ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುಕಲು ತಿಂಡಿಗೆ ದೊಡ್ಡ ಕರುಳು ಕ್ಯಾನ್ಸರ್ ಬಳುವಳಿ

Last Updated 3 ಫೆಬ್ರುವರಿ 2011, 18:45 IST
ಅಕ್ಷರ ಗಾತ್ರ

 ಬೆಂಗಳೂರು: ಶ್ವಾಸಕೋಶ ಕ್ಯಾನ್ಸರ್‌ಗಿಂತ ಈಗ ದೊಡ್ಡಕರುಳಿನ ಕ್ಯಾನ್ಸರ್ ಭಯಾನಕ ರೂಪವಾಗಿ ಕಾಣುತ್ತಿದೆ. ಪ್ರಸಕ್ತ ದಿನಗಳಲ್ಲಿ ಪ್ರತಿವರ್ಷ ಸುಮಾರು 10 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿವೆ. ಇದರಲ್ಲಿ ಸುಮಾರು ಶೇ 15ರಷ್ಟು ಕರುಳಿಗೆ ಸಂಬಂಧಿಸಿದ್ದ ಪ್ರಕರಣಗಳಾಗಿವೆ. ದೇಶದಲ್ಲಿ ಬಹಳಷ್ಟು ಜನರು ವಿಶೇಷವಾಗಿ ಯುವಕರು ಪಾಶ್ಚಿಮಾತ್ಯ ಆಹಾರ ಪದ್ಧತಿಯೆಡೆ ಆಕರ್ಷಿತರಾಗಿರುವ ಪರಿಣಾಮವೇ ಇದು.

ಪಿಜ್ಜಾ, ಬರ್ಗರ್, ಅರೆಬೆಂದ ಮಾಂಸ, ಕೋಕ ಇಂದಿನ ಯುವಕರ ಆಹಾರದ ಮೆನುವಾಗಿದೆ. ಇದಲ್ಲದೇ, ಉದ್ಯೋಗಸ್ಥ ಪತಿ-ಪತ್ನಿ ಇದ್ದ ಪಕ್ಷದಲ್ಲಿ ಹೋಟೆಲ್ ತಿಂಡಿ ತಿನ್ನುವುದು, ಸಿದ್ದ ಆಹಾರ ಸೇವಿಸುವುದು ಹೆಚ್ಚಾಗಿದೆ. ಈ ಕಾರಣದಿಂದಾಗಿಯೇ 25-35 ವಯಸ್ಸಿನ ಯುವಜನರಲ್ಲಿ ಕರುಳಿನ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿದೆ. ಇದಕ್ಕಿಂತ ಮುಂಚಿನ ದಿನಗಳಲ್ಲಿ ಸುಮಾರು 50-60 ವಯಸ್ಸಿನವರಲ್ಲಿ ಇದು ಕಂಡುಬರುತ್ತಿತ್ತು.

ಅನುಕರಣೆ ಫ್ಯಾಷನ್: ಮೊದಲಿಗೆ ಉಡುಪುಗಳಲ್ಲಿ ವಿದೇಶಿಯರನ್ನು ಅನುಸರಿಸುತ್ತಿದ್ದ ಯುವಕರು ಇಂದು ಆಹಾರ ಪದ್ಧತಿಯಲ್ಲೂ ಅನುಕರಣೆ ಮಾಡುತ್ತಿದ್ದಾರೆ. ದೇಶೀಯ ಊಟದ ಬದಲಿಗೆ ಲಘು ಉಪಹಾರದಂತೆ ಪಿಜ್ಜಾ, ಬರ್ಗರ್, ಕುರುಕಲು ತಿಂಡಿಗಳನ್ನು ಸೇವಿಸುತ್ತಿದ್ದಾರೆ. ಹೊತ್ತು ಹೊತ್ತಿಗೆ ಕೋಕ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಈ ಆಹಾರಗಳಲ್ಲಿ ನಾರಿನ ಅಂಶ ತುಂಬಾ ಕಡಿಮೆಯಾಗಿರುತ್ತದೆ. ಇದು ಜೀರ್ಣಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಕಿದ್ವಾಯಿ ಆಸ್ಪತ್ರೆಯ ಗ್ರಂಥಿ ತಜ್ಞ ಡಾ. ರಾಮಚಂದ್ರ ಹೇಳಿದರು.

ವಿದೇಶಿಗರು ಪ್ರತಿದಿನ ಮಲ ವಿಸರ್ಜಿಸುವುದಿಲ್ಲ. ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಪ್ರಭಾವಿತರಾದ ಹಲವು ಯುವಕರು ಇದನ್ನು ಕೂಡ ಅನುಸರಿಸುತ್ತಿದ್ದಾರೆ. ಇದರಿಂದಾಗಿ ದೇಹದ ತ್ಯಾಜ್ಯ ದೊಡ್ಡಕರುಳಿನಲ್ಲಿ ಸಂಗ್ರಹವಾಗಿ, ರಾಸಾಯನಿಕ ಕ್ರಿಯೆಗಳು ನಡೆಯುತ್ತವೆ. ಹಲವು ವರ್ಷಗಳ ನಂತರ ಇದು ಕ್ಯಾನ್ಸರ್‌ಗೆ ದಾರಿ ಮಾಡಿಕೊಡುತ್ತದೆ.

ಲಕ್ಷಣಗಳು: ಮಲ ವಿಸರ್ಜನೆಯಲ್ಲಿ ತೊಂದರೆ, ಮಲದ ಜೊತೆ ರಕ್ತ ಹೋಗುವುದು, ಇತ್ಯಾದಿ. ವೈದ್ಯಕೀಯ ಪರೀಕ್ಷೆಗಳ ನಂತರವೇ ಇದನ್ನು ಖಚಿತಪಡಿಸಿಕೊಳ್ಳಬಹುದು.

ಆರಂಭಿಕ ಹಂತದಲ್ಲಿ ಅಂದರೆ ಸ್ಟೇಜ್ 1,2ರಲ್ಲಾದರೆ ಶಸ್ತ್ರಚಿಕಿತ್ಸೆ ಮೂಲಕ ಸಂಪೂರ್ಣವಾಗಿ ನಿರ್ನಾಮ ಮಾಡಬಹುದು. ಸ್ಟೇಜ್ 3ರಲ್ಲಾದರೆ ಶೇ 73ರಷ್ಟು ನಿವಾರಿಸಬಹುದು ಆದರೆ, ಸ್ಟೇಜ್ 4ಕ್ಕೆ ತಲುಪಿದರೆ ಸಾಮಾನ್ಯವಾಗಿ ಗುಣವಾಗುವ ಸಂಭವ ತುಂಬ ವಿರಳ.

ಮುನ್ನೆಚ್ಚರಿಕೆ: ರೋಗ ಬಂದಾದ ಮೇಲೆ ಗುಣಪಡಿಸುವುದಕ್ಕಿಂತ ಅದು ಬಾರದಂತೆ ಮುನ್ನೆಚ್ಚರಿಕೆ ವಹಿಸುವುದೇ ಲೇಸು. ಪ್ರತಿದಿನ ವ್ಯಾಯಾಮ ಮಾಡಬೇಕು. ಇದರಿಂದ ರಕ್ತ ಚಲನೆ ಸುಸ್ಥಿತಿಯಲ್ಲಿರುತ್ತದೆ. ಹೆಚ್ಚು ನಾರಿನಾಂಶ ಆಹಾರವನ್ನು ಸೇವಿಸಬೇಕು. ಸಾಧ್ಯವಾದಷ್ಟು ಮಟ್ಟಿಗೆ ತಾಜಾ ಆಹಾರವನ್ನು ಸೇವಿಸಬೇಕು ಹಾಗೂ ಪ್ರತಿದಿನ ಮಲವಿಸರ್ಜನೆ ಮಾಡಬೇಕು.

ಇನ್ನುಳಿದಂತೆ ತಂಬಾಕು ಸೇವೆಯಿಂದ ಬರುವ ಕ್ಯಾನ್ಸರ್ ಪ್ರಕರಣಗಳೇ ದೇಶದಲ್ಲಿ ಅತಿಹೆಚ್ಚು. ತಂಬಾಕು, ಎಲೆ ಅಡಿಕೆ ಸುಣ್ಣ, ಪಾನ್ ಪರಾಗ್ ಸೇರಿದಂತೆ ಇತರೆ ಪದಾರ್ಥಗಳ ಸೇವನೆಯಿಂದ ಬರುವ ಶ್ವಾಸಕೋಶ (ಲಂಗ್) ಕ್ಯಾನ್ಸರ್ ಪ್ರಕರಣಗಳೇ ಹೆಚ್ಚು.  ವಿಶೇಷವೆಂದರೆ ಪುರುಷರಿಗಿಂತ ಮಹಿಳೆಯರಲ್ಲಿ ಇದು ಹೆಚ್ಚು ಕಂಡುಬರುತ್ತಿದೆ. ಶೇ 25ರಷ್ಟು ಪುರುಷರು ಇದಕ್ಕೆ ಬಲಿಯಾಗಿದ್ದರೆ, ಶೇ 30ರಷ್ಟು ಮಹಿಳೆಯರಲ್ಲಿ ಇದು ಕಾಣಸಿಗುತ್ತದೆ.

 ಮಹಿಳೆಯರಲ್ಲಿ ಸ್ತನ, ಗರ್ಭಾಶಯ ಕ್ಯಾನ್ಸರ್ ಅತಿಹೆಚ್ಚು

ಬೆಂಗಳೂರು: ಮಹಿಳೆಯರಲ್ಲಿ ವಿಶೇಷವಾಗಿ ಕಾಣುವ ಕ್ಯಾನ್ಸರ್‌ನಲ್ಲಿ ಎರಡು ವಿಧ. ಮುಖ್ಯವಾಗಿ ಗ್ರಾಮೀಣ ಮಹಿಳೆಯರಲ್ಲಿ ಗರ್ಭಾಶಯ ಕ್ಯಾನ್ಸರ್ ಕಂಡುಬಂದರೆ ನಗರವಾಸಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿದೆ.

ಪ್ರತಿ ವರ್ಷ ವರದಿಯಾಗುವ ಸುಮಾರು 10 ಲಕ್ಷ ಕ್ಯಾನ್ಸರ್ ಪ್ರಕರಣಗಳ ಪೈಕಿ ಗರ್ಭಾಶಯ ಕ್ಯಾನ್ಸರ್ ಶೇ 23.3ರಷ್ಟು ಹಾಗೂ ಸ್ತನ ಕ್ಯಾನ್ಸರ್ ಶೇ 17.2ರಷ್ಟು ವರದಿಯಾಗಿವೆ.

ಗ್ರಾಮೀಣ ಪ್ರದೇಶದಲ್ಲಿ ಋತುಮತಿಯಾದಾಗ ಶುಚಿತ್ವ ಕಾಪಾಡಿಕೊಳ್ಳದಿರುವುದು, ಚಿಕ್ಕವಯಸ್ಸಿನಲ್ಲಿಯೇ ಮದುವೆ, ಬಹುಸಂಗಾತಿಗಳ ಜೊತೆ ಲೈಂಗಿಕ ಸಂಬಂಧ ಹಾಗೂ ಇತರೆ ಕಾರಣಗಳಿಂದಾಗಿ ಗರ್ಭಾಶಯ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ. ಇದಲ್ಲದೇ ಇದು ಆನುವಂಶೀಯವಾಗಿಯೂ ಬರುವ ಸಂಭವ ಇರುತ್ತದೆ.

ಲಕ್ಷಣಗಳು:  ಜನನಾಂಗದಲ್ಲಿ ರಕ್ತ ಸೋರುವಿಕೆ, ಸಂಭೋಗದ ಸಮಯದಲ್ಲಿ ನೋವು, ದೇಹ ತೂಕ ಗಮನಾರ್ಹವಾಗಿ ಕಡಿಮೆಯಾಗುವುದು, ಹಸಿವು ಕಡಿಮೆಯಾಗುವುದು, ಮುಖ್ಯವಾಗಿ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಸ್ತನ ಕ್ಯಾನ್ಸರ್ ಕೂಡ ಅನುವಂಶೀಯವಾಗಿ ಬರುವ ಸಾಧ್ಯತೆ ಇರುತ್ತದೆ. ಇದನ್ನು ಪತ್ತೆ ಮಾಡಲು ಸ್ವಯಂ ಪರೀಕ್ಷೆ ನಡೆಸಬಹುದು. ಸ್ತನದಲ್ಲಿ ಗಂಟಾಗಿರುವುದನ್ನು ಮುಟ್ಟಿ ನೋಡಿ ಪರೀಕ್ಷಿಸಬಹುದು. ವರ್ಷಕ್ಕೊಮ್ಮೆ ಆನ್‌ಕಾಲಜಿ ಪರೀಕ್ಷೆ ಮಾಡಿಸಬಹುದು. 40 ವರ್ಷ ದಾಟಿದ ಮಹಿಳೆಯರು ವರ್ಷಕ್ಕೊಮ್ಮೆ ಮ್ಯಾಮೊಗ್ರಾಮ್ ಪರೀಕ್ಷೆ ಕೈಗೊಳ್ಳಬಹುದು.

ಕ್ಯಾನ್ಸರ್‌ಗೆ ಜೆನೆಟಿಕ್ ಚಿಕಿತ್ಸೆ
ಬೆಂಗಳೂರು: ಕ್ಯಾನ್ಸರ್ ನಿವಾರಿಸಲು ಮನುಷ್ಯನ ವಂಶವಾಹಿ (ಜೀನ್)ಗಳಲ್ಲಿಯೇ ಚಿಕಿತ್ಸೆ ನೀಡಲು ಸಾಧ್ಯವೇ ಎನ್ನುವುದನ್ನು ಪತ್ತೆ ಹಚ್ಚಲು ಹಲವೆಡೆ ಸಂಶೋಧನೆಗಳು ನಡೆಯುತ್ತಿವೆ ಎಂದು ಕ್ವಿದಾಯಿ ಗ್ರಂಥಿ ಆಸ್ಪತ್ರೆಯ ಗ್ರಂಥಿ ತಜ್ಞ ಡಾ. ಕೃಷ್ಣಮೂರ್ತಿ ಹೇಳಿದರು.

ರೋಗಪೀಡಿತ ವಂಶವಾಹಿಯ ಕೆಲಸವನ್ನು ಬೇರೊಂದು ವಂಶವಾಹಿಗೆ ವರ್ಗಾಯಿಸುವುದು ಹಾಗೂ ರೋಗಪೀಡಿತ ವಂಶವಾಹಿಯನ್ನು ನಿಷ್ಕ್ರೀಯಗೊಳಿಸುವ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ.

ಧೂಮಪಾನ ಹಾಗೂ ರಾಸಾಯನಿಕ ಬಳಕೆಯಿಂದಾಗಿ ವಂಶವಾಹಿ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.  ವಂಶವಾಹಿಗಳಲ್ಲಿ ಕಂಡುಬಂದರೆ ಕ್ಯಾನ್ಸರ್‌ನ್ನು ತಡೆಯಲು ಸಾಧ್ಯವಾಗಬಹುದು. ಇದು ಪ್ರಯೋಗದ ಹಂತದಲ್ಲಿದ್ದು ಮುಕ್ತವಾಗಿ ಬಳಸಲು ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು  ಎನ್ನುವುದು ಅವರ ಅನಿಸಿಕೆ.

 ಯೋಜನೆಗಳು ಸದುಪಯೋಗವಾಗಲಿ
ಬೆಂಗಳೂರು:‘ರಾಜ್ಯ ಹಾಗೂ ಕೇಂದ್ರ ಸರ್ಕಾರ ಜನರ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದನ್ನು ಜನರು ಸಮರ್ಪಕವಾಗಿ ಬಳಸಿಕೊಳ್ಳಲಿ. ಇದರ ಬಗ್ಗೆ ಹೆಚ್ಚಿನ ಜಾಗೃತಿ ಮೂಡಲಿ’ ಎಂದು ಕಿದ್ವಾಯಿ ಗ್ರಂಥಿ ಆಸ್ಪತ್ರೆಯ ಗ್ರಂಥಿ ತಜ್ಞ ಡಾ. ಕೃಷ್ಣಮೂರ್ತಿ ಹೇಳಿದರು.

‘ವಾಜಪೇಯಿ ಆರೋಗ್ಯ ಶ್ರೀ, ಯಶಸ್ವಿನಿ, ಮುಖ್ಯಮಂತ್ರಿಗಳ ಫಂಡ್, ಪ್ರಧಾನಿಗಳ ಫಂಡ್ ಹಾಗೂ ಇತರೆ ಯೋಜನೆಗಳಿವೆ. ಇದರ ಪ್ರಯೋಜನ ಬಡವರು ಪಡೆದುಕೊಳ್ಳಲಿ’ ಎಂದರು.

‘ಕ್ಯಾನ್ಸರ್‌ಗೆ ಸ್ವಲ್ಪವಾದರೂ ಸಂದೇಹ ಬಂದರೆ ತಕ್ಷಣ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡು ಖಾತ್ರಿ ಪಡಿಸಿಕೊಳ್ಳಿ, ವಿಳಂಬ ಮಾಡಬಾರದು. ಎಷ್ಟು ಬೇಗ ಚಿಕಿತ್ಸೆ ಪಡೆದುಕೊಳ್ಳುತ್ತಾರೆಯೋ ಅಷ್ಟು ಗುಣವಾಗುವ ಸಂಭವ ಇದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT