ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕುದ್ರೋಳಿಯಲ್ಲಿ ಪರಿಶಿಷ್ಟ ವಿಧವೆಯರ ಪಾದಪೂಜೆ'

Last Updated 25 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಮಂಗಳೂರು: ದೇವರೆದುರು ಎಲ್ಲರೂ ಸಮಾನರು ಎನ್ನುವ ದೃಷ್ಟಿಯನ್ನಿಟ್ಟುಕೊಂಡು ಜನವರಿ 1 ರಂದು ಕುದ್ರೋಳಿಯ ಗೋಕರ್ಣನಾಥ ದೇವಸ್ಥಾನದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವಿಧವೆಯ ಪಾದಪೂಜೆ ಮಾಡುವುದಾಗಿ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೂಜಾರಿ, ಅದೇ ದಿನ ಸುಬ್ರಹ್ಮಣ್ಯದ ಮಡೆ ಮಡೆಸ್ನಾನಕ್ಕೆ ವಿರುದ್ಧವಾಗಿ ಉರುಳು ಸೇವೆಯನ್ನೂ ನಡೆಸಲಾಗುವುದು. ಬೆಳಿಗ್ಗೆ ಉರುಳು ಸೇವೆ, ಪಾದಪೂಜೆ ನಂತರ ಬೆಳ್ಳಿ ರಥೋತ್ಸವ ನಡೆಯಲಿದೆ ಎಂದರು.

ಮೇಲು-ಕೀಳೆಂಬ ವ್ಯತ್ಯಾಸ ಸಮಾಜದಿಂದ ಹೋಗಬೇಕು. ನಾವೆಲ್ಲ ಸಮಾನರು ಎಂಬ ಉದ್ದೇಶದಿಂದ ಇಂಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸಾಹಿತಿಗಳ ವಿರುದ್ಧ ಟೀಕೆ: ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಕ್ಷದ ಪ್ರಣಾಳಿಕೆ ಸಲಹಾ ಸಮಿತಿಯಲ್ಲಿ ಹಿರಿಯ ಸಾಹಿತಿಗಳಾದ ಯು.ಆರ್.ಅನಂತಮೂರ್ತಿ, ಬರಗೂರು ರಾಮಚಂದ್ರಪ್ಪ ಅವರು ಒಳಗೊಂಡಿರುವುದರಿಂದ ಅವರೂ ಭ್ರಷ್ಟರೆಂಬ ಸಂಶಯ ಜನರಲ್ಲಿ ಮೂಡುತ್ತದೆ ಎಂದು ಪೂಜಾರಿ ಟೀಕಿಸಿದರು.

`ಸಮಾಜಕ್ಕೆ ನಿಮ್ಮ ಮೇಲೆ ಗೌರವ ಇದೆ. ಆದರೆ ನೀವು ಭ್ರಷ್ಟಾಚಾರದ ಕಳಂಕ ಹೊತ್ತಿರುವ ವ್ಯಕ್ತಿಯ ಜತೆ ಗುರುತಿಸುವುದು ಸರಿಯಲ್ಲ. ಇದರಿಂದ ನಿಮ್ಮ ವಿರುದ್ಧವೇ ತಪ್ಪು ಸಂದೇಶ ರವಾನೆಯಾಗುತ್ತದೆ' ಎಂದು ಹೇಳಿದರು.

`ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಚಾರಕ್ಕೆ ಕರೆಸಿದ ತಕ್ಷಣ, ಕರ್ನಾಟಕದಲ್ಲಿ ಭ್ರಷ್ಟಾಚಾರದ ಕಳಂಕ ಹೊತ್ತಿರುವ ಬಿಜೆಪಿ ಸರ್ಕಾರದ ಪಾಪ ತೊಳೆದುಹೋಗುವುದಿಲ್ಲ. ಮೋದಿ ಏನು ಗಂಗಾಜಲವಲ್ಲ' ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT