ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ತೊಗರಿ ದರ; ಆತಂಕದಲ್ಲಿ ರೈತರು

Last Updated 24 ಡಿಸೆಂಬರ್ 2013, 7:00 IST
ಅಕ್ಷರ ಗಾತ್ರ

ಕೊಲ್ಹಾರ: ಕೊಲ್ಹಾರ ಸಮೀಪದ ತೆಲಗಿ, ಅಂಗಡಗೇರಿ, ಗೊಳಸಂಗಿ, ಕೂಡಗಿ, ಚಿಮ್ಮಲಗಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ಹೊಲಗಳಲ್ಲಿ ರೈತರೆಲ್ಲ ಈಗ ಭರದಿಂದ ತೊಗರಿ ಬೆಳೆಯನ್ನು ರಾಶಿ ಮಾಡುವುದರಲ್ಲಿ ತೊಡಗಿದ್ದಾರೆ. ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ತೊಗರಿ ಈಗ ಕಟಾವಿಗೆ ಬಂದಿದೆ.
ಕಳೆದ ಆರು ತಿಂಗಳಿಂದ ತೊಗರಿ ಬೆಳೆಯ ಪೋಷಣೆಯಲ್ಲಿ ತೊಡಗಿ, ಐದಾರು ಬಾರಿ ಕೀಟನಾಶಕ ಸಿಂಪರಣೆ ಮಾಡಿದ ರೈತರೆಲ್ಲ ತಮ್ಮ ಹೊಲದಲ್ಲಿ ಕಟಾವಿಗೆ ಬಂದ ತೊಗರಿಯನ್ನು ರಾಶಿ ಮಾಡುವುದರಲ್ಲಿ ಖುಷಿ ಪಡುತ್ತಿದ್ದರೂ ದಿನೇ ದಿನೇ ಕುಸಿಯುತ್ತಿರುವ ತೊಗರಿ ಧಾರಣೆಯಿಂದಾಗಿ ಆತಂಕಕ್ಕೆ ಒಳಗಾಗಿದ್ದಾರೆ.

‘ಕಳೆದ ವರ್ಷಕ್ಕಿಂತ ಈ ಬಾರಿ ತೊಗರಿಯ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಸುರಿದ ಅಲ್ಪ ಮಳೆಯ ನಡುವೆಯೇ ಉತ್ತಮ ತೊಗರಿ ಬೆಳೆಯಲು ಹೆಣಗಾಡಿದ್ದೇನೆ. ಕೀಟಬಾಧೆಯಿಂದ ತೊಗರಿ ಬೆಳೆಯನ್ನು ರಕ್ಷಿಸಲು ಸಾಲ ಮಾಡಿ ಐದರಿಂದ ಎಂಟು ಬಾರಿ ಕೀಟನಾಶಕ ಸಿಂಪಡಣೆ ಮಾಡಿದ್ದೇನೆ. ಆದರೆ ಮಾರುಕಟ್ಟೆಯಲ್ಲಿ ಈಗ ತೊಗರಿ ಧಾರಣೆ ಕುಸಿದಿರುವ ಸುದ್ದಿ ಕೇಳಿ  ನಾವೆಲ್ಲ ಕಂಗಾಲಾಗಿದ್ದೇವೆ’ ಎನ್ನುತ್ತಾರೆ ಅಂಗಡಗೇರಿ ಗ್ರಾಮದ ರೈತ ನಾಗಪ್ಪ ಮೆಂಡೆಗಾರ.

ಈ ತಿಂಗಳ ಆರಂಭದಲ್ಲಿ ಪ್ರತಿ ಕ್ವಿಂಟಾಲ್ ತೊಗರಿ ಬೆಲೆ ₨ 4200 ರಷ್ಟಿತ್ತು. ಈಗ ದಿಢೀರನೆ ತೊಗರಿ ಧಾರಣೆ ಇಳಿದು ಪ್ರತಿ ಕ್ವಿಂಟಾಲ್ ತೊಗರಿಗೆ ₨ 3450ಕ್ಕೆ ಕುಸಿದಿದೆ.ಇದು ರೈತರನ್ನು ಆತಂಕಕ್ಕೆ ಈಡು ಮಾಡಿದೆಯಲ್ಲದೇ, ರಾಶಿ ಮಾಡಿದ ತೊಗರಿಯನ್ನು ಮಾರಾಟ ಮಾಡಬೇಕೋ ಬಿಡಬೇಕೋ ಎಂಬ ಆತಂಕದಲ್ಲಿದ್ದಾರೆ.

ತೊಗರಿ ಬೆಳೆ ಬೆಳೆಯಲು ಭರ್ತಿ ಆರು ತಿಂಗಳು ಸಮಯ ತಗುಲುತ್ತದೆ. ಹೆಸರು ಮತ್ತು ಉದ್ದು ಬೆಳೆ ಬೆಳೆಯಲು ಕೇವಲ ಮೂರು ತಿಂಗಳು ಹಿಡಿಯುತ್ತದೆ. ಮೂರು ತಿಂಗಳು ಬೆಳೆಯುವ ಹೆಸರಿಗಿಂತಲೂ ತೊಗರಿಯ ಧಾರಣೆ ಕಡಿಮೆಯಾದದ್ದು ರೈತರಲ್ಲಿ ಆಕ್ರೋಶವನ್ನುಂಟು ಮಾಡಿದೆ.

ಪ್ರತಿ ಎಕರೆ ತೊಗರಿ ಬೆಳೆಯಲು ಅಂದಾಜು  ₨ 5000 ಖರ್ಚಾಗಿದೆ. ಆದರೆ ದಿಢೀರನೆ ಬೆಲೆ ಕುಸಿದು ಹೋಗಿದೆ. ಸರಕಾರ ಈಗ ತೊಗರಿಗೆ ₨4300 ಬೆಂಬಲ ಬೆಲೆ ನಿಗದಿ ಮಾಡಿದ್ದರೂ ಮಾರುಕಟ್ಟೆಯಲ್ಲಿ ಹಾಗೂ ಸ್ಥಳೀಯ ಸಂತೆಯಲ್ಲಿ ಮಧ್ಯವರ್ತಿಗಳು ಕೇವಲ ₨3400 ದರದಂತೆ ತೊಗರಿ ಖರೀದಿಸುತ್ತಿದ್ದಾರೆ.

ಇದರಿಂದ ಅನ್ನದಾತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಸಾಲದಿಂದ ಮುಕ್ತರಾಗಬೇಕು ಎಂದು ಬಯಸಿದ್ದವರ ದುಃಖವನ್ನು ಇಮ್ಮಡಿಗೊಳ್ಳುವಂತೆ ಮಾಡಿದೆ ಎನ್ನುವ ಮಾತು ಕೇಳಿಬಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT