ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸುಬೆಗೆ ರೋಗ ಕಾಟ; ರೈತನಿಗೆ ಸಂಕಟ

Last Updated 5 ಡಿಸೆಂಬರ್ 2013, 8:21 IST
ಅಕ್ಷರ ಗಾತ್ರ

ರೋಣ: ಒಂದು ಕಾಲದಲ್ಲಿ ಬಿಳಿ ಕುಸು­ಬೆಯ ಎಣ್ಣಿಯಿಲ್ಲದೆ ಜೀವನವಿಲ್ಲ ಎಂಬ ಮಾತಿತ್ತು. ಆದರೆ, ಆಧುನಿಕ ಭರಾಟೆಗೆ ಸಿಲುಕಿ ಕುಸುಬೆ ಅವಸಾನದ ಹಂತ ತಲುಪಿದೆ. ಅದರೊಂದಿಗೆ ಅನೇಕ ರೋಗಗಳಿಗೆ ತುತ್ತಾಗಿ, ಕುಸುಬೆ ಬೆಳೆ ನಾಶವಾಗುತ್ತಿರುವುದರಿಂದ ಅನ್ನದಾತ ಕಂಗಾಲಾಗಿದ್ದಾನೆ.

ಕುಸುಬೆಗೆ ಹೇನು ಕಾಟ: ಪ್ರಥಮ ಹಂತ­ದಿಂದಲೇ ಕುಸುಬೆಗೆ ಹೇನು ಪೆಡಂ­ಭೂತವಾಗಿ ಕಾಡುತ್ತಿದೆ. ಬೆಳೆಗೆ ಆವರಿಸುವ ಹೇನುಗಳು ಕಾಂಡವನ್ನು ಮೆತ್ತಿಕೊಂಡು ಕುಸುಬೆ ಬೆಳೆಗೆ ಬೇಕಾದ ಅವಶ್ಯವಾದ ರಸವನ್ನು ಸಂಪೂರ್ಣ ಹೀರುತ್ತಿವೆ. ಇದರಿಂದ ಎಲೆಗಳು ಬಾಡಿ­ದಂತಾಗಿ ಮುದುರಿಕೊಳ್ಳುತ್ತಿವೆ. ಪ್ರಾಥ­ಮಿಕ ಹಂತದಲ್ಲಿಯೇ ಕುಸುಬೆ ಸಸಿಗಳು ಸತ್ತು ಹೋಗುತ್ತಿವೆ.

ಎಲೆ ತಿನ್ನುವ ಹುಳುವಿನ ಕಾಟ: ಹೇನಿನ ಕಾಟಕ್ಕೆ ಸಿಲುಕಿ ನರಳುತ್ತಿರುವಾಗಲೇ, ಕುಸುಬೆಗೆ ಎಲೆ ತಿನ್ನುವ ಹುಳುವಿನ ಕಾಟ ಪ್ರಾರಂಭವಾಗಿದೆ. ಈ ಕೀಟವು ಸಸಿ, ಎಲೆಗಳನ್ನು ಮತ್ತು ದೇಟನ್ನು ತಿಂದು ಕುಸುಬೆ ಬೆಳೆಯನ್ನು ನಾಶ­ಪಡಿಸುತ್ತಿವೆ.

ತೊಂಡಿಲುಗಳಿಗೆ ಕೊರಕ ಕೀಟ: ಪ್ರಥಮ ಹಂತ­ದಲ್ಲಿ ಒಂದೊಂದಾಗಿ ಬಿಡುತ್ತಿ­ರುವ ತೊಂಡಿಲುಗಳಿಗೆ ಕೊರಕ ಕೀಟ ಶತ್ರುವಾಗಿ ಪರಿಣಮಿಸಿದೆ. ಈ ಕೀಟಗಳು ಕುಸುಬೆಯ ತೊಂಡಲನ್ನು ಕೊರೆಯು­ತ್ತಿರುವು­ದರಿಂದ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾ­ಗಿದೆ. 

ರೈತರಿಗೆ ಹಾನಿ ಕಟ್ಟಿಟ್ಟ ಬುತ್ತಿ: ಹೀಗೆ ಹಲವು ರೋಗಗಳು ಕುಸುಬೆ ಬೆಳೆಗೆ ಆವರಿಸುತ್ತಿರುವುದರಿಂದ ಶೇ 30 ರಿಂದ 40ರಷ್ಟು ಬೆಳೆ ಹಾನಿಯನ್ನು ರೈತ ಅನುಭವಿಸಬೇಕಾಗಿದೆ. ಹಣ, ಶ್ರಮ, ವ್ಯರ್ಥವಾಗುತ್ತಿದೆ.

ಒಂದು ಕಾಲದಲ್ಲಿ ಎಣ್ಣೆ ತಯಾ­ರಿಕೆಯಲ್ಲಿ ರಾಜನಾಗಿ ಮೆರೆದಿದ್ದ ಕುಸುಬೆ ಸ್ಥಾನದಲ್ಲಿ ಈಗ ಬೇರೆ ಎಣ್ಣೆ­ಕಾಳುಗಳು ಮೆರೆಯುತ್ತಿವೆ. ಸಂಕಷ್ಟ­ದಲ್ಲಿರುವ ಕುಸುಬೆ ಬೆಳೆಗಾರರ ನೆರವಿಗೆ ಕೃಷಿ ಇಲಾಖೆ ಸಹಕಾರ, ಮಾರ್ಗ­ದರ್ಶನ ನೀಡುವ ಅವಶ್ಯಕತೆ ಇದೆ.

ರೈತರು ಏನಂತಾರೆ? ಮೊದಲು ಒಂದು ವರ್ಷಕ್ಕಾಗುಷ್ಟು, ಮನಿಗೆ ಬೇಕಾಗುಷ್ಟು ಕುಸುಬೆ ಎಣ್ಣೆ ಮಾಡಿಕೊಳ್ತಿದ್ವಿ. ಇವತ್ತಿನ ಪರಿಸ್ಥಿತಿಯಾಗ ಕುಸುಬೆಗೆ ವಿಪ­ರೀತ ರೋಗ ಕಾಡಕತ್ಯಾವ. ಎಣ್ಣಿ ಅಲ್ಲ, ಇನ್ನೊಂದೆರಡು ವರ್ಷ ಕಳದ್ರ ಬಿತ್ತಾಕ ಬೀಜ ಸಿಗತಾವ ಇಲ್ಲ ಅನ್ನೂ ಚಿಂತಿ ಕಾಡಕತ್ತೈತಿ ಎಂದು ಅಳಲು ತೋಡಿ­ಕೊಳ್ಳುತ್ತಾರೆ ತಾಲ್ಲೂಕಿನ ಸವಡಿ ಗ್ರಾಮ­ದ ಪ್ರಗತಿ ಪರ ರೈತ ಭಾವಿ.

ರೋಗ ಹತೋಟಿಗೆ ಕ್ರಮ:  ಡೈಮಿಥೊಯೇಟ್ 30 ಇ.ಸಿ 1.7 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಬೆಳೆಗೆ ಸಿಂಪಡಿಸಬೇಕು. ಎಲೆ ತಿನ್ನುವ ಹುಳುವಿನ ಕಾಟ ತಪ್ಪಿಸಲು 0.3ಮಿ.ಲೀ ಇಂಡಾಕ್ಸಾಕಾರ್ಬ್‌ 15 ಇ.ಸಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪ­ಡಿಸಬೇಕು ಮತ್ತು ತೊಂಡಿಲು ಕೊರಕ ಹುಳು ಹತೋಟಿಗೆ ಒಂದು ಮಿ.ಲೀ. ಮೋನೋಕ್ರೊಟೋಪಾಸ್ 36 ಎಸ್.­ಎಲ್ ಅಥವಾ 2 ಮಿ.ಲೀ ಕ್ವೀನಾ­ಲ್ಫಾಸ್25 ಇಸಿ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಬೆಳೆ ಸಿಂಪಡಣೆ ಮಾಡು­­ವುದರಿಂದ ರೋಗವನ್ನು ಹತೋ­ಟಿಗೆ ತರಲು ಸಾಧ್ಯ ಎಂದು ಕೃಷಿ ಸಹಾಯಕ ನಿರ್ದೇಶಕ ಎಸ್.ಎ.­ಸೂಡಿಶೆಟ್ಟರ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT