ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸ್ತಿ: ಮದಗಜಗಳ ಸಮಬಲದ ಪೈಪೋಟಿ

Last Updated 15 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಚಿಕ್ಕೋಡಿ: ತಾಲ್ಲೂಕಿನ ಶಿರಗಾಂವ ಗ್ರಾಮದಲ್ಲಿ ಬಸವೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಟ್ಟದ ಜಂಗಿ ಕುಸ್ತಿ ಪಂದ್ಯಾವಳಿಯ ಪ್ರಥಮ ಕ್ರಮಾಂಕದ ಸ್ಪರ್ಧೆ ನವದೆಹಲಿಯ ಹಿಂದ್ ಕೇಸರಿ ಜೋಗಿಂದರ್ ಸಿಂಗ್ ಮತ್ತು ಪಂಜಾಬಿನ ಭಾರತ ಕೇಸರಿ ಕಮಲಜೀತ್ ಸಿಂಗ್ ಅವರ ಮಧ್ಯೆ ನಡೆದಿದ್ದು,  ಸುಮಾರು ಒಂದೂವರೆ ಗಂಟೆಗಳ ಕಾಲ ತೀವ್ರ ಸೆಣಸಾಟ ನಡೆಸಿದರೂ ನಿಕಾಲಿ ಆಗದ ಹಿನ್ನೆಲೆಯಲ್ಲಿ ಪಂದ್ಯವನ್ನು ಸಮಬಲವೆಂದು ಘೋಷಿಸಿ ಮೊಟಕುಗೊಳಿಸಲಾಯಿತು.

ಮೊದಲ ಕ್ರಮಾಂಕದ ಕುಸ್ತಿ ವಿಜೇತರಿಗೆ ನಿಗದಿಪಡಿಸಿದ್ದ 5,55,501 ರೂ.ಗಳ ಬಹುಮಾನದ ಮೊತ್ತದಲ್ಲಿ ಇಬ್ಬರೂ ಪೈಲ್ವಾನರಿಗೆ ಸಮನಾಗಿ ನೀಡುವುದಾಗಿ ನಿರ್ಣಾಯಕರು ಪ್ರಕಟಿಸಿದರು. ಎರಡನೇ ಕ್ರಮಾಂಕದ ಕುಸ್ತಿಯಲ್ಲಿ ಬೆಂಗಳೂರಿನ ಭಾರತ ಕೇಸರಿ ಅಮೀತಕುಮಾರ್ ಧನಕಡ್ ಅವರನ್ನು ಮಧ್ಯಪ್ರದೇಶದ ಇಂದ್ ಕೇಸರಿ ರೋಹಿತ್ ಪಟೇಲ್ ಚಿತ್ ಮಾಡಿ 3,50,001 ರೂ.ಗಳ ಬಹುಮಾನವನ್ನು ತಮ್ಮದಾಗಿಸಿಕೊಂಡರು.

ನಾಲ್ಕನೇ ಕ್ರಮಾಂಕದ ಬಹುಮಾನಕ್ಕಾಗಿ ನಡೆದ ಕಾಳಗದಲ್ಲಿ ಪಂಜಾಬ ಕೇಸರಿ ನವನೀತ ಸಿಂಗ್ ಅವರನ್ನು ಭಾರತ ಕೇಸರಿ ವರುಣ ಕುಮಾರ ಘುಟನಾ ಪಟ್ಟು ಬಳಿಸಿ ಚಿತ್ ಮಾಡುವ ಮೂಲಕ 2 ಲಕ್ಷ ರೂ.ಬಹುಮಾನ ಪಡೆದುಕೊಂಡರು.

ಐದನೇ ಕ್ರಮಾಂಕದ ಕುಸ್ತಿಯಲ್ಲಿ ಹರಿಯಾಣ ಕೇಸರಿ ಮಣದೀಸಿಂಗ್ ಡೋಲು ಅವರು ಮಹಾರಾಷ್ಟ್ರ ಕೇಸರಿ ಸಮಾಧಾನ ಘೋಡಕೆ ಅವರನ್ನು ಮಣಿಸಿ ಒಂದು ಲಕ್ಷ ರೂ. ಬಹುಮಾನ ತಮ್ಮದಾಗಿಸಿಕೊಂಡರು.
 
ಆರನೇ ಕ್ರಮಾಂಕದ ಕುಸ್ತಿಯಲ್ಲಿ ರಾಯಬಾಗ ತಾಲ್ಲೂಕಿನ ಬಾವಾನ ಸೌದತ್ತಿಯ ಸಂಭಾ ಸುಡಕೆ ಅವರು ಪಂಜಾಬ ಕೇಸರಿ ಕರಣವೀರಸಿಂಗ್ ಶರ್ಮಾ ಅವರನ್ನು ಸೋಲಿಸಿ 80 ಸಾವಿರ ರೂ. ಬಹುಮಾನ ಗಿಟ್ಟಿಸಿದರು. ಮೊದಲ ಮೂರು ಹಾಗೂ ನಾಲ್ಕನೇ ಬಹುಮಾನದ ಒಂದು ಲಕ್ಷ ರೂ.ಗಳನ್ನು ಸಮಾಜ ಸೇವಕ ಚಂದ್ರಕಾಂತ ಪೂಜಾರಿ ಪ್ರಾಯೋಜಿಸಿದ್ದಾರೆ. 

ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಉಪಸ್ಥಿತರಿದ್ದರು. ಬಿಜಾಪೂರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ನಿಡಸೋಶಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ, ನಂದುಕುರಳಿಯ ವೀರಭದ್ರ ಸ್ವಾಮೀಜಿ, ಸದಲಗಾದ ಡಾ.ಶೃದ್ದಾನಂದ ಸ್ವಾಮೀಜಿ ಸೇರಿದಂತೆ ಅನೇಕ ಜನ ಮಠಾಧೀಶರು ಸಮ್ಮುಖ ವಹಿಸಿದ್ದರು. ಸಾವಿರಾರು ಕುಸ್ತಿ ರಸಿಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT