ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಪತಿಗಳ ನೇಮಕ: ಇನ್ನೂ ರಚನೆಯಾಗದ ಶೋಧನಾ ಸಮಿತಿ

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  ವಿಜಾಪುರ ಮಹಿಳಾ ವಿಶ್ವವಿದ್ಯಾಲಯ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳ ನೇಮಕಕ್ಕೆ ಅರ್ಹ ಅಭ್ಯರ್ಥಿಗಳ ಹೆಸರುಗಳನ್ನು ಶಿಫಾರಸು ಮಾಡಲು ಇದುವರೆಗೆ ಶೋಧನಾ ಸಮಿತಿಯೇ ರಚನೆಯಾಗಿಲ್ಲ. ಇದರಿಂದಾಗಿ ನೂತನ ಕುಲಪತಿಗಳ ನೇಮಕ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ.

ಮಹಿಳಾ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಡಾ.ಗೀತಾ ಬಾಲಿ ಅವರು ಕಳೆದ ತಿಂಗಳ 28ರಂದು ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಡಾ.ಎ.ಮುರಿಗೆಪ್ಪ ಇದೇ 14ರಂದು ನಿವೃತ್ತಿ ಹೊಂದಿದ್ದಾರೆ. ಆದರೆ ನೂತನ ಕುಲಪತಿಗಳ ನೇಮಕವಾಗದ ಕಾರಣ ಎರಡೂ ವಿಶ್ವವಿದ್ಯಾಲಯಗಳಲ್ಲಿ ಹಂಗಾಮಿ ಕುಲಪತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಕುಲಪತಿಗಳ ನೇಮಕಕ್ಕೆ ನಾಲ್ವರು ಸದಸ್ಯರನ್ನು ಒಳಗೊಂಡ ಶೋಧನಾ ಸಮಿತಿ ರಚಿಸಬೇಕು. ಇದರಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ), ರಾಜ್ಯಪಾಲರು, ಸರ್ಕಾರ ಮತ್ತು ವಿಶ್ವವಿದ್ಯಾಲಯದ ಸಿಂಡಿಕೇಟ್‌ನಿಂದ ತಲಾ ಒಬ್ಬ ಸದಸ್ಯರು ಇರುತ್ತಾರೆ.

ಸಾಮಾನ್ಯವಾಗಿ ಕುಲಪತಿ ಹುದ್ದೆ ತೆರವಾಗುವ 15-20 ದಿನಗಳಿಗೆ ಮೊದಲೇ ಶೋಧನಾ ಸಮಿತಿಯನ್ನು ರಚಿಸಿ, ಅವಧಿ ಪೂರ್ಣಗೊಳ್ಳುವ ವೇಳೆಗೆ ನೂತನ ಕುಲಪತಿಯನ್ನು ನೇಮಕ ಮಾಡಲಾಗುತ್ತದೆ. ಆದರೆ ಈ ಬಾರಿ ಯುಜಿಸಿ ತನ್ನ ಕಡೆಯಿಂದ ಸದಸ್ಯರ ಹೆಸರನ್ನು ಸಕಾಲಕ್ಕೆ ಸೂಚಿಸದ ಕಾರಣ ಸಮಿತಿ ರಚನೆ ವಿಳಂಬವಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ವಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಶೋಧನಾ ಸಮಿತಿಗೆ 4-5 ದಿನಗಳ ಹಿಂದೆಯಷ್ಟೇ ಯುಜಿಸಿ ತನ್ನ ಕಡೆಯಿಂದ ಹೆಸರನ್ನು ಶಿಫಾರಸು ಮಾಡಿದೆ. ಆದರೆ ಕನ್ನಡ ವಿಶ್ವವಿದ್ಯಾಲಯದ ಶೋಧನಾ ಸಮಿತಿಗೆ ಯುಜಿಸಿಯಿಂದ ಇನ್ನೂ ಹೆಸರು ಬಂದಿಲ್ಲ. ಮಹಿಳಾ ವಿ.ವಿ. ಶೋಧನಾ ಸಮಿತಿ ಒಂದೆರಡು ದಿನಗಳಲ್ಲಿ ರಚನೆಯಾಗಲಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಹೆಚ್ಚುತ್ತಿರುವ ಆಕಾಂಕ್ಷಿಗಳು: ಶೋಧನಾ ಸಮಿತಿ ರಚನೆಯಾಗುವ ಮೊದಲೇ ಕೆಲ ಆಕಾಂಕ್ಷಿಗಳು ತಮ್ಮ `ಬಯೊಡಾಟಾ~ವನ್ನು ಉನ್ನತ ಶಿಕ್ಷಣ ಇಲಾಖೆಗೆ ಕಳುಹಿಸಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಮಹಿಳಾ ವಿ.ವಿ. ಕುಲಪತಿ ಸ್ಥಾನಕ್ಕೆ ಗುಲ್ಬರ್ಗ ವಿ.ವಿ. ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಛಾಯಾ ದೇಗಾಂವಕರ, ಧಾರವಾಡ ವಿ.ವಿ. ಶೈಕ್ಷಣಿಕ ಸಿಬ್ಬಂದಿ ಕಾಲೇಜಿನ ನಿರ್ದೇಶಕಿ ಡಾ.ಮೀನಾ ಚಂದಾವರ್ಕರ, ಮೈಸೂರು ವಿಶ್ವವಿದ್ಯಾಲಯದ ಪ್ರೊ.ಉಷಾರಾಣಿ, ಪ್ರೊ.ಪದ್ಮಾ ಶೇಖರ್, ಬೆಂಗಳೂರು ವಿಶ್ವವಿದ್ಯಾಲಯದ ಪ್ರೊ.ಗಾಯತ್ರಿ ಅವರ ಹೆಸರುಗಳು ಕೇಳಿಬರುತ್ತಿವೆ.

ಇನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಸ್ಥಾನಕ್ಕೆ ಡಾ.ಹೀ.ಚಿ.ಬೋರಲಿಂಗಯ್ಯ, ಡಾ.ಕರಿಗೌಡ ಬೀಚನಹಳ್ಳಿ, ಪ್ರೊ.ಅರವಿಂದ ಮಾಲಗತ್ತಿ, ಪ್ರೊ.ಬಸವರಾಜ ಸಬರದ, ಪ್ರೊ.ಚಿನ್ನಪ್ಪಗೌಡ ಸೇರಿದಂತೆ 14 ಮಂದಿ ಆಕಾಂಕ್ಷಿಗಳಿದ್ದಾರೆ ಎನ್ನಲಾಗಿದೆ. ಕೆಲವರು ಈಗಾಗಲೇ ಬಯೊಡಾಟಾ ನೀಡಿದ್ದರೆ, ಇನ್ನೂ ಕೆಲವರು ಶೋಧನಾ ಸಮಿತಿ ರಚನೆಯಾದ ಮೇಲೆ ನೇರವಾಗಿ ಸಮಿತಿಗೆ ನೀಡಲು ಕಾಯುತ್ತಿದ್ದಾರೆ.

ಶೋಧನಾ ಸಮಿತಿಯು ಆಕಾಂಕ್ಷಿಗಳ ಪಟ್ಟಿಯನ್ನು ಪರಿಶೀಲಿಸಿ ಅರ್ಹ ಮೂವರು ಹೆಸರನ್ನು ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ಆ ಮೂವರ ಪೈಕಿ ಸರ್ಕಾರ ಸೂಚಿಸಿದವರನ್ನು ರಾಜ್ಯಪಾಲರು ಕುಲಪತಿಯನ್ನಾಗಿ ನೇಮಕ ಮಾಡುತ್ತಾರೆ.

ಮಹಿಳಾ ವಿ.ವಿ. ಕುಲಪತಿಯ ಅವಧಿ ನಾಲ್ಕು ವರ್ಷವಾಗಿದ್ದರೆ, ಕನ್ನಡ ವಿ.ವಿ. ಕುಲಪತಿಯ ಅವಧಿ ಮೂರು ವರ್ಷ. ರಾಜ್ಯಪಾಲರು ಬಯಸಿದರೆ ಕನ್ನಡ ವಿ.ವಿ. ಕುಲಪತಿಯ ಅವಧಿಯನ್ನು ಒಂದು ವರ್ಷ ವಿಸ್ತರಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT