ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಸೇತುವೆ; ಪರದಾಟಕ್ಕೆ ಚಾಲನೆ

Last Updated 13 ಸೆಪ್ಟೆಂಬರ್ 2013, 8:30 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲ್ಲೂಕಿನ ತೋರಣಗಲ್‌ ಸಮೀಪ ರಾಷ್ಟ್ರೀಯ ಹೆದ್ದಾರಿ– 63ರಲ್ಲಿನ ತುಂಗಭದ್ರಾ ಬಲದಂಡೆಯ ಮೇಲ್ಮಟ್ಟದ ಕಾಲುವೆಯ ಸೇತುವೆ ಕುಸಿದ ಪರಿಣಾಮ ಸಾರ್ವಜನಿಕರು, ಅಂತರರಾಜ್ಯ ವಾಹನಗಳ ಚಾಲಕರು ತೀವ್ರವಾಗಿ ಪರದಾಡುವಂತಾಗಿದೆ.

ಬಳ್ಳಾರಿಯಿಂದ ಹೊಸಪೇಟೆಗೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿಯಲ್ಲಿ ನಿತ್ಯವೂ ವಿವಿಧ ಮಾದರಿಯ ಸಾವಿ­ರಾರು ವಾಹನಗಳು ಸಂಚರಿಸುತ್ತಿದ್ದು, ಸೇತುವೆ ಕುಸಿದ ಪರಿಣಾಮ ಸುತ್ತಿ ಬಳಸಿ ತೆರಳುತ್ತಿವೆ.

ಪ್ರಮುಖವಾಗಿ ಕಬ್ಬಿಣದ ಅದಿರು, ಉಕ್ಕು, ಕಲ್ಲಿದ್ದಲು, ಕಾಖಾರ್ನೆಗಳಲ್ಲಿ ಬಳಸುವ  ಕಚ್ಚಾ ಸಾಮಗ್ರಿ ಮತ್ತಿತರ ಭಾರಿ ವಸ್ತುಗಳನ್ನು ಇದೇ ಮಾರ್ಗದಿಂದ ಸಾಗಿಸಲಾಗುತ್ತಿದ್ದು, ಸೇತುವೆ ಕುಸಿದ ಪರಿಣಾಮ ಸರಕು ಸಾಗಣೆಗೆ  ತೀವ್ರ ಅಡಚಣೆ ಉಂಟಾಗುತ್ತಿದೆ.
ಬಳ್ಳಾರಿಯಿಂದ ಹೊರಡುವ ಸಾರಿಗೆ ಸಂಸ್ಥೆಯ ಬಸ್ಸುಗಳು ಹಾಗೂ ಲಘು ವಾಹನಗಳು ಕುಡತಿನಿಯಿಂದ ತಿಮ್ಮಲಾ­ಪುರ, ದೇವಲಾಪುರ, ದರೋಜಿ, ಸೀತಾರಾಮ ತಾಂಡಾ, ಕಮಲಾಪುರ ಮಾರ್ಗವಾಗಿ ತೆರಳಿ ಅದೇ ಮಾರ್ಗದ ಮೂಲಕ ವಾಪಸಾಗುತ್ತಿವೆ.

ಈ ಮಾರ್ಗದಲ್ಲಿನ ಕೆಲವು ಸೇತುವೆ­ಗಳನ್ನು ದಾಟುವುದಕ್ಕೆ ಬಸ್‌ ಚಾಲಕರು ಪರದಾಡುವಂತಾಗಿದ್ದು, ಕಮಲಾಪುರ ಬಳಿಯ ಪಂಪ್‌ಹೌಸ್‌ ಸೇತುವೆ ದಾಟು­ವಾಗ ಕೆಲವು ಬಸ್‌ಗಳು ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆಗಳೂ ಇವೆ.

ಅಲ್ಲದೆ, ಭಾರಿ ವಾಹನಗಳ ಭಾರ ತಾಳುವ ಸಾಮರ್ಥ್ಯ ಈ ಸೇತುವೆಗಳಿಗೆ ಇದೆಯೇ ಎಂಬ ಪ್ರಶ್ನೆಯೂ ಕಾಡುತ್ತಿದೆ.
ಹೊಸಪೇಟೆಯಿಂದ ಬರುವ ಭಾರಿ ಸರಕು ಸಾಗಣೆ ಲಾರಿಗಳು ಕಾಕುಬಾಳು ಗ್ರಾಮದಿಂದ ವಡ್ಡು, ಬಸಾಪುರ ಮಾರ್ಗವಾಗಿ ತೋರಣಗಲ್‌ ಹಾಗೂ ಬಳ್ಳಾರಿಯತ್ತ ಆಗಮಿಸುತ್ತಿವೆ.

ಸೇತುವೆಯ ಆಚೆ ಇರುವ ಭುವನ­ಹಳ್ಳಿ, ಗಾದಿಗನೂರು, ಧರ್ಮಸಾಗರ, ಪಾಪಿ ನಾಯಕನಹಳ್ಳಿ, ವದ್ದಿಗೇರಿ ಮತ್ತಿತರ ಗ್ರಾಮಗಳ ಜನತೆ ಬಳ್ಳಾರಿ­ಯತ್ತ ಬರಲು ಪರದಾಡುವಂತಾಗಿದೆ.

ಫೆಬ್ರುವರಿಗೆ ದುರಸ್ತಿ: ಮೇಲ್ಮಟ್ಟದ ಕಾಲುವೆಯಲ್ಲಿ ನೀರು ತುಂಬಿ ಹರಿಯುತ್ತಿ­ರುವುದರಿಂದ ಫೆಬ್ರುವರಿ­ವರೆಗೆ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳುವುದು ಅಸಾಧ್ಯ. ನೀರಾವರಿ ಸೌಲಭ್ಯ ಮತ್ತು ಕುಡಿಯುವ ನೀರು ಒದಗಿಸುವ ಕಾಲುವೆಯಲ್ಲಿ ನೀರನ್ನು ಸ್ಥಗಿತಗೊಳಿಸಿದ ನಂತರವಷ್ಟೇ ಫೆಬ್ರುವರಿಯಿಂದ ದುರಸ್ತಿ ಕಾರ್ಯ ಕೈಗೆತ್ತಿಕೊಂಡಲ್ಲಿ, ಮೇ ಅಥವಾ ಜೂನ್ ವೇಳೆಗೆ ದುರಸ್ತಿ ಕಾರ್ಯ ಪೂರ್ಣ­ಗೊಂಡು ವಾಹನ ಸಂಚಾರಕ್ಕೆ ಅವಕಾಶ ದೊರೆಯಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ತುಂಗ­ಭದ್ರಾ ಮಂಡಳಿಯ ಮೂಲಗಳು ತಿಳಿಸಿವೆ.

ಹದಗೆಡುತ್ತಿರುವ ರಸ್ತೆಗಳು: ರಾಷ್ಟ್ರೀಯ ಹೆದ್ದಾರಿಯಲ್ಲಿನ ಸೇತುವೆ ಕುಸಿದಿರುವ ಪರಿಣಾಮ ಲೋಕೋಪಯೋಗಿ ಇಲಾಖೆಗೆ ಸೇರಿರುವ ರಾಜ್ಯ ಹೆದ್ದಾರಿಯ ರಸ್ತೆಗಳು ಅಧಿಕ ಭಾರದ ಒತ್ತಡದಿಂದ ಹದಗೆಡುತ್ತಿವೆ. ಅಲ್ಲದೆ, 50 ವರ್ಷಗಳ ಹಿಂದೆ ಮೇಲ್ಮಟ್ಟದ ಮತ್ತು ಕೆಳಮಟ್ಟದ ಕಾಲುವೆಗಳಿಗೆ, ಆಗಿನ ಭಾರಕ್ಕೆ ತಕ್ಕಂತೆ ನಿಮಿರ್ಸಲಾಗಿರುವ ಸೇತುವೆಗಳು ಕುಸಿಯುವ ಹಂತ ತಲುಪಿವೆ. ಈ ಕುರಿತು ಎಚ್ಚರಿಕೆ ವಹಿಸುವಂತೆ ಸರ್ಕಾ­ರದ ಗಮನಕ್ಕೆ ತರಲಾಗಿದೆ ಎಂದು ಲೋಕೋಪಯೋಗಿ ಇಲಾ­ಖೆಯ ಕಾರ್ಯ­ನಿರ್ವಾಹಕ ಎಂಜಿನಿ­ಯರ್‌ ರವಿಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತೋರಣಗಲ್‌ನಿಂದ ವಡ್ಡು, ಬಸಾಪುರ, ಕಾಕುಬಾಳು ಗ್ರಾಮಗಳ ರಸ್ತೆ ಹಾಗೂ ಕುಡತಿನಿಯಿಂದ ಕಂಪ್ಲಿ, ಕಮಲಾಪುರದತ್ತ ಸಂಪರ್ಕ ಕಲ್ಪಿಸುವ ರಸ್ತೆಗೂ ಅಧಿಕ ಒತ್ತಡ ಬೀಳುತ್ತಿದೆ. ಕಾಕುಬಾಳು ರಸ್ತೆ ಅಭಿವೃದ್ಧಿಪಡಿಸುವ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದೆ. ಆದರೆ, ಸಕ್ಷಮತೆಯ ಪ್ರಶ್ನೆ ಎದುರಾಗಿದೆ ಎಂದು ಅವರು ಹೇಳಿದ್ದಾರೆ.

ಬಳ್ಳಾರಿ– ಹೊಸಪೇಟೆ ಮಾರ್ಗದಲ್ಲಿನ ಬಸ್‌ ಸಂಚಾರ ಅಸ್ತವ್ಯಸ್ತವಾಗುತ್ತಿದೆ. ಪ್ರಯಾಣಿಕರಿಗೆ ಅರ್ಧ ಗಂಟೆಯಿಂದ ಮುಕ್ಕಾಲು ಗಂಟೆ ಕಾಲ ತಡವಾಗುತ್ತಿದೆ.  ಹೆಚ್ಚುವರಿ ದರವನ್ನೂ ನೀಡಬೇಕಾಗಿದೆ. ತೋರಣ­ಗಲ್ಲು ಕಡೆ ತೆರಳುವ ಪ್ರಯಾಣಿಕರ ನೆರವಿಗಾಗಿ ಸಂಡೂರು ಕಡೆ ಹೆಚ್ಚುವರಿ ಬಸ್‌ ಸೌಲಭ್ಯ ಕಲ್ಪಿಸಲಾಗಿದೆ.

ಧರ್ಮ­ಸಾಗರ, ಗಾದಿಗನೂರು,  ಪಾಪಿ­ನಾಯ­ಕನ ಹಳ್ಳಿ ಗ್ರಾಮಸ್ಥರ ಅನುಕೂಲಕ್ಕೆ ಹೊಸಪೇಟೆ ವಿಭಾಗ ಅಗತ್ಯ ಕ್ರಮ ಕೈಗೊಂಡಿದೆ ಎಂದು ಈಶಾನ್ಯ ಕನಾ­ರ್ಟಕ ರಸ್ತೆ ಸಾರಿಗೆ ಸಂಸ್ಥೆಯ ಬಳ್ಳಾರಿ ವಿಭಾಗೀಯ ಅಧಿಕಾರಿ ಕೆ.ದುರ್ಗಪ್ಪ ತಿಳಿಸಿದ್ದಾರೆ. ಮುಂದಿನ ಒಂಭತ್ತು ತಿಂಗಳುಗಳ ಕಾಲ ಸೇತುವೆ ದುರಸ್ತಿ ಕಾರ್ಯ ಪೂರ್ಣಗೊಳ್ಳುವ ಲಕ್ಷಣ­ಗಳು ಇಲ್ಲದ್ದರಿಂದ ಸಾರ್ವಜನಿಕರು ಈ ಸಮಸ್ಯೆ ಸಹಿಸಿಕೊಳ್ಳುವುದೂ ಅನಿವಾರ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT