ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಳಿತಲ್ಲೇ ಕುಣಿಸಿದ ಜುಗಲ್‌ಬಂದಿ

Last Updated 1 ಅಕ್ಟೋಬರ್ 2012, 4:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸಂಜೆಯ ಸುಂದರ ರಾಗವಾದ ಶುದ್ಧ ಕಲ್ಯಾಣ್‌ವನ್ನು ಖ್ಯಾತ ಬಾನ್ಸುರಿ ವಾದಕ ಪ್ರವೀಣ ಗೋಡ್ಖಿಂಡಿ, ಪಂ. ರಘುನಾಥ ನಾಕೋಡ ಅವರೊಂದಿಗೆ ಪ್ರಸ್ತುತ ಪಡಿಸಿದಾಗ ಇಲ್ಲಿಯ ದೇಶಪಾಂಡೆನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಗಂಧರ್ವಲೋಕ ಸೃಷ್ಟಿಯಾಯಿತು.

ಕಲಾಶ್ರೀ ಅಕಾಡೆಮಿ ಆಫ್ ಮ್ಯೂಜಿಕ್ ಸಂಸ್ಥೆಯ ದಶಮಾನೋತ್ಸವ ಅಂಗವಾಗಿ ನಡೆದ ನಾಕೋಡ ಹಾಗೂ ಗೋಡ್ಖಿಂಡಿ ಅವರ ಕಛೇರಿಯಿಂದಾಗಿ ಸಂಗೀತಾಸಕ್ತರು ಹರ್ಷಗೊಂಡರು.

ಶುದ್ಧ ಕಲ್ಯಾಣ್ ರಾಗವನ್ನು ಪ್ರಬುದ್ಧತೆಯಿಂದ ಅದರ ಆಲಾಪ, ವಿಲಂಬಿತ್ ಗತ್ತು, ಮಧ್ಯಲಯ ಹಾಗೂ ಧೃತ್ ಗತ್ತುಗಳಲ್ಲಿ ಗೋಡ್ಖಿಂಡಿ ಮನಮೋಹಕವಾಗಿ ಪ್ರಸ್ತುತಪಡಿಸಿದರು. ಜೊತೆಗೆ ಕಿರಾಣಾ ಘರಾಣಾ ಶೈಲಿಯಲ್ಲಿ ಮೂಡಿ ಬಂದ ಬಾನ್ಸುರಿ ಕಾರ್ಯಕ್ರಮ ಪ್ರೇಕ್ಷಕರನ್ನು ಮಂತ್ರಮುಗ್ಧ ಗೊಳಿಸಿತು.

ಕೆಲ ಪ್ರೇಕ್ಷಕರು ತಲೆಯಲ್ಲಾಡಿಸುತ್ತ ಪ್ರತಿ ಕ್ರಿಯಿಸಿದರೆ, ಜುಗಲ್‌ಬಂದಿ ಏರುಗತಿ ತಲುಪಿದಾಗ ಕ್ಯಾ ಬಾತ್, ಎಕ್ಸ್‌ಲೆಂಟ್ ಎಂದು ಪ್ರೇಕ್ಷಕರು ಉದ್ಗರಿಸಿದರೆ, ಅನೇಕರು ಚಪ್ಪಾಳೆ ತಟ್ಟಿ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು.

 ಆಲಾಪದ ನಂತರ ಬಡತ್ ಖ್ಯಾಲ್, ಸಪಾಟ್‌ತಾಲ್, ಕಟ್ಕಾಮುರ್ಕಿ, ಫಿರತ್ ಎನ್ನುವ ಶೈಲಿಗಳನ್ನು ಗೋಡ್ಖಿಂಡಿಯವರು ಬಾನ್ಸುರಿಯಲ್ಲಿ ವ್ಯಕ್ತಪಡಿಸಿದಾಗ ನಾಕೋಡ ಅವರು, ತಮ್ಮ ತಬಲಾದಲ್ಲಿ ಲಯ ಚಮತ್ಕಾರ ತೋರಿಸಿದರು.

ಶುದ್ಧ ಕಲ್ಯಾಣ್ ರಾಗದ ನಂತರ ರಿಶಭ ಅಭೋಗಿ ರಾಗವನ್ನು ಮೊದಲಿಗೆ ರೂಪಕ ತಾಲ್‌ದಲ್ಲಿ ನಂತರ ತೀನ್ ತಾಲ್‌ದಲ್ಲಿ ಕೊನೆಗೆ ಧೃತ್ ತಾಲ್‌ನಲ್ಲಿ ಮುಕ್ತಾಯಗೊಳಿಸಿದರು.

ಹೀಗೆ ಬಾನ್ಸುರಿ ಹಾಗೂ ತಬಲಾದ ನಡುವೆ ನಡೆದ ಸವಾಲ್-ಜವಾಬ್‌ನಿಂದಾಗಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಾಸಕ್ತರು ಹಾಗೂ ಗೋಡ್ಖಿಂಡಿ ಯವರ ಅಭಿಮಾನಿಗಳು ಕುಳಿತಲ್ಲೇ ಕುಣಿದರು.

ಕಛೇರಿಗೆ ಮುನ್ನ ಮಾತನಾಡಿದ ಗೋಡ್ಖಿಂಡಿಯವರು, ಬಹಳ ವರ್ಷಗಳ ನಂತರ ಪಂ. ರಘುನಾಥ ನಾಕೋಡ ಅವರೊಂದಿಗೆ ಕಛೇರಿ ನಡೆಸುತ್ತಿರುವುದು ಸಂತೋಷ ತಂದಿದೆ. ಧಾರವಾಡದ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುವ ದಿನಗಳಿಂದಲೂ ಲಯದ ಕುರಿತು ನಾಕೋಡ ಅವರೊಂದಿಗೆ ಚರ್ಚಿಸುತ್ತಿದ್ದೆ ಎಂದರು.
ಅವರ ಕಛೇರಿಗೆ ಮುನ್ನ ಪಂ. ಶೇಷಗಿರಿ ಗುಡಿ ಅವರ ಗಾಯನವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT