ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಕವಿತೆಗಳಲ್ಲಿ ಪ್ರತಿಭಟಿಸುವ ಆಶಯ

Last Updated 30 ಡಿಸೆಂಬರ್ 2010, 10:35 IST
ಅಕ್ಷರ ಗಾತ್ರ

ಬೆಂಗಳೂರು: ‘ಅನ್ಯಾಯ ಕಂಡು ಪ್ರತಿಭಟಿಸುವ ಆಶಯ ಹೊಂದಿದ ಹಲವಾರು ಕವಿತೆಗಳನ್ನು ಕುವೆಂಪು ಅವರು ರಚಿಸಿದ್ದಾರೆ’ ಎಂದು ಹಿರಿಯ ಸಾಹಿತಿ ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯ ಅಭಿಪ್ರಾಯಪಟ್ಟರು.ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಬುಧವಾರ ಪರಿಷತ್ತು ಏರ್ಪಡಿಸಿದ್ದ ಕುವೆಂಪು ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಕಾರ್ಯಕ್ರಮ ವೊಂದರಲ್ಲಿ ವಿನೋಭಾ ಭಾವೆ ಅವರ ಬಗ್ಗೆ ಹಗುರವಾಗಿ ಮಾತನಾಡಿದರೆಂಬ ಕಾರಣಕ್ಕೆ ಅಂದಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಭಾಷಣವನ್ನೇ ಅರ್ಧಕ್ಕೆ ನಿಲ್ಲಿಸುವ ದಿಟ್ಟ ಕ್ರಮ ಕೈಗೊಂಡಿದ್ದರು’ ಎಂದು ಸ್ಮರಿಸಿದರು.

‘ಏಕಾಗ್ರಚಿತ್ತ ಅವರ ಅಧ್ಯಯನದ ಮೂಲವಾಗಿತ್ತು. ಅವರ ಯಮನಸೋಲು ನಾಟಕವನ್ನು ರಾತ್ರಿ ಏಳು ಗಂಟೆಯಿಂದ ಬೆಳಗಿನ ಜಾವ 4ಕ್ಕೆ ಬರೆದು ಮುಗಿಸಿದರು. ಈ ಘಟನೆ ಅವರ ಏಕಾಗ್ರತೆಯನ್ನು ಬಿಂಬಿಸುತ್ತದೆ. ಅವರ ಅಧ್ಯಯನ ಮುಗಿಯುವವರೆಗೂ ಕಾಯ್ದು ಅವರ ಊಟೋಪಚಾರ ನೋಡಿಕೊಳ್ಳುತ್ತಿದ್ದ ಅವರ ಹೆಂಡತಿಯ ನಿಧನಾನಂತರ ಅವರ ಬರವಣಿಗೆ ನಿಂತೇ ಹೋಯಿತು’ ಎಂದು ಅವರು ಸ್ಮರಿಸಿದರು.

‘ಕನ್ನಡದ ಉತ್ಕಟ ಅಭಿಮಾನಿಯಾಗಿದ್ದ ಅವರು, ಕನ್ನಡಕ್ಕೆ ಧಕ್ಕೆಯಾದಾಗ ಪ್ರತಿಭಟಿಸಿದರು. ಆದ್ದರಿಂದಲೇ ಅವರನ್ನು ಇಂದಿಗೂ ನಾವು ಸ್ಮರಿಸುತ್ತೇವೆ’ ಎಂದು ಅವರು ನೆನಪಿಸಿ ಕೊಂಡರು. ಇದೇ ಸಂದರ್ಭದಲ್ಲಿ ಅವರು ಕುವೆಂಪು ಕುರಿತ ಕಾವ್ಯವನ್ನು ವಾಚಿಸಿದರು.ಕ.ಸಾ.ಪ. ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಸಿ.ಕೆ.ರಾಮೇಗೌಡ ಮಾತನಾಡಿ, ‘ಅವರ ಪ್ರಯತ್ನದಿಂದಲೇ ಮಂತ್ರ ಮಾಂಗಲ್ಯದಂತಹ ಸರಳ ವಿವಾಹ ಪದ್ಧತಿಗಳು ಹಳೆ ಮೈಸೂರು ಭಾಗದಲ್ಲಿ ಆಚರಣೆಯಲ್ಲಿ ಬಂದವು. ಅಲ್ಲದೇ ಮೊದಲ ಬಾರಿಗೆ ಅವರೇ ಕರಪತ್ರ ಪ್ರಕಟಣೆಗೆ ಧನಸಹಾಯ ಮಾಡಿದ ಮೊಟ್ಟ ಮೊದಲ ವ್ಯಕ್ತಿ’ ಎಂದು ನುಡಿದರು.

ನಂತರ ನಡೆದ ಕವಿಗೋಷ್ಠಿಯಲ್ಲಿ ಕವಿಗಳು ಕವಿತೆ ವಾಚನ ಮಾಡಿದರು. ಕಸಾಪ ರಾಜ್ಯ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್ ವೇದಿಕೆಯಲ್ಲಿದ್ದರು.
‘ನಾಡಿನ ಸಾಂಸ್ಕೃತಿಕ ನಾಯಕ ಕುವೆಂಪು’‘ಕುವೆಂಪು ಅವರನ್ನು ಕವಿ, ಕಾದಂಬರಿಕಾರ, ವಿಮರ್ಶಕ, ನಾಡಿನ ಸಾಂಸ್ಕೃತಿಕ ನಾಯಕ ಎಂದು ಕನ್ನಡದ ಮನಸ್ಸುಗಳು ಒಪ್ಪಿಕೊಂಡಿವೆ. ಅವರು ಕನ್ನಡ ನಾಡಿನ ಸೃಜನಶೀಲ ಬರವಣಿಗೆಗಾರರು’ ಎಂದು ಈಶಾನ್ಯ ವಿಭಾಗದ ಡಿಸಿಪಿ ಬಿ.ಆರ್.ರವಿಕಾಂತೇಗೌಡ ಸ್ಮರಿಸಿದರು.

ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್-ಕೃಷ್ಣಾಪುರದೊಡ್ಡಿ, ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದಲ್ಲಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕುವೆಂಪು ನೆನಪು ಮತ್ತು ಎಂ.ಬೈರೇಗೌಡ ಅವರ ‘ಯಾರೂ ಮುಖ್ಯರಲ್ಲ... ಮಲೆಗಳಲ್ಲಿ ಮದುಮಗಳು ರಾತ್ರಿಪೂರ ರಂಗಪ್ರಯೋಗ: ಕೆಲವು ಗ್ರಹಿಕೆಗಳು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಕುವೆಂಪು ಅವರಂತೆ ನೇರವಾಗಿ, ದಿಟ್ಟವಾಗಿ ಪುರೋಹಿತಶಾಹಿಯನ್ನು ವಿರೋಧಿಸಿ ಬರೆದ ಕವಿ, ದಾರ್ಶನಿಕರು ಕನ್ನಡ ನಾಡಲ್ಲಿ ಮತ್ತೊಬ್ಬರಿಲ್ಲ. ಇತಿಹಾಸದ ಮಾಯದ ಗಾಯಗಳಂತೆ ಸದಾ ನೆನಪು ತರಿಸುವಂತಹುಗಳು ಕುವೆಂಪು ಅವರ ಬರಹಗಳು’ ಎಂದು ಅಭಿಪ್ರಾಯಪಟ್ಟರು.‘ಅವರ ಸೃಜನಶೀಲ ಬರವಣಿಗೆಯು ಸಾಹಿತ್ಯ ಲೋಕಕ್ಕೆ ಹೊಸತನವನ್ನು ನೀಡಿದೆ. ಕುವೆಂಪು ಅವರು ಎಲ್ಲರ ಮನಸ್ಸುಗಳನ್ನು ತಟ್ಟುವ ಅತಿ ದೊಡ್ಡ ಪ್ರಜ್ಞೆಯಾಗಿ ಇಂದಿಗೂ ಉಳಿದುಕೊಂಡಿದ್ದಾರೆ. ಅವರ ಕವಿತೆಗಳು, ಕಾದಂಬರಿಗಳು, ನಾಟಕಗಳು ಓದುಗರಲ್ಲಿ ಬೆರಗನ್ನು ಉಂಟು ಮಾಡದೇ ಇರಲಾರವು. ಜನ್ಮಾಂತರಗಳ ಕಲ್ಪನೆ, ಪುನರ್‌ಜನ್ಮದ ಬಗ್ಗೆ ಎಲ್ಲಾ ಕಾದಂಬರಿಗಳಲ್ಲಿ ಸೃಜನಶೀಲ ಕ್ರಿಯೆಯಾಗಿ ಬರೆದಿದ್ದಾರೆ. ಅದು ಕೃತಕವೆಂದು ಎಲ್ಲಿಯೂ ಅನ್ನಿಸುವುದಿಲ್ಲ’ ಎಂದರು.

‘ಕುವೆಂಪು ಅವರು ಮಠ ಮಾನ್ಯಗಳನ್ನು, ಮಸೀದಿಗಳನ್ನು ವಿರೋಧಿ. ಅವರ ವೈಚಾರಿಕತೆಯ ಸ್ವರೂಪ ಶೂನ್ಯವನ್ನು ಸೃಷ್ಟಿ ಮಾಡುವಂತಹದ್ದಲ್ಲ. ಕನ್ನಡ ನಾಡಿನಲ್ಲಿ ವೈಚಾರಿಕ ಪ್ರಜ್ಞೆ ಮತ್ತು ನೆಲೆಯನ್ನು ಹುಟ್ಟಿ ಹಾಕಿದವರು. ಅವರ ಬರವಣಿಗೆಗಳನ್ನು ಸೃಜನಶೀಲವಾಗಿ ಮತ್ತು ವಿಮ ರ್ಶಾತ್ಮಕವಾಗಿ ನೋಡುವಂತಹ ಕೆಲಸ ಇತ್ತೀಚಿನ ದಿನಗಳಲ್ಲಿ ಮಾತ್ರ ನಡೆಯುತ್ತಿದೆ’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕಾ.ತ.ಚಿಕ್ಕಣ್ಣ ಮಾತನಾಡಿ, ‘ಜನರು ಸ್ಪಂದನೆ, ಭಾವೋ ದ್ವೇಗ ಕಳೆದುಕೊಳ್ಳುವಂತಹ ಸಂದರ್ಭದಲ್ಲಿ ಕುವೆಂಪು ಅವರ ಬರಹಗಳು ಇಂದಿಗೂ ಪ್ರತಿಯೊಬ್ಬರ ಮನಸ್ಸನ್ನು ರೋಮಾಂಚನಗೊಳಿಸುತ್ತಿವೆ. ಆದರೆ ಅವರು ಹುಟ್ಟಿ, ಬೆಳೆದ ಮಲೆನಾಡಿನ ಪರಿಸರವನ್ನು ಹಾಳು ಮಾಡಲಾಗುತ್ತಿದೆ’ ಎಂದು ವಿಷಾದಿಸಿದರು.

‘ವಿಚಾರಗಳನ್ನು ಅರಿಯುವ ಮೂಲಕ ಜೀವನದಲ್ಲಿನ ಕರಿನೆರಳನ್ನು ಹೊಡೆದೋಡಿಸಿ, ಮುದ ನೀಡುವ ವಿಚಾರ ಧಾರೆಗಳನ್ನು ಮೈಗೂಡಿಸಿಕೊಳ್ಳಬೇಕು. ರಂಗ ಭೂಮಿಯ ಹೊಸ ಆಯಾಮಗಳು ನಾಟಕ ರಂಗದಲ್ಲಿ ಸ್ಪಷ್ಟ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿವೆ’ ಎಂದರು.ಹಂಸಲೇಖ ದೇಸಿ ಶಿಕ್ಷಣ ಸಂಸ್ಥೆ ಕಲಾವಿದರು ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಅವರು ಮಲೆಗಳಲ್ಲಿ ಮದುಮಗಳು ನಾಟಕದ ಗೀತೆಗಳ ಗಾಯನ ಪ್ರಸ್ತುತ ಪಡಿಸಿ, ಪ್ರೇಕ್ಷಕರ ಮೆಚ್ಚುಗೆ ಪಡೆದರು.ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಬಿ.ವಿ. ರಾಜಾರಾಂ, ಕವಿ ಡಾ. ಕೆ.ವೈ.ನಾರಾಯಣಸ್ವಾಮಿ, ಮಲೆ ಗಳಲ್ಲಿ ಮದುಮಗಳು ನಾಟಕದ ನಿರ್ದೇಶಕ ಬಸವ ಲಿಂಗಯ್ಯ, ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್‌ನ ಕಾರ್ಯದರ್ಶಿ, ಲೇಖಕ ಎಂ.ಬೈರೇಗೌಡ ಇತರರು ಉಪಸ್ಥಿತರಿದ್ದರು.

ಸಾರಿಗೆ ಸಂಸ್ಥೆಯಿಂದ ಕುವೆಂಪು ಜನ್ಮದಿನೋತ್ಸವ
‘ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ದೇಶದ ಸಾರಿಗೆ ವ್ಯವಸ್ಥೆಯಲ್ಲೇ ಅಗ್ರ ಸ್ಥಾನ ಪಡೆದಿದೆ’ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗೌರವ ಗುಪ್ತ ತಿಳಿಸಿದರು.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕನ್ನಡ ಕ್ರಿಯಾ ಸಮಿತಿಯ ಬೆಂಗಳೂರು ಕೇಂದ್ರೀಯ ವಿಭಾಗವು ನಗರದ ವಿಭಾಗೀಯ ಕಾರ್ಯಾಗಾರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕುವೆಂಪು  ಜನ್ಮದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ರಾಜ್ಯ ಸಾರಿಗೆ ಸಂಸ್ಥೆ ಹೊಸ ಆಯಾಮಗಳನ್ನು ಪಡೆದು ಪ್ರಗತಿ ಪಥದತ್ತ ಮುನ್ನುಗ್ಗುತ್ತಿದೆ. ವಿಶ್ವ ದರ್ಜೆಯ ವಿವಿಧ ವಿನ್ಯಾಸದ ಬಸ್‌ಗಳು ರಾಜ್ಯದಲ್ಲಿ ಸಂಚರಿಸುತ್ತಿವೆ.ಅಲ್ಲದೇ ಸುಸಜ್ಜಿತ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಆರೋಗ್ಯ, ಸುರಕ್ಷತೆ ಮತ್ತು ಪರಿಸರ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಇತರೆ ರಾಜ್ಯಗಳಿಗೆ ಸಂಸ್ಥೆ ಮಾದರಿಯಾಗಿದೆ’ ಎಂದರು.

‘ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಜನರಿಗೆ ಉತ್ತಮ ಸೇವೆ ನೀಡುತ್ತಿರುವುದರಿಂದ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪುರಸ್ಕಾರಗಳು ಸಂದಿವೆ. ಇದಕ್ಕೆ ಸಾರಿಗೆ ಸಂಸ್ಥೆಯ ಕಾರ್ಮಿಕರ ಶ್ರಮವೇ ಕಾರಣ’ ಎಂದು ಶ್ಲಾಘಿಸಿದರು.‘ಸಾರಿಗೆ ಸಂಸ್ಥೆಯಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಹಾಗೆಯೇ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕಗಳಿಸಿದ ಸಿಬ್ಬಂದಿ ಮಕ್ಕಳಿಗೆ ನೀಡುವ ಪ್ರೋತ್ಸಾಹ ಧನವನ್ನು 1,500 ರಿಂದ 4000 ರೂಪಾಯಿಗೆ ಹೆಚ್ಚಿಸಲಾಗಿದೆ’  ಎಂದು ತಿಳಿಸಿದರು.

‘ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಗುಣಮಟ್ಟದ, ಉತ್ತಮ ಸೌಲಭ್ಯಗಳುಳ್ಳ ಬಸ್‌ಗಳನ್ನು ಹೆಚ್ಚಿಸಲಾಗುವುದು. ರಾಜ್ಯ ಸಾರಿಗೆ ಸಂಸ್ಥೆ ಅಭಿವೃದ್ಧಿ ಹೊಂದಲು ಶ್ರಮ ವಹಿಸಲಾಗುವುದು. ಇದಕ್ಕೆ ಕಾರ್ಮಿಕರ ಸಹಕಾರ ಬಹಳ ಮುಖ್ಯ. ಹಾಗಾಗಿ ಸಾರಿಗೆ ಸಂಸ್ಥೆಯ ಬೆಳವಣಿಗೆಗೆ ಪ್ರತಿಯೊಬ್ಬರೂ ಶ್ರಮಿಸಬೇಕು’ ಎಂದರು.

ಅಂಕಣಕಾರ ಷಡಕ್ಷರಿ, ಗಾಯಕ ಬಾನಂದೂರು ಕೆಂಪಯ್ಯ, ರಾಜ್ಯ ನಗೆ ಕೂಟದ ಅಧ್ಯಕ್ಷ ಪ್ರೊ. ಪಿ.ಸದಾಶಿವ್, ಸಾಹಿತಿ ಡಾ. ಕೋ.ವೆಂ.ರಾಮಕೃಷ್ಣಗೌಡ, ಬೆಂಗಳೂರು ಕೇಂದ್ರೀಯ  ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಸಿ.ಗಂಗಣ್ಣಗೌಡ, ಕಾರ್ಮಿಕ ಕಲ್ಯಾಣಾಧಿಕಾರಿ ವಿಜಯ್‌ಕುಮಾರ್, ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ವ.ಚ.ಚನ್ನೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT