ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪುಗೂ ಜಾತಿ ಸಂಕೋಲೆ: ಚಂಪಾ

Last Updated 23 ಜನವರಿ 2012, 6:05 IST
ಅಕ್ಷರ ಗಾತ್ರ

ಹುಣಸೂರು: ಜಾತಿ ಪಿಡುಗಿನಿಂದ ಸಮಾಜವನ್ನು ಮುಕ್ತವಾಗಿಸಬೇಕು ಎಂಬ ಕನಸು ಕಂಡಿದ್ದ ವಿಶ್ವ ಮಾನವ ಕುವೆಂಪು ಅವರನ್ನೇ ಇತ್ತೀಚೆಗೆ ಒಂದು ಕೋಮಿಗೆ ಸೀಮಿತಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಭಾನುವಾರ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್, ಸ್ಪಂದನಾ ಸಾಂಸ್ಕೃತಿಕ ಪರಿಷತ್ ಮತ್ತು ತಾಲ್ಲೂಕು ಒಕ್ಕಲಿಗರ ಸಂಘ ಹಮ್ಮಿಕೊಂಡಿದ್ದ `ರಾಷ್ಟ್ರಕವಿ ಕುವೆಂಪು- ಒಂದು ನೆನಪು~ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿದರು.

`ಕುವೆಂಪು ಎಲ್ಲ ವರ್ಗದಲ್ಲಿಯೂ ಸಮಾನತೆ ಕಾಣಬೇಕು ಎಂದು ಹಂಬಲಿಸುತ್ತಿದ್ದವರು. ವಿಶ್ವಮಾನವ ಸಂದೇಶ ನೀಡಿದ ಈ ಮಹಾಕವಿಯನ್ನು ಕೆಲವರು ತಮ್ಮ ಜಾತಿಯ ಆಸ್ತಿ ಎಂಬಂತೆ ವರ್ತಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಎಷ್ಟೇ ಸಾಹಿತಿಗಳಿದ್ದರೂ ಕುವೆಂಪು ಅವರಿಗೆ ವಿಶೇಷ ಸ್ಥಾನವಿದೆ~ ಎಂದು ಹೇಳಿದರು.

`ಕುವೆಂಪು ಸಾಹಿತ್ಯದಲ್ಲಿ ಮಾಡಿದ ಕೃಷಿ ಅಪಾರ. ತಮ್ಮನ್ನು ಸಾಹಿತ್ಯಕ್ಕೆ ಸೀಮಿತಗೊಳಿಸದ ಅವರು, ಸಾಂಸ್ಕೃತಿಕ ಹರಿಕಾರರಾಗಿಯೂ ಗುರುತಿಸಿಕೊಂಡ ಅಪರೂಪದ ವ್ಯಕ್ತಿ. ಅವರ ಚಿಂತನಾಶಕ್ತಿಗೆ ಅಂತ್ಯ ಎಂಬುದೇ ಇಲ್ಲ~ ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ಜೈನಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಪದ್ಮರಾಜಶೇಖರ್ ಮಾತನಾಡಿ, `ಆದಿಕವಿ ಪಂಪನನ್ನು ಮಹಾಕವಿ ಎಂದು ವರ್ಣಿಸಿದ್ದರೂ, ಇಂದಿನ ಕಾಲಕ್ಕೆ ಕುವೆಂಪು ಅವರೇ ಮಹಾಕವಿ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅವರು ಸಾಹಿತ್ಯ ಕೃಷಿ ಮಾಡಿದ ಕಾರಣ ಯಾವ ಕಾಲಕ್ಕೂ ಕುವೆಂಪು ಅವರೇ ಕನ್ನಡದ ಮಹಾಕವಿ~ ಎಂದರು.

`ಮಹಿಳೆಯರ ಮನಸ್ಥಿತಿ ಅರಿತ ಕುವೆಂಪು ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಗೆ ವಿಶಿಷ್ಠ ಸ್ಥಾನ ನೀಡಿದ್ದಾರೆ. ಮಹಿಳಾ ಸಾಹಿತ್ಯಕ್ಕೆ ಅವರಿಂದಲೇ ಹೊಸ ಆಯಾಮ ಸಿಕ್ಕಿದೆ~ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಕೆ.ಎಸ್. ಭಗವಾನ್ ವಹಿಸಿದ್ದರು. ಎಂ.ವಿ. ದೇವಶೆಟ್ಟಿಗೌಡ ಕುವೆಂಪು ಭಾವಚಿತ್ರ ಅನಾವರಣ ಮಾಡಿದರು. ಸತೀಶ್ ಜವರೇಗೌಡ ಪ್ರಾಸ್ತಾವಿಕ ಮಾತನಾಡಿದರು.

ವೇದಿಕೆಯಲ್ಲಿ ತಹಶೀಲ್ದಾರ್ ಲೋಕನಾಥ್, ಪೊಲೀಸ್ ಅಧಿಕಾರಿಗಳಾದ ಮುದ್ದುಮಹದೇವಯ್ಯ, ಗಜೇಂದ್ರಪ್ರಸಾದ್, ಡೈರಿ  ರಾಮಕೃಷ್ಣೇಗೌಡ, ರವಿಕುಮಾರ್ ಮೆಕ್ಯಾ ಇದ್ದರು. ಬಾಲಕೃಷ್ಣ ಸ್ವಾಗತಿಸಿದರು. ಕೃಷ್ಣಕುಮಾರ್  ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT