ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರ್ಚಿ ಭದ್ರವಾಗಲು ಬಹುಮತ ಸಾಬೀತುಪಡಿಸಿ

Last Updated 19 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಜಗದೀಶ ಶೆಟ್ಟರ್ ನೇತೃತ್ವದ ಸರ್ಕಾರ ಬಹುಮತವನ್ನು ಹೊಂದಿದೆಯೋ, ಇಲ್ಲವೋ ಎಂಬ ಅನುಮಾನ ಇದೆ. ಆದ ಕಾರಣ ಮುಖ್ಯಮಂತ್ರಿಯವರು ಕೂಡಲೇ ಬಹುಮತ ಸಾಬೀತುಪಡಿಸಬೇಕು ಎಂದು ವಿರೋಧ ಪಕ್ಷದ ಉಪನಾಯಕ ಟಿ.ಬಿ. ಜಯಚಂದ್ರ ವಿಧಾನಸಭೆಯಲ್ಲಿ ಗುರುವಾರ ಒತ್ತಾಯಿಸಿದರು.

ಶೆಟ್ಟರ್ ಅವರು ತಮ್ಮ ಸಂಪುಟ ಸದಸ್ಯರನ್ನು ಸದನಕ್ಕೆ ಪರಿಚಯಿಸಲು ಮುಂದಾಗುತ್ತಿದ್ದಂತೆಯೇ ಮಧ್ಯಪ್ರವೇಶಿದ ಜಯಚಂದ್ರ, `ಶೆಟ್ಟರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ನಾನು ಮೊದಲೇ ಹೇಳಿದ್ದೆ. ಅದು ನಿಜವಾಗಿದೆ. ಆದರೆ ಅವರಿಗೆ ಬಹುಮತ ಇಲ್ಲ ಎಂಬ ವಿಷಯ ಪತ್ರಿಕೆಗಳಲ್ಲಿ ಪ್ರಸ್ತಾಪವಾಗುತ್ತಿದೆ. ಹೀಗಾಗಿ ಬಹುಮತ ಸಾಬೀತುಪಡಿಸುವುದು ಒಳಿತು. ಅವರ ಕುರ್ಚಿ ಭದ್ರವಾಗಲಿ ಎಂಬ ಉದ್ದೇಶದಿಂದ ಈ ವಿಷಯ ಪ್ರಸ್ತಾಪಿಸಿದ್ದೇನೆ~ ಎಂದರು.

ಇದಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ಷೇಪಿಸಿದರು. ಶೆಟ್ಟರ್ ಮತ್ತೆ ಎದ್ದು ನಿಂತು ಸಚಿವರನ್ನು ಪರಿಚಯಿಸಲು ಮುಂದಾಗುತ್ತಿದ್ದಂತೆಯೇ ಜಯಚಂದ್ರ ಕ್ರಿಯಾಲೋಪ ಎತ್ತಿದರು. `ಅತೃಪ್ತ ಶಾಸಕರ ಸಂಖ್ಯೆ 25ಕ್ಕೆ ಏರಿದೆ. ಹೀಗಾಗಿ ಬಹುಮತಕ್ಕೆ ಅಗತ್ಯವಿರುವ ಸಂಖ್ಯಾಬಲ ಇದೆಯೋ, ಇಲ್ಲವೋ ಗೊತ್ತಿಲ್ಲ. ಬಹುಮತ ಸಾಬೀತುಪಡಿಸಿದ ನಂತರ ಸಚಿವರನ್ನು ಪರಿಚಯಿಸಲಿ. ಮುಖ್ಯಮಂತ್ರಿ ಸ್ವಯಂ ಪ್ರೇರಣೆಯಿಂದ ವಿಶ್ವಾಸಮತ ಯಾಚನೆ ನಿರ್ಣಯವನ್ನು ಮಂಡಿಸಬೇಕು~ ಎಂದರು.

ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸೂಚಿಸಿಲ್ಲ. ಆದ್ದರಿಂದ ಆ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸ್ಪೀಕರ್ ಕೆ.ಜಿ.ಬೋಪಯ್ಯ ಹೇಳಿದರು. `ನಾನು ಮೊದಲು ಸಚಿವರನ್ನು ಪರಿಚಯಿಸುತ್ತೇನೆ. ವಿಶ್ವಾಸ, ಅವಿಶ್ವಾಸದ ಬಗ್ಗೆ ನಂತರ ಪ್ರಸ್ತಾಪಿಸಲಿ~ ಎಂದು ಶೆಟ್ಟರ್ ಅವರು ಹೇಳಿ, ಸಚಿವರನ್ನು ಸದನಕ್ಕೆ ಪರಿಚಯಿಸಿದರು. ಬಳಿಕ ಈ ಬಗ್ಗೆ ಯಾರೂ ಪ್ರಸ್ತಾಪಿಸಲಿಲ್ಲ.

ಅತೃಪ್ತರು ಜಾಸ್ತಿ: ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ್ ಸೇರಿದಂತೆ ಸುಮಾರು 20 ಶಾಸಕರು ಬೆಳಿಗ್ಗೆ 11.50ರ ಸುಮಾರಿಗೆ ಒಟ್ಟಾಗಿ ಸದನ ಪ್ರವೇಶಿಸಿದಾಗ ಸದಸ್ಯರು ಅಲ್ಲಲ್ಲಿ ಪಿಸುಗುಟ್ಟಲಾರಂಭಿಸಿದರು. ಇದನ್ನು ಗಮನಿಸಿದ ಸ್ಪೀಕರ್, ವಿರೋಧ ಪಕ್ಷದ ನಾಯಕರು ಮಾತನಾಡುವಾಗ ಈ ರೀತಿ ಪಿಸುಮಾತಿನ ಚರ್ಚೆ ಸರಿಯಲ್ಲ ಎಂದು ಎಚ್ಚರಿಸಿದರು.

`ಸದನ ಪ್ರವೇಶಿಸಿದವರು ಸೀಟುಗಳನ್ನು ಹುಡುಕುತ್ತಿದ್ದಾರೆ. ಹೀಗಾಗಿ ಸ್ವಲ್ಪ ಗದ್ದಲ ಆಗಿದೆ~ ಎಂದು ಜಯಚಂದ್ರ ಹೇಳಿದರೆ, ಬಿಜೆಪಿಯ ಎಚ್.ಎಸ್. ಶಂಕರಲಿಂಗೇಗೌಡ ಅವರು, `ಅತೃಪ್ತರ ಸಂಖ್ಯೆ ಜಾಸ್ತಿ ಆಗಿರುವುದರಿಂದ ಗದ್ದಲ ಕೇಳಿ ಬರುತ್ತಿದೆ~ ಎಂದು ಕಿಚಾಯಿಸಿದರು. `ಪಾಪ... ಶಂಕರಲಿಂಗೇಗೌಡ ಅವರಿಗೂ ಅನ್ಯಾಯವಾಗಿದೆ. ಅವರಿಗೆ ಸಚಿವ ಸ್ಥಾನ ನೀಡಿಲ್ಲ~ ಎಂದು ಸಿದ್ದರಾಮಯ್ಯ ಕೆಣಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT