ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮುದಾ ಪದ

Last Updated 5 ಜುಲೈ 2012, 19:30 IST
ಅಕ್ಷರ ಗಾತ್ರ

ಹಾಲು ಬಿಳುಪಿನ ಈ ಹುಡುಗಿಗೆ ಕಪ್ಪು ಬಣ್ಣ ಬಳಿದುಕೊಂಡು ಹಳ್ಳಿಹುಡುಗಿಯ ಪಾತ್ರ ಮಾಡುವಾಸೆಯಂತೆ. ಆ ಆಸೆಯನ್ನು ಹೇಳಿಕೊಳ್ಳುತ್ತಾ ತುಟಿ ಅರಳಿಸುವ ಸುಂದರಿಯ ಹೆಸರು ಕುಮುದಾ. ಊರು ಮೈಸೂರಾದರೂ ಕನ್ನಡ ಮಾತನಾಡಲು ತಡವರಿಸುತ್ತಾರೆ. ಅದಕ್ಕೆ ಕಾರಣ ಅವರು ಊಟಿಯಲ್ಲಿ ಬೆಳೆದಿದ್ದು ಮತ್ತು ಕನ್ನಡದ ಗೆಳೆಯರು ಇಲ್ಲದೇಹೋದದ್ದು.

`ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು-3~ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಕುಮುದಾ ಮೂರನೇ ಸುತ್ತಿನಲ್ಲಿ ಸೋತರು. ಅದಕ್ಕೂ ಕಾರಣ ಅವರಿಗೆ ಕನ್ನಡ ಸರಿಯಾಗಿ ಬಾರದೇ ಇರುವುದು. `ಒಂದು ವರ್ಷದಿಂದ ಈಚೆಗೆ ಕನ್ನಡ ಮಾತನಾಡಲು ಮತ್ತು ಓದಲು ಕಲಿಯುತ್ತಿರುವೆ. ಕನ್ನಡ ಸಿನಿಮಾ ನೋಡುತ್ತಿರುವೆ~ ಎನ್ನುವ ಕುಮುದಾಗೆ ಕನ್ನಡ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚುವಾಸೆ.

ಆರ್.ಚಂದ್ರು ನಿರ್ದೇಶನದ `ಚಾರ್‌ಮಿನಾರ್~ನಲ್ಲಿ ಎರಡನೇ ನಾಯಕಿಯಾಗಿ ಆಯ್ಕೆಯಾಗಿರುವ ಅವರು, ಚಿತ್ರ ಮುಗಿಯುವ ವೇಳೆಗೆ ಕನ್ನಡವನ್ನು ಸ್ಪಷ್ಟವಾಗಿ ಕಲಿತು ಮುಂದಿನ ಚಿತ್ರಗಳಿಗೆ ಡಬ್ಬಿಂಗ್ ಮಾಡುವಾಸೆ ವ್ಯಕ್ತಪಡಿಸುತ್ತಾರೆ.

`ಚಾರ್‌ಮಿನಾರ್~ನಲ್ಲಿ ಕುಮುದಾಗೆ ಕಾಲೇಜು ವಿದ್ಯಾರ್ಥಿನಿಯ ಪಾತ್ರ. `ನನಗೆ ಟಾಮ್‌ಬಾಯ್ ರೀತಿಯ ಪಾತ್ರ ಸಿಕ್ಕಿದೆ. ನಾಯಕ ಪ್ರೇಮ್ ಅವರ ಬೆನ್ನು ಬೀಳುವ ಪಾತ್ರ ಅದು~ ಎಂದು ನಗುತ್ತಾರೆ ಅವರು.

ಶಾಲಾ ದಿನಗಳಿಂದಲೂ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಕುಮುದಾ ಮೊದಲು ರೂಪದರ್ಶಿಯಾಗಿ ಗುರುತಿಸಿಕೊಂಡರು. ಸಾಕಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವಾಗ ಸಿನಿಮಾ ಕಡೆಗೆ ಆಕರ್ಷಣೆ ಹುಟ್ಟಿತು.

`ನೃತ್ಯ ಹೇಳಿಕೊಟ್ಟರೆ ಮಾಡುವೆ. ನಟನೆ ಹೇಳಿಕೊಟ್ಟರೂ ಮಾಡುವೆ. ಅದರಿಂದ ನನಗೆ ಅದ್ಯಾವುದರ ತರಬೇತಿ ಬೇಕಾಗಿಲ್ಲ~ ಎಂದು ಆತ್ಮವಿಶ್ವಾಸದಿಂದ ನುಡಿಯುವ ಕುಮುದಾ ಗ್ಲಾಮರಸ್ಸಾಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ.

`ಮಾಡೆಲ್‌ಗಳು ಸಿನಿಮಾ ನಾಯಕಿಯರಿಗಿಂತ ಗ್ಲಾಮರಸ್ಸಾಗಿರುತ್ತಾರೆ. ನಾನು ಮಾಡೆಲ್ ಆದ ಕಾರಣ ಸಿನಿಮಾದ ಗ್ಲಾಮರ್‌ಗೆ ಸಿದ್ಧವಾಗಿಯೇ ಬಂದಿದ್ದೇನೆ~ ಎಂದು ಮುಕ್ತವಾಗಿ ಮಾತನಾಡುವ ಕುಮುದಾಗೆ ಪುನೀತ್ ರಾಜ್‌ಕುಮಾರ್ ಮತ್ತು ರಕ್ಷಿತಾ ಸಿನಿಮಾಗಳೆಂದರೆ ಸಿಕ್ಕಾಪಟ್ಟೆ ಇಷ್ಟವಂತೆ.

`ನಾನು ಮೊದಲಿನಿಂದಲೂ ಪುನೀತ್, ರಕ್ಷಿತಾ ಅಭಿಮಾನಿ. ಅವರ ಸಿನಿಮಾಗಳನ್ನು ಮಿಸ್ ಮಾಡದೇ ನೋಡುತ್ತೇನೆ~ ಎಂದು ಕಣ್ಣಿನಲ್ಲಿ ಮಿಂಚು ಹರಿಸುತ್ತಾರೆ ಕುಮುದಾ.

ಹಾರರ್ ಚಿತ್ರಗಳನ್ನು ನೋಡಲು ಇಷ್ಟಪಡುವ ಅವರಿಗೆ ಅಂಥ ಚಿತ್ರಗಳ ಪ್ರಧಾನ ಪಾತ್ರಗಳಲ್ಲಿ ನಟಿಸುವ ಬಯಕೆ ಇದೆ. ಜೊತೆಗೆ ಹಳ್ಳಿ ಹುಡುಗಿಯ ಪಾತ್ರವೂ ಅಚ್ಚುಮೆಚ್ಚು.

“ಡಿಸೆಂಬರ್‌ಗೆ `ಚಾರ್‌ಮಿನಾರ್~ ಬಿಡುಗಡೆಯಾಗುತ್ತಿದೆ. ಆ ನಂತರ ನಾನು ಮಾಡೆಲಿಂಗ್ ಮಾಡುವುದಿಲ್ಲ. ಸಂಪೂರ್ಣವಾಗಿ ಸಿನಿಮಾರಂಗದಲ್ಲಿ ತೊಡಗಿಸಿಕೊಳ್ಳುವೆ. ಸಿನಿಮಾ ಯಾರದು ಎಂಬುದರ ಮೇಲೆ ನನ್ನ ಪಾತ್ರಗಳು ನಿರ್ಧಾರವಾಗಲಿವೆ” ಎನ್ನುತ್ತಾರೆ ಈ ಚೆಲುವೆ. ಸಿನಿಮಾ ನಾಯಕಿಯಾಗಲು ಅಗತ್ಯವಿರುವ ಫಿಟ್‌ನೆಸ್ ಕಾಯ್ದಕೊಳ್ಳುತ್ತಿರುವ ಕುಮುದಾಗೆ ಅವರ ತಾಯಿಯೇ ಡಯಟೀಶಿಯನ್ ಅಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT