ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡಂಕುಳಂ ಕಲಕಿದ ಕೊಳ

Last Updated 26 ನವೆಂಬರ್ 2011, 19:30 IST
ಅಕ್ಷರ ಗಾತ್ರ

ತಮಿಳುನಾಡಿನ ಕೂಡಂಕುಳಂ ಅಣುವಿದ್ಯುತ್ ಸ್ಥಾವರದ ಸುರಕ್ಷತೆಯ ಬಗ್ಗೆ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಪ್ರಮಾಣಪತ್ರ ನೀಡಿದ್ದಾರೆ.
 
ಆದರೆ ಜಾಗತಿಕ `ಅಣು ಚರಿತೆ~ `ಕಲಾಂ ಪ್ರಮಾಣಪತ್ರ~ವನ್ನು ಸಮರ್ಥಿಸುವ ರೀತಿಯಲ್ಲಿಲ್ಲ. ನಿಜಕ್ಕೂ ಕೂಡಂಕುಳಂನಲ್ಲಿನ ಇಂದಿನ ಪರಿಸ್ಥಿತಿ ಏನು?
ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಕೂಡಂಕುಳಂಗೆ ಹೋದದ್ದರಿಂದ ಒಂದು ಉಪಕಾರವಂತೂ ಆಯಿತು.

ಈಗ ಬಹುತೇಕ ಎಲ್ಲಾ ಭಾಷೆಗಳ ಪತ್ರಿಕೆಗಳಲ್ಲೂ ಕೂಡಂಕುಳಂ ಅಣುವಿದ್ಯುತ್ ಸ್ಥಾವರ ಯೋಜನೆಯ ಕುರಿತ ಸುದ್ದಿಗಳು ಪ್ರಕಟವಾಗುತ್ತಿವೆ. ಅದರಲ್ಲೂ ಮುಖ್ಯವಾಗಿ ಕೂಡಂಕುಳಂ ಯಾಕೆ ಅಗತ್ಯ ಎಂದು ವಿವರಿಸುವ ಸುದ್ದಿಗಳು ಪ್ರಕಟವಾಗುತ್ತಿವೆ.

ಕೂಡಂಕುಳಂ ಇರುವುದು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ. ಇಲ್ಲಿನ ಅಣುವಿದ್ಯುತ್ ಸ್ಥಾವರದ ಮೊದಲ ಹಂತದ ಕಾಮಗಾರಿಗಳು ಮುಗಿದು ವಿದ್ಯುತ್ ಸ್ಥಾವರ ತನ್ನ ಕೆಲಸ ಆರಂಭಿಸಲು ಸಿದ್ಧವಾಗಿರುವ ಈ ಹೊತ್ತಿನಲ್ಲಿ, ಸರಿಯಾಗಿ ಹೇಳುವುದಾದರೆ ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಪ್ರದೇಶದ ಜನರು ಮುಖ್ಯವಾಗಿ ಮೀನುಗಾರ ಕುಟುಂಬಗಳು ಕೂಡಂಕುಳಂನ ಹತ್ತಿರವಿರುವ ಇಡಂದಿಕ್ಕರೈ ಎಂಬ ಗ್ರಾಮದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಹನ್ನೊಂದು ದಿನ ನಡೆದ ಈ ಸತ್ಯಾಗ್ರಹದಲ್ಲಿ ಉಪವಾಸ ಕುಳಿತವರು 127 ಮಂದಿ.
 
ಇವರಿಗೆ ಬೆಂಬಲ ಸೂಚಿಸಲು ಪ್ರತಿದಿನ ಸರಾಸರಿ 20,000 ಮಂದಿ ಇದ್ದರು. ಗ್ರಾಮ ಪಂಚಾಯಿತಿಗಳು, ಸ್ವಯಂ ಸೇವಾ ಸಂಘಟನೆಗಳು, ಮಸೀದಿ, ಚರ್ಚುಗಳು, ಹೋರಾಟಗಾರರು, ವಿಷಯ ತಜ್ಞರು ಹೀಗೆ ಹಲಬಗೆಯ ಜನರು ಮತ್ತು ಸಂಘಟನೆಗಳನ್ನು ಒಳಗೊಂಡಿರುವ `ಪೀಪಲ್ಸ್ ಮೂವ್‌ಮೆಂಟ್ ಎಗೇನ್ಸ್‌ಟ್ ನ್ಯೂಕ್ಲಿಯರ್ ಎನರ್ಜಿ~ (ಪಿಎಂಎಎನ್‌ಇ) ಎಂಬ ಒಕ್ಕೂಟ ಈ ಆಂದೋಲನಕ್ಕೆ ನೇತೃತ್ವ ನೀಡಿದೆ.

ಹಲವರು ನಂಬಲು ಹಾಗೂ ನಂಬಿಸಲು ಪ್ರಯತ್ನಿಸುತ್ತಿರುವಂತೆ ಇದು ಕೆಲ ಪರಿಸರವಾದಿಗಳು ಮತ್ತು ಬುದ್ಧಿಜೀವಿಗಳಷ್ಟೇ ಇರುವ ಚಳವಳಿಯಲ್ಲ.
ಅಣ್ಣಾ ಹಜಾರೆಯವರ ಸತ್ಯಾಗ್ರಹದಂತೆ ಇದು ನಮಗೆ ನಯನ ಮನೋಹರವಾದ ದೃಶ್ಯಗಳಾಗಿ ಟಿ.ವಿ.ಯಲ್ಲಿ ಕಾಣಸಿಗಲಿಲ್ಲ.

ಪತ್ರಿಕೆಗಳಲ್ಲಿ ಓದಲೂ ಸಿಗಲಿಲ್ಲ. `ನಾನೂ ಅಣ್ಣಾ~ ಎಂದು ಇಂಡಿಯಾದ ಮೂಲೆ ಮೂಲೆಗಳಿಂದ ಪುಟ್ಟ ಮಕ್ಕಳೂ ಕೂಗಿ ಹೇಳಿದಂತೆ ಯಾವ ಮಗುವೂ ಯಾವ ಮೂಲೆಯಿಂದಲೂ `ನಾನೂ ಕೂಡಂಕುಳಂ~ ಎಂದು ಕೂಗಿ ಹೇಳಲಿಲ್ಲ.

ಆದರೂ ಈ ಚಳವಳಿ ಉಂಟು ಮಾಡಿದ ಸದ್ದು ಯಾರ ಕಿವಿಗೂ ಕೇಳಿಸದೇ ಇರಲಿಲ್ಲ.

ಚಳವಳಿಯ ಇತಿಹಾಸ
ಇಲ್ಲಿಯ ತನಕ ಈ ಚಳವಳಿಗಾರರೆಲ್ಲಿದ್ದರು? ಇದೊಂದು ಸಹಜ ಪ್ರಶ್ನೆ. ಈ ಚಳವಳಿ ರಾತ್ರೋರಾತ್ರಿ ಹುಟ್ಟಿಕೊಂಡಿದ್ದೇನೂ ಅಲ್ಲ. ಕೂಡಂಕುಳಂ ಅಣು ವಿದ್ಯುತ್ ಸ್ಥಾವರ ಯೋಜನೆಯ ಇತಿಹಾಸ ಅವಿಭಾಜ್ಯ ಅಂಗ ಯೋಜನೆಯನ್ನು ವಿರೋಧಿಸುವ ಚಳವಳಿ.
ಉಪವಾಸ ಸತ್ಯಾಗ್ರಹ ಚಳವಳಿಯ ಇತ್ತೀಚಿನ ಅಭಿವ್ಯಕ್ತಿಯಷ್ಟೇ.

1974ರಲ್ಲಿ ಪೊಖ್ರಾಣ್‌ನಲ್ಲಿ ಮೊದಲ ಬಾರಿ ಭಾರತ ಅಣ್ವಸ್ತ್ರ ಪರೀಕ್ಷೆ ನಡೆಸಿತು. ಇದರ ಹಿಂದೆಯೇ ಅಮೆರಿಕ ಭಾರತದ ಮೇಲೆ ಅಣುಶಕ್ತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ನಿಷೇಧಗಳನ್ನು ಹೇರಿತು.

ಪರಿಣಾಮವಾಗಿ ತನ್ನ ಅಣುಶಕ್ತಿ ಯೋಜನೆಗಳನ್ನು ಮುಂದುವರಿಸುವುದಕ್ಕೆ ಸೋವಿಯತ್ ಯೂನಿಯನ್‌ನ ಸಹಕಾರ ಭಾರತಕ್ಕೆ ಅನಿವಾರ್ಯವಾಯಿತು. ಒಂದರ್ಥದಲ್ಲಿ ಕೂಡಂಕುಳಂ ಯೋಜನೆಗೂ ಇದೇ ಪ್ರೇರಣೆ.

1988ರಲ್ಲಿ ಅಂದಿನ ಪ್ರಧಾನಿ ರಾಜೀವ್‌ಗಾಂಧಿ ಸೋವಿಯತ್ ಯೂನಿಯನ್ ಅಧ್ಯಕ್ಷ ಮಿಖಾಯಿಲ್ ಗೋರ್ಬಚೆವ್ ಜೊತೆ ಅಣುಶಕ್ತಿ ಒಪ್ಪಂದಕ್ಕೆ ಸಹಿ ಹಾಕಿದಾಗ ಈ ಯೋಜನೆ ರೂಪುಗೊಂಡಿತು. ಅಂದೇ ಯೋಜನೆಯ ವಿರುದ್ಧದ ಆಂದೋಲನಕ್ಕೂ ಚಾಲನೆ ದೊರೆಯಿತು.

ಆಗ ಸ್ಥಳೀಯ ಕೃಷಿಕರು ಮತ್ತು ಮೀನುಗಾರರು ಯೋಜನೆಯನ್ನು ವಿರೋಧಿಸುವವರಲ್ಲಿ ಮುಂಚೂಣಿಯಲ್ಲಿದ್ದರು. ಪೇಚ್ಚಿಪ್ಪಾರೈ ಜಲಾಶಯದಿಂದ ವಿದ್ಯುತ್ ಸ್ಥಾವರಕ್ಕೆ ನೀರನ್ನು ಒದಗಿಸಲಾಗುವುದೆಂಬ ಪ್ರಸ್ತಾಪಕ್ಕೆ ಮೊದಲು ರೈತರಿಂದ ವಿರೋಧ ವ್ಯಕ್ತವಾಯಿತು.

ಮೊದಲೇ ಕೃಷಿಗೆ ನೀರು ಕಡಿಮೆಯಾಗಿದೆ ಎಂದು ಗೊಣಗುತ್ತಿದ್ದ ರೈತರಿಗೆ ಭಾರೀ ಪ್ರಮಾಣದ ನೀರನ್ನು ವಿದ್ಯುತ್ ಸ್ಥಾವರ ಬಳಸುವುದು ತಿಳಿದಾಗ ಸಹಜವಾಗಿಯೇ ಸಿಟ್ಟಿಗೆದ್ದರು.
 
`ಸಮತ್ವ ಸಮುದಾಯ ಐಕ್ಯಂ~ ಎಂಬ ಸಂಘಟನೆಯೊಂದರ ನೇತೃತ್ವದಲ್ಲಿ ತಿರುನಲ್ವೇಲಿ, ಕನ್ಯಾಕುಮಾರಿ ಮತ್ತು ತೂತ್ತುಕುಡಿ ಜಿಲ್ಲೆಗಳ ರೈತರ 1988ರಲ್ಲೇ ಒಂದು ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಿದರು.
 
ಇದರ ಹಿಂದೆಯೇ ಸಂಭವಿಸಿದ ಸೋವಿಯತ್ ಯೂನಿಯನ್ ಪತನ ಮತ್ತು 1991ರ ರಾಜೀವ್ ಗಾಂಧಿ ಹತ್ಯೆಗಳ ಪರಿಣಾಮವಾಗಿ ಸರ್ಕಾರ ಈ ಯೋಜನೆಯನ್ನು ತಾತ್ಕಾಲಿಕವಾಗಿ ಮರೆತುಬಿಟ್ಟಿತು.

ಈ ಯೋಜನೆಗೆ ಮತ್ತೆ ಜೀವ ದೊರೆತದ್ದು 1997ರಲ್ಲಿ. ಅಂದಿನ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ರಷ್ಯಾದ ಅಧ್ಯಕ್ಷ ಬೋರಿಸ್ ಎಲ್ಸ್ಟಿನ್ ನೆನೆಗುದಿಗೆ ಬಿದ್ದಿದ್ದ ಈ ಯೋಜನೆಯನ್ನು ಮತ್ತೆ ಕೈಗೆತ್ತಿಕೊಳ್ಳುವ ಮೂಲಕ ಭಾರತ-ರಷ್ಯಾ ಬಾಂಧವ್ಯವನ್ನು ವೃದ್ಧಿಸಲು ಪ್ರಯತ್ನಿಸಿದರು.
 
ಕೂಡಂಕುಳಂ ಯೋಜನೆಗೆ ಸಂಬಂಧಿಸಿದ ಒಪ್ಪಂದವನ್ನು ನವೀಕರಿಸಲಾಯಿತು. ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಅಗತ್ಯವಿರುವ ವಿಸ್ತೃತ ಯೋಜನಾ ವರದಿ ತಯಾರಾಯಿತು.

ಇದರ ಹಿಂದೆಯೇ ಯೋಜನೆಯನ್ನು ವಿರೋಧಿಸುವ ಆಂದೋಲನವೂ ಮರುಜೀವ ಪಡೆಯಿತು. ಎರಡು ಲಕ್ಷ ಜನರನ್ನು ಕ್ಯಾನ್ಸರ್ ಪೀಡಿತರನ್ನಾಗಿಸಿ ಮೂರೂವರೆ ಲಕ್ಷ ಜನರನ್ನು ವಸತಿಹೀನರನ್ನಾಗಿಸಿದ 1986ರ ಚೆರ್ನೋಬೈಲ್ ದುರಂತ ಅಣು ವಿದ್ಯುತ್ ಸ್ಥಾವರ ವಿರೋಧಿಗಳಿಗೊಂದು ಅಸ್ತ್ರವಾಯಿತು.

ಹಳೆಯ ಎಲ್ಲ ಸಮಸ್ಯೆಗಳ ಜೊತೆಗೆ ರಷ್ಯಾದ ಅಣುಶಕ್ತಿ ತಂತ್ರಜ್ಞಾನದ ಅಪಾಯವನ್ನೂ ಮುಂದಿಟ್ಟುಕೊಂಡು ವಿರೋಧವನ್ನು ವ್ಯಕ್ತಪಡಿಸಿದರೂ ಹೆಚ್ಚಿನ ಉಪಯೋಗವೇನೂ ಆಗಲಿಲ್ಲ.
 
ಟಿ-90 ಟ್ಯಾಂಕರ್‌ಗಳು, ಎಸ್‌ಯು-30 ಸಮರ ವಿಮಾನಗಳು, ಅಡ್ಮಿರಲ್ ಗೋರ್ಷ್ಕೊವ್ ಜಲಾಂತರ್ಗಾಮಿ ನೌಕೆಗಳು ಮುಂತಾದ ಸೇನೆಗೆ ಅಗತ್ಯವಿರುವ ಪೂರೈಕೆಗಳ ಜೊತೆಗೆ ಕೂಡಂಕುಳಂ ಯೋಜನೆಯನ್ನೂ ಸೇರಿಸಿಕೊಂಡದ್ದರಿಂದ ಅಣುಶಕ್ತಿ ತಂತ್ರಜ್ಞಾನದ ಸುರಕ್ಷತೆಯ ಕುರಿತು ಭಾರತ ಸರ್ಕಾರ ಜಾಣ ಮರೆವು ತೋರಿತು.

ಬದುಕಿನ ಪ್ರಶ್ನೆ
ಕೂಡಂಕುಳಂ ಒಂದು ದೊಡ್ಡ ಗ್ರಾಮ. 2001ರ ಜನಗಣತಿ ಹೇಳುತ್ತಿರುವಂತೆ ಇಲ್ಲಿನ ಒಟ್ಟು ಕುಟುಂಬಗಳ ಸಂಖ್ಯೆ 2386. ಇವುಗಳಲ್ಲಿ 944 ದಲಿತ ಕುಟುಂಬಗಳಿವೆ.
 
ಎಲ್ಲಾ ಕೃಷಿ ಪ್ರಧಾನ ಗ್ರಾಮಗಳಂತೆಯೇ ಇಲ್ಲಿಯೂ ನಿರುದ್ಯೋಗದ ಪ್ರಮಾಣ ಹೆಚ್ಚು. ವರ್ಷದ ಒಂದು ಋತುವಿನಲ್ಲಷ್ಟೇ ಕೈತುಂಬಾ ಕೆಲಸವಿರುತ್ತದೆ.

ಮಹಿಳೆಯರನ್ನು ಸ್ವಲ್ಪ ಮಟ್ಟಿಗಾದರೂ ಉದ್ಯೋಗಿಗಳನ್ನಾಗಿಸಿರುವುದು ಬೀಡಿ ಉದ್ಯಮ. ವಿದ್ಯುತ್ ಸ್ಥಾವರದಿಂದ ತೊಂದರೆಗೊಳಗಾಗುವ ಮತ್ತೊಂದು ಗ್ರಾಮ ಇಡಿಂದಕ್ಕರೈ. 
 
ಇಲ್ಲಿರುವವರಲ್ಲಿ ಹೆಚ್ಚಿನವರು ಮೀನುಗಾರಿಕೆಯನ್ನು ಕುಲಕಸುಬನ್ನಾಗಿ ಸ್ವೀಕರಿಸಿರುವ ಮೀನವರ್ ಜಾತಿಯವರು. ಇವರ ಜೊತೆಗೆ ಹತ್ತಿರದ ಉವರಿ. ಕೂತ್ತಾಂಕುರಿ ಗ್ರಾಮಗಳ ಜನರೂ ಹಲವಾರು ವರ್ಷಗಳಿಂದ ಕೂಡಂಕುಳಂ ವಿದ್ಯುತ್ ಸ್ಥಾವರ ವಿರೋಧಿ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಯೋಜಿಸಿರುವಂತೆ ರಷ್ಯಾ ತಂತ್ರಜ್ಞಾನದ ತಲಾ ಸಾವಿರ ಮೆಗಾವ್ಯಾಟ್ ಸಾಮರ್ಥ್ಯದ ಎರಡು ವಿವಿಇಆರ್-1000 ರಿಯಾಕ್ಟರುಗಳನ್ನು ಕೂಡಂಕುಳಂನಲ್ಲಿ ಸ್ಥಾಪಿಸಲಾಗುತ್ತಿದೆ. ಯೋಜನಾ ವೆಚ್ಚದ ಅಂದಾಜು 13,000 ಕೋಟಿ ರೂಪಾಯಿಗಳು.
 
ಎಲ್ಲವೂ ಯೋಜನೆಯಂತೆ ನಡೆದರೆ ಮೊದಲನೆಯ ರಿಯಾಕ್ಟರ್ ಇದೇ ಡಿಸೆಂಬರ್‌ನಿಂದ ವಿದ್ಯುತ್ ಉತ್ಪಾದನೆ ಆರಂಭಿಸಬೇಕು.

ಅಣು ವಿದ್ಯುತ್ ಸ್ಥಾವರವೊಂದರ ಸುತ್ತಲಿನ ಹದಿನೆಂಟು ಕಿಲೋಮೀಟರ್ ಪರಿಧಿಯಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇರಬಾರದು ಎಂಬ ನಿಯಮವನ್ನೇ ಈ ಯೋಜನೆ ಗಾಳಿಗೆ ತೂರಿದೆ ಎಂದು ಸ್ಥಾವರ ವಿರೋಧಿ ಹೋರಾಟಗಾರರು ಹೇಳುತ್ತಿದ್ದಾರೆ. ಅವರ ಭಯ ಕೇವಲ ವಿಕಿರಣ ಮನುಷ್ಯರ ಮೇಲೆ ಬೀರುವ ಪರಿಣಾಮಕ್ಕಷ್ಟೇ ಸೀಮಿತವಾಗಿಲ್ಲ.

ಕಲ್ಪಾಕಂ ಹೇಳುತ್ತಿರುವ ಕಥೆಗಳು
ಕೂಡಂಕುಳಂನಲ್ಲಿ ಸ್ಥಾಪಿಸಲಾಗುತ್ತಿರುವ ಎರಡೂ ರಿಯಾಕ್ಟರುಗಳು ಪ್ರೆಶರೈಸ್ಡ್ ವಾಟರ್ ರಿಯಾಕ್ಟರ್ ವರ್ಗಕ್ಕೆ ಸೇರಿದವು. ಇವುಗಳಲ್ಲಿ ನೀರು ತಂಪುಕಾರಕವಾಗಿ ಬಳಕೆಯಾಗುತ್ತದೆ.
 
ಈಗಾಗಲೇ ವಿದ್ಯುತ್ ಉತ್ಪಾದನೆ ನಡೆಸುತ್ತಿರುವ ಕಲ್ಪಾಕಂ ಅಣು ವಿದ್ಯುತ್ ಸ್ಥಾವರದಲ್ಲಿ 220 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಭಾರಜಲ ರಿಯಾಕ್ಟರುಗಳಿವೆ. ತಾಂತ್ರಿಕ ಮತ್ತು ಸುರಕ್ಷತೆಯ ಕಾರಣಗಳಿಂದಾಗಿ ಈ ರಿಯಾಕ್ಟರುಗಳಲ್ಲಿ ಕೇವಲ 175 ಮೆಗಾವ್ಯಾಟ್ ವಿದ್ಯುತನ್ನಷ್ಟೇ ಉತ್ಪಾದಿಸಲಾಗುತ್ತಿದೆ.

ಕಂಡೆನ್ಸರ್‌ನಲ್ಲಿ ನೀರಾವಿಯನ್ನು ತಂಪುಗೊಳಿಸಲು ಸಮುದ್ರದ ನೀರನ್ನು ಬಳಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಬಿಸಿಯಾಗುವ ನೀರನ್ನು ಕಡಲಾಳಕ್ಕೆ ಚಾಚಿಕೊಂಡಿರುವ ಪೈಪ್‌ಗಳ ಮೂಲಕ ಮತ್ತೆ ಸಮುದ್ರಕ್ಕೇ ಬಿಡಲಾಗುತ್ತದೆ.

ಈ ನೀರು ಸಮುದ್ರಕ್ಕೆ ಸೇರುವ ಸ್ಥಳದಲ್ಲಿ ಅದರ ಉಷ್ಣತೆ 140 ಡಿಗ್ರಿ ಫ್ಯಾರನ್‌ಹೀಟ್. ಇದು ಸಮುದ್ರದಲ್ಲಿರುವ ಎಲ್ಲಾ ಬಗೆಯ ಜೀವಿಗಳ ಮಟ್ಟಿಗೂ ಮಾರಣಾಂತಿಕವೇ. (ಸಾಮಾನ್ಯ ಸ್ಥಿತಿಯಲ್ಲಿ ಸಮುದ್ರಜಲದ ಉಷ್ಣತೆ 85 ಡಿಗ್ರಿ ಸೆಂಟಿಗ್ರೇಟ್ ಮಾತ್ರ).

ಕಲ್ಪಾಕಂನ ಎರಡೂ ರಿಯಾಕ್ಟರುಗಳಿಂದ ಹೊರಬರುವ ನೀರು ಮೀನಿನ ಲಭ್ಯತೆಯ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಸ್ಥಳೀಯ ಮೀನುಗಾರರ ದೂರಿಗೆ ಈಗ ದಶಕಗಳ ಇತಿಹಾಸವಿದೆ.

ಎರಡೂ ರಿಯಾಕ್ಟರುಗಳು ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕಡಲಿಗಿಳಿದರೆ ಮೈಮೇಲೆ ಬೊಬ್ಬೆಗಳೇಳುವುದೂ ಉಂಟು ಎಂದು ಮೀನುಗಾರರು ಹೇಳುತ್ತಾರೆ. ಸಿಕ್ಕ ಮೀನನ್ನು ಮಾರಾಟ ಮಾಡುವುದಕ್ಕೂ ಇಲ್ಲಿನ ಮೀನುಗಾರರಿಗೆ ಅನೇಕ ತೊಂದರೆಗಳಿವೆ.
ಕಲ್ಪಾಕಂ ಪ್ರದೇಶದ ಮೀನು ಎಂದರೆ ಅದರಲ್ಲಿ ವಿಕಿರಣದ ಅಂಶವಿರಬಹುದೆಂಬ ಭಯದಿಂದ ಜನರು ಮೀನು ಖರೀದಿಸಲೇ ಬರುವುದಿಲ್ಲ.

ಕೇವಲ 340 ಮೆಗಾವ್ಯಾಟ್ ಉತ್ಪಾದಿಸುವ ಕಲ್ಪಾಕಂನ ಸ್ಥಿತಿಯೇ ಹೀಗಿದ್ದರೆ ಇದರ ಆರು ಪಟ್ಟು ಹೆಚ್ಚು ವಿದ್ಯುತ್ ಉತ್ಪಾದಿಸುವ ಕೂಡಂಕುಳಂ ಸ್ಥಾವರದ ಪರಿಣಾಮಗಳೇನು ಎಂಬುದು ಇಡಂದಿಕ್ಕರೈನ ಮೀನುಗಾರರ ಪ್ರಶ್ನೆ.

ತಮಿಳುನಾಡು ಸರ್ಕಾರದ ನಿಲುವು
ಕೂಡಂಕುಂಳ ಮತ್ತು ಸುತ್ತಮುತ್ತಲ ನಿವಾಸಿಗಳ ಸಂಶಯಗಳನ್ನು ನಿವಾರಿಸಿದ ಮೇಲಷ್ಟೇ ಯೋಜನೆಯನ್ನು ಮುಂದುವರಿಸಬೇಕೆಂದು ತಮಿಳುನಾಡು ವಿಧಾನ ಸಭೆ 2011 ಸೆಪ್ಟೆಂಬರ್ 21ರಂದು ನಿರ್ಣಯ ಕೈಗೊಂಡಿತು.

ಈ ನಿರ್ಣಯಕ್ಕೆ ಬೆಲೆ ಕೊಟ್ಟು ಇಡಂದಿಕ್ಕರೈಯಲ್ಲಿ ಹೋರಾಟಗಾರರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಹನ್ನೊಂದನೇ ದಿನಕ್ಕೆ ಕೊನೆಗೊಳಿಸಿದರು. ಇದಕ್ಕೂ ಮುನ್ನ ತಮಿಳುನಾಡು ಸರ್ಕಾರವೂ ಯೋಜನೆ ಬೇಕೆಂದು ವಾದಿಸುತ್ತಿತ್ತು.

ಹೋರಾಟಗಾರರ ಜೊತೆಗಿನ ನಿರಂತರ ಮಾತುಕತೆಯ ನಂತರ ನಿಲುವು ಬದಲಾಯಿಸಿಕೊಂಡಿತು. ಈ ಹೋರಾಟಕ್ಕೆ ದೊರೆತಿದ್ದ ಭಾರೀ ಜನಬೆಂಬಲ ಕೂಡಾ ಸರ್ಕಾರ ತನ್ನ ನಿಲುವು ಬದಲಾಯಿಸಿಕೊಳ್ಳಲು ಕಾರಣವಾಯಿತೇನೋ.

ಅಕ್ಟೋಬರ್ 7ರಂದು ತಮಿಳುನಾಡು ವಿಧಾನಸಭೆಯ ನಿಯೋಗವೊಂದು ನವದೆಹಲಿಗೆ ಹೋಗಿ ಪ್ರಧಾನ ಮಂತ್ರಿಯವರನ್ನೂ ಭೇಟಿಯಾಯಿತು. ಆದರೆ ಪ್ರಧಾನಿಯವರ ಉತ್ತರ ಈ ಯೋಜನೆಯನ್ನು ತಡೆಯುವುದು ತಮಿಳುನಾಡಿನ ಅಭಿವೃದ್ಧಿಗೇ ಮಾರಕವಾಗಿ ಪರಿಣಮಿಸಬಹುದೆಂಬ ನಿರಾಶಾದಾಯಕ ಉತ್ತರ ನೀಡಿದರು.

ಪರಿಣಾಮವಾಗಿ ಚಳವಳಿ ತೀವ್ರಗೊಂಡಿತು. ವಿದ್ಯುತ್ ಸ್ಥಾವರದ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದ ಕಾರ್ಮಿಕರನ್ನು ತಡೆಯುವ ಪ್ರಕ್ರಿಯೆ ಆರಂಭಗೊಂಡಿತು. ಅಕ್ಟೋಬರ್ 13ರ ರಾತ್ರಿ ವಿದ್ಯುತ್ ಸ್ಥಾವರಕ್ಕಿರುವ ಎಲ್ಲಾ ದ್ವಾರಗಳಲ್ಲೂ ನಿಂತ ಸಾವಿರಾರು ಮಂದಿ ಹೋರಾಟಗಾರರು ಯಾರನ್ನೂ ಒಳಗೆ ಪ್ರವೇಶಿಸಲು ಬಿಡಲಿಲ್ಲ.

ಈ ಸಂದರ್ಭದಲ್ಲಿ ನಡೆದ ಪೊಲೀಸ್ ಲಾಠಿ ಚಾರ್ಜ್‌ನಲ್ಲಿ ನಾಲ್ವರು ಅಂಗವಿಕಲರು ಗಾಯಾಳುಗಳಾದರು. ಕೇಂದ್ರ ಸರ್ಕಾರದ ನಿಲುವಿನಿಂದ ಬೇಸತ್ತ ಹೋರಾಟಗಾರರು ಅಕ್ಟೋಬರ್ 18ರಿಂದ ಮತ್ತೆ ಸರಣಿ ಉಪವಾಸ ಸತ್ಯಾಗ್ರಹ ಆರಂಭಿಸಿದರು.
 
ಈ ಲೇಖನವನ್ನು ಬರೆಯುತ್ತಿರುವಾಗಲೂ ಇಡಂದಿಕ್ಕರೈ, ಕೂಡಂಕುಳಂ, ಅವುದೈಯಾರ್‌ಪುರಂಗಳಲ್ಲಿ ಸತ್ಯಾಗ್ರಹಗಳು ಮುಂದುವರಿದಿವೆ. ಈ ಪ್ರದೇಶಗಳಲ್ಲಿ ಸಾವಿರಾರು ಮಂದಿ ಪ್ರತಿದಿನ ಸೇರುತ್ತಿದ್ದಾರೆ. ಈ ಸತ್ಯಾಗ್ರಹವನ್ನು ಬೆಂಬಲಿಸಿ ಸುತ್ತಮುತ್ತಲಿನ ಹಳ್ಳಿಗಳಲ್ಲೂ ಸತ್ಯಾಗ್ರಹಗಳು ಆರಂಭವಾಗಿವೆ.

ನಾವು ತಮಿಳುನಾಡಿನಲ್ಲಿಲ್ಲವಲ್ಲ!
ಕೇರಳದ ದಕ್ಷಿಣದ ತುದಿಯಿಂದ ಕೂಡಂಕುಳಂಗೊಂದು ಗೆರೆಯೆಳೆದರೆ ಅದು ಅರವತ್ತು ಕಿಲೋಮೀಟರ್‌ಗೂ ಕಡಿಮೆ ಇರುತ್ತದೆ. ಕೂಡಂಕುಳಂನಲ್ಲಿ ಒಂದು ಅಣು ದುರಂತ ಸಂಭವಿಸಿದರೆ ತಿರುವನಂತಪುರ, ಕೊಲ್ಲಂ ಹಾಗೂ ಪತ್ತನಂತಿಟ್ಟ ಜಿಲ್ಲೆಗಳ ಬಹುತೇಕ ಭಾಗಗಳಿಂದ ಜನರನ್ನು ಸ್ಥಳಾಂತರಿಸಬೇಕಾಗುತ್ತದೆ.

ಅಂದರೆ ಇದೀಗ ಕೇವಲ ತಮಿಳುನಾಡಿಗಷ್ಟೇ ಸಂಬಂಧಿಸಿದ ವಿಚಾರವಲ್ಲ. ಇನ್ನೂ ಸ್ವಲ್ಪ ಸೂಕ್ಷ್ಮವಾಗಿ ನೋಡಿದರೆ ಭಾರತ ಉಪಖಂಡವನ್ನು ಆವರಿಸಿರುವ ಸಾಗರದ ಸಮಸ್ಯೆಯೂ ಹೌದು.

ಅಣು ಶಕ್ತಿಯ ಹುಚ್ಚನ್ನು ಇಡೀ ವಿಶ್ವವೇ ಅರ್ಥ ಮಾಡಿಕೊಂಡು ಸ್ಪಂದಿಸುತ್ತಿರುವಾಗ ನಾವು ಮಾತ್ರ ಹೊಸತಾಗಿ ಈ ಹುಚ್ಚಿಗೆ ಬಲಿಯಾಗುತ್ತಿದ್ದೇವೆ.

ಕರ್ನಾಟಕದ, ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರಗಳು ಹೊಸ ಫುಕುಶಿಮಾಗಳಾಗುವ ಹಾದಿಯಲ್ಲಿ ಸಾಗುತ್ತಿವೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ತುರ್ತು ನಮ್ಮೆದುರಿದೆ.

ಫುಕುಶಿಮಾ ಮತ್ತು ಬದಲಾಗುತ್ತಿರುವ ನೀತಿ
ಪರಮಾಣು ಬಾಂಬ್ ಮತ್ತು ಪರಮಾಣು ವಿದ್ಯುತ್‌ನ ಪರಿಣಾಮಗಳ ಮಧ್ಯೆ ಅಂಥ ದೊಡ್ಡ ವ್ಯತ್ಯಾಸವೇನೂ ಇಲ್ಲ.

1979ರಲ್ಲಿ ಅಮೆರಿಕದ್ಲ್ಲಲಿ ಸಂಭವಿಸಿದ ತ್ರೀ ಮೈಲ್ ಐಲ್ಯಾಂಡ್ ದುರಂತ, 1986ರಲ್ಲಿ ಸೋವಿಯತ್ ಯೂನಿಯನ್‌ನ ಚೆರ್ನೋಬಿಲ್ ದುರಂತ ಈ ವರ್ಷ ಸುನಾಮಿಯಿಂದಾಗಿ ಸಂಭವಿಸಿದ ಜಪಾನ್‌ನ ಫುಕುಶಿಮಾ ದುರಂತಗಳೆಲ್ಲವೂ ಹಿರೋಷಿಮಾ-ನಾಗಾಸಾಕಿಯ ಅಣು ಬಾಂಬ್ ದಾಳಿಯನ್ನು ಬೇರೆ ಬೇರೆ ರೀತಿಯಲ್ಲಿ ಹೋಲುತ್ತವೆ.

ಫುಕುಶಿಮಾದ ದುರಂತ ಜಾಗತಿಕ ಮಟ್ಟದಲ್ಲಿ ಅಣು ವಿದ್ಯುತ್‌ಗೆ ಸಂಬಂಧಿಸಿದ ಮರುಚಿಂತನೆಗೆ ಪ್ರೇರಕವಾದ್ದ್ದದು ನಿಜ. ಅಷ್ಟೇ ಅಲ್ಲ ದಶಕಗಳಿಂದ ನಡೆಯುತ್ತಿದ್ದ ಕೂಡಂಕುಳಂ ಅಣು ವಿದ್ಯುತ್ ಸ್ಥಾವರ ವಿರೋಧಿ ಹೋರಾಟಕ್ಕೆ ಹೊಸ ತರ್ಕಗಳನ್ನು ಒದಗಿಸಿತು.

ಈ ವರ್ಷದ ಪೂರ್ವಾರ್ಧದಲ್ಲಿ ಜರ್ಮನಿಯ ಚಾನ್ಸಲರ್ ಅಂಜೆಲಾ ಮರ್ಕೆಲ್ 2022ರ ಅಂತ್ಯದ ವೇಳೆ ಜರ್ಮನಿ ತನ್ನ ಎಲ್ಲಾ 17 ಅಣು ವಿದ್ಯುತ್ ಸ್ಥಾವರಗಳನ್ನು ಶಾಶ್ವತವಾಗಿ ಮುಚ್ಚುವುದರೊಂದಿಗೆ ಜಗತ್ತಿನ ಮೊದಲ ಅಣು ವಿದ್ಯುತ್ ರಹಿತ ಕೈಗಾರಿಕಾ ದೇಶವಾಗಲಿದೆ ಎಂದು ಘೋಷಿಸಿದರು.

ಅವರ ಈ ಘೋಷಣೆಯ ಹಿಂದೆಯೇ ಜರ್ಮನಿಯ ಪ್ರಮುಖ ಕಂಪೆನಿಗಳಲ್ಲಿ ಒಂದಾದ ಸಿಮೆನ್ಸ್ ಅಣು ಶಕ್ತಿಗೆ ಸಂಬಂಧಿಸಿದ ಎಲ್ಲಾ ರೀತಿಯ ತನ್ನ ವ್ಯವಹಾರಗಳನ್ನೂ ಮುಕ್ತಾಯಗೊಳಿಸಲು ತೀರ್ಮಾನಿಸಿತು.
 
ಸೆಪ್ಟೆಂಬರ್ 19ರಂದು ಸ್ಪೀಗೆಲ್ ಎಂಬ ಜರ್ಮನ್ ಮಾಸ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಸಿಮೆನ್ಸ್‌ನ ಮುಖ್ಯಸ್ಥ ಪೀಟರ್ ಲಷರ್ ತಮ್ಮ ಕಂಪೆನಿಯ ನಿಲುವನ್ನು ಸ್ಪಷ್ಟಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT