ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಪತಿಗಳ ನೇಮಕಕ್ಕೆ ವಿನಾಕಾರಣ ವಿಳಂಬ

Last Updated 24 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 13 ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ತರಾತುರಿಯಲ್ಲಿ ಅನುಮತಿ ನೀಡಿರುವ ಸರ್ಕಾರ, ಮೂರು ಸರ್ಕಾರಿ ವಿಶ್ವವಿದ್ಯಾಲಯಗಳಿಗೆ ನೂತನ ಕುಲಪತಿಗಳನ್ನು ನೇಮಕ ಮಾಡಲು ಮೀನಮೇಷ ಎಣಿಸುತ್ತಿದೆ.

ಬೆಂಗಳೂರು ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಗಳನ್ನು ನೇಮಕ ಮಾಡುವುದು ತಡವಾಗಿರುವುದರಿಂದ ಆ ಮೂರೂ ವಿ.ವಿ.ಗಳಲ್ಲಿ ಹಂಗಾಮಿ ಕುಲಪತಿಗಳೇ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ.

ಈ ಮಧ್ಯೆ ಜನವರಿ 12ರಂದು ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ತೆರವಾಗಲಿದ್ದು, ಅಲ್ಲೂ ಹಂಗಾಮಿ ಕುಲಪತಿಯ ನೇಮಕವಾಗುವುದು ಖಚಿತವಾಗಿದೆ. ಕುಲಪತಿ ಹುದ್ದೆಯ ಬಹುತೇಕ ಆಕಾಂಕ್ಷಿಗಳು ಈಗಾಗಲೇ ತಮ್ಮ ಸ್ವವಿವರಗಳನ್ನು ಒಳಗೊಂಡ ಅರ್ಜಿಯನ್ನು ಉನ್ನತ ಶಿಕ್ಷಣ ಇಲಾಖೆಗೆ ಕಳುಹಿಸಿಕೊಟ್ಟಿದ್ದು, ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಕೆಲವರು ತಮಗೆ ಗೊತ್ತಿರುವ ರಾಜಕಾರಣಿಗಳ ಮೂಲಕ ಲಾಬಿ ನಡೆಸಿದ್ದಾರೆ.

ಡಾ.ಎನ್.ಪ್ರಭುದೇವ್ ಅವರ ರಾಜೀನಾಮೆಯಿಂದಾಗಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಕಳೆದ ಅ.16ರಂದು ತೆರವಾಗಿದೆ. ಆದರೆ, ಇದುವರೆಗೆ ನೂತನ ಕುಲಪತಿ ನೇಮಕಕ್ಕೆ ಅಗತ್ಯವಾದ ಶೋಧನಾ ಸಮಿತಿಯೇ ರಚನೆಯಾಗಿಲ್ಲ.

ಹಂಗಾಮಿ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರೊ.ರಂಗಸ್ವಾಮಿ ಅವಧಿ ಇದೇ 21ರಂದು ಮುಕ್ತಾಯವಾಗಿತ್ತು. ಆದರೆ, ನೂತನ ಕುಲಪತಿಯ ನೇಮಕಾತಿ ವಿಳಂಬ ಆಗಿರುವುದರಿಂದ ಪ್ರೊ.ರಂಗಸ್ವಾಮಿ ಅವರನ್ನೇ ಹಂಗಾಮಿ ಕುಲಪತಿಯನ್ನಾಗಿ ಮುಂದುವರಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಮುಕ್ತವಿಶ್ವವಿದ್ಯಾಲಯದ ಕುಲಪತಿಗಳ ಅವಧಿ ಇದೇ 10ರಂದು ಮುಕ್ತಾಯವಾಗಿದೆ. ಮೈಸೂರು ವಿ.ವಿ.ಯ ಕುಲಪತಿ ನೇಮಕ ಪ್ರಕ್ರಿಯೆಯ ಮೊದಲ ಹೆಜ್ಜೆಯಾಗಿ ನ.29ರಂದು ಶೋಧನಾ ಸಮಿತಿಯನ್ನು ರಚಿಸಲಾಗಿತ್ತು. ಆದರೆ ಇದುವರೆಗೆ ಸಮಿತಿಯ ಸಭೆ ನಡೆದಿಲ್ಲ.

ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿದ್ದ ಪ್ರೊ.ಗೋವರ್ಧನ್ ಮೆಹ್ತಾ ಅವರು ದೆಹಲಿಯಲ್ಲಿದ್ದು, ಸಭೆಗೆ ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಇದರಿಂದಾಗಿ ಅವರ ಸ್ಥಾನಕ್ಕೆ ಡಾ.ತಿಮ್ಮಯ್ಯ ಅವರನ್ನು ನೇಮಕ ಮಾಡಲಾಗಿದೆ. ಸಮಿತಿ ಅಧ್ಯಕ್ಷ ಡಾ.ಎಚ್.ಪಿ.ಖಿಂಚ ಅವರು ಸದ್ಯದಲ್ಲಿಯೇ ಶೋಧನಾ ಸಮಿತಿ ಸಭೆಯ ದಿನಾಂಕವನ್ನು ನಿಗದಿ ಮಾಡಲಿದ್ದಾರೆ ಎಂದು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ `ಪ್ರಜಾವಾಣಿ'ಗೆ ತಿಳಿಸಿದರು.

ಬೆಂಗಳೂರು ವಿ.ವಿ. ಮತ್ತು ಮುಕ್ತವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಗೆ ವಾರದಲ್ಲಿ ಶೋಧನಾ ಸಮಿತಿ ರಚನೆಯಾಗಲಿದೆ. ಸರ್ಕಾರದ ಕಡೆಯಿಂದ ಶೋಧನಾ ಸಮಿತಿಗೆ ಹೆಸರುಗಳು ಶಿಫಾರಸು ಆಗುವುದು ತಡವಾಗಿದ್ದರಿಂದ ಸಮಿತಿ ರಚನೆ ಆಗಿರಲಿಲ್ಲ. ಈಗ ಸರ್ಕಾರದ ಕಡೆಯಿಂದಲೂ ಹೆಸರುಗಳು ಶಿಫಾರಸು ಆಗಿವೆ. ಸದ್ಯದಲ್ಲೇ ಸಮಿತಿ ರಚನೆಯ ಆದೇಶ ಹೊರ ಬೀಳಲಿದೆ ಎಂದು ಅವರು ಹೇಳಿದರು.

ಪ್ರಬಲ ಲಾಬಿ: ಮೈಸೂರು ವಿ.ವಿ. ಶೋಧನಾ ಸಮಿತಿಯ ಸಭೆಯ ದಿನಾಂಕ ನಿಗದಿಯಾಗುವ ಮೊದಲೇ 60ಕ್ಕೂ ಅಧಿಕ ಅರ್ಜಿಗಳು ಬಂದಿವೆ. ದಿನಾಂಕ ನಿಗದಿಯಾದ ನಂತರ ಮತ್ತಷ್ಟು ಅರ್ಜಿಗಳು ಬರುವ ನಿರೀಕ್ಷೆ ಇದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ಬೆಂಗಳೂರು ವಿ.ವಿ., ಮುಕ್ತ ವಿ.ವಿ ಕುಲಪತಿ ಹುದ್ದೆಗೂ ಈಗಾಗಲೇ 25ಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ಎರಡೂ ವಿಶ್ವವಿದ್ಯಾಲಯಗಳ ಶೋಧನಾ ಸಮಿತಿ ಇನ್ನೂ ರಚನೆ ಆಗಿಲ್ಲ. ಹೀಗಾಗಿ ಸದ್ಯ ಆಕಾಂಕ್ಷಿಗಳ ಸಂಖ್ಯೆ ಕಡಿಮೆ ಇದೆ. ಕಾನೂನು ವಿ.ವಿ. ಸೇರಿದಂತೆ ಸದ್ಯ 4 ವಿ.ವಿ.ಗಳಿಗೆ ಕುಲಪತಿಗಳನ್ನು ನೇಮಕ ಮಾಡಬೇಕಾಗುತ್ತದೆ. 2013ರ ಏಪ್ರಿಲ್‌ನಲ್ಲಿ ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಯೂ ತೆರವಾಗಲಿದೆ. ಒಟ್ಟು 5 ಜನರಿಗೆ ಅವಕಾಶ ಲಭ್ಯವಾಗಲಿದ್ದು, ಸಹಜವಾಗಿಯೇ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ.

ಕಾನೂನು ವಿ.ವಿ.ಯದ್ದು ಮತ್ತೊಂದು ಗೋಳು
ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ. ಜೆ.ಎಸ್.ಪಾಟೀಲ ಅವರ ಅವಧಿ ಜನವರಿ 12ರಂದು ಮುಕ್ತಾಯವಾಗಲಿದೆ. ಆದರೆ, ಇದುವರೆಗೆ ನೂತನ ಕುಲಪತಿ ನೇಮಕಕ್ಕೆ ಪ್ರಕ್ರಿಯೆ ಆರಂಭವಾಗಿಲ್ಲ. ಹೀಗಾಗಿ ಕಾನೂನು ವಿಶ್ವವಿದ್ಯಾಲಯದ ಕುಲಪತಿ ನೇಮಕವೂ ವಿಳಂಬವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಕುಲಪತಿ ಹುದ್ದೆಗೆ ಮೂವರ ಹೆಸರು ಶಿಫಾರಸು ಮಾಡಲು ಶೋಧನಾ ಸಮಿತಿ ರಚನೆಯಾಗಬೇಕು. ಶೋಧನಾ ಸಮಿತಿಯಲ್ಲಿ ನಾಲ್ಕು ಮಂದಿ ಇರಲಿದ್ದು, ಒಬ್ಬರ ಹೆಸರನ್ನು ವಿಶ್ವವಿದ್ಯಾಲಯದ ಸಿಂಡಿಕೇಟ್ ಶಿಫಾರಸು ಮಾಡುತ್ತದೆ.

ಆದರೆ, ಸರ್ಕಾರ ಕಾನೂನು ವಿಶ್ವವಿದ್ಯಾಲಯದ ಸಿಂಡಿಕೇಟ್‌ಗೆ ಸದಸ್ಯರನ್ನು ನೇಮಕ ಮಾಡದೆ ಇರುವುದರಿಂದ ಕಳೆದ ಜುಲೈನಿಂದ ಸಿಂಡಿಕೇಟ್ ಸಭೆಯೇ ನಡೆದಿಲ್ಲ. ಹೀಗಾಗಿ ಶೋಧನಾ ಸಮಿತಿಗೆ ಹೆಸರು ಶಿಫಾರಸು ಮಾಡಲು ಸಾಧ್ಯವಾಗಿಲ್ಲ ಎಂದು ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು. ಶೋಧನಾ ಸಮಿತಿ ರಚನೆ ಆಗುವುದು ತಡವಾಗಿರುವುದರಿಂದ ಸಹಜವಾಗಿಯೇ ಕುಲಪತಿ ನೇಮಕ ವಿಳಂಬವಾಗಲಿದೆ. ಇದರ ಪರಿಣಾಮ ವಿ.ವಿ.ಯ ಆಡಳಿತದ ಮೇಲೂ ಬೀರಲಿದೆ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT