ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ:ಜೈಲಲ್ಲಿ ಮೋಜು!

Last Updated 22 ಜೂನ್ 2012, 6:20 IST
ಅಕ್ಷರ ಗಾತ್ರ

ಕುಷ್ಟಗಿ: ವಿಚಾರಣಾಧೀನ ಕೈದಿಗಳನ್ನು ಇಡುವ ಇಲ್ಲಿಯ ಉಪಕಾರಾಗೃಹದ ಒಳಗೆ ಮದ್ಯ, ತಂಬಾಕು ಇತರೆ ವಸ್ತುಗಳು  ಸರಬರಾಜಾಗಿರುವುದು ಗುರುವಾರ ಇಲ್ಲಿಯ ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ವಿ.ವೆಂಕಟೇಶಪ್ಪ ಕಾರಾಗೃಹಕ್ಕೆ ಖುದ್ದು ಭೇಟಿ ನೀಡಿದಾಗ  ಕಂಡುಬಂದವು.

ನ್ಯಾಯಾಧೀಶರ ಸೂಚನೆಯಂತೆ ಪೊಲೀಸರು ಎರಡೂ ಸೆಲ್‌ಗಳಲ್ಲಿ ಹುಡುಕಾಟ ನಡೆಸಿದಾಗ ಕೈದಿಗಳ ಬಳಿ ಇದ್ದ ಹೈವಾರ್ಡ್ಸ್ ವಿಸ್ಕಿ ಮದ್ಯದ ಪಾಕೆಟ್, ಗುಟಕಾ, ಬೀಡಿ, ತಂಬಾಕುಗಳು ಒಂದೊಂದಾಗಿ ಬಯಲಿಗೆ ಬಂದವು. ಇವುಗಳನ್ನು ಕೊಟ್ಟಿದ್ದು ಯಾರು ಎಂಬುದನ್ನು ಕೈದಿಗಳು ಬಾಯಿಬಿಡಲಿಲ್ಲ. ನ್ಯಾಯಾಧೀಶರು ಅಲ್ಲಿದ್ದ ಸಿಬ್ಬಂದಿಯನ್ನು ವಿಚಾರಿಸಿದಾಗ ಮೌನವೇ ಅವರ ಉತ್ತರವಾಗಿತ್ತು.

ತುಳುಕಿದ ಶೌಚ: ಅಲ್ಲದೇ ಮೂಲಸೌಕರ್ಯಗಳಲ್ಲಿ ಒಂದಾದ ಶೌಚಾಲಯ ವ್ಯವಸ್ಥೆ ನಿರ್ವಹಣೆ ಅಸಮರ್ಪಕವಾಗಿರುವುದು ಕಂಡುಬಂದಿತು. ಸೆಪ್ಟಿಕ್ ಟ್ಯಾಂಕ್‌ಗಳು ಎಷ್ಟೋ ತಿಂಗಳು ಹಿಂದೆಯೇ ತುಂಬಿದ್ದು ಶೌಚ ತುಳುಕಿ ಹೊರಸೂಸುತ್ತಿತ್ತು. ಆದರೆ ಗುರುವಾರ ನ್ಯಾಯಾಧೀಶ ಭೇಟಿ ಸುಳಿವು ಅರಿತೇ ಕಂದಾಯ ಇಲಾಖೆ ಸಿಬ್ಬಂದಿ ಶೌಚಗುಂಡಿಯನ್ನು ಸ್ವಚ್ಛಗೊಳಿಸಿದ್ದು ಕಂಡುಬಂದಿತು. ಇಂಥ ಪರಿಸರದಲ್ಲಿ ಮನುಷ್ಯ ಇರಲು ಸಾಧ್ಯವೆ ಎಂದು ಸಿಬ್ಬಂದಿಯನ್ನು ಪ್ರಶ್ನಿಸಿದರು.

ವರದಿ:  ಕುರಿತು ವಿವರ ನೀಡಿದ ನ್ಯಾಯಾಧೀಶರು, ಮದ್ಯ, ತಂಬಾಕು, ಗುಟಕಾ ದೊರೆತಿರುವುದು, ಶೌಚಾಲಯ ನಿರ್ವಹಣೆ ವ್ಯವಸ್ಥೆ ಅಸಮರ್ಪಕ ನಿರ್ವಹಣೆ ಸೇರಿದಂತೆ ಭೇಟಿ ಸಂದರ್ಭದಲ್ಲಿ ಕಂಡುಬಂದ ನೂನ್ಯತೆಗಳನ್ನು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ, ಬಂದೀಖಾನೆ ಮಹಾನಿರ್ದೇಶಕರಿಗೆ ವರದಿ ನೀಡುವುದಾಗಿ ತಿಳಿಸಿದರು.

ಕಾರಾಗೃಹದ ಮುಖ್ಯದ್ವಾರದ ಮೂಲಕ ಯಾರೇ ಒಳಗೆ ಬರುವ ಹೊರಗೆ ಹೋಗುವವರನ್ನು ಪೊಲೀಸರು ತಪಾಸಣೆ ಮಾಡಿಯೇ ಬಿಡುತ್ತಾರೆ. ಆದರೂ ಕೈದಿಗಳ ಕೈಗೆ ಮದ್ಯ ಎಟಕಿದ್ದು ಹೇಗೆ? ಎಂಬುದು ಅಚ್ಚರಿಗೆ ಕಾರಣವಾಯಿತು. ಸದರಿ ಉಪಕಾರಾಗೃಹ ಕಂದಾಯ ಇಲಾಖೆ ಉಸ್ತುವಾರಿಯಲ್ಲಿದ್ದು ಕಾರಾಗೃಹ ನಿರ್ವಹಣೆ ಅಷ್ಟಕಷ್ಟೆ ಎನ್ನುವಂತಾಗಿದೆ. ತಿಳಿದಾಗೊಮ್ಮೆ ಶೌಚಾಲಯ ಸ್ವಚ್ಛಗೊಳಿಸುವ ಪರಿಪಾಠವಿದೆ ಎನ್ನಲಾಗಿದೆ.
ಕಳಪೆ ಊಟ: ಅಲ್ಲದೇ ಖಾನಾವಳಿಯವರು ತಮಗೆ ನೀಡುವ ಊಟವೂ ಕಳಪೆಯಾಗಿರುತ್ತದೆ, ನಮ್ಮ ಗೋಳು ಯಾರ ಮುಂದೆ ಹೇಳಬೇಕು ಎಂದೆ ಕೆಲ ಕೈದಿಗಳು ಅಳಲು ತೋಡಿಕೊಂಡರು.

ಯಲಬುರ್ಗಾ ಮತ್ತು ಕುಷ್ಟಗಿ ನಡುವೆ ಇದೊಂದೆ ಉಪಕಾರಾಗೃಹವಾಗಿದ್ದು ಇದನ್ನ ವಶಕ್ಕೆ ತೆಗೆದುಕೊಳ್ಳುವುದಾಗಿ ಬಂದೀಖಾನೆ ಇಲಾಖೆ ಅಧಿಕಾರಿ ಕೆಲ ವರ್ಷಗಳ ಹಿಂದೆ ಇಲ್ಲಿಗೆ ಭೇಟಿದಾಗ ತಿಳಿಸಿದ್ದರು. ಆದರೆ ಈವರೆಗೂ ಅಂಥ ಪ್ರಕ್ರಿಯೆ ನಡೆದಿಲ್ಲ.

ಮಲದ ಗುಂಡಿಗಿಳಿದರು!
ಕುಷ್ಟಗಿ ಮಾನವರಿಂದ ಶೌಚಗುಂಡಿ, ಮ್ಯಾನ್‌ಹೋಲ್‌ಗಳನ್ನು ಸ್ವಚ್ಛಗೊಳಿಸದೇ ಮಲಹೀರುವ ಯಂತ್ರ ಬಳಸುವಂತೆ ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದ್ದರೂ ಇಲ್ಲಿಯ ಉಪ ಕಾರಾಗೃಹದಲ್ಲಿನ ಶೌಚಗುಂಡಿಯನ್ನು ಮಾನವರಿಂದಲೇ ಸ್ವಚ್ಛಗೊಳಿಸಿದ್ದು ಗುರುವಾರ ಕಂಡುಬಂದಿತು.

ಈ ಕುರಿತು ವಿವರಿಸಿದ ಜೈಲಿನ ಅಧೀಕ್ಷ ನಾಗಪ್ಪ ಸಜ್ಜನ, ಸಕ್ಕಿಂಗ್‌ಯಂತ್ರಗಳನ್ನು ಜೈಲಿನ ಒಳಗೆ ತರಲು ಸಾಧ್ಯವಾಗಲಿಲ್ಲ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT