ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಳಿತು ಓದಲು, ಬರೆಯಲು ಅಸಾಧ್ಯ

Last Updated 13 ಅಕ್ಟೋಬರ್ 2012, 9:00 IST
ಅಕ್ಷರ ಗಾತ್ರ

ಹೊಳೆಹೊನ್ನೂರು: ಇದು ಹೆಸರಿಗೆ ಮಾತ್ರ ಸಾರ್ವಜನಿಕ ಅಂಬೇಡ್ಕರ್ ಭವನ. ಆದರೆ, ಕುಳಿತು ಓದಲು, ಬರೆಯಲು, ಯಾವುದಾದರೂ ವಿಷಯ ಚರ್ಚೆ ಮಾಡಲು ಆಗದಷ್ಟು ಗಿಡಗಂಟಿ, ಕಸದರಾಶಿ, ಜತೆ ಭವನದ ಶೌಚಾಲಯದ ಗುಂಡಿ ತೆರೆದಿದ್ದು, ಕಟ್ಟಡದ ಸುತ್ತಮುತ್ತ ಸೊಳ್ಳೆಗಳ ಕಾಟದ ಜತೆ ರಸ್ತೆಯಲ್ಲಿ ಓಡಾಟ ಮಾಡದಷ್ಟು ಗಬ್ಬು ವಾಸನೆಯಿಂದ ಕೂಡಿದೆ!

ಪಟ್ಟಣದ ನೃಪತುಂಗ ವೃತ್ತದ ಬಳಿ ಇರುವ ಈ ಕಟ್ಟಡ ಸರ್ಕಾರದ ನೇರವಿನಲ್ಲಿ ಸುಮಾರು 12 ವರ್ಷಗಳ ಹಿಂದೆ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಿರ್ಮಿಸಿತ್ತು. ಆದರೆ, ಇಲ್ಲಿ ಯಾವ ಅಂಬೇಡ್ಕರ್ ಚಿಂತನೆ ನಡೆಯದೇ ಕೆಲವು ವರ್ಷ ಗ್ರಂಥಾಲಯ, ಅಂಗನವಾಡಿ ಕೇಂದ್ರ, ಗೃಹರಕ್ಷಕ ದಳದ ಕಚೇರಿಯಾಗಿ, ಈಗ ಕಾಲೇಜು ವಿದ್ಯಾರ್ಥಿಗಳು ಬಳಸುತ್ತಿದ್ದಾರೆ.

ಲಕ್ಷಾಂತರ ಹಣ ವ್ಯಯಮಾಡಿ ಕಟ್ಟಿದ ಈ ಕಟ್ಟಡಕ್ಕೆ ಶೌಚಾಲಯ ಇದ್ದು, ಅದರ ಗುಂಡಿ ತೆರೆದು ಕೊಂಡು ಸುಮಾರು ವರ್ಷಗಳೇ ಕಳೆದರೂ ಯಾವ ಇಲಾಖೆಯೂ ಗಮನ ಹರಿಸದಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಗ್ರಾಮದ ಹಾರ‌್ನಳ್ಳಿ ಗಜೇಂದ್ರಪ್ಪ ಅಸಮಾಧಾನ ವ್ಯಕ್ತಪಡಿಸುತ್ತಾರೆ.

`ಸರ್ಕಾರ ಊರಿಗೊಂದು ದೇವಾಲಯ, ಮನೆಗೊಂದು ಶೌಚಾಲಯ~ ಎನ್ನುವ ಘೋಷಣೆಯನ್ನು ಮಾಡಿದೆ. ಆದರೆ, ಸರಿಯಾದ ರೀತಿಯಲ್ಲಿ ನಿರ್ವಾಹಣೆ ಮತ್ತು ದುರಸ್ತಿ ಕಾರ್ಯ ಆಗದಿರುವುದಕ್ಕೆ ಈ ಕಟ್ಟಡವೇ ಸಾಕ್ಷಿ.
 ಡಾ.ಅಂಬೇಡ್ಕರ್ ಭವನಕ್ಕೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕ ಗ್ರಂಥಾಲಯ, ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪೌಢಶಾಲೆ, ವಿದ್ಯಾನಗರ ಮತ್ತು ಕರಿಯಮ್ಮ ದೇವಸ್ಥಾನಕ್ಕೆ, ಹೋಗುವ ರಸ್ತೆಯಲ್ಲಿದ್ದು, ನೃಪತುಂಗ ವೃತ್ತಕ್ಕೆ ಹೊಂದಿಕೊಂಡಿದೆ. ಕಾಲೇಜಿನ ಮೈದಾನದಲ್ಲಿ ಸಾರ್ವಜನಿಕ ಸಭೆ-ಸಮಾರಂಭಗಳು ನಡೆಯುತ್ತಿದ್ದು, ಈ ದಾರಿಯಲ್ಲಿ ಓಡಾಡುವವರಿಗೆ ಯಾವಾಗ ಬೇಕಾದರೂ ಅವಘಡಗಳು ಸಂಭವಿಸಲು ಹೇಳಿ ಮಾಡಿಸಿದ ಸ್ಥಳದಂತಿದೆ.

ಈ ವೃತ್ತದಲ್ಲಿ ಲಕ್ಷಾಂತರ ಹಣ ವ್ಯಯಮಾಡಿ ಕಟ್ಟಿದ ಶೌಚಾಲಯಗಳು ಒಂದೆಡೆ ನಿರುಪಯುಕ್ತವಾದರೆ, ಇನ್ನೊಂದೆಡೆ ಶೌಚಾಲಯವಿಲ್ಲದೇ ಜನ ಪರಿತಪಿಸುವಂತಾಗಿದೆ. ಹಾಗಾಗಿ ಕಾಲೇಜು ಆವರಣದಲ್ಲಿ ಮತ್ತು ಕೊಠಡಿಗಳ ಕಟ್ಟೆಯ ಮೇಲೆ ಕಾಲೇಜು ಸುತ್ತಮುತ್ತಲ ಗ್ರಾಮಸ್ಥರು ಮಲ-ಮೂತ್ರ ಮಾಡುವುದು ಸಾಮಾನ್ಯವಾಗಿದೆ. ಈ ಬಗ್ಗೆ ಕಾಲೇಜು ವಿದ್ಯಾರ್ಥಿಗಳು ಗ್ರಾ.ಪಂ. ಎದುರು ಪ್ರತಿಭಟಿಸಿದರೂ ಪ್ರಯೋಜನವಾಗಿಲ್ಲ.

ಕೇಂದ್ರ ಮತ್ತು ರಾಜ್ಯ ಸರ್ಕಾರ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳು ಸೇರಿದಂತೆ ಕಡ್ಡಾಯವಾಗಿ ಶೌಚಾಲಯಗಳು ಇರಬೇಕು ಎಂದು ಆದೇಶ ಇದ್ದರೂ ಶೌಚಾಲಯದ ಗುಂಡಿಯ ದುರಸ್ತಿ ಮಾಡದೇ ಸಂಬಂಧಿಸಿದ ಇಲಾಖೆ ಮೌನವಹಿಸಿರುವುದು ಸೋಜಿಗದ ಸಂಗತಿ. ಶೌಚಾಲಯದ ಗುಂಡಿ ದುರಸ್ತಿ ಜತೆ ನೀರು ಮತ್ತು ಸ್ವಚ್ಛತೆ ಕಾಪಾಡುವ ರೀತಿಯಲ್ಲಿ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT