ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ ಅಗ್ನಿಶಾಮಕ:ನೀರಿಗೆ ಬರ

Last Updated 4 ಏಪ್ರಿಲ್ 2013, 7:06 IST
ಅಕ್ಷರ ಗಾತ್ರ

ಕುಷ್ಟಗಿ: ಅಗ್ನಿಶಾಮಕ ಠಾಣೆಯಂದರೆ ಅಲ್ಲಿ ನೀರಿನ ಅವಶ್ಯಕತೆ ಎಷ್ಟೆಂಬುದನ್ನು ವಿವರಿಸುವ ಅಗತ್ಯವಿಲ್ಲ. ಮೊದಲೇ ಬೇಸಿಗೆ ಅನಾಹುತಗಳು ಸಂಭವಿಸಿದಾಗ ಠಾಣೆಯಲ್ಲಿರುವ ಬೆಂಕಿ ನಂದಿಸುವ ವಾಹನಗಳಿಗೆ ನೀರಿನ ಕೊರತೆ ಎದುರಾಗುವುದು ಒಂದೆಡೆಯಾದರೆ, ಸಿಬ್ಬಂದಿ ಕುಟುಂಬಗಳು ಕುಡಿಯುವ ಮತ್ತು ಬಳಕೆ ನೀರಿಗಾಗಿ ಪರದಾಡುತ್ತಿರುವುದು ಇನ್ನೊಂದೆಡೆ. ಯಾರೂ ಕೇಳೋರಿಲ್ಲ.

ಇದು ಪಟ್ಟಣದಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ಕಂಡುಬರುತ್ತಿರುವ ಚಿತ್ರಣ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಅಗ್ನಿ ಶಾಮಕ ಠಾಣೆಯ ಸುಸಜ್ಜಿತ, ಅಷ್ಟೇ ಸುಂದರ ಕಟ್ಟಡವಿದೆ, ಎರಡು ವಾಹನಗಳಿವೆ, ಅಧಿಕಾರಿ ಸಹಿತ 14 ಜನ ಸಿಬ್ಬಂದಿ ಇದ್ದಾರೆ. ಆದರೆ ನೀರಿನದ್ದೇ ಮೂಲ ಸಮಸ್ಯೆಯಾಗಿರುವ ಇಲ್ಲಿ ಇತರೆ ಅನುಕೂಲಗಳು ಇದ್ದರೂ ಪ್ರಯೋಜನ ಇಲ್ಲದಂತಾಗಿದೆ.

ಅಗ್ನಿಶಾಮಕ ಠಾಣೆಯ ಅಗತ್ಯತೆಯನ್ನು ಪ್ರತಿಪಾದಿಸಿ ಮಂಜೂರು ಮಾಡಿಸಿಕೊಂಡ ಇಲ್ಲಿಯ ಪ್ರತಿನಿಧಿಗಳು, ಸಾರ್ವಜನಿಕರು ನೀರಿನ ಸಮಸ್ಯೆ ಬಗ್ಗೆ ಮಾತ್ರ ಚಕಾರ್ ಎತ್ತುತ್ತಿಲ್ಲ. ಬೇಸಿಗೆ, ಮುಂಗಾರು ಹಂತದಲ್ಲಿ ಸಿಡಿಲಿನಿಂದ ಅನಾಹುತಗಳಂಥ ತುರ್ತು ಸಂದರ್ಭದಲ್ಲಿ ನೀರಿಗಾಗಿ ಠಾಣೆ ಸಿಬ್ಬಂದಿ ವಾಹನಗಳೊಂದಿಗೆ ರೈತರ ಹೊಲಗದ್ದೆಗಳಿಗೆ ಅಲೆಯುವಂತಾಗಿದೆ. ಮದಲಗಟ್ಟಿ ಬಳಿ ಪುರಸಭೆ ಕೊಳವೆಬಾವಿ ಇದ್ದರೂ ಟ್ಯಾಂಕ್ ತುಂಬಿಸಿಕೊಳ್ಳಲು ತಾಸುಗಟ್ಟಲೇ ನಿಲ್ಲಬೇಕು. ಎರಡೂ ವಾಹನಗಳು ಹಳೆಯದಾಗಿದ್ದು ಕೆಲಸ ಸುಗಮವಾಗುವುದಿಲ್ಲ ಎಂಬ ಹೇಳಿಕೆ ಠಾಣಾಧಿಕಾರಿ ಕೆ.ಪುಟ್ಟಸ್ವಾಮಿ ಅವರದು.

ಪಕ್ಕದಲ್ಲೇ ಆಲಮಟ್ಟಿಯಿಂದ ಜಿಂದಾಲ ಕಂಪೆನಿಗೆ ನೀರು ಪೂರೈಸುವ ಬೃಹತ್ ಕೊವೆಗಳಿವೆ. ಆದರೆ ಹನಿ ಕುಡಿಯುವ ನೀರಿಗೂ ಠಾಣೆ ಸಿಬ್ಬಂದಿ ಕುಟುಂಬಗಳು ಸಾಕಷ್ಟು ತೊಂದರೆ ಅನುಭವಿಸುತ್ತಿವೆ. ಕಳೆದ ನಾಲ್ಕು ವರ್ಷಗಳಿಂದಲೂ ಕುಡಿಯುವ ನೀರಿನ ಸಮಸ್ಯೆ ಇದೆ, ಮೊದಲು ಖಾಸಗಿ ಕೊಳವೆಬಾವಿಯಿಂದ ನೀರು ಪಡೆಯುತ್ತಿದ್ದೆವು, ಅದನ್ನು ಪುರಸಭೆಯವರು ಬಂದ್ ಮಾಡಿಸಿದರು, ಪುರಸಭೆಯ ನಲ್ಲಿ ಸಂರ್ಪಕವೂ ಇಲ್ಲ, ಮಕ್ಕಳು ಮಹಿಳೆಯರು, ಅಷ್ಟೇ ಏಕೆ ಬೆಂಕಿ ಆರಿಸಲು ಹೋಗವಂಥ ಸಂದರ್ಭದಲ್ಲಿ ಸಿಬ್ಬಂದಿ ಸ್ವತಃ ಕೊಡ ಹಿಡಿದು ನೀರಿಗಾಗಿ ಪಕ್ಕದ ಗ್ರಾನೈಟ್ ಕಂಪೆನಿಗಳಿಗೆ ಅಲೆದಾಡುವಂತಾಗಿದೆ, ನೀರಿನ ಸಮಸ್ಯೆಯನ್ನು ತಹಶೀಲ್ದಾರರು, ಮುಖ್ಯಾಧಿಕಾರಿ, ಶಾಸಕರ ಬಳಿ ತೋಡಿಕೊಂಡರೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ ಎಂದು ಸಿಬ್ಬಂದಿ ಬಿ.ಪೋಲಪ್ಪ, ಕೆ.ಆರ್.ಗಚ್ಚಿನಮನಿ ಇತರರು ಗೋಳು ತೋಡಿಕೊಂಡರು.

ಇದ್ದೂ ಇಲ್ಲದ ಬಾವಿ: ಐದಾರು ತಿಂಗಳ ಹಿಂದೆ ಹೆದ್ದಾರಿ ಪಕ್ಕದಲ್ಲಿ ಠಾಣೆಗಾಗಿಯೇ ಕೊರೆದಿದ್ದ ಕೊಳವೆಬಾವಿಯಲ್ಲಿ ಉತ್ತಮ ನೀರಿದೆ ಆದರೆ ಬೋಲ್ಡರ್ಸ್‌ಗಳಿಂದ ಅದು ಮುಚ್ಚಿಕೊಂಡಿದೆ. ರೀಫ್ಲೆಷ್ ಮಾಡಿಸುವುದಾಗಿ ಹೇಳಿದ್ದ ಪುರಸಭೆ ತನ್ನ ಮಾತನ್ನು ಮರೆತಿದೆ ಎಂದು ಎಂಬ ದೂರು ಕೇಳಿಬಂದಿತು. ನೀರಿನ ಸಮಸ್ಯೆ ಬಗ್ಗೆ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಸ್ವತಃ ಮುಖ್ಯಾಧಿಕಾರಿಯನ್ನು ಭೇಟಿ ಮಾಡಿದರೂ ಪ್ರಯೋಜನವಾಗಿಲ್ಲ, ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದಾಗಿ ಹೇಳಿ ಮತ ಪಡೆದಿದ್ದ ಹಿಂದಿನ ಪುರಸಭೆ ಸದಸ್ಯರು ನಂತರ ಅದರತ್ತ ಹೊರಳಿ ನೋಡಲಿಲ್ಲ ಎಂದು ತಿಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT