ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಮತ್ತು ರಾಜಕೀಯ

Last Updated 22 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಕವಿ ಕುವೆಂಪು ಅವರು ಆಗಿನ್ನೂ ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಆಗ ಮೈಸೂರು ಮಹಾರಾಜರಾಗಿದ್ದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಯುವರಾಜ ಜಯಚಾಮರಾಜ ಒಡೆಯರ್. ಒಮ್ಮೆ ಜಯಚಾಮರಾಜರ ಕನ್ನಡದ ಉತ್ತರ ಪತ್ರಿಕೆಯನ್ನು ಕುವೆಂಪು ಮೌಲ್ಯಮಾಪನ ಮಾಡಿದರು. ನೂರಕ್ಕೆ 17 ಅಂಕವನ್ನು ಕೊಟ್ಟರು. ಇದು ಆಗಿನ ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಎನ್.ಎಸ್.ಸುಬ್ಬರಾವ್ ಅವರಿಗೆ ಗೊತ್ತಾಯಿತು. ಅಲ್ಲದೆ ಈ ವಿಷಯ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೂ ತಿಳಿಯಿತು. ಕುಲಪತಿ ಅವರು ಈ ಬಗ್ಗೆ ವಿಚಾರಣೆ ನಡೆಸಲು ಟಿ.ಎಸ್.ವೆಂಕಣ್ಣಯ್ಯ ಅವರನ್ನು ಕೇಳಿಕೊಂಡರು.

ವೆಂಕಣ್ಣಯ್ಯ ಅವರು ಕುವೆಂಪು ಅವರನ್ನು ಕರೆದು, `ಏನಯ್ಯ, ರಾಜಕುಮಾರರಿಗೆ 17 ಅಂಕ ನೀಡಿದ್ದೀಯಲ್ಲ' ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಕುವೆಂಪು, `ನಾನು ನೀಡಿದ್ದಲ್ಲ. ಅವರು ತೆಗೆದುಕೊಂಡಿದ್ದು ಅಷ್ಟು' ಎಂದು ಉತ್ತರಿಸಿದರು. `ಅದನ್ನು 71 ಮಾಡಲು ಸಾಧ್ಯವಿಲ್ಲವೇ?' ಎಂದು ವೆಂಕಣ್ಣಯ್ಯ ಕೇಳಿದಾಗ, `ಉತ್ತರ ಪತ್ರಿಕೆಯನ್ನು ನೀವೇ ನೋಡಿ. ಎಷ್ಟು ಬೇಕಾದರೂ ಅಂಕ ಕೊಡಿ' ಎಂದು ಕುವೆಂಪು ಹೇಳಿದರಂತೆ.

ಇದರಿಂದ ಮಹಾರಾಜರೇನೂ ಸಿಟ್ಟಾಗಲಿಲ್ಲ. ಬದಲಿಗೆ ಕುವೆಂಪು ಅವರಿಗೆ ವಾರಕ್ಕೆ ಮೂರು ದಿನ ಅರಮನೆಗೆ ಬಂದು ಯುವ ರಾಜರಿಗೆ ಪಾಠ ಮಾಡಿ. ನಿಮ್ಮನ್ನು ಕರೆದುಕೊಂಡು ಬರಲು ಕಾರು ಕಳುಹಿಸಲಾಗುತ್ತದೆ. ಅಲ್ಲದೆ ನೂರು ರೂಪಾಯಿ ಸಂಭಾವನೆ ನೀಡಲಾಗುತ್ತದೆ ಎಂದು ಹೇಳಿದರಂತೆ. ಆದರೆ ಅದಕ್ಕೂ ಕುವೆಂಪು ಒಪ್ಪಲಿಲ್ಲ. ಮಹಾರಾಜರ ಆಹ್ವಾನವನ್ನು ತಿರಸ್ಕರಿಸಿದ್ದೇ ಅಲ್ಲದೆ ಒಂದು ಕವನವನ್ನೂ ಬರೆದರು.

ವಸಂತ ವನದಲ್ಲಿ ಕೂಗುವ ಕೋಗಿಲೆ
ರಾಜರ ಬಿರುದನ್ನು ಬಯಸುವುದಿಲ್ಲ
ಕವಿಗೆ ಅರಸುಗಿರಸುಗಳ ಋಣವಿಲ್ಲ
ಅವನು ಅಗ್ನಿಮುಖಿ ಪ್ರಳಯ ಶಿಖಿ

ಕುವೆಂಪು ಅವರು ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಇನ್ನೂ ಮಾನಸ ಗಂಗೋತ್ರಿಗೆ ಸಂಪೂರ್ಣವಾಗಿ ಸ್ಥಳಾಂತರವಾಗಿರಲಿಲ್ಲ. ಸ್ಥಳಾಂತರಕ್ಕೆ ಸಾಕಷ್ಟು ಮಂದಿಯ ವಿರೋಧ ಕೂಡ ಇತ್ತು. ಮಾನಸ ಗಂಗೋತ್ರಿಗೆ ವಿಶ್ವವಿದ್ಯಾಲಯವನ್ನು ಸ್ಥಳಾಂತರಿಸುವ ಸಾಹಸದಲ್ಲಿ ಕುವೆಂಪು ನಿರತರಾಗಿದ್ದರು.

ಮಾಜಿ ಕೇಂದ್ರ ಸಚಿವರೂ ಆಗಿದ್ದ ಸಿ.ಡಿ.ದೇಶಮುಖ್ ಅವರು ಆಗ ಯುಜಿಸಿ ಅಧ್ಯಕ್ಷರಾಗಿದ್ದರು. ಅವರು ಒಮ್ಮೆ ತಮ್ಮ ಪತ್ನಿ ಜೊತೆಗೆ ಕೃಷ್ಣರಾಜಸಾಗರಕ್ಕೆ ಬಂದು ಉಳಿದುಕೊಂಡಿದ್ದರು. ಹೀಗೆ ಬಂದ ದೇಶಮುಖ್ ಅವರಿಗೆ ಜ್ವರ ಬಂದು ನಾಲ್ಕು ದಿನ ಇಲ್ಲಿಯೇ ಉಳಿದುಕೊಳ್ಳುವಂತೆ ಆಯಿತು. ಆಗ ಪ್ರತಿ ದಿನ ಕುವೆಂಪು ಕೆಆರ್‌ಎಸ್‌ಗೆ ಹೋಗಿ ಅವರನ್ನು ನೋಡಿಕೊಂಡು ಬರುತ್ತಿದ್ದರಂತೆ.  ದೇಶಮುಖ್ ಅವರ ಪತ್ನಿ ಒಳ್ಳೆ ಕವಯತ್ರಿ. ಕುವೆಂಪು ಅವರು ಅಲ್ಲಿಗೆ ಹೋದಾಗ ಇವರೊಂದು ಅವರೊಂದು ಕವನ ವಾಚಿಸುತ್ತಿದ್ದರಂತೆ.

ಆಗಿನ್ನು ಮೈಸೂರು ವಿಶ್ವವಿದ್ಯಾಲಯದ ಅಧ್ಯಾಪಕರಿಗೆ ಯುಜಿಸಿ ವೇತನ ಸಿಗುತ್ತಿರಲಿಲ್ಲ. ಕುವೆಂಪು ಈ ಬಗ್ಗೆ ದೇಶಮುಖ್ ಅವರಲ್ಲಿ ಪ್ರಸ್ತಾಪಿಸಿದಾಗ, `ನಿಮ್ಮ ರಾಜ್ಯ ಸರ್ಕಾರ ಪ್ರಸ್ತಾವನೆಯನ್ನು ಕಳುಹಿಸಿದರೆ ತಕ್ಷಣವೇ ಅದಕ್ಕೆ ಒಪ್ಪಿಗೆ ಕೊಡುತ್ತೇನೆ' ಎಂಬ ಭರವಸೆಯನ್ನು ನೀಡಿದರು.

ಖುಷಿಯಾದ ಕುವೆಂಪು ಈ ಬಗ್ಗೆ ಚರ್ಚೆ ನಡೆಸಲು ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ `ತಮ್ಮನ್ನು ಕಾಣಲು ಬರಬೇಕು. ನಿಮ್ಮ ಸಮಯ ತಿಳಿಸಿ' ಎಂದು ಕೇಳಿಕೊಂಡರು. ಅದಕ್ಕೆ ನಿಜಲಿಂಗಪ್ಪ `ನೀವು ನನ್ನನ್ನು ನೋಡಲು ಇಲ್ಲಿಗೆ ಬರುವುದಾ? ನನಗೆ ಅವಮಾನ ಮಾಡಬೇಡಿ. ನಮ್ಮ ಶಿಕ್ಷಣ ಸಚಿವರನ್ನು ನಿಮ್ಮ ಬಳಿಗೆ ಕಳುಹಿಸುತ್ತೇನೆ. ಅವರಲ್ಲಿ ನಿಮ್ಮ ಎಲ್ಲ ಸಮಸ್ಯೆಗಳನ್ನು ಚರ್ಚೆ ಮಾಡಿ. ನಾನು ಎಲ್ಲ ಅನುಕೂಲ ಮಾಡಿಕೊಡುತ್ತೇನೆ' ಎಂದು ಉತ್ತರಿಸಿದರು.

ಅದರಂತೆ ಆಗಿನ ಶಿಕ್ಷಣ ಸಚಿವ ವಿ.ವೆಂಕಟಪ್ಪ ಕುವೆಂಪು ಅವರ ಬಳಿಗೆ ಬಂದು ವಿಶ್ವವಿದ್ಯಾಲಯದ ಸಮಸ್ಯೆಗಳನ್ನು ಆಲಿಸಿದರು. ಯುಜಿಸಿಗೆ ಸೂಕ್ತ ಪ್ರಸ್ತಾವನೆಯನ್ನೂ ಸಲ್ಲಿಸಿದರು. ಅಲ್ಲದೆ ಮಾನಸ ಗಂಗೋತ್ರಿಯಲ್ಲಿ ಸಂಚರಿಸಿ ಅಲ್ಲಿ ಮೂರು ಕಟ್ಟಡಗಳನ್ನು ನಿರ್ಮಿಸಲು ಸಂಪೂರ್ಣವಾಗಿ ರಾಜ್ಯ ಸರ್ಕಾರದಿಂದ ಅನುದಾನವನ್ನು ನೀಡಲು ಒಪ್ಪಿಕೊಂಡರು.
***
ಕುವೆಂಪು ಅವರು ಕರ್ನಾಟಕ ಏಕೀಕರಣದ ಪರವಾಗಿದ್ದರು. ಇದರಿಂದ ಮೈಸೂರು ಭಾಗದ ರಾಜಕಾರಣಿಗಳು ಸಿಟ್ಟಾಗಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕುವೆಂಪು ಅವರಿಗೆ ಒಂದು ನೋಟಿಸ್ ಜಾರಿ ಮಾಡಿತು. ರಾಜ್ಯ ಸರ್ಕಾರದ ವಿರುದ್ಧ ಮಾತನಾಡುವ ತಮ್ಮ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು ಎಂದು ಸರ್ಕಾರ ಕೇಳಿತು. ಅದಕ್ಕೆ ಕುವೆಂಪು ಪದ್ಯದ ರೂಪದಲ್ಲಿಯೇ ಉತ್ತರ ಬರೆದರು. ಆ ಪದ್ಯವೇ ಕುವೆಂಪು ಅವರ ಪ್ರಸಿದ್ಧ `ಅಖಂಡ ಕರ್ನಾಟಕ' ಪದ್ಯ.
ರಾಜ್ಯ ಸರ್ಕಾರದ ನೋಟಿಸ್‌ಗೆ ಕುವೆಂಪು ಉತ್ತರ ಹೀಗಿದೆ:

ಅಖಂಡ ಕರ್ನಾಟಕ
ಅಲ್ತೊ ನಮ್ಮ ಕೂಗಾಟದ ರಾಜಕೀಯ ನಾಟಕ
ಹರಸುತಿಹನು ದೇವ ಗಾಂಧಿ
ಮಂತ್ರಿಸಿಹುದು ಋಷಿಯ ನಾಂದಿ
*
ಅಖಂಡ ಕರ್ನಾಟಕ
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವೊಂದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ
*
ನೃಪತುಂಗನೇ ಚಕ್ರವರ್ತಿ
ಪಂಪನಲ್ಲಿ ಮುಖ್ಯಮಂತ್ರಿ
ರನ್ನ ಜನ್ನ ನಾಗವರ್ಮ
ರಾಘವಾಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಷರ
ಸರಸ್ವತಿಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ
***
ಕುವೆಂಪು ಅವರ ಪದ್ಯರೂಪದ ಉತ್ತರ ರಾಜಕಾರಣಿಗಳನ್ನು ಇನ್ನಷ್ಟು ಕೆರಳಿಸಿತು. ಅವರನ್ನು ಮೆಳ್ಳಗಣ್ಣು ಎಂದು ಟೀಕಿಸಿದ್ದು ಕೂಡ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಂತೆ ಆಗಿತ್ತು. ಮೈಸೂರಿನಲ್ಲಿ ಕೆಲವರು ಈ ಪದ್ಯವನ್ನು ಸಾವಿರಾರು ಪ್ರತಿ ಮಾಡಿ ಹಂಚಿಬಿಟ್ಟರು. ವಿಷಯ ಸಚಿವ ಸಂಪುಟದ ಮುಂದೆ ಬಂತು. ಆಗ ಮುಖ್ಯಮಂತ್ರಿಯಾಗಿದ್ದವರು ಕೆ.ಸಿ.ರೆಡ್ಡಿ. ಸಂಪುಟ ಸಭೆಯಲ್ಲಿ ಕೆಲವು ಸಚಿವರು ಕುವೆಂಪು ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಅವರ ಬಡ್ತಿ ರದ್ದು ಮಾಡಬೇಕು. ಇನ್ನೊಂದು ನೋಟಿಸ್ ನೀಡಬೇಕು ಎಂದೆಲ್ಲಾ ಒತ್ತಾಯಿಸಿದರು.

ಆಗ ಕೆ.ಸಿ.ರೆಡ್ಡಿ ಅವರು `ಒಂದು ನೋಟಿಸ್‌ಗೆ ಈ ಪದ್ಯ ಬರೆದಿದ್ದಾರೆ. ಇನ್ನೊಂದು ನೋಟಿಸ್ ನೀಡಿದರೆ ಮತ್ತೆ ಮೂರು ಪದ್ಯ ಬರೆಯಬಹುದು. ಬೆಂಕಿಯ ಜೊತೆ ಸರಸ ಒಳ್ಳೆಯದಲ್ಲ' ಎಂದು ಹೇಳಿ ಈ ಬಗ್ಗೆ ತಾವು ವಿಚಾರಣೆ ನಡೆಸುವುದಾಗಿ ಹೇಳಿದರು.

ಅದರಂತೆ ಕೆ.ಸಿ.ರೆಡ್ಡಿ ಅವರು ನಿಟ್ಟೂರು ಶ್ರೀನಿವಾಸರಾಯರ ಬಳಿ ಈ ಬಗ್ಗೆ ಚರ್ಚೆ ನಡೆಸಿದರು. ಆಗ ನಿಟ್ಟೂರು ಶ್ರೀನಿವಾಸರಾಯರು `ಪುಟ್ಟಪ್ಪ ಕೈ ಎತ್ತಿದರೆ ಕರ್ನಾಟಕವೇ ಕೈ ಎತ್ತುತ್ತದೆ. ಅದಕ್ಕಾಗಿ ನೋಟಿಸ್ ವಾಪಸು ಪಡೆಯುವುದೇ ಸೂಕ್ತ' ಎಂದು ಮುಖ್ಯಮಂತ್ರಿಗೆ ಸಲಹೆ ಮಾಡಿದರು. ರೆಡ್ಡಿ ಅವರು ಕುವೆಂಪು ಅವರಿಗೆ ನೀಡಿದ್ದ ನೋಟಿಸ್ ವಾಪಸು ಪಡೆದರು.
***
1929ರ ವೇಳೆಗೆ ಕುವೆಂಪು ಇನ್ನೂ ಯುವಕರು. ಶ್ರೀರಂಗಪಟ್ಟಣದಲ್ಲಿ ಒಂದು ಭಾಷಣ ಮಾಡಿದರು. `ನಿರಂಕುಶಮತಿಗಳಾಗಿ' ಎಂದು ಜನರಿಗೆ ಕರೆ ನೀಡಿದರು. ಸರ್ಕಾರದ ವಿರುದ್ಧ, ಮೂಢ ನಂಬಿಕೆಗಳ ವಿರುದ್ಧ ಅವರು ಮಾತನಾಡಿದ್ದು ಕೂಡ ಅಧಿಕಾರಸ್ಥರನ್ನು ಕೆರಳಿಸಿತು. ಈ ಬಗ್ಗೆ ವರದಿ ನೀಡುವಂತೆ ಟಿ.ಎಸ್.ವೆಂಕಣ್ಣಯ್ಯ ಅವರನ್ನು ಕೇಳಿಕೊಳ್ಳಲಾಯಿತು. ವೆಂಕಣ್ಣಯ್ಯ ಅವರು ಕುವೆಂಪು ಅವರ ಭಾಷಣವನ್ನು ಪರಿಶೀಲಿಸಿ `ನನ್ನ ಮಗನಿಗೆ ಬುದ್ಧಿ ಹೇಳಿ ಎಂದು ಯಾರಾದರೂ ಹೇಳಿದರೆ ನಾನು ಇದಕ್ಕಿಂತ ಚೆನ್ನಾಗಿ ಹೇಳಲಾಗದು' ಎಂದು ಸರ್ಕಾರಕ್ಕೆ ವರದಿ ನೀಡಿದರು. ಅದು ಅಲ್ಲಿಗೇ ನಿಂತಿತು
***
ಕುವೆಂಪು ಅವರಿಗೆ ವಿನೋಬಾ ಭಾವೆ ಅವರನ್ನು ಕಂಡರೆ ತುಂಬಾ ಗೌರವ. ಯಾವಾಗಲೂ ಅವರನ್ನು ಹೊಗಳುತ್ತಿದ್ದರು. ಒಮ್ಮೆ ಬೆಂಗಳೂರಿನಲ್ಲಿ ಒಕ್ಕಲಿಗರ ಸಂಘದ ಕಾರ್ಯಕ್ರಮ. ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಅಧ್ಯಕ್ಷತೆ. ಕುವೆಂಪು ಅತಿಥಿಗಳು. ಕುವೆಂಪು ತಮ್ಮ ಭಾಷಣದಲ್ಲಿ ವಿನೋಬಾ ಅವರನ್ನು ಸಾಕಷ್ಟು ಹೊಗಳಿದರು. ಇದು ಕೆಂಗಲ್ ಅವರಿಗೆ ಸರಿಕಾಣಲಿಲ್ಲ. ಅವರು ತಮ್ಮ ಭಾಷಣದಲ್ಲಿ ಕುವೆಂಪು ಅವರು ವಿನೋಬಾ ಅವರನ್ನು ಹೊಗಳಿದ್ದು ಹೆಚ್ಚಾಯಿತು ಎಂದರು. ಇದರಿಂದ ಕುವೆಂಪು ಸಿಟ್ಟಾದರಲ್ಲದೆ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು. ಕೆಂಗಲ್ ಕಸಿವಿಸಿಗೊಂಡರು. ಈ ಸುದ್ದಿ ಯಾವ ಪತ್ರಿಕೆಯಲ್ಲೂ ಬರದಂತೆ ನೋಡಿಕೊಂಡರು.

ಆದರೆ ಈ ಘಟನೆ ಕೆಂಗಲ್ ಮತ್ತು ಕುವೆಂಪು ಅವರ ಸಂಬಂಧವನ್ನು ಹಾಳು ಮಾಡಲಿಲ್ಲ. ಮುಂದೆ ಕುವೆಂಪು ಅವರನ್ನು ಮಹಾರಾಜ ಕಾಲೇಜು ಪ್ರಾಂಶುಪಾಲರನ್ನಾಗಿ ಮಾಡಿದ್ದು ಮತ್ತು ಮೈಸೂರು ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ಮಾಡಿದ್ದು ಕೂಡ ಕೆಂಗಲ್ ಹನುಮಂತಯ್ಯ ಅವರೆ.

ಕೆಂಗಲ್ ಹನುಮಂತಯ್ಯ ಅವರ ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿತ್ತು. ಅವರನ್ನು ಕೆಳಕ್ಕೆ ಇಳಿಸಲು ಕಸರತ್ತುಗಳು ನಡೆಯುತ್ತಿದ್ದವು. ಆ ಸಂದರ್ಭದಲ್ಲಿ ಒಮ್ಮೆ ಕುವೆಂಪು ಅವರು ಕೆಂಗಲ್ ಹುನುಮಂತಯ್ಯ ಅವರನ್ನು ನೋಡಲು ಅವರ ಮನೆಗೆ ಹೋದರು. ಆಗ ಹನುಮಂತಯ್ಯ ಪ್ಲೇಟೋನ `ರಿಪಬ್ಲಿಕ್' ಪುಸ್ತಕವನ್ನು ಓದುತ್ತಿದ್ದರು. ಅದನ್ನು ಕಂಡು ಕುವೆಂಪು ಅವರಿಗೆ ಅಚ್ಚರಿಯಾಯಿತು.

`ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿದೆ. ನಿಮ್ಮ ವಿರೋಧಿಗಳು ದಿನಕ್ಕೊಂದು ಆರೋಪ ಮಾಡುತ್ತಿದ್ದಾರೆ. ಆದರೂ ನೀವು ಶಾಂತವಾಗಿ ರಿಪಬ್ಲಿಕ್ ಓದುತ್ತಿದ್ದೀರಲ್ಲ?' ಎಂದು ಕೆಂಗಲ್‌ರನ್ನು ಕುವೆಂಪು ಕೇಳಿದರು.

`ಪುಟ್ಟಪ್ಪ, ನಾನು ನನ್ನ ಬದುಕಿನಲ್ಲಿ ಹಲವಾರು ಬಾರಿ ಆತ್ಮಹತ್ಯೆಗೆ ಮನಸ್ಸು ಮಾಡಿದ್ದೆ. ಆಗೆಲ್ಲಾ ನನ್ನನ್ನು ರಕ್ಷಿಸಿದ್ದು ರಾಮಾಯಣ, ಮಹಾಭಾರತ, ಪ್ಲೇಟೊ, ಅರಿಸ್ಟಾಟಲ್ ಮುಂತಾದವರು. ಈಗ ಅದೆಲ್ಲಾ ಯಾಕೆ. ನೀವು ಅಕ್ಷರದಲ್ಲಿ ಮಹಾಕಾವ್ಯ ರಚಿಸಿದ್ದೀರಿ. ನಾನು ಕಲ್ಲಿನಲ್ಲಿ ಮಹಾಕಾವ್ಯ ರಚಿಸಿದ್ದೇನೆ. ನೋಡೋಣ ಬನ್ನಿ' ಎಂದು ಕುವೆಂಪು ಅವರನ್ನು ವಿಧಾನಸೌಧ ತೋರಿಸಲು ಕರೆದುಕೊಂಡು ಹೋದರು. ಈ ಘಟನೆ ನಡೆದಾಗ ದೇಜಗೌ ಅವರು ಕುವೆಂಪು ಅವರೊಂದಿಗೆ ಇದ್ದರು.
***
ಒಮ್ಮೆ ವಿನೋಬಾ ಭಾವೆ ಅವರು ಮೈಸೂರಿಗೆ ಬಂದಿದ್ದರು. ಅವರನ್ನು ಕಾಣಲು ಕುವೆಂಪು ಹೋದರು. ಕುವೆಂಪು ಅವರ `ರಾಮಾಯಣ ದರ್ಶನಂ' ಕಾವ್ಯವನ್ನು ವಿನೋಬಾ ಭಾವೆ ಅವರೂ ಓದಿದ್ದರು. ಭಾವೆ ಅವರನ್ನು ಭೇಟಿ ಮಾಡಿ ಹೊರಡುವಾಗ ಕುವೆಂಪು ಅವರಿಗೆ ವಿನೋಬಾ ಅವರು, `ನೀವು ನಿಮ್ಮ ಮನೆಗೆ ನನ್ನನ್ನು ಕರೆದೇ ಇಲ್ಲ' ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಕುವೆಂಪು ಉತ್ತರ `ಧನ್ಯೋಸ್ಮಿ' ಎಂದಷ್ಟೆ.

ನಂತರ ವಿನೋಬಾ ಕುವೆಂಪು ಅವರ `ಉದಯ ರವಿ'ಗೆ ಬಂದರು. ಕುವೆಂಪು `ರಾಮಾಯಣ ದರ್ಶನಂ' ಬರೆದ ಜಾಗವನ್ನು ಕೇಳಿ ತಿಳಿದುಕೊಂಡು ಅಲ್ಲಿಯೇ ಕೊಂಚ ಕಾಲ ಧ್ಯಾನಸ್ಥರಾಗಿ ಕುಳಿತುಕೊಂಡರು. ಕೆಲವರಿಂದ `ರಾಮಾಯಣ ದರ್ಶನಂ'ನ ಕೆಲವು ಭಾಗಗಳನ್ನು ಮತ್ತೆ ಓದಿಸಿಕೊಂಡರು. ನಂತರ ಪುರಭವನದಲ್ಲಿ ನಡೆದ ಸಮಾರಂಭದಲ್ಲಿಯೂ ಕುವೆಂಪು ಅವರನ್ನು `ಸಂತ' ಎಂದು ಕರೆದು ಹೊಗಳಿದರು.
***
ಕುವೆಂಪು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಆಗಿದ್ದಾಗ ಕೆಲವು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿತ್ತು. ಆಗ ಒಬ್ಬ ಸಚಿವರು ಕುವೆಂಪು ಅವರಿಗೆ ಫೋನ್ ಮಾಡಿ ತಮ್ಮ ಕಡೆಯವರನ್ನು ಆಯ್ಕೆ ಮಾಡಿಕೊಳ್ಳುವಂತೆ ಒತ್ತಡ ಹೇರಿದರು. ಕುವೆಂಪು ನಿರಾಕರಿಸಿದರು. ಅದಕ್ಕೆ ಸಚಿವರು `ನನ್ನ ಮಾತನ್ನೇ ಕೇಳುವುದಿಲ್ಲವೇ ನಿಮ್ಮನ್ನು ನೋಡಿಕೊಳ್ಳುತ್ತೇನೆ' ಎಂದರು. ಆಗ ಕುವೆಂಪು `ಏನ್ ನೋಡಿಕೊಳ್ಳುತ್ತೀಯಾ, ರ‌್ಯಾಸ್ಕಲ್' ಎಂದು ಫೋನ್ ಇಟ್ಟುಬಿಟ್ಟರು. ಈ ಘಟನೆಗೂ ತಾವೇ ಸಾಕ್ಷಿ ಎಂದು ದೇಜಗೌ ಹೇಳುತ್ತಾರೆ.
***
ರಾಜಕೀಯ ಮತ್ತು ರಾಜಕಾರಣದ ಬಗ್ಗೆ ಕುವೆಂಪು ಅವರಿಗೆ ಸಿಟ್ಟಿತ್ತು. ಅವರು ತಮ್ಮ `ವಿಚಾರ ಕ್ರಾಂತಿಗೆ ಆಹ್ವಾನ' ಎಂಬ ಭಾಷಣದಲ್ಲಿ ರಾಜಕೀಯದ ಬಗ್ಗೆ ಸಾಕಷ್ಟು ಮಾತನಾಡುತ್ತಾರೆ. ನೀತಿ ಸೂಕ್ತಿಗಳನ್ನು ಸಾಮೂಹಿಕವಾಗಿ ಯಾಂತ್ರಿಕವಾಗಿ ಉಚ್ಚರಿಸಿ ಪ್ರತಿಜ್ಞೆ ಮಾಡಿದ್ದ ಲಕ್ಷಾಂತರ ಸ್ನಾತಕರೇ ಇಂದು ರಾಜಕೀಯ ರಂಗದಲ್ಲಿ, ಆರ್ಥಿಕ, ಅಧಿಕಾರ, ಶಿಕ್ಷಣ ರಂಗದಲ್ಲಿ ನಿರ್ಲಜ್ಜರಾಗಿ ಪಾಪಮಯ ಭ್ರಷ್ಟಾಚಾರದಲ್ಲಿ ತೊಡಗಿ ದೇಶವನ್ನು ದುರ್ಗತಿಗೆ ಒಯ್ಯುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ನಮ್ಮಲ್ಲಿ `ಡೆಮಾಕ್ರಸಿ' ಎನ್ನುವುದು ಬರಿಯ `ಮಾಕರಿ'ಯಾಗಿದೆ. ಕೋಟ್ಯಧೀಶರಲ್ಲದವರು ಚುನಾವಣೆಯಲ್ಲಿ ಗೆಲ್ಲುವುದು ಹಾಗಿರಲಿ, ನಿಲ್ಲುವುದು ಕೂಡ ಅಸಾಧ್ಯವಾಗಿದೆ. ಜಾತಿ, ಮತ, ಹೆಂಡ, ದುಡ್ಡು ಇವೇ ಓಟರುಗಳಾಗಿವೆ. ಓಟು ಕೊಡುವ ಪ್ರಜೆಗಳು ಬರಿಯ ನಿಮಿತ್ತ ಮಾತ್ರ. ಮೂಕ ವಾಹನಗಳಷ್ಟೆ. ನಾಲ್ಕಾರು ಜನ ಯಾತಕ್ಕೂ ಹೇಸದ ಖದೀಮರು ಸೇರಿ ಯಾವ ಉಪಾಯದಿಂದಾದರೂ ಕಾಳಸಂತೆಯ ಕಪ್ಪು ಹಣವೋ, ಕಳ್ಳ ಸಾಗಾಣಿಕೆಯ ಹಳದಿ ಹಣವೋ ಅಂತೂ ಹೆಚ್ಚು ಹಣ ಒಟ್ಟು ಮಾಡಿದರಾಯ್ತು ಚುನಾವಣೆ ಗೆಲ್ಲಬಹುದು.

ಒಮ್ಮೆ ಗೆದ್ದು ಅಧಿಕಾರ ಹಿಡಿದರಾಯ್ತು. ನಾಡಿನ ಸರ್ವ ಪ್ರಚಾರ ಮಾರ್ಗಗಳನ್ನು ಅಧಿಕಾರದ ಭಯದಿಂದಲೋ ದುಡ್ಡಿನ ಬಲದಿಂದಲೋ ವಶಪಡಿಸಿಕೊಳ್ಳಬಹುದು. ಒಮ್ಮೆ ಜನಶಕ್ತಿ ಪ್ರತಿಭಟನೆಗೆ ನಿಂತರೂ ಪೊಲೀಸ್, ಸೇನೆ ಬಳಸಿ ವಿಫಲಗೊಳಿಸಬಹುದು ಎಂದು ಅವರು ಆಗಲೇ ಸಿಟ್ಟು ಕಾರಿದ್ದರು. ಗುಡುಗಿದ್ದರು. ಈಗಿನ ರಾಜಕೀಯವನ್ನು ನೋಡಿದ್ದರೆ ಏನು ಹೇಳುತ್ತಿದ್ದರೋ ಏನೋ?

ಚಿತ್ರಗಳು: ಲೀಲಾ ಅಪ್ಪಾಜಿ ಅವರ ಸಂಗ್ರಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT