ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಕುಸಿದ ರಾಜ್ಯದ ಗೌರವ ಕಾಂಗ್ರೆಸ್‌ನಿಂದ ಮರುಸ್ಥಾಪನೆ'

Last Updated 8 ಏಪ್ರಿಲ್ 2013, 8:25 IST
ಅಕ್ಷರ ಗಾತ್ರ

ಬೈಂದೂರು: ದೇಶದ ಅತ್ಯಂತ ಪ್ರಗತಿಶೀಲ ರಾಜ್ಯವೆಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿತ್ತು. ಆದರೆ ಕಳೆದ ಐದು ವರ್ಷಗಳ ಅವಧಿಯಲ್ಲಿ ಅದಕ್ಕೆ ಮಸಿ ಬಳಿಯಲಾಗಿದೆ. ಕುಸಿದು ಹೋಗಿರುವ ಅದರ ಗೌರವವನ್ನು ಮರುಸ್ಥಾಪಿಸುವ ಕೆಲಸ ಕಾಂಗ್ರೆಸ್‌ನಿಂದ ಆಗಬೇಕಾಗಿದೆ. ಅದಕ್ಕಾಗಿ ನಡೆಯಬೇಕಾದ ದೊಡ್ಡ ಹೋರಾಟಕ್ಕೆ ಈಗ ಚಾಲನೆ ನೀಡಲಾಗಿದೆ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಹೇಳಿದರು.    
 
ಬೈಂದೂರು ಮತ್ತು ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಆಶ್ರಯದಲ್ಲಿ ಇಲ್ಲಿನ ಜೆಎನ್‌ಆರ್ ಕಲಾಮಂದಿರದಲ್ಲಿ ನಡೆದ ಪಕ್ಷ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಪ್ರಸಕ್ತ ವಾತಾವರಣ ಕಾಂಗ್ರೆಸ್ ಪರವಾಗಿದೆ. ಕಾರ್ಯಕರ್ತರು ಇದರಿಂದ ಸಂತೃಪ್ತರಾಗದೆ ಮತದಾರರ ಬಳಿಗೆ ಹೋಗಿ ಶಿಕ್ಷಣ, ಉದ್ಯೋಗ, ಆಹಾರ, ಆರೋಗ್ಯ, ಬಡತನ ನಿವಾರಣೆಯಂತಹ ಸಾಧನೆಗಾಗಿ ಕಾಂಗ್ರೆಸ್ ಬೆಂಬಲಿಸುವ ಅಗತ್ಯವನ್ನು ಮನದಟ್ಟು ಮಾಡಿಕೊಡಬೇಕು ಎಂದು ಅವರು ಹೇಳಿದರು.

ಕೆಪಿಸಿಸಿ ಉಪಾಧ್ಯಕ್ಷ ಕೆ.ಪ್ರತಾಪಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೆ.ಜಯಪ್ರಕಾಶ ಹೆಗ್ಡೆ ಮಾತನಾಡಿ `ಬಿಜೆಪಿ ಹಿಂದಿನ ಚುನಾವಣೆಯ ಸಂದರ್ಭದಲ್ಲಿ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಬದಲಾಗಿ ರಾಜ್ಯದ ಇತಿಹಾಸದ ಅತ್ಯಂತ ಕೆಟ್ಟ ಸರ್ಕಾರವನ್ನು ನೀಡಿದೆ. ಇದರ ಅರಿವು ಬಿಜೆಪಿಯ ಸಚಿವರಿಗೂ, ಶಾಸಕರಿಗೂ ಆಗಿರುವುದರಿಂದ ಆ ಪಕ್ಷದಲ್ಲಿದ್ದರೆ ಭವಿಷ್ಯ ಇಲ್ಲವೆಂದುಕೊಂಡು ಚುನಾವಣೆ ಎದುರಾದ ಈ ಸಂದರ್ಭದಲ್ಲಿ ಪಕ್ಷ ತ್ಯಜಿಸಿ ಅನ್ಯ ಪಕ್ಷಗಳಿಗೆ ವಲಸೆ ಹೋಗುತ್ತಿದ್ದಾರೆ. ಕೆಜೆಪಿ ಮತ್ತು ಬಿಎಸ್‌ಆರ್ ಪಕ್ಷಗಳನ್ನು ಬಿಟ್ಟು ಕಾಂಗ್ರೆಸ್ ಅಭ್ಯರ್ಥಿಗಳನ್ನು ಅತ್ಯಧಿಕ ಅಂತರದಿಂದ ಗೆಲ್ಲಿಸುವತ್ತ ಗಮನ ನೀಡಬೇಕು ಎಂದು ಹೇಳಿದರು.

ನವೋದಯ ಗ್ರಾಮೀಣ ವಿಕಾಸ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಂ. ಎನ್. ರಾಜೇಂದ್ರಕುಮಾರ್ ಮಾತನಾಡಿದರು. ಕ್ಷೇತ್ರದ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ಸ್ವಾಗತಿಸಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್. ರಾಜು ಪೂಜಾರಿ ವಂದಿಸಿದರು. ಕೋಶಾಧಿಕಾರಿ ವಾಸುದೇವ ಯಡಿಯಾಳ ನಿರೂಪಿಸಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಎಂ.ಎ.ಗಫೂರ್, ಉಭಯ ಬ್ಲಾಕ್ ಅಧ್ಯಕ್ಷರಾದ ಕೆ. ರಮೇಶ ಗಾಣಿಗ, ಎಸ್‌ಸಂಜೀವ ಶೆಟ್ಟಿ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ. ಶ್ರೀನಿವಾಸ, ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೇಶ ಹಾಗೂ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT