ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಆಹಾರ ಹಣದುಬ್ಬರ

Last Updated 5 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇತ್ತೀಚಿನ ವರ್ಷಗಳಲ್ಲಿಯೇ ಇದೇ ಮೊದಲ ಬಾರಿಗೆ ವಾರ್ಷಿಕ ಆಹಾರ ಹಣದುಬ್ಬರವು ಋಣಾತ್ಮಕ ತಿರುವು ಪಡೆದುಕೊಂಡಿದೆ.

ಸಗಟು ಬೆಲೆ ಸೂಚ್ಯಂಕ ಆಧರಿಸಿ ಅಳೆಯಲಾಗುವ ಆಹಾರ ಹಣದುಬ್ಬರವು ಡಿಸೆಂಬರ್ 24ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ (-) ಶೇ 3.36ಕ್ಕೆ ಕುಸಿದಿದೆ. ಅದಕ್ಕೂ ಹಿಂದಿನ ವಾರದಲ್ಲಿ ಶೇ  0.42ರಷ್ಟಿತ್ತು. 2010ರ ಇದೇ ಅವಧಿಯಲ್ಲಿ ಶೇ 21ರಷ್ಟಿತ್ತು.

ಕಳೆದ 6 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆಹಾರ ಹಣದುಬ್ಬರವು ಹೀಗೆ ನಕಾರಾತ್ಮಕ ದಿಕ್ಕಿನಲ್ಲಿ ಚಲಿಸಿದೆ.
ಆಹಾರ ಬೆಲೆ ಮಟ್ಟಕ್ಕೆ  ಸಂಬಂಧಿಸಿದಂತೆ ಗಮನಾರ್ಹ ಸುಧಾರಣೆ ಕಂಡು ಬಂದಿದ್ದು, ಇತ್ತೀಚಿನ ದಿನಗಳಲ್ಲಿ ಇದೇ ಮೊದಲ ಬಾರಿಗೆ ಋಣಾತ್ಮಕ ಕುಸಿತ ಕಂಡು ಬಂದಿದೆ ಎಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಪ್ರತಿಕ್ರಿಯಿಸಿದ್ದಾರೆ. 

ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಇಳಿಸಲು ಈ ವಿದ್ಯಮಾನವು ಇನ್ನಷ್ಟು ಉತ್ತೇಜನ ನೀಡಲಿದೆ ಎಂದು ಆರ್ಥಿಕ ಪರಿಣತರೂ ಅಂದಾಜಿಸಿದ್ದಾರೆ.

ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ ಅಂಶಗಳ ಪ್ರಕಾರ, ಹಿಂದಿನ ವರ್ಷದ ಬೆಲೆ ಮಟ್ಟಕ್ಕೆ ಹೋಲಿಸಿದರೆ, ಈರುಳ್ಳಿ ಶೇ 73ರಷ್ಟು, ಆಲೂಗಡ್ಡೆ ಶೇ 34 ಮತ್ತು ಗೋಧಿ ಶೇ 3.41ರಷ್ಟು ಅಗ್ಗವಾಗಿವೆ. ಒಟ್ಟಾರೆ ತರಕಾರಿಗಳ ಬೆಲೆ ಶೇ 50ರಷ್ಟು ಕಡಿಮೆಯಾಗಿದೆ.

ಆದರೆ, ಪ್ರೋಟಿನ್ ಆಧಾರಿತ ಆಹಾರ ಪದಾರ್ಥಗಳ ನೇತೃತ್ವದಲ್ಲಿ ಕೆಲ ಸರಕುಗಳು ದುಬಾರಿಯಾಗಿವೆ.  ಬೇಳೆಕಾಳು ಶೇ 14, ಹಾಲು ಶೇ 9.49, ಹಣ್ಣು ಶೇ 11, ದವಸಧಾನ್ಯ ಶೇ 2,   ಮೊಟ್ಟೆ, ಮಾಂಸ ಮತ್ತು ಮೀನು ಶೇ 14ರಷ್ಟು ತುಟ್ಟಿಯಾಗಿವೆ.

ನವೆಂಬರ್ ತಿಂಗಳಿನಲ್ಲಿ ಎರಡಂಕಿಗೆ ಏರಿದ್ದ ಆಹಾರ ಹಣದುಬ್ಬರವು, ಅಲ್ಲಿಂದಾಚೆಗೆ ಏರಿಕೆ ಕುಸಿಯುತ್ತಲೇ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT