ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಪ್ಪಣ್ಣ ಉದ್ಯಾನದಲ್ಲಿ ಮಲಗಿದ ಕಾರಂಜಿ!

Last Updated 10 ಜುಲೈ 2012, 8:05 IST
ಅಕ್ಷರ ಗಾತ್ರ

ಮೈಸೂರು: ಕೆಆರ್‌ಎಸ್ ಉದ್ಯಾನದಲ್ಲಿರುವ ಸಂಗೀತ ಕಾರಂಜಿ (ಮ್ಯೂಸಿಕಲ್ ಫೌಂಟೇನ್) ಮಾದರಿಯಲ್ಲೇ ನಗರದ ಹೃದಯ ಭಾಗವಾದ ಕುಪ್ಪಣ್ಣ ಉದ್ಯಾನದಲ್ಲಿ ನಿರ್ಮಿಸಲಾಗಿರುವ ಸಂಗೀತ ಕಾರಂಜಿ ಅರಳುವ ಮೊದಲೇ ಮಲಗಿಕೊಂಡಿದೆ.

ಉದ್ಯಾನದಲ್ಲಿ ಹುಲ್ಲುಹಾಸು ನಿರ್ಮಾಣ, ವಿದ್ಯುತ್ ದೀಪಗಳ ಅಳವಡಿಕೆ, ಸುಂದರವಾರ ಸಂಗೀತ ಕಾರಂಜಿ ನಿರ್ಮಾಣವಾಗಿ ಮೇ 4 ರಂದು ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರಿಂದ ಉದ್ಘಾಟನಾ ಭಾಗ್ಯ ಕಂಡಿದೆ. ಪಾಲಿಕೆಯ ಅಂದಿನ ಆಯುಕ್ತರಾಗಿದ್ದ ಕೆ.ಎಸ್. ರಾಯ್ಕರ್ ಅವರು `ಪ್ರವಾಸಿಗರಿಗೆ ಹೊರೆಯಾಗದಂತೆ 10 ರಿಂದ 15 ರೂಪಾಯಿ ಪ್ರವೇಶ ಶುಲ್ಕ ವಿಧಿಸಲಾಗುವುದು. ವಿದ್ಯುತ್ ಬಿಲ್, ಸಂಗೀತ ಕಾರಂಜಿ ಹಾಗೂ ಉದ್ಯಾನ ನಿರ್ವಹಣೆ ಮಾಡಬೇಕಾದ್ದರಿಂದ ಶುಲ್ಕ ಅನಿವಾರ್ಯ~ ಎಂದೂ ಹೇಳಿದ್ದರು.

ಜನರೂ ಕೂಡ ಇನ್ನೇನು ಕೆಆರ್‌ಎಸ್‌ಗೆ ಹೋಗುವುದು ತಪ್ಪಲಿದೆ ಎನ್ನುತ್ತಿರುವಾಗಲೇ ಬಹು ನಿರೀಕ್ಷಿತ ಸಂಗೀತ ಕಾರಂಜಿ ನೀರು ಪಾಚಿಗಟ್ಟುತ್ತಿದೆ. ಅಷ್ಟರ ಮಟ್ಟಿಗೆ ಪಾಲಿಕೆಯ ನಿರ್ಲಕ್ಷ್ಯಕ್ಕೆ ತುತ್ತಾಗಿದೆ.

ಮುಖ್ಯಮಂತ್ರಿಗಳ 100 ಕೋಟಿ ರೂಪಾಯಿ ಅನುದಾನದಲ್ಲಿ ರೂ. 55 ಲಕ್ಷ ವೆಚ್ಚದಲ್ಲಿ `ಸಂಗೀತ ಕಾರಂಜಿ~ ನಿರ್ಮಾಣಗೊಂಡಿದೆ. ಇದರ ರೂವಾರಿ ಬೆಂಗಳೂರಿನ ಬಿಎನ್‌ಎ ಟೆಕ್ನಾಲಜಿ ಕನ್‌ಸಲ್ಟಂಟ್ಸ್ ಲಿಮಿಟೆಡ್ ಕಂಪೆನಿಯ ಯೋಜನಾ ನಿರ್ದೇಶಕ ಎಂ.ಜೆ.ಶ್ರೀಧರ್.

ನೃತ್ಯ ಕಾರಂಜಿಯು 12*6 ಮೀಟರ್ ಅಳತೆಯಲ್ಲಿ ನಿರ್ಮಾಣಗೊಂಡಿದೆ. ಹೊರಭಾಗದಿಂದ 16*8 ಮೀಟರ್ ವಿಸ್ತೀರ್ಣ ಹೊಂದಿದೆ. ಲಘು ಸಂಗೀತದ ಮೂಲಕ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಇದನ್ನು ನಿರ್ಮಿಸಲಾಗಿದ್ದು, ಕನ್ನಡ, ಹಿಂದಿ, ಇಂಗ್ಲಿಷ್ ಹಾಡುಗಳನ್ನು ಅಳವಡಿಸಲಾಗಿದೆ. ಸಂಗೀತದ ಏರಿಳಿತ, ನೀರಿನ ಬಣ್ಣ, ಪುಟಿಯುವ ಎತ್ತರವನ್ನು ನಿಯಂತ್ರಿಸಲು `ಇನ್‌ಫೋಟೇನ್‌ಮೆಂಟ್~ ಎಂಬ ಸಾಫ್ಟ್‌ವೇರ್ ಬಳಸಲಾಗಿದೆ.

90 ಕಿಲೋ ವಾಟ್ ವಿದ್ಯುತ್ ಸಂಗ್ರಹಕವನ್ನು ಅಳವಡಿಸಲಾಗಿದ್ದು, 3 ಎಚ್.ಪಿಯ 2 ಹಾಗೂ 5 ಎಚ್.ಪಿಯ 1 ಪಂಪ್‌ಸೆಟ್ ಬಳಸಲಾಗಿದೆ.

ಕೆಆರ್‌ಎಸ್ ಉದ್ಯಾನ ಹಾಗೂ ಮಡಿಕೇರಿಯ `ರಾಜಾ ಸೀಟ್~ನಲ್ಲಿರುವ ಸಂಗೀತ ಕಾರಂಜಿಯ ಮೂರು ಪಟ್ಟು ದೊಡ್ಡ ಕಾರಂಜಿ ಇದಾಗಿದ್ದು, 2011 ರ ಸೆಪ್ಟೆಂಬರ್ 27 ರಂದೇ ಕಾಮಗಾರಿ ಪೂರ್ಣಗೊಂಡಿದೆ. ಕಡಿಮೆ ವಿದ್ಯುತ್ ಬಳಸುವ ನಿಟ್ಟಿನಲ್ಲಿ ಉನ್ನತ ತಂತ್ರಜ್ಞಾನದ ಬಳಸಿ ನಿರ್ಮಿಸಿರುವುದರಿಂದ ವಿದ್ಯುತ್ ಬಳಕೆಯಲ್ಲೂ ಉಳಿತಾಯ ವಾಗಲಿದೆ. ಎಲ್ಲ ವಯೋಮಾನದವರಿಗೆ ಇಷ್ಟವಾಗುವಂತ ಹಾಡುಗಳನ್ನು ಅಳವಡಿಸಲಾಗಿದೆ. ಇಷ್ಟಾದರೂ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸದಿರುವುದು ಸಾರ್ವಜನಿಕರು ಹಾಗೂ ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಮೇಯರ್ ಎಂ.ಸಿ.ರಾಜೇಶ್ವರಿ ಪುಟ್ಟಸ್ವಾಮಿ, `ಸಂಗೀತ ಕಾರಂಜಿ ಉದ್ಘಾಟನೆ ಆಗಿರುವುದು ನಿಜ. ಆದರೆ ಯಾವ ಕಾರಣಕ್ಕೆ ವೀಕ್ಷಣೆಗೆ ಮುಕ್ತವಾಗಿಲ್ಲ ಎಂಬ ಬಗ್ಗೆ ಮಾಹಿತಿ ಇಲ್ಲ. ಆಯುಕ್ತರೊಡನೆ ಚರ್ಚಿಸಿ ಶೀಘ್ರವೇ ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು. ಈ ಕುರಿತು ಇರುವ ಅಡೆತಡೆಗಳನ್ನು ಬಗೆಹರಿಸಲಾಗುವುದು~ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT