ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಪ್ಪಳಿಯಲ್ಲಿ ಕುರೂಪ ಚಟುವಟಿಕೆ

Last Updated 29 ಡಿಸೆಂಬರ್ 2010, 9:55 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರ ಸ್ಫೂರ್ತಿಯ ತಾಣ ಮಲೆನಾಡಿನ ಕುಪ್ಪಳಿಯಲ್ಲಿ ಕುವೆಂಪು ಆಶಯಗಳಿಗೆ ವಿರುದ್ಧದ ಚಟುವಟಿಕೆಗಳು ಆರಂಭವಾಗಿದ್ದು, ಸ್ಥಳೀಯರ ಹಾಗೂ ಪರಿಸರಾಸ್ತಕರ ವಿರೋಧಕ್ಕೆ ಕಾರಣವಾಗಿವೆ.ಕುಪ್ಪಳಿಯ ಕವಿಮನೆ ಬಾಗಿಲಲ್ಲೇ ರಬ್ಬರ್ ತೋಟ, ಕವಿಮನೆಗೆ ತಿರುಗುವ ಕುವೆಂಪು ದ್ವಾರದಲ್ಲೇ ರೆಸಾರ್ಟ್ ನಿರ್ಮಾಣ, ಕುಪ್ಪಳಿಗೆ ಬರುವ ಪ್ರವಾಸಿ ವಾಹನಗಳಿಗೆ ಪಾರ್ಕಿಂಗ್ ಶುಲ್ಕ ವಸೂಲಿ ಮತ್ತಿತರ ಕ್ರಮಗಳು ಕುಪ್ಪಳಿಯ ಸಹಜ ಪರಿಸರಕ್ಕೆ ಕಪ್ಪುಚುಕ್ಕೆ ಎಂದು ಸಾಹಿತಿಗಳು ಹಾಗೂ ಸಂಸ್ಕೃತಿ ಚಿಂತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕುಪ್ಪಳಿಯ ವಾತಾವರಣಕ್ಕೆ ವಿರುದ್ಧವಾದ ಈ ಚಟುವಟಿಕೆಗಳು, ಕುವೆಂಪು ಅವರ ದೂರದ ಸಂಬಂಧಿಕರೊಬ್ಬರಿಂದಲೇ ನಡೆಯುತ್ತಿವೆ ಎಂಬ ದೂರುಗಳು ಸ್ಥಳೀಯರಿಂದ ಕೇಳಿಬಂದಿದ್ದು, ಕುಪ್ಪಳಿಯನ್ನು ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸಲು ಸರ್ಕಾರವೇ ರಚಿಸಿದ ‘ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ’ದ ಒಪ್ಪಿಗೆಯನ್ನೂ ಪಡೆಯದಿರುವುದು ವಿವಾದಕ್ಕೆ ಎಡೆ ಮಾಡಿದೆ.

ಕವಿಮನೆಯ ಎದುರಿನಲ್ಲೇ ಎಕರೆಗಟ್ಟಲೆ ಜಾಗದಲ್ಲಿ ಬೆಳೆಯುತ್ತಿರುವ ರಬ್ಬರ್ ಗಿಡಗಳು ಕವಿಮನೆಯ ಸೌಂದರ್ಯಕ್ಕೆ ಮಂಕು ಬಡಿದಿವೆ. ಈ ಗಿಡಗಳು ಬೆಳೆದು ನಿಂತರೆ ಇಡೀ ಮನೆಯೇ ಮರಗಳಿಂದ ಮುಚ್ಚಿಕೊಳ್ಳುತ್ತದೆ.ಅಷ್ಟಕ್ಕೂ ಕುವೆಂಪು ಅವರು ಇಂತಹ ಕಾಡನ್ನು ಇಷ್ಟಪಡುತ್ತಿರಲಿಲ್ಲ. ಅವರ ಇಚ್ಛೆಗೆ ವಿರುದ್ಧವಾದ ಕೆಲಸಗಳನ್ನು ಸರ್ಕಾರ ತಡೆಯಬೇಕು ಎಂಬ ಒತ್ತಾಯ ಪರಿಸರವಾದಿಗಳದ್ದು. ಅಲ್ಲದೇ, ಕವಿಮನೆಗೆ ಆಗಮಿಸುವ ಪ್ರವಾಸಿ ವಾಹನಗಳಿಗೆ ದೇವಂಗಿ ಗ್ರಾಮ ಪಂಚಾಯ್ತಿ ಪಾರ್ಕಿಂಗ್ ಶುಲ್ಕ ವಿಧಿಸುತ್ತಿದೆ. 

ಬಸ್‌ಗೆ 25 ರೂ, ಕಾರಿಗೆ 10 ರೂ ಹಾಗೂ ದ್ವಿಚಕ್ರ ವಾಹನಗಳಿಗೆ 5ರೂ ನಿಗದಿಪಡಿಸಿದೆ. ಹೆಚ್ಚಾಗಿ ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳೇ ಇಲ್ಲಿಗೆ ಭೇಟಿ ನೀಡುತ್ತಿದ್ದು, ಪ್ರತಿದಿನ ಸರಾಸರಿ 400ರಿಂದ 500 ಮಂದಿ ಪ್ರವಾಸಿಗರು ಬರುತ್ತಾರೆ. ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಿರುತ್ತದೆ.ಬಂದ ವಾಹನಗಳೆಲ್ಲ ಇಲ್ಲಿ ಪಾರ್ಕಿಂಗ್ ಶುಲ್ಕ ಪಾವತಿಸಬೇಕಾದ್ದು ಕಡ್ಡಾಯ. ಶುಲ್ಕ ಸಂಗ್ರಹಿಸುವ ಗ್ರಾಮ ಪಂಚಾಯ್ತಿ, ವಾಹನಗಳಿಗೆ ಸೌಕರ್ಯ ಕಲ್ಪಿಸುವುದನ್ನು ಮರೆತಿದೆ. ಇಕ್ಕಟ್ಟಾದ ಜಾಗದಲ್ಲಿ ವಾಹನ ನಿಲುಗಡೆ ಮಾಡುವುದಕ್ಕೂ ಪ್ರವಾಸಿಗರು ಹರಸಾಹಸ ಪಡಬೇಕಾಗಿದೆ.


ಪಾರ್ಕಿಂಗ್ ಶುಲ್ಕ ವಿರೋಧಿಸಿ, ಈಗಾಗಲೇ ಪ್ರವಾಸಿಗರು ಮೂರ್ನಾಲ್ಕು ಬಾರಿ ಪ್ರತಿಭಟನೆ ಮಾಡಿದ್ದಾರೆ. ಅಲ್ಲದೇ, ‘ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ’ ಕೂಡ ಶುಲ್ಕ ಸಂಗ್ರಹ ಕ್ರಮವನ್ನು ಆಕ್ಷೇಪಿಸಿ ಗ್ರಾಮ ಪಂಚಾಯ್ತಿಗೆ ಪತ್ರ ಬರೆದಿದೆ. ಅದಕ್ಕೆ ಗ್ರಾಮ ಪಂಚಾಯ್ತಿ, ‘ಪಂಚಾಯತ್ ರಾಜ್ಯ ಕಾಯ್ದೆ ಪ್ರಕಾರವೇ ಶುಲ್ಕ ವಿಧಿಸಿದ್ದು, ಅಲ್ಲಿ ಸ್ವಚ್ಛತೆ ನಿರ್ವಹಣೆ, ಅನೈತಿಕ ಚಟುವಟಿಕೆ ತಡೆಯಲು ಶುಲ್ಕ ವಿಧಿಸಲಾಗುತ್ತಿದೆ’ ಎಂದು ಪ್ರತಿಷ್ಠಾನಕ್ಕೆ ಸಮಜಾಯಿಷಿ ನೀಡಿದೆ.

ಕುಪ್ಪಳಿ ಮತ್ತು ಕವಿಶೈಲ ಪರಿಸರದ ಸುತ್ತಲಿನ ಸುಮಾರು 3,600 ಎಕರೆ ಅರಣ್ಯ ಪ್ರದೇಶವನ್ನು ‘ಕುವೆಂಪು ಜೈವಿಕ ಅರಣ್ಯಧಾಮ’ ಎಂದು ಸರ್ಕಾರ ಘೋಷಿಸಿದೆ. ಆದರೆ, ಇದರಲ್ಲಿ ಕುವೆಂಪು ಕವಿಮನೆಗೆ ತಿರುಗುವ ಎಡಭಾಗದಲ್ಲಿ ಸುಮಾರು ಒಂದು  ಎಕರೆ ಪ್ರದೇಶದಲ್ಲಿ ದೇವಂಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷರೂ ಹಾಗೂ ಕುವೆಂಪು ಅವರ ದೂರದ ಸಂಬಂಧಿ (ಕುವೆಂಪು ಅವರ ಚಿಕ್ಕಪ್ಪನ ಮಗನ ಮಗ)ಯಾದ ಸುಭೋದ್, ರೆಸಾರ್ಟ್ ನಿರ್ಮಿಸಲು ಮುಂದಾಗಿದ್ದಾರೆಂಬ ಸುದ್ದಿಗಳಿವೆ.

ಅಲ್ಲದೇ, ಇದರಲ್ಲೇ ಡಾಬಾ ತೆರೆಯಲು ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿದೆ ಎಂಬ ಮಾತುಗಳಿವೆ. ಆದರೆ, ಈ ಎಲ್ಲ ಆರೋಪಗಳನ್ನು ಸುಭೋದ್ ತಳ್ಳಿ ಹಾಕುತ್ತಾರೆ. ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಕುವೆಂಪು ಮನೆ ಪಾಲುದಾರರಾದ ನಮಗೆ ಸರ್ಕಾರ 1995ರಲ್ಲಿ 2.50 ಲಕ್ಷ ರೂಪಾಯಿ ಹಾಗೂ ಮನೆಕಟ್ಟಲು 2ಎಕರೆ ಜಾಗ ಮಂಜೂರು ಮಾಡಿತ್ತು. ಹಣ ನೀಡಿದ ಸರ್ಕಾರ, ಜಾಗ ನೀಡಿರಲಿಲ್ಲ.

ಕೊನೆಗೆ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಕಾಲದಲ್ಲಿ ಧರಣಿ ನಡೆಸಲು ಮುಂದಾದಾಗ ಜಾಗದ ಆದೇಶ ಪತ್ರ ನೀಡಿತು. ಜತೆಗೆ, ರಾಷ್ಟ್ರೀಯ ಹೆದ್ದಾರಿ 13 ಪಕ್ಕ 30ಗುಂಟೆ ಜಾಗವನ್ನೂ ಸರ್ಕಾರ ನೀಡಿತು. ಇದರಲ್ಲಿ ರೆಸಾರ್ಟ್ ನಿರ್ಮಿಸುವ ಉದ್ದೇಶ ನಮಗಿಲ್ಲ. ಮನೆ ನಿರ್ಮಾಣದ ಸಿದ್ಧತೆ ನಡೆಯುತ್ತಿದೆ. ಅರಣ್ಯ ಇಲಾಖೆ ತೊಂದರೆ ಕೊಡುತ್ತಿದೆ. ಇದರಲ್ಲಿ ಸ್ಥಳೀಯ ‘ಹೋಮ್ ಸ್ಟೇ’ಗಳ ಪಿತೂರಿ ಇದೆ’ ಎಂದು ಆರೋಪಿಸುತ್ತಾರೆ.‘ಕವಿಮನೆ ಮುಂದಿನ ಜಾಗ ನನಗೆ ಸೇರಿದ್ದು, ಇದುವರೆಗೂ ಭತ್ತ ಬೆಳೆದು, ನಷ್ಟ ಅನುಭವಿಸಿದೆ. ಈಗ ರಬ್ಬರ್ ಹಾಕಿದ್ದೇನೆ. ತಪ್ಪೇನು’ ಎಂದು ಅವರು ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT