೆಗೆ ತೆರೆದುಕೊಂಡಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ತೋಳಿಲ್ಲದ ರವಿಕೆ ತೊಟ್ಟ ಹೆಣ್ಣುಮಕ್ಕಳ ಛಾಯಾಚಿತ್ರಗಳಿವೆ.

ವಸ್ತು ಸಂಗ್ರಹಾಲಯ
ಅರಮನೆಯ ಒಂದು ಭಾಗವನ್ನು ವಸ್ತು ಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ರಾಜಮನೆತನಕ್ಕೆ ಸಂಬಂಧಿಸಿದ ವಸ್ತುಗಳು, ಬೆಲ್ಜಿಯಂ ಕನ್ನಡಿಗಳು, ಕಲಾಕೃತಿಗಳು, ಆಭರಣ, ಸಂಗೀತ ಪರಿಕರಗಳು, ಸಂಪೂರ್ಣ ಕ್ರಿಸ್ಟಲ್‌ನಲ್ಲಿ ನಿರ್ಮಾಣವಾದ ರಾಜನ ಪ್ರತಿಮೆ, ಆಯುಧಗಳು, ಸಾಂಪ್ರದಾಯಿಕ ಪೀಠೋಪಕರಣಗಳು, ವಿದೇಶೀಯರು ನೀಡಿದ ಉಡುಗೊರೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಅರಮನೆಯ ಮೊದಲ ಮಹಡಿಯಲ್ಲಿ ಸ್ವಾತಿ ತಿರುನಾಳರು ಉಪಯೋಗಿಸುತ್ತಿದ್ದ ಗ್ರಂಥಾಲಯವಿದೆ. ಇದರಲ್ಲಿ ಧ್ಯಾನಕ್ಕೆ ಸಂಬಂಧಿಸಿದ ಪುಸ್ತಕಗಳು ಮತ್ತು ಸ್ವತಃ ಸ್ವಾತಿ ತಿರುನಾಳ್ ಸಂಯೋಜಿಸಿದ ಸಂಗೀತ ಸಂಗ್ರಹಗಳಿವೆ. ಕೊನೆಯ ಅರಸು ಶ್ರೀ ಚಿತ್ತಾರ ತಿರುಮಲ ಬಲರಾಮ ವರ್ಮಾ ಅವರ ತೈಲವರ್ಣಚಿತ್ರವಿದೆ. ಇದನ್ನು ಖ್ಯಾತ ಕಲಾವಿದ ರೋರಿಚ್ ಅವರು ರಚಿಸಿರುವುದು ವಿಶೇಷ.

ಮಗಳ ಮಕ್ಕಳಿಗೆ ಪಟ್ಟ
ಮಾರ್ತಾಂಡ ವರ್ಮ ತಿರುವಂಕೂರು ಮನೆತನದ ಸ್ಥಾಪಕ. ಸೇತುಲಕ್ಷ್ಮಿ ಬಾಯಿ ಕೊನೆಯ ರಾಣಿ. ತಿರುಮಲ ಮಾರ್ತಾಂಡ ವರ್ಮ ರಾಜಮನೆತನದ ಮುಂದುವರಿಕೆಯಾಗಿ ಈಗಲೂ ಅರಮನೆ ಮತ್ತು ದೇವಸ್ಥಾನದ ಕಾರ್ಯಕ್ರಮಗಳ ಮುಂದಾಳತ್ವ ವಹಿಸುತ್ತಿದ್ದಾರೆ.
ವಿಶೇಷವೆಂದರೆ ಅಲ್ಲಿ ರಾಜನ ಪಟ್ಟ ಸಿಗುವುದು ಹೆಣ್ಣುಮಕ್ಕಳ ಸಂತಾನಕ್ಕೆ. ಒಂದು ವೇಳೆ ಮಗಳಿಗೆ ಹೆಣ್ಣುಮಕ್ಕಳಿಲ್ಲವೆಂದರೆ ದತ್ತು ಸ್ವೀಕರಿಸುತ್ತಿದ್ದರು. ಆಕೆಯ ಮಕ್ಕಳಿಗೆ ಅಧಿಕಾರದ ಚುಕ್ಕಾಣಿ ನೀಡುತ್ತಿದ್ದರು. ಮಕ್ಕಳು ಅಪ್ರಾಪ್ತರಾಗಿದ್ದರೆ ತಾಯಿಯೇ ಅಧಿಕಾರ ನಡೆಸಬೇಕಾಗಿತ್ತು. ಹೀಗೆ ತಲೆಮಾರಿನಿಂದ ತಲೆಮಾರಿಗೆ ಅನೇಕ ಮನೆತನಗಳಿಗೆ ಅಧಿಕಾರ ಹಸ್ತಾಂತರವಾಗಿದೆ. ಈಗ ಇರುವ ತಿರುಮಲ ಮಾರ್ತಾಂಡ ವರ್ಮಾ ತಿರುವಾಂಕೂರು ವಂಶದ ಕೊನೆಯ ರಾಣಿ ಸೇತುಲಕ್ಷ್ಮಿಬಾಯಿಯ ಮೊಮ್ಮಗ. 1947ರಲ್ಲಿ ಸ್ವಾತಂತ್ರ್ಯ ಬರುವವರೆಗೂ ತಿರುವಾಂಕೂರು ಮನೆತನ ಆಡಳಿತ ನಡೆಸಿತ್ತು.

ತಿರುವಾಂಕೂರು ರಾಜರ ಚಿಹ್ನೆ ಶಂಖ. ಇದರ ಕಂಚಿನ ಪ್ರತಿಕೃತಿಯೊಂದನ್ನು ಹೊಸ ಅರಮನೆಯ ಮುಂಭಾಗದಲ್ಲಿ ಸ್ಥಾಪಿಸಲಾಗಿದೆ. ಇದು ಕೇರಳ ರಾಜ್ಯದ ಅಧಿಕೃತ ಲಾಂಛನ.

ಅರಮನೆಯ ಪ್ರವೇಶದ್ವಾರಕ್ಕೆ ಹೋಗುತ್ತಿದ್ದಂತೆ, ಪಾದರಕ್ಷೆಗಳನ್ನು ಬಿಟ್ಟು ಎತ್ತರದ ಚಾವಡಿಯ ಮೇಲಿನ ಮರದ ಆಸನಗಳಲ್ಲಿ ಐದು ನಿಮಿಷ ಕುಳಿತು ದಣಿವಾರಿಸಿಕೊಳ್ಳಿ ಎಂಬ ಮನವಿ ಅಲ್ಲಿನ ಪರಿಚಾರಕರಿಂದ ಬರುತ್ತದೆ. ಹದಿನೈದು ಇಪ್ಪತ್ತು ಪ್ರವಾಸಿಗಳ ತಂಡಕ್ಕೆ ಒಬ್ಬೊಬ್ಬ ಗೈಡ್ ವಿವರಣೆ ನೀಡುತ್ತಾರೆ. ಎಲ್ಲಿಯೂ ಸದ್ದುಗದ್ದಲ ಮಾಡುವಂತಿಲ್ಲ, ಛಾಯಾಚಿತ್ರ ತೆಗೆಯುವಂತಿಲ್ಲ.

ಸ್ವಾತಿ ತಿರುನಾಳ್ ಸಂಗೀತೋತ್ಸವ
ಅರಮನೆಯ ಆವರಣದಲ್ಲಿ ಪ್ರತಿವರ್ಷ ಜನವರಿ 6ರಿಂದ 12ರವರೆಗೆ `ಸ್ವಾತಿ ತಿರುನಾಳ್ ಸಂಗೀತೋತ್ಸವ' ನಡೆಯುತ್ತದೆ. ಕರ್ನಾಟಿಕ್ ಮತ್ತು ಹಿಂದೂಸ್ತಾನಿ ಸಂಗೀತದ ದಿಗ್ಗಜರು ಇಲ್ಲಿ ಕಾರ್ಯಕ್ರಮ ನೀಡುತ್ತಾರೆ. ಬಿಸ್ಮಿಲ್ಲಾ ಖಾನ್, ಗಂಗೂಬಾಯಿ ಹಾನಗಲ್, ಕಿಶೋರಿ ಅಮೊಂಕರ್, ಡಾ. ಬಾಲಮುರಳಿ ಕೃಷ್ಣ, ಡಿ.ಕೆ. ಪಟ್ಟಮ್ಮಾಳ್ ಮುಂತಾದವರು ಇಲ್ಲಿ ಸಂಗೀತಧಾರೆ ಹರಿಸಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT