ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ದ್ರಾಕ್ಷಿ ಬೆಲೆ: ಆತಂಕದಲ್ಲಿ ಬೆಳೆಗಾರರು

ಕಡಿಮೆ ದರಕ್ಕೆ ಮಾರಿದರೆ ಕೈಗೇನೂ ಉಳಿಯುವುದಿಲ್ಲ
Last Updated 3 ಜುಲೈ 2013, 5:09 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ದಿನಪೂರ್ತಿ ಮೋಡ ಕವಿದರೂ ಮಳೆಯಾಗುತ್ತಿಲ್ಲ ಎಂದು ಬಹುತೇಕ ರೈತರು ಒಂದೆಡೆ ಕಂಗಾಲಾಗಿದ್ದರೆ, ಮತ್ತೊಂದೆಡೆ ಟನ್‌ಗಟ್ಟಲೇ ದ್ರಾಕ್ಷಿ ಬೆಳೆದು ಕೈಗೇನೂ ಎಟುಕುತ್ತಿಲ್ಲ ಎಂದು ದ್ರಾಕ್ಷಿ ಬೆಳೆಗಾರರು ತಲೆಯ ಮೇಲೆ ಕೈ ಹೊತ್ತು ಕೂತಿದ್ದಾರೆ.

ಮಳೆಯಿಲ್ಲದೇ ಬೆಳೆಗಳನ್ನು ಬೆಳೆಯುವುದಾದರೂ ಹೇಗೆ ಎಂಬ ಚಿಂತೆ ರೈತರಲ್ಲಿ ಕಾಡುತ್ತಿದ್ದರೆ, ಬೆಳೆದ ದ್ರಾಕ್ಷಿ ಬೆಳೆಯನ್ನು ಬೆಲೆ ಕುಸಿತದ ಸಮಯದಲ್ಲಿ ಮಾರಾಟ ಮಾಡುವುದು ಹೇಗೆ ಎಂಬ ಆತಂಕ ದ್ರಾಕ್ಷಿ ಬೆಳೆಗಾರರಲ್ಲಿ ಆವರಿಸಿದೆ.
ರಾಜ್ಯದಲ್ಲಿ ವಿಜಾಪುರ ಜಿಲ್ಲೆ ಹೊರತುಪಡಿಸಿದರೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ದ್ರಾಕ್ಷಿ ಬೆಳೆಯಲಾಗುತ್ತದೆ.

ಹೈನುಗಾರಿಕೆ ಮತ್ತು ರೇಷ್ಮೆ ಉದ್ಯಮಕ್ಕೆ ಇರುವಷ್ಟೇ ಮಹತ್ವ ದ್ರಾಕ್ಷಿ ಉದ್ಯಮಕ್ಕೂ ಇದೆ. ದ್ರಾಕ್ಷಿ ಬೆಳೆಯ ಮೇಲೆ ದ್ರಾಕ್ಷಿ ಬೆಳೆಗಾರರು ಅಷ್ಟೇ ಅವಲಂಬಿಸಿಲ್ಲ. ದ್ರಾಕ್ಷಿ ಬೆಳೆಯನ್ನು ಕಟಾವು ಮಾಡುವವರು, ಸಾಗಣೆ ಮಾಡುವವರು, ಬೆಳೆಸುವವರು ಸೇರಿದಂತೆ ನೂರಾರು ಕೂಲಿಕಾರ್ಮಿಕರು ದ್ರಾಕ್ಷಿ ಬೆಳೆಯನ್ನೇ ನೆಚ್ಚಿಕೊಂಡಿದ್ದಾರೆ.

ಆದರೆ ಇತ್ತೀಚಿನ ಕೆಲ ತಿಂಗಳುಗಳಿಂದ ಬೆಲೆ ಕುಸಿದಿರುವ ಪರಿಣಾಮ ದ್ರಾಕ್ಷಿ ಬೆಳೆಯನ್ನೇ ನಂಬಿ ಜೀವನ ನಡೆಸುವುದು ಹೇಗೆ ಎಂಬ ಪ್ರಶ್ನೆ ದ್ರಾಕ್ಷಿ ಬೆಳೆಗಾರರು ಸೇರಿದಂತೆ ಕೂಲಿಕಾರ್ಮಿಕರಲ್ಲೂ ಕಾಡುತ್ತಿದೆ.

`ಕಳೆದ ವರ್ಷ ಜೂನ್ ತಿಂಗಳಲ್ಲಿ ದ್ರಾಕ್ಷಿಯ ಉತ್ತಮ ಫಸಲು ಬಂದಾಗ, ಕೊಳ್ಳುವವರಿಂದ ಭಾರಿ ಬೇಡಿಕೆ ವ್ಯಕ್ತವಾಗಿತ್ತು. ನಾವು ಕೇಳಿದಷ್ಟು ದರಕ್ಕೆ ಕೊಳ್ಳಲು ಖರೀದಿದಾದರರು ಸಿದ್ಧರಿದ್ದರು. ಕಳೆದ ವರ್ಷ ದ್ರಾಕ್ಷಿ ಕೆಜಿಗೆ  40 ರಿಂದ 50 ರೂಪಾಯಿವರೆಗೆ ಮಾರಾಟ ಮಾಡಿದ್ದೆವು.

ಆದರೆ ಈ ವರ್ಷ ಅರ್ಧದಷ್ಟು ಬೆಲೆ ಕುಸಿದಿದ್ದು, ದ್ರಾಕ್ಷಿ ಬೆಳೆಸಲು ಹೂಡಿದಷ್ಟು ಬಂಡವಾಳ ಕೂಡ ವಾಪಸ್ ಬರಲ್ಲ. ನಮಗೆ ಇಷ್ಟವಿಲ್ಲದಿದ್ದರೂ ದ್ರಾಕ್ಷಿಯನ್ನು ಕೆಜಿಗೆ 20 ರಿಂದ 25 ರೂಪಾಯಿವರೆಗೆ ಮಾರಾಟ ಮಾಡಬೇಕಾದಂತಹ ಪರಿಸ್ಥಿತಿ ಬಂದಿದೆ' ಎಂದು ದ್ರಾಕ್ಷಿ ಬೆಳೆಗಾರ ನಾರಾಯಣಸ್ವಾಮಿ `ಪ್ರಜಾವಾಣಿ'ಗೆ ತಿಳಿಸಿದರು.

`ನಮ್ಮ ಮತ್ತು ಸ್ನೇಹಿತರ ತೋಟದಲ್ಲಿ ಟನ್‌ಗಳಷ್ಟು ದ್ರಾಕ್ಷಿ ಗೊಂಚಲುಗಳಿವೆ. ಕೆಜಿಗೆ 30ರಿಂದ 40 ರೂಪಾಯಿಯವರೆಗೆ ಮಾರಾಟವಾಗಬೇಕಿದ್ದ ಅನಾಬಿಷು ಮತ್ತು ದಿಲ್‌ಖುಷ್ ದ್ರಾಕ್ಷಿಯನ್ನು 20ರಿಂದ 25 ರೂಪಾಯಿಗೆ ಮಾರಾಟ ಮಾಡಬೇಕಿದೆ. ಕಡಿಮೆ ಬೆಲೆಗೆ ಮಾರದಿದ್ದರೆ, ಅವುಗಳನ್ನು ಖರೀದಿಸಲು ಕೂಡ ಯಾರೂ ಮುಂದೆ ಬರುವುದಿಲ್ಲ. ದ್ರಾಕ್ಷಿಗಳನ್ನು ಕೀಳದೇ ತೋಟದಲ್ಲಿ ಹಾಗೆಯೇ ಇಟ್ಟುಕೊಂಡರೂ ಕಷ್ಟ. ಹೀಗಾಗಿ ನಷ್ಟದ ಧಾರಣೆಯಲ್ಲಿಯೇ ದ್ರಾಕ್ಷಿಯನ್ನು ಮಾರುತ್ತಿದ್ದೇವೆ' ಎನ್ನುವುದು ಅವರ ನೋವು.

ದ್ರಾಕ್ಷಿಯನ್ನು ದೀರ್ಘ ಕಾಲದವರೆಗೆ ಉತ್ತಮ ಗುಣಟ್ಟದಿಂದ ಕಾಯ್ದುಕೊಳ್ಳಲು ಜಿಲ್ಲೆಯಲ್ಲಿ ಶೀತಲೀಕರಣ ಘಟಕ ಇಲ್ಲ. ರೈತರ ಪಾಲಿಗೆ ಇದು ದೊಡ್ಡ ಸಮಸ್ಯೆಯಾಗಿದೆ. ದ್ರಾಕ್ಷಿ ಬೆಳೆಗೆಂದೇ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು ಅವರನ್ನು ಸಂಕಷ್ಟಕ್ಕೆ ಎಡೆಮಾಡಿಕೊಟ್ಟಿದೆ.

`ಯಲುವಹಳ್ಳಿ, ದೇವಿಶೆಟ್ಟಿಹಳ್ಳಿ, ಕುಪ್ಪಹಳ್ಳಿ, ನಂದಿ, ಬೈರನಾಯಕನಹಳ್ಳಿ, ಮಾವಳ್ಳಿ, ಅರಸನಹಳ್ಳಿ, ಗೇರಹಳ್ಳಿ, ಹುನೇಗಲ್ಲು ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ದ್ರಾಕ್ಷಿಯನ್ನು ಬೆಳೆಯಲಾಗುತ್ತಿದೆ. ಭವಿಷ್ಯದಲ್ಲಿ ಎದುರಿಸಬೇಕಾದ ಸಮಸ್ಯೆ-ಸವಾಲುಗಳು ಅರಿತುಕೊಂಡೇ ದ್ರಾಕ್ಷಿ ಬೆಳೆಯುತ್ತೇವೆ.

ದ್ರಾಕ್ಷಿ ಖರೀದಿಸಲು ಯಾವುದೇ ಅಧಿಕೃತ ರಶೀದಿ ಅಥವಾ ಕಾಗದ ನೀಡುವುದಿಲ್ಲ. ಎಲ್ಲವೂ ನಂಬಿಕೆ ಮೇಲೆ ವ್ಯವಹರಿಸಬೇಕು. ಸ್ವಲ್ಪ ಎಡವಟ್ಟು ನಡೆದರೂ ಖರೀದಿದಾರರು ಪರಸ್ಪರ ಮಾತನಾಡಿಕೊಂಡು ನಮ್ಮ ತೋಟಕ್ಕೆ ಬಾರದೇ ಬೇರೆಯವರತ್ತ ಹೋಗಿಬಿಡುತ್ತಾರೆ' ಎಂದು ದ್ರಾಕ್ಷಿ ಬೆಳೆಗಾರ ವೆಂಕಟೇಶಪ್ಪ ತಿಳಿಸಿದರು.

`ಜೋರಾಗಿ ಮಳೆಯಾದರಂತೂ ನಮ್ಮ ದ್ರಾಕ್ಷಿಯನ್ನು ಕೇಳುವವರು ಕೂಡ ದಿಕ್ಕಿರುವುದಿಲ್ಲ. ಅದಕ್ಕೆ ಮಳೆಗಾಲ ಮುನ್ನವೇ ನಾವು ತೋಟದಿಂದ ದ್ರಾಕ್ಷಿಗೊಂಚಲುಗಳನ್ನು ಕೀಳಲು ಬಯಸುತ್ತೇವೆ. ದ್ರಾಕ್ಷಿಗಾಗಿ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ, ಶೀತಲೀಕರಣ ಘಟಕ ಸ್ಥಾಪಿಸಬೇಕೆಂದು ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿಕೊಂಡಿದ್ದೇವೆ. ದ್ರಾಕ್ಷಿ ಉದ್ಯಮ ನೆಚ್ಚಿರುವ ಸಾವಿರಾರು ಕುಟುಂಬಗಳ ಹಿತ ರಕ್ಷಣೆಗಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು' ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT