ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿ ದಾಖಲೆ ಬಿಡುಗಡೆ ಮಾಡಲಿ- ಆಗ್ರಹ

Last Updated 19 ಸೆಪ್ಟೆಂಬರ್ 2011, 6:50 IST
ಅಕ್ಷರ ಗಾತ್ರ

 ಕೊಪ್ಪಳ: ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆನ್ನಲಾದ ಕಾಂಗ್ರೆಸ್ ನಾಯಕರ ಹೆಸರು ಹಾಗೂ ದಾಖಲೆಗಳನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡಲೇ ಬಿಡುಗಡೆ ಮಾಡಬೇಕು. ಅವರ ಬಳಿ ದಾಖಲೆಗಳು ಇರುವುದೇ ಆದಲ್ಲಿ ಕೇವಲ ಆರೋಪ ಮಾಡುತ್ತಾ ಕಾಲ ತಳ್ಳುವುದು ಸರಿಯಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.


ಅವರು ನಗರದಲ್ಲಿ ಭಾನುವಾರ ಪಕ್ಷದ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದವರು ಯಾವುದೇ ಪಕ್ಷದವರಿರಲಿ ಅವರಿಗೆ ಶಿಕ್ಷೆಯಾಗಬೇಕು ಎಂದು ಪಕ್ಷ ಮೊದಲಿನಿಂದಲೂ ಹೇಳುತ್ತಾ ಬಂದಿದೆ. ಈಗಲೂ ಈ ಹೇಳಿಕೆಗೆ ಬದ್ಧ. ಹೀಗಾಗಿ ಕೇವಲ ಆರೋಪ ಮಾಡುವುದರ ಬದಲು ಅಕ್ರಮ ಗಣಿಗಾರಿಕೆ ನಡೆಸಿರುವ ಕಾಂಗ್ರೆಸ್ ನಾಯಕರ ಹೆಸರು ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು.

ಬಿ.ಎಸ್.ಯಡಿಯೂರಪ್ಪ ಹಾಗೂ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ರಾಜ್ಯದಲ್ಲಿ ಗಣಿಗಾರಿಕಗೆ ಹೆಚ್ಚು ಅನುಮತಿ ನೀಡಿದ್ದು. ಹೀಗಾಗಿ ಎಚ್.ಡಿ.ಕುಮಾರಸ್ವಾಮಿ ಅವರು 20 ತಿಂಗಳು ಅವಧಿಗೆ ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ದಾಖಲೆಗಳು ಅವರ ಬಳಿಯೇ ಇದ್ದವು. ಆಗ ಯಾಕೆ ಕಾಂಗ್ರೆಸ್‌ನವರ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು.

ಅಕ್ರಮ ಗಣಿಗಾರಿಕೆ ಕುರಿತಂತೆ ಪಕ್ಷ ಕೈಗೊಂಡಿದ್ದ ಪಾದಯಾತ್ರೆ ಸಮಯದಲ್ಲಿ ಹೇಳಿರುವುದೇ ಈಚೆಗೆ ಲೋಕಾಯುಕ್ತರು ಸಲ್ಲಿಸಿದ ತನಿಖಾ ವರದಿಯಲ್ಲಿದೆ. ಅಲ್ಲದೇ, ಲೋಕಾಯುಕ್ತರು ಈ ಸಂಬಂಧದ ವರದಿಯನ್ನು ಸಲ್ಲಿಸಿ ಸೆ. 27ಕ್ಕೆ ಎರಡು ತಿಂಗಳು ಪೂರ್ಣಗೊಳ್ಳುತ್ತವೆ. ಇನ್ನೂ ಯಾಕೆ ವರದಿಯನ್ನು ಅಂಗೀಕರಿಸಿಲ್ಲ. ವರದಿಯಲ್ಲಿನ ಶಿಫಾರಸಿನಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಯಾಕೆ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

ದಾಖಲೆ ಬಿಡುಗಡೆಗೆ ಸಿದ್ಧ-ಎಚ್‌ಡಿಕೆ

ಕೊಪ್ಪಳ: ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ನಾಯಕರ ಹೆಸರುಗಳನ್ನು ಬಹಿರಂಗಪಡಿಸಿದರೆ ತಮ್ಮ ನಿಲುವು ಏನಾಗಲಿದೆ ಎಂಬುದನ್ನು ಮೊದಲು ಸಿದ್ದರಾಮಯ್ಯ ಘೋಷಿಸಲಿ. ಅದಾದ 24 ಗಂಟೆಗಳ ಒಳಗಾಗಿ ತಾವು ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಅವರು ನಗರದಲ್ಲಿ ಭಾನುವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ನಾಯಕರು ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡಿದ್ದರ ಬಗ್ಗೆ ದಾಖಲೆಗಳನ್ನು ಬೇಕಾದರೆ ನಾಳೆಯೇ (ಸೋಮವಾರ) ಕೊಪ್ಪಳದಲ್ಲಿ ಸಹ ಬಿಡುಗಡೆ ಮಾಡಲು ಸಿದ್ಧ. ಆದರೆ, ಅದಕ್ಕೂ ಮೊದಲು, ದಾಖಲೆಗಳನ್ನು ಬಿಡುಗಡೆ ಮಾಡಿದ ನಂತರ ತಾವು ಏನು ಮಾಡುತ್ತಾರೆ, ತಮ್ಮ ನಿಲುವು ಏನಾಗಿರುತ್ತದೆ ಎಂಬುದನ್ನು ಸಿದ್ದರಾಮಯ್ಯ ಬಹಿರಂಗಪಡಿಸಲಿ ಎಂದು ತಿರುಗೇಟು ನೀಡಿದರು.

ಕೇವಲ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ಕಾಂಗ್ರೆಸ್ ನಾಯಕರಷ್ಟೇ ಅಲ್ಲ, ಲೋಕಾಯುಕ್ತರ ತನಿಖೆಯಿಂದ ಬಚಾವಾಗಿರುವ ಕಾಂಗ್ರೆಸ್ ಮುಖಂಡರ ವಿವರಗಳನ್ನು ಸಹ ಬಿಡುಗಡೆ ಮಾಡಲು ಸಿದ್ಧ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ ಸಿದ್ದರಾಮಯ್ಯ ಜನತಾ ಪರಿವಾರದಲ್ಲಿದ್ದಾಗ ಕಾಂಗ್ರೆಸ್ ನಾಯಕರ ವಿರುದ್ಧ ಏನು ಗುಡುಗಿದ್ದರು ಎಂಬುದನ್ನು ನೆನಪು ಮಾಡಿಕೊಳ್ಳಲಿ. ಜನತಾದಳ ಅಧಿಕಾರಕ್ಕೆ ಬಂದರೆ ಎಸ್.ಎಂ.ಕೃಷ್ಣ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರನ್ನು ಜೈಲಿಗೆ ಕಳಿಸುವುದಾಗಿ ಹೇಳಿದ್ದು ಸಿದ್ದರಾಮಯ್ಯ ಮರೆತರೇಕೆ ಎಂದೂ ಪ್ರಶ್ನಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT