ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಮತ್ತು `ನಮ್ಮ ಸಾಹಿತ್ಯವೇ ಚಳವಳಿ' ಎಂಬ ವಾದ

Last Updated 26 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಒಬ್ಬ ಲೇಖಕನ ಸಾಹಿತ್ಯವೇ ಚಳವಳಿ, ಆತ ನೇರವಾಗಿ ಚಳವಳಿಗಳಲ್ಲಿ ಭಾಗವಹಿಸಬೇಕಾಗಿಲ್ಲ ಎಂಬ ವಾದ ಚಳವಳಿ ಮತ್ತು ಸಾಹಿತಿಗಳ ಸಂಬಂಧದ ಕುರಿತ ಚರ್ಚೆ ಬಂದಾಗಲೆಲ್ಲ ಕೇಳಿ ಬರುತ್ತದೆ. ಚಳವಳಿಗಳು ನಿಧಾನಕ್ಕೆ ಕಣ್ಮರೆಯಾಗುತ್ತಿರುವ ಈ ಹೊತ್ತಿನಲ್ಲಂತೂ ಬಹುಪಾಲು ಸಾಹಿತಿಗಳಿಗೆ ಈ ವಾದವೇ ರಕ್ಷಾಕವಚದಂತಿದೆ. ಆದರೆ ಇಂತಹ ಲೇಖಕರು ತಮ್ಮ ನಿಲುವಿಗೆ ಕುವೆಂಪು ಅವರ ಉದಾಹರಣೆಯನ್ನು ನೀಡಿಬಿಡುತ್ತಾರೆ. ಕುವೆಂಪು ಕೂಡ ಚಳವಳಿಗಳಲ್ಲಿ ನೇರವಾಗಿ ಭಾಗವಹಿಸಿದವರಲ್ಲ. ಆದರೆ ಅವರು ರಚಿಸಿದ ಸಾಹಿತ್ಯ ಒಬ್ಬ ಹೋರಾಟಗಾರನ ಹೋರಾಟಕ್ಕಿಂತ ಹೆಚ್ಚಿನ ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ ಎಂದವರು ಸಮರ್ಥನೆ ನೀಡುತ್ತಾರೆ. ಇದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಆದರೆ ಕುವೆಂಪು ಸಾಹಿತ್ಯವೇ ಒಂದು ಚಳವಳಿ, ಹಾಗೆಯೇ ತಮ್ಮದೂ ಎನ್ನುವ ಸಾಹಿತಿಗಳ ವಾದದಲ್ಲಿ ಎಷ್ಟರಮಟ್ಟಿಗಿನ ಹುರುಳಿದೆ?
ಕುವೆಂಪು ಊರಿನವನಾದ ನಾನು ನನ್ನ ಮಿತಿಯಲ್ಲಿ ಕುವೆಂಪು ಸಾಹಿತ್ಯವನ್ನು ಓದಿದ್ದೇನೆ. ಇಲ್ಲಿನ ಸಾಮಾಜಿಕ ಬದಲಾವಣೆಗಳನ್ನೂ ಗಮನಿಸುತ್ತ ಬಂದಿದ್ದೇನೆ. ಅದೇ ಕಾಲಕ್ಕೆ ಈ ನಮ್ಮ ಮಲೆನಾಡಿನ ಜೊತೆಗೆ ಕರ್ನಾಟಕದ ಇತರ ಭಾಗಗಳ ಸಾಮಾಜಿಕ ಸ್ಥಿತಿಗತಿಗಳನ್ನೂ ನೋಡುತ್ತಿದ್ದೇನೆ.
ಉತ್ತರ ಕರ್ನಾಟಕದ ದಾರಿದ್ರ್ಯ, ಇನ್ನೂ ಕನಿಷ್ಠ ಒಂದು ಕಕ್ಕಸುಮನೆ ಇರದ ದಾರುಣ ಸ್ಥಿತಿ, ಮೈಸೂರು ಸೀಮೆಯ ಜಾತಿಯ ಕ್ರೌರ್ಯಗಳ ಜೊತೆ ಮಲೆನಾಡನ್ನೂ ಇಟ್ಟು ನೋಡಿದ್ದೇನೆ.

ಜಾಗತೀಕರಣ ಮುಖ್ಯವಾಗಿ ಕೃಷಿ ಕ್ಷೇತ್ರದ ಮೇಲೆ ಎಲ್ಲೆಡೆಯಂತೆ ಮಲೆನಾಡಿನಲ್ಲಿಯೂ ತೀವ್ರತರದ ಬಿಕ್ಕಟ್ಟುಗಳನ್ನು ಸೃಷ್ಟಿಸಿದೆ. ಇದನ್ನು ಹೊರಗಿಟ್ಟು ನೋಡಿದಾಗ ಕರ್ನಾಟಕದ ಇತರ ಭಾಗಗಳಿಗೆ ಹೋಲಿಸಿದರೆ ಮಲೆನಾಡು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಕನಿಷ್ಠ ಅರ್ಧ ಶತಮಾನದಷ್ಟು ಮುಂದಿದೆ. ಕಡುಬಡತನವೆಂಬುದು ಇಲ್ಲಿ ಇಲ್ಲ. ಇಲ್ಲಿಯ ಒಬ್ಬ ಕೂಲಿಕಾರ್ಮಿಕನೂ ತನ್ನ ಸ್ವಾಭಿಮಾನವನ್ನು ಒತ್ತೆಯಿಟ್ಟು ಬದುಕಬೇಕಾದ ಪರಿಸ್ಥಿತಿಯಿಲ್ಲ. ಭೂಮಾಲೀಕರ ದೌರ್ಜನ್ಯದಂತಹ ಸಂಗತಿಗಳು ಇಲ್ಲಿ ಮಾಯವಾಗಿ ಕೆಲವು ದಶಕಗಳೇ ಕಳೆದಿವೆ.

ಇದೆಲ್ಲ ಕುವೆಂಪು ಸಾಹಿತ್ಯದ ಪರಿಣಾಮ ಎಂದು ತೀರ್ಪು ಕೊಡಲಾಗದು. ಮಲೆನಾಡಿನಲ್ಲಿ ಶಾಂತವೇರಿ ಗೋಪಾಲಗೌಡರ ಸಮಾಜವಾದಿ  ಚಳವಳಿಯಿತ್ತು. ಕಡಿದಾಳು ಮಂಜಪ್ಪನವರು, ಗಣಪತಿಯಪ್ಪ ಗೇಣಿದಾರರ ಪರ ಚಳವಳಿ ರೂಪಿಸುತ್ತಿದ್ದರು. ಕಮ್ಯುನಿಸ್ಟ್ ನಾಯಕ ಅಪ್ಪಣ್ಣ ಹೆಗಡೆ ದೌರ್ಜನ್ಯವೆಸಗುವ ಭೂಮಾಲೀಕರ ವಿರುದ್ಧ ಮಿಲಿಟೆಂಟ್ ಆಗಿ ಹೋರಾಡುತ್ತಿದ್ದರು. ಕಾಸರವಳ್ಳಿ ರಾಮಕೃಷ್ಣರಾಯರು, ಬಿ.ಎನ್. ರಂಗಪ್ಪ ಮುಂತಾದ ದೂರದೃಷ್ಟಿಯುಳ್ಳ ಜನರಿಂದಾಗಿ ಆಗಲೇ ತೀರ್ಥಹಳ್ಳಿಗೆ ಪ್ರಥಮ ದರ್ಜೆ ಕಾಲೇಜು ಬಂದಿತ್ತು.

ಕ್ರೈಸ್ತ ಮಿಷನರಿಗಳು ಬಂದಿದ್ದರಿಂದ ಮಲೆನಾಡು ಬಹಳ ಬೇಗನೆ ಶಿಕ್ಷಣದ ಅವಕಾಶ ಪಡೆಯಿತು. ಶಿಕ್ಷಣ ಪಡೆದಿದ್ದರಿಂದ ಕುವೆಂಪು, ಅನಂತಮೂರ್ತಿ, ತೇಜಸ್ವಿ, ಲಂಕೇಶರ ಸಾಹಿತ್ಯ ಇಲ್ಲಿಯ ಜನರೆದೆಯೊಳಗೆ ಇಳಿಯಲು ಸಾಧ್ಯವಾಯಿತು. ಇದರೊಂದಿಗೆ ಶಾಂತವೇರಿ ಗೋಪಾಲಗೌಡರು, ಗಣಪತಿಯಪ್ಪನವರು, ಕಡಿದಾಳು ಮಂಜಪ್ಪನವರು ಕಟ್ಟಿದ ಚಳವಳಿ ಬಹಳ ದೊಡ್ಡದನ್ನೇ ಸಾಧಿಸಿತು. ಇವರೆಲ್ಲ ಕುವೆಂಪು ಅವರ ಸಾಹಿತ್ಯದಿಂದ ಪ್ರೇರಣೆಗೊಂಡವರೇ. ದೇವರಾಜ ಅರಸರು ತಂದ ಕ್ರಾಂತಿಕಾರಿ ಭೂಸುಧಾರಣಾ ಕಾನೂನಿಗೆ ಪ್ರೇರಣೆ ಕೊಟ್ಟಿದ್ದು ಅಂತಹ ಚಳವಳಿಗಳೇ. ಈ ಕಾನೂನು ಒಂದೇ ಏಟಿಗೆ ವರ್ಗ ಮತ್ತು ಜಾತಿಯನ್ನು ಸಾಕಷ್ಟು ನಾಶ ಮಾಡಿತ್ತು. ಈ ಕಾನೂನು ನಿಜವಾಗಿ ಅನುಷ್ಠಾನಗೊಂಡದ್ದು ತೀರ್ಥಹಳ್ಳಿಯಲ್ಲಿ. ಉಳಿದಂತೆ ದಕ್ಷಿಣ ಕನ್ನಡದಲ್ಲಿ ಜಾರಿಯಾಯಿತು.

ಭೂಸುಧಾರಣಾ ಕಾನೂನು ಜಾರಿಯಾದಾಗ ತೀರ್ಥಹಳ್ಳಿಯಲ್ಲಿ ಪವಾಡಗಳೇ ನಡೆದು ಹೋದವು. ಈ ಕಾನೂನು ಬರುವ ಮುನ್ನವೇ ಇಲ್ಲಿನ ಆಲಗೇರಿ ಸದಾಶಿವರಾಯರಂತಹ ಅನೇಕ ಭೂಮಾಲೀಕರು ತಮ್ಮ ನೂರಾರು ಎಕರೆ ಜಮೀನುಗಳನ್ನು ಸ್ವತಃ ತಮ್ಮ ಒಕ್ಕಲುಗಳಿಗೆ ಬರೆದು ಕೊಟ್ಟಿದ್ದರು. ಈ ಕಾನೂನು ಜಾರಿಯಾದಾಗ ಭೂಮಿ ಕಳೆದುಕೊಳ್ಳಲಿದ್ದ ಭೂಮಾಲೀಕರು ತಮ್ಮ ಒಕ್ಕಲುಗಳನ್ನು ದ್ವೇಷಿಸಬೇಕಿತ್ತು. ಹೊಡೆದಾಟಕ್ಕಿಳಿಯಬೇಕಿತ್ತು. ಆದದ್ದೇನೆಂದರೆ ಈ ಭೂಮಾಲೀಕರಲ್ಲಿ ಹುಗಲವಳ್ಳಿ ಸುರೇಂದ್ರರಂತಹ ಕೆಲವರು ತೀರ್ಥಹಳ್ಳಿಯಲ್ಲಿ ಕಛೇರಿ ತೆರೆದು ತಮ್ಮ ಒಕ್ಕಲುಗಳಿಗೆ ಈ ಕಾನೂನಿನ ಪ್ರಕಾರ ನೆಲದ ಒಡೆಯರಾಗಲು ಅರ್ಜಿಗಳನ್ನು ತುಂಬಿಕೊಟ್ಟರು. ತೀರ್ಥಮುತ್ತೂರಿನ ಮಠದ ಸ್ವಾಮೀಜಿ ತಮ್ಮ ಮಠದ ಜಮೀನುಗಳನ್ನು ತಮ್ಮ ಒಕ್ಕಲುಗಳಿಗೆ ಬರೆದುಕೊಡಲು ಮುಂದಾದರು.

ವೈಯಕ್ತಿಕವಾಗಿ ಜನರಲ್ಲಿ ವೈಚಾರಿಕತೆ ಮೂಡಿಸಿದ ಕುವೆಂಪು ಸಾಹಿತ್ಯ, ಹೋರಾಟಗಾರರಿಗೆ ಚಳವಳಿ ಕಟ್ಟಲು ಪ್ರೇರಣೆಯನ್ನು ನೀಡಿತು.ಇದರೊಂದಿಗೆ ಈ ಸಾಹಿತ್ಯ ಕೆಳವರ್ಗದರಿಗೆ ಆತ್ಮಾಭಿಮಾನವನ್ನು ಮೂಡಿಸಿದರೆ ಮೇಲ್ಜಾತಿ ಜನರನ್ನು  ಆತ್ಮವಿಮರ್ಶೆಗೆ ಹಚ್ಚಿತು.ಮನುಷ್ಯನ ಬದುಕು ಹಸನಾಗಬೇಕು, ಎಲ್ಲ ಜನರೂ ಘನತೆಯಿಂದ ಬದುಕಬಲ್ಲಂತಹ ಸಮಸಮಾಜ ನಿರ್ಮಾಣವಾಗಬೇಕು ಎನ್ನುವುದು ನೈಜ ಸಾಹಿತಿಯ ಸಾಹಿತ್ಯದ ಒಳತಿರುಳಾಗಿರುತ್ತದೆ.

ಆದರೆ ಕುವೆಂಪು ಅವರ ಸಾಹಿತ್ಯವೆಲ್ಲವೂ ಸಂಪೂರ್ಣ ಸಮಾಜ ಪರಿವರ್ತನೆಗೆ ಅರ್ಪಿತವಾದಂತಿದೆ. ಶೂದ್ರ ಸಮುದಾಯದಿಂದ ಬಂದ ಮೊದಲ ದೈತ್ಯ ಪ್ರತಿಭೆಗೆ ಇದು ಸಹಜ ಕೂಡ ಆಗಿತ್ತು . ಆದರೆ ಮಲೆನಾಡಿನ ಜಾತಿಗ್ರಸ್ಥ ಸಮಾಜದ ಕ್ರೌರ್ಯಗಳನ್ನು ಸ್ವತಃ ಅನುಭವಿಸಿ ಬಂದಿದ್ದ ಕುವೆಂಪುಗೆ ತನ್ನ ಸಮುದಾಯವನ್ನು ಅದರಿಂದ ಬಿಡುಗಡೆಗೊಳಿಸಬೇಕಿತ್ತು. ಆದರೆ ಇದಕ್ಕೆ ಪೂರಕವಾದ  ಸಾಹಿತ್ಯವನ್ನು ರಚಿಸಿದರೂ ಕುವೆಂಪು ಎಲ್ಲೂ ಅವಸರಕ್ಕೆ ಬೀಳಲಿಲ್ಲ.

ಕುವೆಂಪು ಚಿಂತನೆಯಲ್ಲಿ ಎಲ್ಲೂ ವಿಲಾಸವಾಗಲಿ ಲೋಕಾಭಿರಾಮತನವಾಗಲಿ ಇಲ್ಲ. ಅವರೊಬ್ಬ ಗಂಭೀರ ಸ್ವಭಾವದ ಕೆಲವೊಮ್ಮೆ ಅತಿಗಾಂಭೀರ್ಯತನ ಹೊಂದಿದ ಲೇಖಕರು. ದಮನಿತರು ತಮ್ಮ ಅವಸ್ಥೆಯನ್ನು ಬದಲಾಯಿಸಿಕೊಳ್ಳಲು ಅರಿವನ್ನು ಪಡೆಯಬೆಕು ಹಾಗೂ ಹೋರಾಟ ಮಾಡಬೇಕು. ಆ ಮೂಲಕ ಸಮಾಜ ಆರೋಗ್ಯಕರವಾಗಿ ಬದಲಾಗಬೇಕು ಎಂಬುದು ಕುವೆಂಪು ಸಾಹಿತ್ಯದ ಮುಖ್ಯ ದನಿಯೆಂದು ಹೇಳಬಹುದು. ಈ ಬರಹಗಳಲ್ಲಿ ನೋಯುವಿಕೆ, ಕಳಕಳಿ, ಆಕ್ರೋಶ, ಛಲ ಇತ್ಯಾದಿ ಗುಣಗಳು ಮುಟ್ಟಿ ಅನುಭವಿಸುವಂತಿವೆ  ಎನ್ನುವ ಕುವೆಂಪು ಸಮಗ್ರ ಗದ್ಯಸಂಪುಟ-2 ಕೃತಿಯಲ್ಲಿನ ರಹಮತ್ ತರೀಕೆರೆ ಅವರ ಮಾತುಗಳು ಕುವೆಂಪು ಅವರ ಸಾಹಿತ್ಯದ ಒಟ್ಟು ಸಾರವನ್ನು ಹಿಡಿದಿಟ್ಟಿವೆ.

ಕುವೆಂಪು ಸಾಹಿತ್ಯಕ್ಕಾಗಿ ಸಾಹಿತ್ಯ ರಚಿಸಿದವರಲ್ಲ.  `ರಸ' ವೇ ಅವರ ಸಾಹಿತ್ಯದ ಪರಮೋದ್ದೇಶವಲ್ಲ. ಈ ಸಮಾಜ ಬದಲಾಗಬೇಕು, ಜನರ ಜೀವನಮಟ್ಟ ಸುಧಾರಿಸಬೇಕು, ಬಡವ - ಬಲ್ಲಿದನೆಂಬ ಭೇದ ಅಳಿಯಬೇಕು. ಜಾತಿ-ಧರ್ಮದ ಗಡಿಗಳಿಲ್ಲದೆ ಎಲ್ಲರೂ ವಿಶ್ವಮಾನವರಾಗಬೇಕು ಎನ್ನುವುದು ಅವರ ಹಂಬಲವಾಗಿತ್ತು. ಇದನ್ನು ಅವರ ಪ್ರತಿಯೊಂದು ಬರಹವೂ ಪ್ರತಿಪಾದಿಸುತ್ತದೆ. ಅವರ ಭಾಷಣಗಳಲ್ಲೂ ಇದನ್ನು ನೋಡಬಹುದು.

ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವ ಭಾಷಣದಲ್ಲಿ ಅವರು ಕರೆಕೊಟ್ಟ `ವಿಚಾರಕ್ರಾಂತಿಗೆ ಆಹ್ವಾನ' ದೊಡ್ಡ ಸಂಚಲನವನ್ನೇ ಮೂಡಿಸಿತ್ತು. ಅಲ್ಲಿ ಅವರಾಡಿದ “ಉಗ್ರ ಕ್ರಾಂತಿಯಿಂದಲಾದರೂ ನೀವು ಚುನಾವಣೆಯನ್ನು ಸಾತ್ವಿಕಮಾರ್ಗಕ್ಕೆ ತಿರುಗಿಸದಿದ್ದರೆ ಸ್ವಾರ್ಥಿಗಳೂ, ಸಮಯಸಾಧಕರೂ, ಗೂಂಡಾಗಳೂ, ಕಳ್ಳಸಂತೆಕೋರರೂ, ಕಳ್ಳಸಾಗಣೆಯ ಖದೀಮರೂ, ಚಾರಿತ್ರಹೀನರೂ ಪ್ರಜಾಸತ್ತೆಯ ಹುಸಿಹೆಸರಿನ ಹಿಂದೆ ಪ್ರಚ್ಛನ್ನನಡೆಸುತ್ತಾರೆ” ಎಂಬ ಮಾತುಗಳೂ ಈ ಸಮಯದಲ್ಲೂ ಹೆಚ್ಚು ಪ್ರಸ್ತುತವಾಗಿವೆ.

ಸ್ವಾತಂತ್ರ್ಯ ಲಭಿಸಿ ಇಪ್ಪತ್ತೈದು ವರ್ಷಗಳಾದ ಸಂದರ್ಭದಲ್ಲಿ ವಯಸ್ಕರ ಶಿಕ್ಷಣ ಸಮಿತಿಯವರಿಗೆ ಅವರು ಕೊಟ್ಟ ಒಂದು ಸಂದರ್ಶನದಲ್ಲಿ ಅವರಾಡಿದ ಮಾತುಗಳನ್ನು ನಾವು ಗಮನಿಸಬೇಕು. ಈ ಹೊತ್ತಲ್ಲಿ ನಾವು ಬಡತನವನ್ನು ಎಷ್ಟರಮಟ್ಟಿಗೆ ಪರಿಹರಿಸಿದ್ದೇವೆ? ಜಾತಿಮತಗಳ ಭೇದಬುದ್ಧಿಯನ್ನು ಎಷ್ಟರಮಟ್ಟಿಗೆ ತೊಡೆದುಹಾಕಿದ್ದೇವೆ?ಉಳ್ಳವರ ಇಲ್ಲದವರ ನಡುವಣ ಅಂತರವನ್ನು  ಎಷ್ಟು ಕಡಿಮೆ ಮಾಡಿದ್ದೇವೆ? ಸಾಮಾನ್ಯರಲ್ಲಿ ಸಮಾಜವಾದಿ ಪ್ರಜಾಪ್ರಭುತ್ವದ ಜ್ಞಾನೋದಯವಾಗಲು ಏನೇನು ಕ್ರಮ ಕೈಗೊಂಡಿದ್ದೇವೆ? ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಇವುಗಳನ್ನು ಸಾರ್ವಜನಿಕರ ಮನಸ್ಸಿನಲ್ಲಿ ಯಾವ ಪ್ರಮಾಣದಲ್ಲಿ ಬೆಳೆಸಿದ್ದೇವೆ ಎಂಬ ವಿಚಾರವಾಗಿ ಸಿಂಹಾವಲೋಕನ ಮಾಡಬೇಕು 

ಎಂಬತ್ಮೂರು ವರ್ಷಗಳ ಹಿಂದೆ (ದಿ.08.11.1930) ಶಿವಮೊಗ್ಗದ ಕರ್ನಾಟಕ ಸಂಘವನ್ನು ಉದ್ಘಾಟಿಸಿ ಮಾಡಿದ ಭಾಷಣದಲ್ಲಿ ಕುವೆಂಪು ಹೀಗೆ ಹೇಳುತ್ತಾರೆ..  ಜಪಾನ್ ತುರ್ಕಿಸ್ಥಾನಗಳಲ್ಲಿ ಆಗಿರುವ ಪರಿವರ್ತನೆಗೆ ಅಲ್ಲಿಯ ನೂತನ ಸಾಹಿತಿಗಳೇ ಕಾರಣ. ಯಾವಾಗ ನವದೃಷ್ಟಿಯ ಸಾಹಿತ್ಯ ಜನಸಾಮಾನ್ಯರಲ್ಲಿ ಹೆಚ್ಚಾಗಿ ಪ್ರಚುರವಾಗುವುದೋ ಆಗಲೇ ದೇಶ ಕಣ್ದೆರೆಯುವುದು. ಬರಿಯ ವಿಶ್ವವಿದ್ಯಾನಿಲಯಗಳಿಂದಲೂ, ನಗರದ ಉಪನ್ಯಾಸಮಂದಿರಗಳಿಂದಲೂ ಅದು ಸುಲಭಸಾಧ್ಯವಲ್ಲ.

ಒಬ್ಬ ಹೋರಾಟಗಾರನನ್ನು ಮೀರಿ ಕುವೆಂಪು ಸಾಹಿತ್ಯ ಸಮಾಜದಲ್ಲಿ ಬದಲಾವಣೆಗೆ ಕಾರಣವಾಗಿದೆ ಮತ್ತು ಈ ಪ್ರಭಾವ ಹಲವು ಶತಮಾನಗಳಿಗೂ ವಿಸ್ತರಿಸುತ್ತದೆ. 12ನೇ ಶತಮಾನದಲ್ಲಿ ಆಗಿ ಹೋದ ಬಸವಣ್ಣನ ನಂತರ ಕುವೆಂಪು ಅವರೇ ನಿಸ್ಸಂಶಯವಾಗಿ ಕರ್ನಾಟಕದ ಬಹುದೊಡ್ಡ ಸಮಾಜ ಸುಧಾರಕ. ಕುವೆಂಪು ಅವರನ್ನು 20ನೇ ಶತಮಾನದ ದೊಡ್ಡ ಸಾಹಿತಿ ಎನ್ನುವುದಕ್ಕಿಂತಲೂ ಸಾಂಸ್ಕೃತಿಕ ನಾಯಕ ಎಂದು ಗುರ್ತಿಸಿರುವುದೇ ಸೂಕ್ತವಾಗಿದೆ.

ಕುವೆಂಪು ಸಾಹಿತ್ಯವೇ ಒಂದು ಚಳವಳಿ ಎಂಬುದು ಸರಳವಾದ ಮಾತಲ್ಲ. ಅವರ ಇಡೀ ಸಾಹಿತ್ಯ, ಜ್ಞಾನಪೀಠ ಪುರಸ್ಕಾರ ಪಡೆದ `ಶ್ರಿ ರಾಮಾಯಣ ದರ್ಶನಂ' ನಿಂದ ಹಿಡಿದು `ಹೀರೆ ಹೂವಿನ ಬಗೆಗಿನ ಪುಟ್ಟ ಕವನ'ದವರೆಗೆ ಅವರ ಸಾಹಿತ್ಯ ಸಾಮಾಜಿಕ ಬದಲಾವಣೆಯನ್ನು ಬಯಸುತ್ತದೆ, ಮನುಷ್ಯ ಘನತೆಯನ್ನು ಮತ್ತೆ ಮತ್ತೆ ಪ್ರತಿಪಾದಿಸುತ್ತದೆ. ಕುವೆಂಪು ಆ ತಲೆಮಾರಿನ ಹಿರಿಯ ಸಾಹಿತಿಗಳಂತೆ ತಮ್ಮ ಬರವಣಿಗೆಯಲ್ಲಿ ಪ್ರತಿಪಾದಿಸಿದ ನೈತಿಕ ಮೌಲ್ಯಗಳಂತೆ ಬದುಕಿದವರು. ಈ ನೈತಿಕ ಶಕ್ತಿಯೆದುರು ಪ್ರಭುತ್ವವೇ ಅದುರುತ್ತಿತ್ತು.

ನಮ್ಮ ಸಾಹಿತ್ಯವೇ ಚಳವಳಿ ಎಂದು ನಿರ್ಧರಿಸಿಕೊಂಡು ಬರವಣಿಗೆಗೇ ನಮ್ಮನ್ನು ಸೀಮಿತಗೊಳಿಸಿಕೊಳ್ಳುವಾಗ ನಾವು ರಚಿಸುತ್ತಿರುವ ಸಾಹಿತ್ಯ ಚಳವಳಿಯ ಯಾವ ಗುಣಗಳನ್ನು ಹೊಂದಿದೆ ಎಂದು ಚಿಂತಿಸಬೇಕಾಗಿದೆ. ಇದರೊಂದಿಗೆ  ಕುವೆಂಪು ಅವರಂತೆ ಪ್ರಭುತ್ವ ನಮ್ಮನ್ನು ಗಂಭೀರವಾಗಿ ಪರಿಗಣಿಸುವಂತೆ ನಾವು ನಮ್ಮ ನೈತಿಕ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳದಿದ್ದರೆ `ನಮ್ಮ ಸಾಹಿತ್ಯವೇ ಚಳವಳಿ' ಎಂಬ ಮಾತು ಹಾಸ್ಯಾಸ್ಪದವಾಗುತ್ತದೆ. ಮತ್ತು ಈ ವಾದ ಪ್ರಭುತ್ವದೊಂದಿಗೆ ಸದಾ ಮಧುರಸಂಬಂಧವನ್ನು ಕಾಯ್ದುಕೊಳ್ಳುತ್ತ ಪ್ರಶಸ್ತಿ - ಸ್ಥಾನಮಾನಗಳನ್ನು ಗಳಿಸುವ ಹಂಚಿಕೆಯಾಗಿಯೂ, ಎಲ್ಲ ರಿಸ್ಕುಗಳಿಗೆ ಬೆನ್ನು ಹಾಕಿ ಓಡುವ ಪಲಾಯನವಾದವಾಗುತ್ತದೆ. ಕುವೆಂಪು ಜನ್ಮದಿನ (ಡಿ.29) ಈ ಕುರಿತ ನಮ್ಮೆಲ್ಲರ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT