ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಹಳ್ಳದ ಸೇತುವೆ: ಸಂಪರ್ಕ ಕಡಿತ

Last Updated 7 ಸೆಪ್ಟೆಂಬರ್ 2013, 6:17 IST
ಅಕ್ಷರ ಗಾತ್ರ

ಕೋಟುಮಚಗಿ (ತಾ. ಗದಗ): ಎರಡು ದಿನ ಹಿಂದೆಯಷ್ಟೇ ಸುರಿದ ಭಾರಿ ಮಳೆಗೆ ಗ್ರಾಮದ ಹುಲಬಿ ಹಳ್ಳದ ಸೇತುವೆ ಕುಸಿದ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಗ್ರಾಮದಿಂದ ರೈತರು ತಮ್ಮ  ಜಮೀನುಗಳಿಗೆ ತೆರಳುವ ತಿಮ್ಮೋಪೂರ ಹಾಗೂ ಹರ್ಲಾಪೂರ ರಸ್ತೆಯಲ್ಲಿ ಹಾದು ಹೋಗುವ ಸೇತುವೆ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋಗಿದ್ದು, ಸಂಪರ್ಕ ಕಡಿತಗೊಂಡಿದೆ. ರೈತರು ಈ ರಸ್ತೆ ಮೂಲಕವೇ ಎತ್ತಿನ ಬಂಡಿ, ಟ್ರಾಕ್ಟರ್ ಹಾಗೂ ಇತರೆ ವಾಹನಗಳಲ್ಲಿ ಜಮೀನುಗಳಿಗೆ ಹೋಗುಬೇಕು. ಈಗ ಸೇತುವೆ ಕುಸಿದಿರುವುದರಿಂದ ಟ್ರಾಕ್ಟರ್, ಎತ್ತಿನ ಬಂಡಿ ಸಂಚಾರ ಬಹುತೇಕ ಬಂದ್ ಆಗಿದೆ.

ತಿಮ್ಮೋಪೂರ ಹಾಗೂ ಹರ್ಲಾಪೂರ ರಸ್ತೆಗಳು ತಗ್ಗು, ದಿಣ್ಣೆಗಳಿಂದ ಕೂಡಿದೆ. ತಿಮ್ಮೋಪೂರ ರಸ್ತೆಯಲ್ಲಿನ ಹುಲಬಿ ಹಳ್ಳದ ಸೇತುವೆ ಕಿತ್ತು ಹೋಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಸತತವಾಗಿ ಮಳೆ ಸುರಿದರೆ ರೈತರು ಜಮೀನುಗಳಿಗೆ ತೆರಳುವುದು ಕಷ್ಟವಾಗುತ್ತದೆ. ಇತ್ತೀಚೆಗಷ್ಟೇ ಸುರಿದ ಮಳೆಯಿಂದಾಗಿ ಹಳ್ಳ ತುಂಬಿ ಹರಿದಿದ್ದು, ಹೊಲಕ್ಕೆ ತೆರಳಿದ ರೈತ ಮಹಿಳೆಯರು ರಾತ್ರಿ 10 ಗಂಟೆಯವರೆಗೆ ನಿಂತು ಹಳ್ಳದ ನೀರು ಕಡಿಮೆಯಾದಾಗ ಸೇತುವೆ ದಾಟಿ ಗ್ರಾಮಕ್ಕೆ ಮರಳಿದ್ದಾರೆ.

ಕಳೆದ ವರ್ಷ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡ ಕೋಟುಮಚಗಿ-ಕಣಗಿನಹಾಳ ರಸ್ತೆಯ ಡಾಂಬರು ಮಳೆ ರಭಸಕ್ಕೆ ಕಿತ್ತು ಬಂದಿದೆ. ಅಲ್ಲಲ್ಲಿ ಗುಂಡಿ  ಬಿದ್ದಿದ್ದು, ರಸ್ತೆ ತೀರಾ ಹದಗೆಟ್ಟಿದೆ.  ಹಂಚಿನಾಳ ರಸ್ತೆಯೂ ಕೂಡಾ ಸಂಚಾರಕ್ಕೆ ದುಸ್ತರವಾಗಿದೆ. 

2009-10ರಲ್ಲಿ ಸಂಭವಿಸಿದ ನೆರೆ ಹಾವಳಿ ಸಂದರ್ಭ ಗ್ರಾಮದ ಪುರಾತನ ಕೆರೆ ತುಂಬಿ ಕಟ್ಟೆ ಒಡೆದಿತ್ತು. ಅಲ್ಲದೇ ತಿಮ್ಮೋಪೂರ ರಸ್ತೆಯಲ್ಲಿನ ಹುಲಬಿ ಹಳ್ಳದಲ್ಲಿ ಸೇತುವೆ ದಾಟುವಾಗ ಮಳೆ ನೀರಿನ ರಭಸದಿಂದ ತಾಯಿ, ಇಬ್ಬರು ಮಕ್ಕಳು ಕೊಚ್ಚಿ ಹೋಗಿರುವ ಘಟನೆಯನ್ನು ಜನರು ಮರೆತಿಲ್ಲ. ಅಂದಿನ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವರು ಗ್ರಾಮಕ್ಕೆ ಭೇಟಿ ನೀಡಿ ಹುಲಬಿ ಹಳ್ಳಕ್ಕೆ ಶಾಶ್ವತ ಸೇತುವೆ ನಿರ್ಮಿಸುವುದಾಗಿ ನೀಡಿದ ಭರವಸೆ ಇನ್ನೂ ಈಡೇರಿಲ್ಲ.

`ಮೂಲ ಸೌಲಭ್ಯಗಳಿಂದ ಗ್ರಾಮ ವಂಚಿತಗೊಂಡಿದೆ. ಶೀಘ್ರದಲ್ಲಿ ಸೇತುವೆ ದುರಸ್ತಿಪಡಿಸಬೇಕು. ರೈತರ ಸಮಸ್ಯೆಗೆ ಸಂಬಂಧಿಸಿದ ಇಲಾಖೆ, ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಬೇಕು. ಜಮೀನುಗಳಿಗೆ ತೆರಳುವ ಹಂಚಿನಾಳ, ತಿಮ್ಮೋಪೂರ, ಹರ್ಲಾಪೂರ, ಕಣಗಿನಹಾಳ ರಸ್ತೆ ದುರಸ್ತಿ ಹಾಗೂ ಹುಲಬಿ ಹಳ್ಳಕ್ಕೆ ಶಾಶ್ವತ ಪರಿಹಾರ ಕೈಗೊಳ್ಳಬೇಕು' ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT