ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು, ಟ್ಯಾಗೋರ್ ಬರಹ ಇಂದಿಗೆ ಹೆಚ್ಚು ಪ್ರಸ್ತುತ

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ರವೀಂದ್ರನಾಥ ಟ್ಯಾಗೋರ್ ಅವರ ಬರಹ ಲೌಕಿಕ ಕಾಳಜಿಯುಳ್ಳ ಧಾರ್ಮಿಕ ದರ್ಶನವಾಗಿತ್ತು. ಹಾಗಾಗಿ ಇಂದಿಗೂ ಅವರ ಸಾಹಿತ್ಯದ ಮರು ಓದು ಸಾಧ್ಯವಿದೆ~ ಎಂದು ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಅಭಿಪ್ರಾಯಪಟ್ಟರು.

ಅಂಕಿತ ಪುಸ್ತಕವು ನಗರದ ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ `ಕವಿ ರವೀಂದ್ರ~ ಟ್ಯಾಗೋರ್ ಕವಿತೆಗಳ ಸಂಗ್ರಹ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

`ಟ್ಯಾಗೋರರಂತೆ ಕುವೆಂಪು ಅವರು ಕನ್ನಡದಲ್ಲಿ ಉತ್ಕೃಷ್ಟ ಸಾಹಿತ್ಯ ರಚಿಸಿದರು. ಮಠ- ಮಾನ್ಯಗಳು ಧಾರ್ಮಿಕ ದರ್ಶನವನ್ನು ಕಳೆದುಕೊಂಡಿರುವ ಈ ಸಂದರ್ಭದಲ್ಲಿ ಕುವೆಂಪು, ಟ್ಯಾಗೋರರ ಬರಹಗಳು ಹೆಚ್ಚು ಪ್ರಸ್ತುತವಾಗುತ್ತಿವೆ, ಇಂದಿಗೂ ಮರು ಓದು ಸಾಧ್ಯವಾಗಿದೆ~ ಎಂದರು.

`ಕವಿತೆ ಎಂದರೆ ಒಂದು ಭಾಷೆಯನ್ನು ಜೀವಂತವಾಗಿ ಉಳಿಸಿಕೊಳ್ಳುವ ಪ್ರಕ್ರಿಯೆ. ಅನುವಾದವು ಮೂಲ ಕವಿತೆಯ ಹತ್ತಿರಕ್ಕೆ ಹೋಗುವ ಪ್ರಯತ್ನವಾಗಿರುತ್ತದೆ. ಈ ರೀತಿಯ ಪ್ರಯತ್ನ ಕನ್ನಡದಲ್ಲಿ ಉತ್ತಮವಾಗಿ ನಡೆಯುತ್ತಿದೆ~ ಎಂದರು.

ಯು.ಆರ್. ಅನಂತಮೂರ್ತಿ ಅವರ `ಪ್ರಜ್ಞೆ ಮತ್ತು ಪರಿಸರ~ ವಿಮರ್ಶಾ ಸಂಕಲನದ ನಾಲ್ಕನೇ ಮುದ್ರಣವನ್ನು ಬಿಡುಗಡೆ ಮಾಡಿದ ವಿಮರ್ಶಕ ಓ.ಎಲ್. ನಾಗಭೂಷಣ ಸ್ವಾಮಿ, `ಅನಂತಮೂರ್ತಿ ಅವರು ಹಲವು ವಿಷಯಗಳಲ್ಲಿ ಮಾದರಿ ಎನಿಸಿದ್ದಾರೆ. ಬರಹಗಾರರಿಗೆ ಅವರು ಮೀರಬಹುದಾದ ಗಡಿ, ಜಗಳವಾಡಬಹುದಾದ ಮುಖ್ಯ ವ್ಯಕ್ತಿಯಾಗಿ ಕಾಣುತ್ತಾರೆ. ನಾಲ್ಕು ದಶಕಗಳಲ್ಲಿನ ಅವರ ಬರಹ ಕನ್ನಡದ ಬೌದ್ಧಿಕ ಪರಿಸರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ~ ಎಂದು ಬಣ್ಣಿಸಿದರು.

`ಅವರ ಬರವಣಿಗೆ ಯಾವುದೇ ವಿಂಗಡನೆಗೆ ಒಳಪಟ್ಟ ಪ್ರಕಾರವಲ್ಲ. ಸಾಹಿತ್ಯದ ಪ್ರಕಾರಗಳನ್ನು ಮೀರಿ ಅವರು ಬರೆದಿದ್ದಾರೆ. ಒಂದು ಸಂಗತಿಯನ್ನು ಬೇರೆ ಬೇರೆ ಮಗ್ಗಲುಗಳ ಮೂಲಕ ಗ್ರಹಿಸಿ ಸಮಗ್ರವಾಗಿ ಬರೆಯುತ್ತಾರೆ. ಹಾಗಾಗಿ ಕತೆ, ಕವನ ಎಂದು ವಿಂಗಡಣೆ ಮಾಡಿಕೊಂಡು ಪ್ರಕಾರಕ್ಕೆ ಬದ್ಧವಾಗಿ ಬರೆಯುವವರಿಗೆ ಅನಂತಮೂರ್ತಿ ಅವರನ್ನು ಅನುಕರಿಸಲು ಕಷ್ಟವಾಗಬಹುದು~ ಎಂದರು.

`ಕವಿ ರವೀಂದ್ರ~ ಕೃತಿಯ ಸಂಪಾದಕರಾದ ಜ.ನಾ. ತೇಜಶ್ರೀ, `ಟ್ಯಾಗೋರರ `ಗೀತಾಂಜಲಿ~ಯ ಕವನಗಳು ಅನುವಾದಗೊಂಡಷ್ಟು ಬೇರೆ ಕವನಗಳು ಅನುವಾದವಾಗಿಲ್ಲ. ಹಾಗಾಗಿ ಅಷ್ಟು ಪರಿಚಿತವಲ್ಲದ ಕವಿತೆಗಳನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ~ ಎಂದು ಹೇಳಿದರು.

ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿ ನಿರೂಪಿಸಿದರು. ಎರಡೂ ಕೃತಿಗಳ ಬೆಲೆ ತಲಾ 150 ರೂಪಾಯಿ.

ಬೇಸರ ತಂದ ಫಿಲಂ
`ಮಾಜಿ ಸಚಿವರು ಸದನದಲ್ಲಿ `ಬ್ಲೂ ಫಿಲಂ~ ವೀಕ್ಷಿಸಿದ ಘಟನೆ ಬೇಸರ ಮೂಡಿಸಿದೆ. ಅಂತಹ ಚಿತ್ರಗಳನ್ನು ಅವರು ಮನೆಯಲ್ಲಿ ವೀಕ್ಷಿಸಿದರೂ ಗೌರವಿಸುವಂತಿಲ್ಲ. ಹೀಗಿರುವಾಗ ಸದನದಲ್ಲಿ ವೀಕ್ಷಿಸಿದ್ದು ಕೆಟ್ಟ ವಿಚಾರ. ಅದನ್ನು ನೆನಪಿಸಿಕೊಳ್ಳಲೂ ಇಷ್ಟಪಡುವುದಿಲ್ಲ~ ಎಂದು ಅನಂತಮೂರ್ತಿ ಹೇಳಿದರು.

`ಎಂತಹ ಸ್ಥಿತಿ ಬಂತು ಎಂದು ಬೇಸರವಾಗಿದೆ. ಸಚಿವರ ಸಹೋದ್ಯೋಗಿಗಳು ಘಟನೆ ಸಮರ್ಥಿಸಿಕೊಂಡರೂ ಅವರ ಮನಸ್ಸಿನಲ್ಲಿ ಇದು ಶುದ್ದ ಕೆಟ್ಟ ಕೆಲಸ ಎಂಬ ಭಾವನೆ ಇದೆ~ ಎಂದರು.

ಲೋಕಾಯುಕ್ತ ಹಾಗೂ ಉಪ ಲೋಕಾಯುಕ್ತರ ನೇಮಕ ವಿವಾದದಕ್ಕೆ ಸಂಬಂಧಪಟ್ಟಂತೆ ಕೇಳಿದ ಪ್ರಶ್ನೆಗೆ, `ಇದು ಕಾನೂನಿನ ವಿಚಾರ. ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಇಂದಿಗೂ ರಾಜ್ಯಕ್ಕೆ ಹೀರೊ. ಅಂತವರನ್ನೇ ಈ ಸ್ಥಾನಕ್ಕೆ ಆಯ್ಕೆ ಮಾಡಬೇಕು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT