ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರುರಾಜನ ಆಸ್ಥಾನದಲ್ಲಿ ದ್ರೌಪದಿ ತುಂಡುಡುಗೆ ಉಟ್ಟಿದ್ದಳೇ?

Last Updated 26 ಜನವರಿ 2012, 19:30 IST
ಅಕ್ಷರ ಗಾತ್ರ

ಕರ್ನಾಟಕ ವಿಧಾನಪರಿಷತ್ ಉಪಸಭಾಪತಿ ವಿಮಲಾ ಗೌಡರೇ,
ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಅವರು ತೊಡುವ ಉಡುಪುಗಳೇ ಕಾರಣವೆಂದು ಸರಳೀಕರಿಸುವ ಮೂಲಕ ನೀವು ಮತ್ತು ನೀವು ಪ್ರತಿನಿಧಿಸುವ ಪಕ್ಷ ಮತ್ತು ಅದರ ಸಿದ್ಧಾಂತ ಎಂದೂ ಮಹಿಳೆಯರ ಪರ ಅಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದೀರಿ. ನೀವೂ ಒಬ್ಬ ಮಹಿಳೆಯಾದರೂ ನಿಮ್ಮ ಆಲೋಚನಾ ಕ್ರಮಗಳು ಹೆಣ್ಣಿನ ವ್ಯಕ್ತಿ ಗೌರವ ಮತ್ತು ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಬದಲು ಅದಕ್ಕೆ ಕೊಡಲಿ ಪೆಟ್ಟು ನೀಡುವಂತಿವೆ.

`ಭಾರತೀಯ ಸಂಸ್ಕೃತಿಯ ವಸ್ತ್ರಗಳು ಮಹಿಳೆಗೆ ಹೆಚ್ಚು ಗೌರವ ನೀಡುತ್ತವೆ~ ಎಂದಿದ್ದೀರಿ. ನಿಮ್ಮ ಪ್ರಕಾರ ಭಾರತೀಯ ಸಂಸ್ಕೃತಿ ಎಂದರೆ ಯಾವುದು? ದೇಶದಲ್ಲಿ ಹಲವು ಜಾತಿ, ಜನಾಂಗ, ಬುಡಕಟ್ಟು, ಭಾಷೆ, ಭಾವನೆಗಳನ್ನು ಹೊಂದಿರುವ ಜನರು ತಮ್ಮದೇ ಆದ ಉಡುಪಿನ ಸಂಸ್ಕೃತಿಯನ್ನೂ ಹೊಂದಿದ್ದಾರೆ. ಅದನ್ನೆಲ್ಲ ತಿರಸ್ಕರಿಸಿ ಮನುವಾದಿಗಳು ಹೇರುವ ಸಂಸ್ಕೃತಿಯನ್ನು ಎಲ್ಲರೂ ಪಾಲಿಸಬೇಕೆಂಬ ನಿಮ್ಮ ಅಪ್ಪಣೆಯನ್ನು ಯಾರೂ ಒಪ್ಪಲಾರರು. ಈ ದೇಶದಲ್ಲಿ ಹಾಲುಗಲ್ಲದ ಹಸುಳೆಗಳಿಂದ ಹಿಡಿದು ಎಲ್ಲ ವಯೋಮಾನದ ಮಹಿಳೆಯರ ಮೇಲೆ ಅತ್ಯಾಚಾರಗಳಾಗುತ್ತಿವೆ. ಸೇಡಿನ ಭಾವದಿಂದ ದೇಹದ ಮೇಲೆ ಅಸಿಡ್ ಸುರಿಯುವ ಘಟನೆಗಳೂ ನಡೆಯುತ್ತಿವೆ.

ರಾಜ್ಯದ ಆಡಳಿತ ನಡೆಸುತ್ತಿರುವ ಪಕ್ಷಕ್ಕೆ ಸೇರಿರುವ ನೀವು ಸಿಕ್ಕ ಅವಕಾಶವನ್ನು ಬಳಸಿಕೊಂಡು ಮಹಿಳೆಯರಿಗೆ ಒಂದಿಷ್ಟಾದರೂ ನೆಮ್ಮದಿ, ವಿಶ್ವಾಸ, ಭಯಮುಕ್ತ ವಾತಾವರಣ ನಿರ್ಮಾಣಕ್ಕೆ ಪ್ರಯತ್ನಿಸುವ ಬದಲು ಅಪರಾಧಿಗಳಿಗೆ ಬಲ ನೀಡುತ್ತಿದ್ದೀರಿ. ನಿಮ್ಮನ್ನು ನಾವು ಏನೆಂದು ಪರಿಗಣಿಸಬೇಕು? ನಿಮ್ಮ ಬಳಿ ಈ ಅಭಿಪ್ರಾಯವನ್ನು ಪುಷ್ಟೀಕರಿಸಲು ಯಾವುದಾದರೂ ದಾಖಲೆ, ಪುರಾವೆಗಳಿವೆಯೇ?

ವಿಮಲಾ ಗೌಡರೇ, ಭಾರತೀಯ ಸಂಸ್ಕೃತಿಯ ಬಗ್ಗೆ ಬಹಳ ಮಾತನಾಡುವ ನೀವು ಮತ್ತು ನಿಮ್ಮ ಪಕ್ಷ ಪ್ರತಿಪಾದಿಸುವ ಸಿದ್ಧಾಂತ ಈ ದೇಶದ ಮಹಿಳೆಯರಿಗೆ ಆದರ್ಶಪ್ರಾಯರೆಂದು ಮಹಾಭಾರತದಲ್ಲಿ ತೋರಿಸುವ ದ್ರೌಪದಿಯ ವಸ್ತ್ರಾಪಹರಣ ಮತ್ತು ಕೀಚಕ ನಡೆಸಿದ ಆಕ್ರಮಣಗಳನ್ನೂ ಹೀಗೆಯೇ ಅರ್ಥೈಸುವಿರಾ?

ರಾಮಾಯಣದಲ್ಲಿ ಸುಗ್ರೀವನ ಪತ್ನಿ ತಾರಾಳನ್ನು ವಾಲಿ ಹೊತ್ತೊಯ್ದನೆಂವ ಪ್ರಸಂಗವಿದೆ. ತಾರಾ ತುಂಡುಡುಗೆ ಉಟ್ಟಿದ್ದಳೇ? ಇವೆಲ್ಲ ಒಂದೆರಡು ಉದಾಹರಣೆಗಳಷ್ಟೆ. ಅಂದಹಾಗೆ, ತಮ್ಮ ಅಭಿಪ್ರಾಯದಂತೆ ಭಾರತೀಯ `ಸಂಸ್ಕೃತಿ~ಯ ಉಡುಗೆಗಳಲ್ಲಿ ಮಹಿಳೆಯರು ಪ್ರಚೋದನಕಾರಿಯಾಗಿ ಕಾಣುವುದೇ ಇಲ್ಲವೇ? ನೀವು ಯಾವತ್ತಾದರೂ ಕೆಟ್ಟದೃಷ್ಟಿಯ ಪುರುಷನ ನೋಟದಿಂದ ಮುಜುಗರ ಅನುಭವಿಸಿದ ಒಂದು ಪ್ರಸಂಗವೂ ಇಲ್ಲವೇ? ನಿಮಗೆ ನೆನಪಿಸಲೇ ಬೇಕಾದ ಪ್ರಕರಣ: ಐಪಿಎಸ್ ಅಧಿಕಾರಿ ಗಿಲ್ ಅವರಿಂದ ಕಿರುಕುಳ ಅನುಭವಿಸಿ ಪ್ರತಿಭಟಿಸಿದ ರೂಪೇನ್ ಬಜಾಜ್ ತುಂಡುಡುಗೆ ಧರಿಸಿರಲಿಲ್ಲ. ಪೊಲಿಸ್ ಠಾಣೆಯಲ್ಲಿ ಅತ್ಯಾಚಾರಕ್ಕೊಳಗಾದ ಮಥುರಾ, ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಭಂವರಿದೇವಿ ತುಂಡುಡುಗೆ ಧರಿಸಿರಲಿಲ್ಲ. ಮತ್ತೊಂದು ಮಾತು ನಿಮ್ಮ ನೆನಪಿಗೆ-ಭಂವರಿ ದೇವಿಯ ಮೆಲೆ ದೌರ್ಜನ್ಯ ನಡೆಸಿದ ಪಾಪಿಗಳನ್ನು ರಾಜಸ್ತಾನದ ನ್ಯಾಯಾಲಯ ಕ್ಷುಲ್ಲಕ ಕಾರಣಗಳನ್ನು ಕೊಟ್ಟು ಖುಲಾಸೆಗೊಳಿಸಿದಾಗ ಅವರನ್ನು ತಮ್ಮ ಸನಾತನ ಪರಂಪರೆಯನ್ನು, ಮಹಿಳಾ ಕುಲದ ಗೌರವ ರಕ್ಷಣೆಯನ್ನು ಮಾಡುವ ದೀಕ್ಷೆ ತೊಟ್ಟ ಬಿಜೆಪಿ ಮಹಿಳಾ ಮೋರ್ಚಾ ರಾಜಸ್ತಾನ ಘಟಕ ಹೂ ಹಾರದೊಂದಿಗೆ ಸ್ವಾಗತಿಸಿತ್ತು!

ಹಾಗೆಯೇ ನಿಮಗೆ ಇನ್ನೊಂದು ಪ್ರಶ್ನೆ, ಈ ದೇಶದಲ್ಲಿ ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯರು ದೌರ್ಜನ್ಯಕ್ಕೆ ತುತ್ತಾಗಿಲ್ಲವೇ?
`
ಕಣ್ಣಿಗೆ ಕಟ್ಟಿರುವ ಮನುವಾದಿ ಪಟ್ಟಿಯನ್ನು ದಯಮಾಡಿ ಒಮ್ಮೆ ಬಿಚ್ಚಿನೋಡಿ. ಸಾಮಾನ್ಯ ಮಹಿಳೆಯರು, ಕೃಷಿ ಕಾರ್ಮಿಕರು, ಶ್ರಮಿಕ ಮಹಿಳೆಯರು ನಿತ್ಯ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ. ಅವರೆಲ್ಲ ತುಂಡುಡುಗೆ ಉಟ್ಟವರೆಂದು ಭಾವಿಸುವಿರಾ? ನಿಮ್ಮ ಈ ಅಭಿಪ್ರಾಯ ನಿತ್ಯ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರ ಗಾಯದ ಮೇಲೆ ಎಳೆಯುವ ಬರೆಯಲ್ಲವೇ? ಒಮ್ಮೆ ತಮ್ಮ ಅಧಿಕಾರವನ್ನು ಬಳಸಿ, ರಾಜ್ಯದಲ್ಲಿ ನಡೆದ ಅಪರಾಧಗಳ ಪಟ್ಟಿಯನ್ನು ತರಿಸಿ ನೋಡಿ. ತುಂಡುಡುಗೆ ಉಟ್ಟ ಎಷ್ಟು ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಅಥವಾ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರೆಲ್ಲ ಪ್ರಚೋದನಕಾರಿ ಉಡುಗೆಗಳನ್ನು ಧರಿಸಿದ್ದರೆ ಎಂಬುದು ತಿಳಿಯುತ್ತದೆ. ಅಷ್ಟೇ ಅಲ್ಲ, ತುಂಡುಡುಗೆಯನ್ನು ಉಟ್ಟು ಮಹಿಳೆಯರು, ಹುಡುಗಿಯರು ಎದುರು ಬಂದರೆಂದು ಎಲ್ಲ ಪುರುಷರೂ ಅವರ ಮೇಲೆ ಬಿದ್ದು ಬಿಡುತ್ತಾರೆಂದು ನಿಮ್ಮ ಅಭಿಪ್ರಾಯವಾಗಿದ್ದರೆ ಅದೂ ಕೂಡ ಧಿಕ್ಕರಿಸಲು ಯೋಗ್ಯವಾದ ಅಭಿಪ್ರಾಯವೇ.   

ನೀವು ಬದುಕುತ್ತಿರುವ ಕಾಸ್ಮೋಪಾಲಿಟಿನ್ ಪರಿಸರದಲ್ಲಿ, ಮಾಲ್ ಸಂಸ್ಕೃತಿಯ ಸೆಳೆತಕ್ಕೆ ಸಿಕ್ಕು ಸಮಾಜದ ಮೇಲುಸ್ತರದ ಅತಿ ಕಡಿಮೆ ಪ್ರಮಾಣದ ಹೆಣ್ಣುಮಕ್ಕಳು ತಮ್ಮ ಆಯ್ಕೆಯ ಉಡುಪು ತೊಡುತ್ತಿರುವುದನ್ನೇ ಉದಾಹರಿಸಿ ಮಾತನಾಡುವ, ಕನಿಷ್ಠ ಜ್ಞಾನವೂ ಇಲ್ಲದ ನಿಮ್ಮಂತಹವರ ಬಗ್ಗೆ ನಮಗೆ ಕನಿಕರ ಮೂಡುತ್ತದೆ.

ಅಧಿಕಾರದಲ್ಲಿದ್ದೂ ಅಪರಾಧಿಗಳನ್ನು ಶಿಕ್ಷಿಸಲಾರದ ಎಲ್ಲರೂ ಹೀಗೆ ಸಲ್ಲದ ಕಾರಣಗಳನ್ನು ಕೊಟ್ಟು ನುಣುಚಿಕೊಳ್ಳುವವರೇ. ನೀವೂ ಅವರಿಗಿಂತ ಭಿನ್ನವಲ್ಲ.

- ವಿಮಲಾ.ಕೆ.ಎಸ್., ಆರ್.ಕೆ.ಹುಡ್ಗಿ, ಟಿ.ಸುರೇಂದ್ರ ರಾವ್, ಮೀನಾಕ್ಷಿ ಬಾಳಿ, ನೀಲಾ.ಕೆ., ಡಾ. ಕಾಶೀನಾಥ್ ಅಂಬಲಗಿ, ಪ್ರಭು ಖಾನಾಪುರೆ, ಪ್ರೊ. ಮಾರುತಿ ಮಾರ‌್ಪಳ್ಳಿ, ಡಾ.ವಸು, ವೆಂಕಟೇಶ್ ಪ್ರಸಾದ್, ಸಬೀಹಾ ಭೂಮಿಗೌಡ, ಎಸ್.ವರಲಕ್ಷ್ಮಿ, ಕೆ.ಎಸ್.ಲಕ್ಷ್ಮಿ ಮತ್ತು ಗೌರಮ್ಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT