ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದು ಬಿದ್ದ ಮನೆಯ ಆಧಾರ ಸ್ತಂಭ

Last Updated 21 ಜುಲೈ 2012, 7:50 IST
ಅಕ್ಷರ ಗಾತ್ರ

ಶಿರಸಿ: `ನಮ್ಮ ಮನೆಯ ಆಧಾರ ಸ್ತಂಭವೇ ಕುಸಿದು ಬಿದ್ದಿದೆ. ಕುಟುಂಬಕ್ಕಾಗಿ ದುಡಿಯುತ್ತಿದ್ದ ಮಗ ನಮ್ಮನ್ನೆಲ್ಲ ಬಿಟ್ಟು ಹೋದ~ ಎಂದು ಉಮ್ಮಳಿಸಿ ಬರುವ ದುಃಖ ತಡೆದು ಮಹಾದೇವಪ್ಪ ಪಾರ್ಸೇರ ಹೇಳುವಾಗ ಸುತ್ತ ಸೇರಿದ್ದ ಜನರೆಲ್ಲ ಮರುಕಪಟ್ಟರು.

ಶುಕ್ರವಾರ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ತಾಲ್ಲೂಕಿನ ದಾಸನಕೊಪ್ಪದ ರೈತ ದಿನೇಶ ಪಾರ್ಸೇರ ಮನೆಯಲ್ಲಿ ಶೂನ್ಯ ಆವರಿಸಿದೆ. ಮನೆಯ ಯಜಮಾನಿಕೆ ಹೊತ್ತಿದ್ದ ಮಗ ಸಾಲ ತೀರಿಸಲು ಸಾಧ್ಯವಾಗದೆ ಮನೆಯಿಂದ ಹೊರ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಂದೆಗೆ ಆಗಾಗ ಕಾಡುವ ಅನಾರೋಗ್ಯದಿಂದಾಗಿ ಮನೆಯ ನೊಗವನ್ನು ದಿನೇಶನೇ ಹೊತ್ತುಕೊಂಡಿದ್ದ.

ತಂದೆಯ ಅನಾರೋಗ್ಯ ಹಾಗೂ ಸೊಸೈಟಿಯಲ್ಲಿ ಮಾಡಿರುವ ಸಾಲದ ಬಗ್ಗೆ ನೊಂದುಕೊಂಡಿದ್ದ ದಿನೇಶ ತಾಯಿಯೊಂದಿಗೆ ಗುರುವಾರ ಸಂಜೆ ತನ್ನ ನೋವನ್ನು ಹಂಚಿಕೊಂಡಿದ್ದ. ನಂತರ ಮನೆಯಿಂದ ಹೊರ ಹೋದವನು ಜೀವಂತವಾಗಿ ಮನೆಗೆ ಮರಳಲೇ ಇಲ್ಲ. ಎಪಿಎಂಸಿ ಹರಾಜುಕಟ್ಟೆಯಲ್ಲಿ ಮಗ ಸಾವಿಗೆ ಶರಣಾಗಿರುವ ಸುದ್ದಿ ಕೇಳಿ ತಾಯಿ ತೀವ್ರ ಆಘಾತಗೊಂಡಿದ್ದಾರೆ. ದಿನೇಶ ಪತ್ನಿ ತವರು ಮನೆಗೆ ಹೋಗಿದ್ದಳು. ರೈತನ ಸಾವಿನಿಂದ ಅವರ ಮನೆ ಸುತ್ತಲಿನ ಓಣಿಯಲ್ಲಿ ಸ್ಮಶಾನ ಮೌನ ಆವರಿಸಿದೆ.

ಮೂರು ತಿಂಗಳ ಹಿಂದಷ್ಟೇ ಹಾನಗಲ್ ಯಲಿವಾಳದ ಬಸಮ್ಮಳನ್ನು ದಿನೇಶ ಮದುವೆಯಾಗಿದ್ದ. ದಾಂಪತ್ಯ ಜೀವನದ ಹೊಸ್ತಿಲಲ್ಲೇ ಪತಿಯ ಸಾವು ಬಸಮ್ಮಳ ಬದುಕಿನಲ್ಲಿ ಬರಸಿಡಿಲಿನಂತೆ ಬಂದೆರಗಿದೆ. ತನ್ನ ಮದುವೆಗಾಗಿ ದಿನೇಶ ಸಾಲ ಮಾಡಿದ್ದ. ಮಾದೇವಪ್ಪರ ಇಬ್ಬರು ಪುತ್ರಿಯರ ಮದುವೆ ಮೂರು ವರ್ಷಗಳ ಹಿಂದೆ ನಡೆದಿದ್ದು, ಆಗ ಮಾಡಿರುವ ಸಾಲ ಸಹ ಇನ್ನೂ ಮುಗಿದಿರಲಿಲ್ಲ. ತಮ್ಮ ಮಹೇಶ ಮಂಗಳೂರಿಗೆ ಕೆಲಸಕ್ಕೆ ಹೋಗಿದ್ದಾನೆ. ದಾಸನಕೊಪ್ಪದಲ್ಲಿರುವ ಅವರ ಕುಟುಂಬದ ನಿರ್ವಹಣೆ ಕೇವಲ ಕೃಷಿಯಿಂದಲೇ ನಡೆಯಬೇಕು~ ಎಂದು ಅವರ ಸಂಬಂಧಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT