ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರಸ್ವಾಮಿ ವಿರುದ್ಧ ದೂರು

Last Updated 25 ಜನವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ವಕೀಲರಿಬ್ಬರು ಸಮರ ಸಾರಿರುವ ಬೆನ್ನಲ್ಲೇ, ಅತ್ತ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಇನ್ನೊಬ್ಬ ವಕೀಲರು ಲೋಕಾಯುಕ್ತರಲ್ಲಿ ಮಂಗಳವಾರ ದೂರು ದಾಖಲಿಸಿದ್ದಾರೆ.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಸುಮಾರು 167 ಕೋಟಿ ರೂಪಾಯಿಗಳ ಅಕ್ರಮ ಆಸ್ತಿ ಗಳಿಸಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಧಾರವಾಡ ಜಿಲ್ಲೆಯ ಕಲಘಟಗಿಯ ವಕೀಲ ಎಸ್.ಟಿ.ತೆಗ್ಗಿಹಳ್ಳಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇದರ ಜೊತೆಗೆ ಕುಮಾರಸ್ವಾಮಿಯವರ ಸಹೋದರ ನಿವೃತ್ತ ಕೆಎಎಸ್ ಅಧಿಕಾರಿ ಎಚ್.ಡಿ.ಬಾಲಕೃಷ್ಣೇಗೌಡ ಅವರ ವಿರುದ್ಧವೂ ಅಕ್ರಮ ದೂರು ದಾಖಲಿಸಲಾಗಿದೆ.
ದೂರು ನೀಡಿದ ನಂತರ ಪತ್ರಕರ್ತರ ಜೊತೆ ಮಾತನಾಡಿದ ತೆಗ್ಗಿಹಳ್ಳಿ ಅವರು, ‘ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ 150 ಕೋಟಿ ರೂಪಾಯಿಗಳ ಗಣಿ ಕಪ್ಪ ಆರೋಪ ಎದುರಿಸಿದ್ದರು. ಇದನ್ನು ಕೂಡ ಅಕ್ರಮ ಆಸ್ತಿಗೆ ಸೇರಿಸಲಾಗಿದ್ದು, ತನಿಖೆ ನಡೆಸುವಂತೆ ಮನವಿ ಮಾಡಿಕೊಳ್ಳಲಾಗಿದೆ’ ಎಂದರು.

ದೂರನ್ನು ಸ್ವೀಕರಿಸಿದ ಸಂತೋಷ್ ಹೆಗ್ಡೆ ಅವರು, ‘ಕುಮಾರಸ್ವಾಮಿ, ಬಾಲಕೃಷ್ಣೇಗೌಡ ಜೊತೆಗೆ ಅವರ ಕುಟುಂಬದವರ ವಿರುದ್ಧ ತೆಗ್ಗಿಹಳ್ಳಿ ದೂರು ದಾಖಲಿಸಿದ್ದಾರೆ.
ಆದರೆ ಲೋಕಾಯುಕ್ತ ತನಿಖೆಯ ವ್ಯಾಪ್ತಿಗೆ ಕುಟುಂಬ ವರ್ಗದವರು ಒಳಪಡದ ಹಿನ್ನೆಲೆಯಲ್ಲಿ ಸಹೋದರರಿಬ್ಬರ ದೂರನ್ನು ಮಾತ್ರ ಸ್ವೀಕರಿಸಲಾಗಿದೆ. ಈ ದೂರಿನಲ್ಲಿ ಇರುವ ಆರೋಪಗಳು ಸತ್ಯಾಂಶದಿಂದ ಕೂಡಿವೆ ಎಂದು ಮೇಲ್ನೋಟಕ್ಕೆ ಕಂಡುಬಂದರೆ ಅದರ ವಿಚಾರಣೆಯನ್ನು ಲೋಕಾಯುಕ್ತ ಪೊಲೀಸರಿಗೆ ಒಪ್ಪಿಸಲಾಗುವುದು’ ಎಂದರು.

ತನಿಖೆ ಸ್ಥಗಿತ:‘ಮುಖ್ಯಮಂತ್ರಿಗಳ ವಿರುದ್ಧದ ಭೂಹಗರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ವಕ್ತಾರ ವೈ.ಎಸ್.ವಿ. ದತ್ತ ಅವರು ಸಲ್ಲಿಸಿರುವ ದೂರಿನ ವಿಚಾರಣೆಯನ್ನು ಲೋಕಾಯುಕ್ತ ಸ್ಥಗಿತಗೊಳಿಸಿದೆ.

ಹೈಕೋರ್ಟ್‌ನಲ್ಲಿ ಈ ಪ್ರಕರಣ ಇತ್ಯರ್ಥಕ್ಕೆ ಬಾಕಿ ಇರುವ ಕಾರಣ ವಿಚಾರಣೆ ನಡೆಸಲಾಗುತ್ತಿಲ್ಲ’ ಎಂದು ಸಂತೋಷ್ ಹೆಗ್ಡೆ ತಿಳಿಸಿದರು. ತಮ್ಮಲ್ಲಿ ಬಂದಿರುವ ಕೆಲವು ದೂರುಗಳನ್ನು ವಿಚಾರಣೆಗೆಂದು ಪದ್ಮರಾಜ ಆಯೋಗಕ್ಕೆ ನೀಡಲಾಗಿದೆ ಎಂದು ಬಿಜೆಪಿಯ ಕೆಲವರು ಹೇಳುತ್ತಿದ್ದಾರೆ. ಆದರೆ ಯಾವುದೇ ದೂರನ್ನು ಆಯೋಗಕ್ಕೆ ವಹಿಸಿಲ್ಲ. ಲೋಕಾಯುಕ್ತ ಕಾಯ್ದೆಯ 8(2)ನೇ ಕಲಮಿನ ಅನ್ವಯ ಲೋಕಾಯುಕ್ತರು ನಡೆಸುತ್ತಿರುವ ತನಿಖೆಯನ್ನು ಅವರ ಅನುಮತಿ ಇಲ್ಲದೆ ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎಂದು ಅವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT