ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Last Updated 15 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

 ಕನಕಪುರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಅವರ ಪಾಪದ ಕೂಸು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರವಿ ಇಲ್ಲಿ ಕಿಡಿಕಾರಿದರು.ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತ ಮುಖಂಡರು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ನಡೆಸಿದ ಪ್ರತಿಭಟನಾ ರ್ಯಾಲಿ ನೇತೃತ್ವವಹಿಸಿದ್ದ ಅವರು ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಈ ರಾಜ್ಯದಲ್ಲಿ ದಾರಿತಪ್ಪಿದವರು ಇದ್ದಾರೆ ಅಂದರೆ ದೇವೇಗೌಡರ ಕುಟುಂಬದವರು. ಅದರಲ್ಲಿ ಎಚ್.ಡಿ.ಕುಮಾರಸ್ವಾಮಿ ಪ್ರಮುಖರು. ಅಧಿಕಾರ ಲಾಲಸೆಯಿಂದ ಜಾತ್ಯತೀತ ತತ್ವಕ್ಕೆ ಎಳ್ಳುನೀರು ಬಿಟ್ಟು ಕೋಮುವಾದಿ ಬಿಜೆಪಿಯೊಂದಿಗೆ ಅಪವಿತ್ರ ಮೈತ್ರಿಮಾಡಿಕೊಂಡು ಮುಖ್ಯಮಂತ್ರಿಯಾದರು. ಅಧಿಕಾರ ಅನುಭವಿಸಿದರು.ಆದರೆ ಹಸ್ತಾಂತರ ಸಮಯದಲ್ಲಿ ಮಾತಿಗೆ ತಪ್ಪಿದರು ಎಂದು ಅವರ ವಿರುದ್ಧ ವಾಗ್ಧಾಳಿ ನಡೆಸಿದರು.  

ಕಾಂಗ್ರೆಸ್ ಪಕ್ಷದ ಬೆಂಬಲದಿಂದ ದೇವೇಗೌಡರು ಪ್ರಧಾನ ಮಂತ್ರಿಯಾದರು.ಕನಕಪುರದಲ್ಲಿ  ರಾಜಕೀಯವಾಗಿ ಪುನರ್‌ಜನ್ಮ ಪಡೆದರು. ಕುಮಾರಸ್ವಾಮಿ ಅವರು ಸಹ ಈ ಕ್ಷೇತ್ರದಿಂದ ಲೋಕಸಭೆಗೆ ಎರಡು ಬಾರಿ ಆಯ್ಕೆಯಾದರು. ಅಪ್ಪ ಮಗ ಇಬ್ಬರೂ ಸೇರಿ ಕನಕಪುರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇವೆ ಎಂದು ವಚನಕೊಟ್ಟು, ಈಗ ಅಭಿವೃದ್ಧಿ ಕೆಲಸಗಳನ್ನು ಮಾಡದೆ ಮಾತಿಗೆ ತಪ್ಪಿದ್ದಾರೆ ಎಂದು ಟೀಕಿಸಿದರು.

ಮುಖ್ಯಮಂತ್ರಿಯಾಗಿದ್ದಾಗ ಕ್ಷೇತ್ರಕ್ಕೆ ಯಾವುದೇ ಅನುದಾನವನ್ನು ಬಿಡುಗಡೆ ಮಾಡದೇ ಮಲತಾಯಿ ಧೋರಣೆ ಅನುಸರಿಸಿದರು. ಆದರೆ ಶಾಸಕ ಡಿ.ಕೆ.ಶಿವಕುಮಾರ್  ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ.ಕಳೆದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಯಲ್ಲಿ ಪಕ್ಷವನ್ನು ಜನತೆ ಬೆಂಬಲಿಸಿ ಗೆಲ್ಲಿಸಿರುವುದೇ ಈ ಮಾತಿಗೆ ಸಾಕ್ಷಿ. ಇಂಥ ಬೆಳವಣಿಗೆಯನ್ನು ಸಹಿಸದ ಕುಮಾರಸ್ವಾಮಿ ಡಿ.ಕೆ.ಶಿವಕುಮಾರ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನು ಕ್ಷೇತ್ರದ ಜನತೆ ಸಹಿಸುವುದಿಲ್ಲ ಎಂದು ಕಿಡಿಕಾರಿದರು.

ಕೋಮುವಾದಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುತ್ತೇನೆಎಂದು ಪ್ರತಿದಿನ ಮಾಧ್ಯಮಗಳ ಮುಂದೆ ‘ಫೋಸ್’ ನೀಡುವ ಇವರು 11 ಮಂದಿ ಬಿಜೆಪಿ ಶಾಸಕರು, 5 ಮಂದಿ ಪಕ್ಷೇತರರ ಅನರ್ಹತೆಗೆ ಕಾರಣರಾಗಿದ್ದಾರೆ. ಅವರನ್ನು ಅತಂತ್ರಮಾಡಿ ಬೀದಿಗೆ ತಂದಿರುವ ಕುಮಾರಸ್ವಾಮಿ ಶಿವಕುಮಾರ್ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಆರೋಪಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ವಿಜಯದೇವು ಮಾತನಾಡಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಪಟ್ಟಣದ ಎಂ.ಜಿ.ರಸ್ತೆ ವಿಸ್ತರಣೆಗೆ ರಾತ್ರೋ ರಾತ್ರಿ ಟೆಂಡರ್ ಕರೆದರು.ಜಾಹಿರಾತಿಗೂ ಹಣ ನೀಡದೆ ಜಾಗ ಖಾಲಿಮಾಡಿದರು.ಸಂಗಮದ ಬಳಿ ಮೇಲುಸೇತುವೆ ನಿರ್ಮಿಸುವುದಾಗಿ ಸ್ಥಳಪರಿಶೀಲನೆ ಮಾಡಿ ಹೋದವರು ಇತ್ತ ಕಡೆ ಸುಳಿಯಲಿಲ್ಲ. ಕುಟುಂಬ ರಾಜಕಾರಣಕ್ಕೆ ಪ್ರಸಿದ್ದಿಯಾದ ದೇವೇಗೌಡರ ಕುಟುಂಬದಲ್ಲಿ ಕುರಸ್ವಾಮಿ ಮುಖ್ಯಮಂತ್ರಿ ಆಗಿದ್ದು ರಾಜ್ಯವನ್ನು ಅಭಿವೃದ್ಧಿ ಮಾಡುವುದಕ್ಕಲ್ಲ. ಕುಟುಂಬ ಅಭಿವೃದ್ಧಿಪಡಿಸಲು ಎಂದು ವ್ಯಂಗ್ಯವಾಡಿದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎ.ಮಂಜು ಮಾತನಾಡಿ, ಶಾಸಕ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗುತ್ತಿದೆ. ಈ ಬೆಳವಣಿಗೆ ಸಹಿಸದ ಕುಮಾರಸ್ವಾಮಿ,  ಶಿವಕುಮಾರ್ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂ ಟೀಕಿಸಿದರು.

ಹಾಸನದಿಂದ ರಾಮನಗರಕ್ಕೆ ಅಲೆಮಾರಿಗಳಂತೆ ಬಂದ ಇವರು ಅಧಿಕಾರ ಅನುಭವಿಸಿ ಕ್ಷೇತ್ರದ ಜನತೆಯನ್ನು ಕಡೆಗಣಿಸುತ್ತಿದ್ದಾರೆ. ಮತದಾರರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ.ಕ್ಷೇತ್ರದ ಪ್ರಜ್ಞಾವಂತ ಮತದಾರರು ಜಾಗೃತರಾಗಿದ್ದು ಇವರನ್ನು ಕ್ಷೇತ್ರದಿಂದ ಓಡಿಸುವ ಕಾಲ ಸನ್ನಿಹಿತವಾಗಿದೆ.ಇದನ್ನು ಅರಿತು ಎಚ್ಚರಿಕೆಯಿಂದ ನಡೆದುಕೊಳ್ಳುವುದು ಒಳಿತು ಎಂದು ಎಚ್ಚರಿಕೆ ನೀಡಿದರು.

ತಮ್ಮ ಅಧಿಕಾರ ದಾಹಕ್ಕಾಗಿ ಬಿಜೆಪಿ ಪಕ್ಷದ ಜೊತೆ ಅನೈತಿಕ ಸಂಬಂಧ ಮಾಡಿಕೊಂಡು ಅಧಿಕಾರ ಅನುಭವಿಸಿದ ಅವರು, ಅಧಿಕಾರ ಹಸ್ತಾಂತರದ ವೇಳೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ನೀಡದೆ ವಚನ ಭ್ರಷ್ಟರಾಗಿದ್ದಾರೆ. ಇವರ ಕುತಂತ್ರ ರಾಜಕಾರಣ ಹಾಗೂ ಬೇರೆಯವರ ಕಾಲು ಎಳೆಯುವ ಪ್ರವೃತ್ತಿ ಹೀಗೆ ಮುಂದುವರಿದರೆ ರಾಜ್ಯದಲ್ಲಿ ಜೆಡಿಎಸ್ ಧೂಳಿಪಟವಾಗಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನಾಕಾರರು ಪಟ್ಟಣದ ಎಂ.ಜಿ.ರಸ್ತೆ ಮೂಲಕ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಕೆ.ಎನ್.ಎಸ್.ಸರ್ಕಲ್‌ವರೆಗೂ ಮೆರವಣಿಗೆ ನಡೆಸಿ, ಚನ್ನಬಸಪ್ಪ ವೃತ್ತದಲ್ಲಿ ಕುಮಾರಸ್ವಾಮಿ ಅವರು ಪ್ರತಿಕೃತಿ ದಹಿಸಿದರು.  ಅವರ ವಿರುದ್ಧ ವಚನಭ್ರಷ್ಟ, ಅಧಿಕಾರದಾಹಿ, ಸುಳ್ಳು ಭರವಸೆಗಳ ಸರದಾರ, ಕುತಂತ್ರ ರಾಜಕಾರಣಿ, ವಿಶ್ವಾಸದ್ರೋಹಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು. ನಂತರ ತಹಶೀಲ್ದಾರ್  ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ಪುರಸಭೆ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಸೂರ್ನಳ್ಳಿ ಜಯರಾಮು,  ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಪುರುಷೋತ್ತಮ್ ಮೊದಲಾದವರು ಮಾತನಾಡಿದರು.ಮುಖಂಡರಾದ ವಿ.ಶ್ರಿನಿವಾಸ್, ಜೋಸೆಫ್, ವೆಂಕಟೇಶ್, ಎಸ್.ಎಸ್.ಶಂಕರ್, ಮಲ್ಲೇಶ್, ದಿಲೀಪ್, ಪುಟ್ಟಮಾದು, ನಾಗರಾಜು ಸೇರಿದಂತೆ ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲ್ಲೂಕು ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಪಕ್ಷದ ಕಾರ್ಯಕರ್ತ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT