ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ವಿ.ವಿ ದೂರಶಿಕ್ಷಣ ಪರೀಕ್ಷೆಯಲ್ಲಿ ಸಾಮೂಹಿಕ ನಕಲು

Last Updated 18 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬಳ್ಳಾರಿ: ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯ ದೂರಶಿಕ್ಷಣ ನಿರ್ದೇಶ­ನಾ­ಲಯದ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಸಾಮೂ­ಹಿಕ ನಕಲು ಮಾಡುತ್ತಿದ್ದುದನ್ನು ಜಿಲ್ಲಾ­ಡಳಿತ ಬುಧವಾರ ದಿಢೀರ್‌ ದಾಳಿ ಮೂಲಕ ಪತ್ತೆಹಚ್ಚಿತು.

ನಗರದ ಗುಗ್ಗರಹಟ್ಟಿ ಪ್ರದೇಶ­ದಲ್ಲಿರುವ ಶರಭೇಶ್ವರ ನರ್ಸಿಂಗ್‌ ಕಾಲೇಜಿನಲ್ಲಿ ಸ್ಥಳೀಯ ಶ್ರೀ ಸಾಯಿ ಶಿಕ್ಷಣ ಅಕಾಡೆಮಿ ಸಹಯೋಗದಲ್ಲಿ ಈ ಪರೀಕ್ಷೆ ನಡೆಯುತ್ತಿದ್ದು, ಉಪ ವಿಭಾಗಾಧಿಕಾರಿ ಅನಿರುದ್ಧ್‌ ಶ್ರವಣ್‌ ನೇತೃತ್ವದ ತಂಡ ದಾಳಿ ನಡೆಸಿತು.

ಎಂ.ಎ, ಎಂ.ಕಾಂ, ಎಂ.ಎಸ್‌ಸಿ ಪರೀಕ್ಷೆ ಬರೆಯುತ್ತಿದ್ದವರು ಸಾಮೂಹಿಕ ನಕಲು ನಡೆಸುತ್ತಿದ್ದುದನ್ನು ಪತ್ತೆಹಚ್ಚಿ ಬೆಳಿಗ್ಗೆ ದಾಳಿಯ ವೇಳೆ ಎಚ್ಚರಿಕೆ ನೀಡಲಾಗಿ­ತ್ತಾದರೂ ಮಧ್ಯಾಹ್ನ ಮತ್ತೆ ನಕಲು ಮುಂದುವರಿದಿತ್ತು.

ಪರೀಕ್ಷೆ ಬರೆಯಲು ಪಕ್ಕ ಪಕ್ಕದಲ್ಲೇ ಅಭ್ಯರ್ಥಿಗಳನ್ನು ಸಾಲಾಗಿ ಕೂರಿಸ­ಲಾಗಿತ್ತು. ಪ್ರತಿ ಕೊಠಡಿಯಲ್ಲಿ ನೂರಾರು ಅಭ್ಯರ್ಥಿಗಳಿಗೆ ಆಸನ ವ್ಯವಸ್ಥೆ ಕಲ್ಪಿಸಿ, ನಕಲು ಮಾಡಲು ಅವಕಾಶ ಕಲ್ಪಿಸ­ಲಾಗಿದೆ. ಅನೇಕರು ಗೈಡ್‌, ಪಠ್ಯಪುಸ್ತಕ ಮತ್ತು ನೋಟ್ಸ್‌ಗಳ ನೆರವು ಪಡೆ­ಯುತ್ತಿದ್ದುದು ಸ್ಥಳಕ್ಕೆ ಭೇಟಿ ನೀಡಿದ ‘ಪ್ರಜಾವಾಣಿ’ ಪ್ರತಿನಿಧಿಗೆ ಕಂಡುಬಂತು.

ಪರೀಕ್ಷಾ ಮೇಲ್ವಿಚಾರಕರನ್ನಾಗಿ ಸ್ಥಳೀಯ ಪದವಿ ಕಾಲೇಜಿನ ವಿದ್ಯಾರ್ಥಿಗಳನ್ನು ನಿಯೋಜಿಸಲಾಗಿದೆ. ಅಲ್ಲದೆ, ಕೆಲವು ಅಭ್ಯರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳಲ್ಲಿ ಉತ್ತರ ಬರೆಯಲು ವ್ಯವಸ್ಥೆ ಕಲ್ಪಿಸಲಾಗಿದೆ.

ಶಿವಮೊಗ್ಗ ವಿವಿಯ ಈ ಪರೀಕ್ಷೆ ಬರೆಯಲು ಆಯಾ ಜಿಲ್ಲೆಗಳಲ್ಲೇ ದೂರಶಿಕ್ಷಣ ಕೇಂದ್ರಗಳಿದ್ದರೂ, ಶಿವಮೊಗ್ಗ ಜಿಲ್ಲೆಯವರೇ ಬಳ್ಳಾರಿಯಲ್ಲಿ ಪರೀಕ್ಷೆ ಬರೆಯಲು ಪ್ರವೇಶ ಪಡೆದಿದ್ದಾರೆ. ಬೆಂಗಳೂರು, ಮೈಸೂರು, ತುಮಕೂರು, ದಾವಣಗೆರೆ, ಚಿತ್ರದುರ್ಗ ಹಾಗೂ ಕೊಪ್ಪಳ, ಬಳ್ಳಾರಿ, ಧಾರವಾಡ, ಗುಲ್ಬರ್ಗ, ಹಾವೇರಿ, ಉತ್ತರ ಕನ್ನಡ ಮತ್ತಿತರ ಜಿಲ್ಲೆಗಳ ಅಭ್ಯರ್ಥಿಗಳು, ‘ನಕಲು ಮಾಡಲು ಅವಕಾಶ ದೊರೆಯುತ್ತದೆ’ ಎಂಬ ಕಾರಣದಿಂದ ಇಲ್ಲಿ ಪರೀಕ್ಷೆಗೆ ಕುಳಿತಿದ್ದಾರೆ.

ಅಭ್ಯರ್ಥಿಗಳಲ್ಲಿ ಬಹುತೇಕ ಮಂದಿ ಸರ್ಕಾರಿ ನೌಕರರು. ಅದರಲ್ಲೂ ಹೆಚ್ಚಿನವರು  ಪ್ರಾಥಮಿಕ ಮತ್ತು ಪ್ರೌಢ­ಶಾಲಾ ಶಿಕ್ಷಕರು. ಬಡ್ತಿಗಾಗಿ ಉನ್ನತ ಪದವಿ ಪಡೆಯುವ ಇರಾದೆ­ಯಿಂದ ಪರೀಕ್ಷೆ ಬರೆ­ಯುತ್ತಿದ್ದಾರೆ ಎಂದು ದೂರಶಿಕ್ಷಣ ಕೇಂದ್ರದ ಸ್ಥಳೀಯ ಸಿಬ್ಬಂದಿ ತಿಳಿಸಿದರು.

‘ನಕಲು ಮಾಡಲು ಅವಕಾಶ ನೀಡ­ದಂತೆ ಎಚ್ಚರಿಕೆ ನೀಡಿದ್ದರೂ ಸಂಘಟಕರು ಆದೇಶ ಪಾಲಿಸುತ್ತಿಲ್ಲ. ನಮಗೇ ಬೆದರಿಕೆ ಒಡ್ಡಲಾಗುತ್ತಿದೆ’ ಎಂದು ಕುವೆಂಪು ವಿ.ವಿಯಿಂದ ಬಂದಿದ್ದ ಮುಖ್ಯ ಪರೀಕ್ಷಾ ಮೇಲ್ವಿಚಾರಕ ಬಾಲಸ್ವಾಮಿ ಸಮ­ಜಾಯಿಷಿ ನೀಡಿದರು.

‘ಸರ್ಕಾರಿ ನೌಕರರು ಪರೀಕ್ಷೆ ಬರೆಯುತ್ತಿದ್ದಾರೆ. ಅವರಿಗೆ  ಓದು­ವುದಕ್ಕೆ ಸಮಯ ಇರುವುದಿಲ್ಲ ಎಂದೇ ಮಾನವೀಯ ನೆಲೆಯಲ್ಲಿ ನಕಲು ಮಾಡಲು ಅವಕಾಶ ಕಲ್ಪಿಸಲಾಗಿದೆ’ ಎಂದು ಶ್ರೀ ಸಾಯಿ ಶಿಕ್ಷಣ ಅಕಾಡೆಮಿಯ ಸಿಬ್ಬಂದಿಯೊಬ್ಬರು  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT