ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರವ್ಯಾಸ ಸ್ಮಾರಕ ಭವನ ನೆನೆಗುದಿಗೆ

Last Updated 27 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಾಕವಿ ಕುಮಾರವ್ಯಾಸ ಜನ್ಮಸ್ಥಳವಾದ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಕೋಳಿವಾಡದಲ್ಲಿ ನಿರ್ಮಾಣವಾಗಬೇಕಿದ್ದ ಸ್ಮಾರಕ ಭವನ ನೆನೆಗುದಿಗೆ ಬಿದ್ದಿದೆ.

ಕೋಳಿವಾಡದಲ್ಲಿ ಕುಮಾರವ್ಯಾಸ ಸ್ಮಾರಕ ಭವನ ನಿರ್ಮಿಸಬೇಕೆಂದು ರಾಜ್ಯ ಸರ್ಕಾರ 2009-10ರಲ್ಲಿ ಒಂದು ಕೋಟಿ ರೂಪಾಯಿ ಮಂಜೂರು ಮಾಡಿತು. ಆದರೆ ಇದುವರೆಗೆ ಯಾವುದೇ ಕಾಮಗಾರಿಗಳು ಆರಂಭವಾಗಿಲ್ಲ. ಇದಕ್ಕೆ ಕೋಳಿವಾಡದಲ್ಲಿಯ ಕುಮಾರವ್ಯಾಸನ ವಂಶಸ್ಥರು, ಅಲ್ಲಿಯ ಗ್ರಾಮ ಪಂಚಾಯಿತಿ ನಡುವಿನ ಭಿನ್ನಾಭಿಪ್ರಾಯ ಕಾರಣವಾಗಿದೆ.

ಹಸ್ತಾಂತರಗೊಳ್ಳದ ಮನೆ: ಕೋಳಿವಾಡದಲ್ಲಿರುವ ಕುಮಾರವ್ಯಾಸ ಜನಿಸಿದ ಮನೆಯನ್ನು ಸ್ಮಾರಕ ಭವನವಾಗಿ ನಿರ್ಮಿಸಬೇಕು ಎನ್ನುವುದು ಕುಮಾರವ್ಯಾಸ ಸ್ವಾರಕ ವಿಶ್ವಸ್ಥ ಮಂಡಳಿಯ ಮನವಿ. ಆದರೆ ಗ್ರಾಮದ ಹೊರಗೆ ಉದ್ಯಾನಕ್ಕೆ ಮೀಸಲಿಟ್ಟ ಅರ್ಧ ಎಕರೆಯಲ್ಲಿಯೇ ಸ್ಮಾರಕ ಭವನ ನಿರ್ಮಿಸಬೇಕು ಎನ್ನುವುದು ಅಲ್ಲಿಯ ಗ್ರಾಮ ಪಂಚಾಯಿತಿ ಒತ್ತಾಯ. ಇದರೊಂದಿಗೆ ಕುಮಾರವ್ಯಾಸನ ವಂಶಸ್ಥರು ವಾಸಿಸುವ ಮನೆಯನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಗೊಳಿಸಬೇಕಿದೆ. ಈ ಪ್ರಕ್ರಿಯೆಗಳು ಮುಗಿದ ನಂತರ ಕಾಮಗಾರಿ ಆರಂಭಗೊಳ್ಳುತ್ತವೆ.

`ಕುಮಾರವ್ಯಾಸನ ಮನೆಯನ್ನೇ ಸ್ಮಾರಕವಾಗಿಸುವುದರಿಂದ ವಿಶ್ವಸ್ಥ ಮಂಡಳಿಗೆ ಅದರ ಒಡೆತನ ಹೋಗುತ್ತದೆ ಎನ್ನುವ ತಪ್ಪು ಅಭಿಪ್ರಾಯ ಅಲ್ಲಿಯ ಗ್ರಾಮ ಪಂಚಾಯಿತಿಗಿದೆ. ಆದರೆ ಸರ್ಕಾರಕ್ಕೆ ಹಸ್ತಾಂತರಗೊಂಡ ನಂತರ ಮತ್ತು ನಿರ್ಮಾಣವಾಗುವ ಸ್ಮಾರಕ ಭವನ ಸರ್ಕಾರಕ್ಕೆ ಸೇರುತ್ತದೆಯೇ ಹೊರತು ವಿಶ್ವಸ್ಥ ಮಂಡಳಿಗಲ್ಲ~ ಎಂದು ಜಿಲ್ಲಾಧಿಕಾರಿ ದರ್ಪಣ್ ಜೈನ್ `ಪ್ರಜಾವಾಣಿ~ಗೆ ತಿಳಿಸಿದರು.

`ಕೋಳಿವಾಡದ ಹೊರಗೆ ಉದ್ಯಾನಕ್ಕೆ ಮೀಸಲಿಟ್ಟ ಜಾಗದಲ್ಲಿ ಸ್ಮಾರಕ ನಿರ್ಮಿಸುವ ಉದ್ದೇಶ ಜಿಲ್ಲಾಡಳಿತಕ್ಕಿಲ್ಲ. ಅದು ಸಮುದಾಯ ಭವನವಲ್ಲ. ಹೀಗಾಗಿ ಕುಮಾರವ್ಯಾಸನ ಮನೆಯನ್ನು ಒಳಗೊಂಡು ಸ್ಮಾರಕ ನಿರ್ಮಿಸುವುದರಿಂದ ಅದು ಗ್ರಾಮದೊಳಗೇ ಆಗುತ್ತದೆ ಜೊತೆಗೆ ಗ್ರಾಮಸ್ಥರು ಪಾಲ್ಗೊಳ್ಳಲು ಸಾಧ್ಯವಾಗುತ್ತದೆ.

ಗ್ರಾಮದ ಹೊರಗೆ ಕಟ್ಟುವುದರಿಂದ ದುರುಪಯೋಗ ಆಗಬಹುದು ಎಂಬ ಆತಂಕ ವಿಶ್ವಸ್ಥ ಮಂಡಳಿಯವರದು. ಇದಕ್ಕಾಗಿ ಗ್ರಾ.ಪಂ.ನವರ ಮನವೊಲಿಸಿ ಕುಮಾರವ್ಯಾಸನ ಮನೆಯನ್ನೇ ಸ್ಮಾರಕ ಭವನವಾಗಿ ನಿರ್ಮಿಸಲಾಗುತ್ತದೆ~ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದರು.

`ಕುಮಾರವ್ಯಾಸ ವಂಶದ 50 ಮನೆಗಳು ಕೋಳಿವಾಡದಲ್ಲಿವೆ. ಎಲ್ಲರೂ ಸೇರಿ 1940ರಲ್ಲಿ ಕುಮಾರವ್ಯಾಸ ಸ್ಮಾರಕ ಸಂಸ್ಥೆ ರಚಿಸಿಕೊಂಡು, ಪ್ರತಿ ವರ್ಷ ಬನದ ಹುಣ್ಣಿಮೆ ಮುನ್ನಾದಿನದಂದು ಕುಮಾರವ್ಯಾಸ ಜಯಂತಿಯನ್ನು ಉತ್ಸವವಾಗಿ ಆಚರಿಸಲಾಗುತ್ತಿದೆ. ನಂತರ 1981ರ ಸೆಪ್ಟೆಂಬರ್ 30ರಂದು ಕುಮಾರವ್ಯಾಸ ಸ್ಮಾರಕ ವಿಶ್ವಸ್ಥ ಮಂಡಳಿ ಎಂದು ಟ್ರಸ್ಟ್ ರಚಿತವಾಯಿತು.

ಈ ಟ್ರಸ್ಟ್ ಮೂಲಕ ಕವಿ ಸಾರ್ವಭೌಮ ಕುಮಾರವ್ಯಾಸ ಎಂಬ ತ್ರೈಮಾಸಿಕ ಪತ್ರಿಕೆಯನ್ನು 1982ರಲ್ಲಿ ಆರಂಭಿಸಲಾಯಿತು. ಜೊತೆಗೆ ಕುಮಾರವ್ಯಾಸ ಗ್ರಂಥಾಲಯ ಆರಂಭವಾಯಿತು. ಆದರೆ ಆರ್ಥಿಕ ಮುಗ್ಗಟ್ಟಿನಿಂದಾಗಿ 1987ರಲ್ಲಿ ಪತ್ರಿಕೆ, ಜೊತೆಗೆ ಗ್ರಂಥಾಲಯ ಕೂಡಾ ಬಂದ್ ಆಯಿತು. ಆದರೆ ಪ್ರತಿ ವರ್ಷ ಕುಮಾರವ್ಯಾಸ ಜಯಂತಿಯನ್ನು ಆಚರಿಸುತ್ತಿದ್ದೇವೆ~ ಎನ್ನುತ್ತಾರೆ ಕುಮಾರವ್ಯಾಸ ವಂಶಸ್ಥರಾದ ದತ್ತಾತ್ರೇಯ ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT