ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿ ಹಾರಿಸುವಿಕೆ ಸಂಪೂರ್ಣ ನಿಷೇಧ: ಡಿಸಿ

ಮೈಲಾರಲಿಂಗೇಶ್ವರ ಜಾತ್ರೆ ಪೂರ್ವ ಸಿದ್ಧತಾ ಸಭೆ
Last Updated 9 ಜನವರಿ 2014, 6:33 IST
ಅಕ್ಷರ ಗಾತ್ರ

ಯಾದಗಿರಿ: ತಾಲ್ಲೂಕಿನ ಮೈಲಾಪುರ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ಜ. 12 ರಿಂದ 16ರ ವರೆಗೆ ನಡೆಯಲಿದ್ದು, ಜಾತ್ರೆ ಸಂದರ್ಭ­ದಲ್ಲಿ ಹರಕೆ ಕುರಿಗಳನ್ನು ತರದಂತೆ ನೋಡಿಕೊಳ್ಳಲು 6 ಚೆಕ್ ಪೋಸ್ಟ್‌­ಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಕುರಿ ಹಾರಿಸುವ ಚಟುವಟಿಕೆಯಲ್ಲಿ ತೊಡಗಿರುವವರು ಕಂಡು ಬಂದಲ್ಲಿ ಅಂಥವರ ವಿರುದ್ಧ ಕ್ರಿಮಿನಲ್ ಮೊಕ­ದ್ದಮೆ ದಾಖಲಿಸುವಂತೆ ಜಿಲ್ಲಾಧಿಕಾರಿ ಎಫ್.ಆರ್.­ಜಮಾದಾರ್ ಅಧಿಕಾರಿ­ಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣ­ದಲ್ಲಿ ಬುಧವಾರ ಮೈಲಾರಲಿಂಗೇಶ್ವರ ಜಾತ್ರೆ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕುರಿ ಹಾರಿಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ಇಂತಹ ಹರಕೆ ಕುರಿ­ಗಳನ್ನು ಜಾತ್ರೆಗೆ ತರದಂತೆ ನೋಡಿ­ಕೊಳ್ಳಲು ಕಂದಾಯ ಇಲಾಖೆ,  ಪೊಲೀಸ್‌, ಪಶುಸಂಗೋಪನ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ­ಯನ್ನು ಚೆಕ್ ಪೋಸ್ಟ್‌ಗಳಲ್ಲಿ ನಿಯೋಜಿ­ಸ­ಲಾಗುತ್ತಿದೆ ಎಂದು ಹೇಳಿದರು.

ಜಾತ್ರೆ ಸಂದರ್ಭದಲ್ಲಿ ಕುರಿ ಹಾರಿಸುವ ಚಟು­ವಟಿಕೆ ನಡೆಸುವವರ ವಿಡಿಯೋ ಚಿತ್ರೀಕರಣ ಮಾಡ­ಲಾಗು­ತ್ತಿದೆ. ಇದಕ್ಕೆ ಪ್ರಚೋದನೆ ನೀಡು­ವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ. ಭಕ್ತರು ಈ ಜಾತ್ರೆಗೆ ಕುರಿಗಳನ್ನು ತರದಂತೆ ಮನವಿ ಮಾಡಿದ ಅವರು, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಈ ಜಾತ್ರೆಗೆ ಆಗಮಿಸುವುದರಿಂದ ಅಧಿಕಾರಿ­ಗಳು ಸಹ 24 ಗಂಟೆ ಚೆಕ್ ಪೋಸ್ಟ್‌­ನಲ್ಲಿ ಎಚ್ಚರಿಕೆಯಿಂದ ಇರ­ಬೇಕು. ಕುರಿಗಳು ಸಿಕ್ಕಲ್ಲಿ ತಕ್ಷಣ ಅವು­ಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಬೇಕು ಎಂದು ಸೂಚನೆ ನೀಡಿದರು.

ಜಾತ್ರೆ ಸ್ಥಳದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಮತ್ತು ಅನೈತಿಕ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸ್‌ ಇಲಾಖೆಯಿಂದ ಅಗತ್ಯ ಬಂದೋಬಸ್ತ್ ಮಾಡಲಾಗುತ್ತದೆ.  ಜಾತ್ರೆಗೆ ಬರುವ ಭಕ್ತರ ಅನುಕೂಲ­ಕ್ಕಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಚೆಕ್‌ಪೋಸ್ಟ್‌, ಮಹಿಳೆ­ಯರು ಇರುವ ಸ್ಥಳಗಳಲ್ಲಿ ಮತ್ತು ಅವಶ್ಯಕತೆ ಇರುವ ಕಡೆ ವಿದ್ಯುತ್ ಸೌಲಭ್ಯ ಕಲ್ಪಿಸಬೇಕು ಎಂದರು.

ಜಾತ್ರೆಯಲ್ಲಿ ರೋಗ ರುಜಿನ ಹರಡದಂತೆ ನೋಡಿಕೊಳ್ಳಲು ಆರೋಗ್ಯ ಇಲಾಖೆ ಅಧಿಕಾರಿ­ಗಳು ವೈದ್ಯರನ್ನು ನಿಯೋಜಿಸಿ, ಅವಶ್ಯಕ ಔಷಧಿ ಇಟ್ಟುಕೊಳ್ಳಬೇಕು. ಅಗ್ನಿ ಆಕಸ್ಮಿಕ ತಡೆಯಲು ಅಗ್ನಿಶಾಮಕ ಇಲಾಖೆಯಿಂದ ಅಗ್ನಿ ನಂದಿಸುವ ಹೆಚ್ಚಿನ ಪರಿಕರಗಳನ್ನು ಇಟ್ಟುಕೊಳ್ಳ­ಬೇಕು ಎಂದು ಸೂಚಿಸಿದರು.

ಹೊನ್ನಕೆರೆಯ ನೀರನ್ನು ಕುಡಿ­ಯ­ದಂತೆ ಮತ್ತು ಕೆರೆಯಲ್ಲಿ ಈಜಾಡ­ದಂತೆ ಎಚ್ಚರಿಕೆ ವಹಿಸಲು ಸೂಚಿಸಿದ ಅವರು,  12 ನುರಿತ ಈಜುಗಾರ­ರನ್ನು ನಿಯೋಜಿಸಲು ತಿಳಿಸಿದರು.

ಭಕ್ತರ ಅನುಕೂಲಕ್ಕಾಗಿ ನಿತ್ಯ 65 ಬಸ್‌ಗಳು ಮತ್ತು ಪ್ರಮುಖ ದಿನವಾದ ಜ. 14ರಂದು 100 ಬಸ್‌ಗಳ ವ್ಯವಸ್ಥೆ ಮಾಡಲಾಗುತ್ತದೆ. ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸಲು ಸಂರಕ್ಷಣಾ ಘಟಕ ಸ್ಥಾಪಿಸಿಕೊಂಡು ಜಿಲ್ಲಾ ಮಟ್ಟದ ಅಥವಾ ತಾಲ್ಲೂಕು ಮಟ್ಟದ ಅಧಿಕಾರಿ­ಯನ್ನು ನೇಮಿಸುತ್ತಿದ್ದು, ಅವರು ಪೊಲೀಸ್‌ ಇಲಾಖೆ ಅಧಿಕಾರಿ­ಗಳೊಂದಿಗೆ ಸಂಪರ್ಕ ಸಾಧಿಸಬೇಕು. ಜಾತ್ರಾ ಸ್ಥಳದಲ್ಲಿ ಕ್ಯಾಂಪ್ ಕಚೇರಿ ತೆರೆಯಬೇಕು ಎಂದರು.

ಯಾದಗಿರಿ ಸಹಾಯಕ ಆಯುಕ್ತರನ್ನು ನೋಡಲ್ ಅಧಿಕಾರಿ­ಯಾಗಿ ನೇಮಿಸಿದೆ. ಅದ­ರಂತೆ ಜಾತ್ರೆ ಸಂದರ್ಭದಲ್ಲಿ ಮೈಲಾಪುರದಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ಜ. 13 ರ ರಾತ್ರಿ 12 ಗಂಟೆಯಿಂದ ಜ.15ರ ಬೆಳಿಗ್ಗೆ 6 ಗಂಟೆಯವರೆಗೆ ಮದ್ಯಪಾನ, ಮದ್ಯ­ಮಾರಾಟ ನಿಷೇಧಿಸಲಾಗಿದೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಂಶಿಕೃಷ್ಣ ಮಾತನಾಡಿ, ಜಾತ್ರಾ ಸ್ಥಳದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಹೆಸರು, ಸೇವೆ ಮಾದರಿ, ಸೇವೆ ಸ್ಥಳ, ಮೊಬೈಲ್ ಸಂಖ್ಯೆಗಳ ಮಾಹಿತಿಯನ್ನು ಇಲಾಖೆಗೆ ಮುಂಚಿತವಾಗಿ ನೀಡಬೇಕು. ಜಾತ್ರೆ ಸ್ಥಳದಲ್ಲಿ ಪೊಲೀಸ್‌ ಇಲಾಖೆ­ಯಿಂದ ಕಾನೂನು ಸುವ್ಯವಸ್ಥೆ ಕಾಪಾ­ಡಲು ಅವಶ್ಯಕ ಬಂದೋಬಸ್ತ್‌ ಮಾಡ­ಲಾಗುವುದು ಎಂದು ಹೇಳಿದರು.

8 ವೈದ್ಯರನ್ನು ಮತ್ತು ಇತರ ಸಿಬ್ಬಂದಿಯನ್ನು ನೇಮಿಸುತ್ತಿದ್ದು, 5 ಕಡೆ ನೀರಿನ ಸಂಪನ್ಮೂಲ­ಗಳಿಗೆ ಕ್ಲೋರಿನೇಟ್ ಮಾಡಲಾಗುವುದು. ಬ್ಲೀಚಿಂಗ್ ಪೌಡರ್ ಸಹ ಬಳಸಲಾಗುವುದು. ಅದರಂತೆ ಜೆಸ್ಕಾಂನಿಂದ ಇಬ್ಬರು ಸೆಕ್ಷನ್‌ ಆಫೀಸರ್ ಮತ್ತು 16 ಸಿಬ್ಬಂದಿ ನಿಯೋಜಿಸ­ಲಾಗುತ್ತದೆ. ಅಗ್ನಿಶಾಮಕ ಇಲಾಖೆಯಿಂದ ನುರಿತ ಈಜುಗಾರರು, ಇತರೆ ಸುರಕ್ಷಿತ ಸಾಧನೆಗಳನ್ನು ಇಟ್ಟುಕೊಳ್ಳಲಾಗುವುದು ಎಂದು ಹೇಳಿದರು. ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT