ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಕೃತಿಗಳ ಚರ್ಚೆ ನಡೆಯಬೇಕಿದೆ

Last Updated 8 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ರಾಷ್ಟ್ರಕವಿ ಕುವೆಂಪು ಅವರ ಕೃತಿಗಳು ಇಂಗ್ಲಿಷ್ ಭಾಷೆಗೆ ಅತ್ಯುತ್ತಮವಾಗಿ ಭಾಷಾಂತರವಾಗಬೇಕು~ ಎಂದು ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಅಭಿಪ್ರಾಯಪಟ್ಟರು. ಅಕ್ಷರ ಪ್ರಿಂಟರ್ಸ್‌ ಪಬ್ಲಿಷರ್ಸ್‌ ಸಂಸ್ಥೆಯು ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ. ಹಂಪ ನಾಗರಾಜಯ್ಯ ಅವರ 100ನೇ ಕೃತಿ `ಕುವೆಂಪು ವಿಗ್ನೆಟ್ಸ್ ಆಫ್ ಮ್ಯಾನ್ ಅಂಡ್ ಮಿಷನ್~ ಕೃತಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

`ರವೀಂದ್ರನಾಥ ಟ್ಯಾಗೋರ್ ಹಾಗೂ ಕುವೆಂಪು ಶ್ರೇಷ್ಠ ಸಾಹಿತಿಗಳು. ಅವರ ಸಾಹಿತ್ಯದಲ್ಲಿ ಗಟ್ಟಿಯಾದ ವಸ್ತು ವಿಷಯವಿರುತ್ತದೆ. ಆ ವಸ್ತುವಿಗೆ ಒಂದು ಧ್ವನಿ ಇರುತ್ತದೆ. ಹಾಗಾಗಿ ಅವರ ಕೃತಿಗಳಿಗೆ ಇಂದಿಗೂ ಮಹತ್ವವಿದೆ~ ಎಂದರು.

`ಕನ್ನಡಕ್ಕೆ ಶಾಸ್ತ್ರೀಯ ಸಾಹಿತ್ಯವಿದೆ. ಅದನ್ನು ಸಂಪೂರ್ಣವಾಗಿ ಗ್ರಹಿಸಿ ಸಾಹಿತ್ಯ ರಚಿಸಿದವರು ಕುವೆಂಪು. ಅವರಿಗೆ ಕನ್ನಡ ಪರಂಪರೆಯನ್ನು ಮುಂದುವರಿಸಬೇಕಾದ ಜವಾಬ್ದಾರಿಯಿತ್ತು. ಅದನ್ನು ಸಮರ್ಥವಾಗಿಯೇ ಅವರು ನಿರ್ವಹಿಸಿದರು~ ಎಂದು ಸ್ಮರಿಸಿದರು.

`ಯುವಕರು ಕುವೆಂಪು ಅವರ ಕೃತಿಗಳನ್ನು ಓದುವ ಮೂಲಕವೇ ಅವರು ಶ್ರೇಷ್ಠ ಸಾಹಿತಿ ಎಂಬುದನ್ನು ಅರಿಯಬೇಕಾಗುತ್ತದೆ. ಹಾಗಾಗಿ ಕುವೆಂಪು ಅವರ ಎಲ್ಲ ಕೃತಿಗಳು ಭಾಷಾಂತರವಾಗಬೇಕು. ಆ ಭಾಷಾಂತರ ಕೃತಿಗಳು ವಿದೇಶಗಳಲ್ಲಿ ಪ್ರಕಟವಾಗುವಂತಾಗಬೇಕು~ ಎಂದು ಹೇಳಿದರು.

ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ, `ಕುವೆಂಪು ಅವರ ಕೃತಿಗಳು ಹೆಚ್ಚು ಪ್ರಚಾರವಾಗಬೇಕಿದೆ. ಅದರಲ್ಲೂ ಇಂಗ್ಲಿಷ್‌ನಲ್ಲಿ ಕೃತಿಗಳ ಕುರಿತು ಚರ್ಚೆ ನಡೆಯಬೇಕಿದೆ. ಇಲ್ಲದಿದ್ದರೆ ಭಾರತೀಯ ಸಾಹಿತ್ಯ ಚರಿತ್ರೆ ಕುರಿತ ಗ್ರಹಿಕೆಯೇ ತಪ್ಪಾಗಲಿದೆ~ ಎಂದರು.

ಐದು ವರ್ಷಕ್ಕೊಮ್ಮೆ ಭಾಷಾಂತರವಾಗಲಿ: `ಕುವೆಂಪು ಅವರ ಶ್ರೇಷ್ಠವಾದ `ಮಲೆಗಳಲ್ಲಿ ಮದುಮಗಳು~ ಕಾದಂಬರಿಯು ಐದು ವರ್ಷಕ್ಕೊಮ್ಮೆ ಇಂಗ್ಲಿಷ್‌ನಲ್ಲಿ ಹೊಸದಾಗಿ ಭಾಷಾಂತರವಾಗಬೇಕು. ಆ ಮೂಲಕ ಕೃತಿಯನ್ನು ಸಮಕಾಲೀನಗೊಳಿಸಿ, ಹೊಸ ಓದುಗರ ಮುಂದಿಡಬೇಕು~ ಎಂದು ಹೇಳಿದರು.

ವಿಮರ್ಶಕ ಪ್ರೊ.ಓ.ಎಲ್. ನಾಗಭೂಷಣಸ್ವಾಮಿ, `ಕನ್ನಡ ಸಾಹಿತ್ಯ ಪರಂಪರೆಯನ್ನು ಸೃಷ್ಟಿಸಿಕೊಟ್ಟವರು ಕುವೆಂಪು ಎಂದರೆ ತಪ್ಪಾಗಲಾರದು. ಅವರ ಬರವಣಿಗೆಯ ವೈಖರಿಯನ್ನು ನೋಡಿದರೆ ಅಚ್ಚರಿ ಮೂಡುತ್ತದೆ. ಅವರ ವಿಮರ್ಶಾ ಭಾಷೆಯಲ್ಲೂ ಕಲಾತ್ಮಕತೆಯನ್ನು ಕಾಣಬಹುದು. ಅವರ ಮಲೆಗಳಲ್ಲಿ ಮದುಮಗಳು ಕೃತಿಯಲ್ಲಿ ಸದಾ ಆರಂಭ ಕಾಣುತ್ತದೆಯೇ ಹೊರತು ಅಂತ್ಯವೇ ಇರುವುದಿಲ್ಲ~ ಎಂದರು.

`ಕನ್ನಡ ಬಾರದವರಿಗೆ ಕುವೆಂಪು ಅವರ ಬಗ್ಗೆ ಅರಿಯಲು ಹಂಪ ನಾಗರಾಜಯ್ಯ ಅವರ ಕೃತಿ ಉಪಯುಕ್ತವಾಗಿದೆ. ಈ ರೀತಿಯ ಇನ್ನಷ್ಟು ಕೃತಿಗಳು ಪ್ರಕಟವಾಗಬೇಕು~ ಎಂದು ಹೇಳಿದರು.ಕೃತಿಯ ಕರ್ತೃ ಹಂಪ ನಾಗರಾಜಯ್ಯ, `ಹೊಸಗನ್ನಡ ಸಾಹಿತ್ಯಕ್ಕೆ ತೇಜಸ್ಸು ನೀಡಿದವರು ಕುವೆಂಪು. ನಾವು ಅನ್ಯ ಭಾಷೆಗಳಿಂದ ಕನ್ನಡಕ್ಕೆ ಪಡೆದ ಕೃತಿಗಳಲ್ಲಿ 10ನೇ ಒಂದು ಭಾಗದಷ್ಟು ಕನ್ನಡ ಕೃತಿಗಳು ಕೂಡ ಅನ್ಯ ಭಾಷೆಗಳಿಗೆ ಭಾಷಾಂತರವಾಗಿಲ್ಲ. ಹಾಗಾಗಿ ಕನ್ನಡ ಸಾಹಿತ್ಯಕ್ಕೆ ಸಿಗಬೇಕಾದ ಮಾನ್ಯತೆ ದೊರೆತಿಲ್ಲ~ ಎಂದು ವಿಷಾದಿಸಿದರು.

`10ನೇ ಶತಮಾನದಲ್ಲಿದ್ದ ಪಂಪ ಹಾಗೂ 20ನೇ ಶತಮಾನದ ಕುವೆಂಪು ಅವರ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಹಾಗಾಗಿ ಕುವೆಂಪು ಅವರು ನಾಡಿನ ಉದ್ದಗಲಕ್ಕೂ ಮನೆ ಮಾತಾಗಿದ್ದಾರೆ. ಸಾಹಿತ್ಯಿಕ ಮತ್ತು ಸಾಂಸ್ಕೃತಿಕವಾಗಿ ಹಾಸುಹೊಕ್ಕಾಗಿದ್ದಾರೆ~ ಎಂದು ಬಣ್ಣಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT