ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರೇಶ್ವರ ನಾಟ್ಯಸಂಘದ ವಿಶಿಷ್ಟ ದಶಕ

Last Updated 12 ಜನವರಿ 2013, 19:59 IST
ಅಕ್ಷರ ಗಾತ್ರ

ವೃತ್ತಿ ರಂಗಭೂಮಿ ಕಂಪನಿಯೊಂದು ಒಂದೇ ಸ್ಥಳದಲ್ಲಿ ಹತ್ತು ವರ್ಷಗಳಷ್ಟು ದೀರ್ಘ ಕಾಲ ನಾಟಕ ಪ್ರದರ್ಶನ ನೀಡುತ್ತದೆ ಎಂದರೆ ನಂಬುತ್ತೀರಾ? ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿದ, ತಾರಾ ವರ್ಚಸ್ಸಿನ ಕಲಾವಿದರನ್ನು ಒಳಗೊಂಡು ತಯಾರಿಸಿದ ಸಿನಿಮಾಗಳೇ ಹತ್ತು ದಿನ ಪ್ರದರ್ಶನ ಕಾಣುವುದು ಕಷ್ಟವಾಗಿರುವ ಸಂದರ್ಭದಲ್ಲಿ ನಾಟಕ ಕಂಪನಿಯೊಂದು ಹತ್ತು ವರ್ಷಗಳ ಕಾಲ ಒಂದೇ ಸ್ಥಳದಲ್ಲಿ ಪ್ರದರ್ಶನ ನೀಡಿದೆ ಎನ್ನುವುದನ್ನು ನಂಬುವುದು ಕಷ್ಟ. ನಂಬಲಿಕ್ಕೆ ಕಷ್ಟ ಎನ್ನಿಸುವ ಅಪರೂಪದ ಸಾಧನೆ `ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ'ದ್ದು.

ಗುಲ್ಬರ್ಗ ನಗರದ `ಸಂಗಮ' ಚಿತ್ರಮಂದಿರದ ಎದುರಿಗೆ ಜೈಲ್ ಗಾರ್ಡನ್ ಇದೆ. ಅಲ್ಲಿ `ಶ್ರೀ ಗುರು ಕುಮಾರೇಶ್ವರ ನಾಟ್ಯಸಂಘ' ನಿರಂತರವಾಗಿ ಪ್ರದರ್ಶನಗಳನ್ನು ನೀಡುತ್ತಾ ಬಂದಿದೆ. ನಾಟಕ ಕಂಪನಿಯ ಎದುರಿಗೇ ಚಿತ್ರಮಂದಿರ ಇದ್ದರೂ, ಸಿನಿಮಾಗಳಿಗೆ ಸವಾಲು ಎನ್ನುವಂತೆ ನಾಟಕ ಕಂಪನಿಯ ಪ್ರದರ್ಶನಗಳಿಗೆ ಜನ ಮುಗಿಬೀಳುತ್ತಿದ್ದಾರೆ.
`ಕಿವುಡ ಮಾಡಿದ ಕಿತಾಪತಿ', `ನಾಯಿಗಳಿವೆ ಎಚ್ಚರಿಕೆ', `ಹಣ್ಣಿಗೆ ಹಟ ಗಂಡಿಗೆ ಚಟ' ಸೇರಿದಂತೆ ನಾಟ್ಯಸಂಘದ ಕೆಲವು ನಾಟಕಗಳು ನೂರು ಪ್ರದರ್ಶನಗಳನ್ನು ಕಂಡಿವೆ. `ಗುಣವಿದ್ದರೆ ಗಂಡ - ಋಣವಿದ್ದರೆ ಹೆಂಡತಿ', `ಬದುಕು ಬಂಗಾರವಾಯ್ತು', `ಹಾರಕೂಡ ಶ್ರೀ ಚನ್ನಬಸವೇಶ್ವರ ಮಹಾತ್ಮೆ', `ಭೂಮಿ ತೂಕದ ಹೆಣ್ಣು' ಸೇರಿದಂತೆ ಐವತ್ತು ಪ್ರಯೋಗಗಳನ್ನು ಕಂಡ ನಾಟಕಗಳ ಸಂಖ್ಯೆ ಐವತ್ತರಷ್ಟಿವೆ.

ನಾಟ್ಯಸಂಘದ ಪ್ರದರ್ಶನಗಳ ಯಶಸ್ಸಿನ ಗುಟ್ಟಾದರೂ ಏನು? ಎಷ್ಟೇ ಪರಿಣತ ಕಲಾವಿದರಿರಲಿ, ವಿಭಿನ್ನ ರಂಗ ಪ್ರಯೋಗಗಳಿರಲಿ ಮನರಂಜನೆಯ ಮಾಧ್ಯಮದ ಬೆನ್ನತ್ತಿರುವ ಪ್ರೇಕ್ಷಕನನ್ನು ನಾಟಕಗಳತ್ತ ಆಕರ್ಷಿಸುವುದು ಈಗಿನ ಕಾಲಘಟ್ಟದಲ್ಲಿ ಸುಲಭದ ಮಾತಲ್ಲ. ಆದರಿಲ್ಲಿನ ಚಿತ್ರಣ ಬೇರೆಯದೇ ಆಗಿದೆ. ಹೆಸರಾಂತ ರಂಗಭೂಮಿ ಕಲಾವಿದ ಶ್ರೀಧರ ಹೆಗಡೆಯವರ ಮನೋಜ್ಞ ನಟನೆ ನೋಡುಗರನ್ನು ಚುಂಬಕದಂತೆ ಸೆಳೆಯುತ್ತಿದೆ. ಇದರ ಜೊತೆಗೆ ನಾಟಕಕಾರ ಬಸವರಾಜ ಪಂಚಗಲ್, ಖಾಜಾಸಾಬ ಅಮೀನಗಡ, ಸಿದ್ದು ಬೀಳಗಿ, ವಿಶಾಲಾಕ್ಷಿ, ಹಫೀಜಾ ಬೇಗಂ, ಉಮಾ ಬೀಳಗಿ, ಸದಾಶಿವಯ್ಯ, ಸಾಹೇಬಗೌಡ, ಜಾಹಗಿರದಾರ, ಪ್ರಿಯಾ ಮುಂತಾದವರ ಅಭಿನಯವೂ ಪ್ರೇಕ್ಷರನ್ನು ಸುಮಾರು ಮೂರೂವರೆ ತಾಸು ಕುಳಿತುಕೊಳ್ಳುವಂತೆ ಮಾಡುತ್ತದೆ.

ಪ್ರಸಕ್ತ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ವಿದ್ಯಮಾನಗಳನ್ನು ನಾಟಕದ ಕಥನಕ್ಕೆ ಪೂರಕವಾಗಿ ಬಳಸಿಕೊಳ್ಳುವ ತಂತ್ರವೂ ಪ್ರೇಕ್ಷಕರನ್ನು ರಂಜಿಸುತ್ತಿದೆ.
“ಈ ಭಾಗದ ಜನರು ನಮ್ಮ ನಾಟಕಗಳನ್ನು ನೋಡಿ ಪ್ರೋತ್ಸಾಹ ನೀಡುತ್ತಿರುವುದರಿಂದಲೇ ಹತ್ತು ವರ್ಷಗಳಿಂದ ಇಲ್ಲಿಯೇ ತಳವೂರಿದ್ದೇವೆ. ಕಲಾವಿದರಿಗೆ ಪ್ರೇಕ್ಷಕರ ಪ್ರೋತ್ಸಾಹವೇ ಶ್ರೀರಕ್ಷೆ” ಎಂದು ಕಂಪೆನಿ ಮಾಲೀಕ ಎಲ್.ಬಿ. ಶೇಖ್ ಮಾಸ್ತರ್, ಸಂಚಾಲಕ ಶ್ರೀಧರ ಹೆಗಡೆ ಹೇಳುತ್ತಾರೆ.ಈ ನಾಟ್ಯಸಂಘದ ಗುಲ್ಬರ್ಗ ಕ್ಯಾಂಪಿನ ದಶಮಾನೋತ್ಸವ ಹಾಗೂ 50 ನಾಟಕಗಳ ಸುವರ್ಣ ಮಹೋತ್ಸವದ 5501ನೇ ಪ್ರದರ್ಶನ ಸಮಾರಂಭ ಇತ್ತೀಚೆಗಷ್ಟೇ ನಡೆದಿದೆ. ಈ ಪ್ರದರ್ಶನದ ಜೊತೆಗೆ ನಾಟಕಕಾರರು, ಕಲಾವಿದರು ಮತ್ತು ಪ್ರೇಕ್ಷಕರನ್ನು ಅಭಿನಂದಿಸುವ ಕಾರ್ಯಕ್ರಮವೂ ನಡೆದದ್ದು ವಿಶೇಷ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT