ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡಗಿ ವಿದ್ಯುತ್ ಸ್ಥಾವರಕ್ಕೆ 2ರಂದು ಅಡಿಗಲ್ಲು

Last Updated 28 ಮೇ 2012, 19:30 IST
ಅಕ್ಷರ ಗಾತ್ರ

ವಿಜಾಪುರ: ಬಹು ನಿರೀಕ್ಷಿತ ಕೂಡಗಿ ಅಲ್ಟ್ರಾ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಇದಕ್ಕೆ ಜೂನ್ 2ರಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರ ಸಮ್ಮುಖದಲ್ಲಿ ಕೇಂದ್ರ ಇಂಧನ ಸಚಿವ ಸುಶೀಲಕುಮಾರ ಶಿಂಧೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಎನ್‌ಟಿಪಿಸಿ ಕರ್ನಾಟಕದಲ್ಲಿ ಆರಂಭಿಸುತ್ತಿರುವ ಮೊದಲ ಘಟಕ ಇದಾಗಿದೆ. ಯೋಜನೆಗೆ ಒಟ್ಟಾರೆ 3,500 ಎಕರೆ ಜಮೀನು ಅಗತ್ಯ ಇದೆ. ಈಗ 1,923 ಎಕರೆ ಭೂಮಿ ಸ್ವಾಧೀನವಾಗಿದೆ. ವಶಕ್ಕೆ ಪಡೆದ ಜಮೀನಿಗೆ ತಂತಿ ಬೇಲಿ ಹಾಕಲಾಗಿದೆ. ಯೋಜನಾ ಸ್ಥಳದಲ್ಲಿ ಕಚೇರಿಯನ್ನೂ ಆರಂಭಿಸಲಾಗಿದೆ.

ಇದು ಒಟ್ಟು 4,000 ಮೆಗಾವ್ಯಾಟ್ ಸಾಮರ್ಥ್ಯದ ಯೋಜನೆ. ಮೊದಲ ಹಂತದಲ್ಲಿ 800 ಮೆ.ವಾ. ಸಾಮರ್ಥ್ಯದ ತಲಾ ಮೂರು ಹಾಗೂ ಎರಡನೇ ಹಂತದಲ್ಲಿ 800 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಘಟಕಗಳನ್ನು ನಿರ್ಮಿಸಲಾಗುತ್ತದೆ.

ಮೊದಲ ಮೂರು ಘಟಕಗಳ ಸ್ಥಾಪನೆಗಾಗಿ ರೂ.15,166 ಕೋಟಿ ಹೂಡಿಕೆ ಮಾಡಲಾಗುತ್ತಿದೆ. ಈ ಘಟಕಕ್ಕೆ ಬೇಕಾಗುವ 6,087 ಕೋಟಿ ರೂಪಾಯಿ ಮೌಲ್ಯದ ಉಪಕರಣಗಳ ಖರೀದಿಗೆ ಕೊರಿಯಾದ ದುಸಾನ್ ಮತ್ತು ಜಪಾನ್ ದೇಶದ ತೋಷಿಬಾ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕಾಮಗಾರಿಯೂ ಆರಂಭಗೊಂಡಿದೆ. ಅಗತ್ಯ ಇರುವ 162 ಕ್ಯೂಸೆಕ್ ನೀರನ್ನು ಅಲಮಟ್ಟಿ ಜಲಾಶಯದಿಂದ ಪಡೆಯಲಾಗುತ್ತದೆ. ಒಟ್ಟು 3,000 ಉದ್ಯೋಗಾವಕಾಶ ಸೃಷ್ಟಿಯಾಗಲಿದೆ.

ಸುಮಾರು ನಾಲ್ಕು ವರ್ಷಗಳ ನಂತರ ಮೊದಲ ಹಂತದಲ್ಲಿ 2,400 ಮೆ.ವಾ. ವಿದ್ಯುತ್ ಉತ್ಪಾದನೆ ಆಗಲಿದೆ. ಈ ಘಟಕದಿಂದ ಉತ್ಪಾದನೆಯಾಗುವ ವಿದ್ಯುತ್‌ನಲ್ಲಿ ಶೇ 50ರಷ್ಟು ಕರ್ನಾಟಕ ಕ್ಕೆ ಹಾಗೂ ಉಳಿದುದು ವಿದ್ಯುತ್ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಪುದುಚೇರಿಗಳಿಗೆ ಪೂರೈಕೆ ಆಗಲಿದೆ.

`ಕೂಡಗಿ ಸ್ಥಾವರಕ್ಕೆ ಅಗತ್ಯವಿರುವ ಕಲ್ಲಿದ್ದಲು ಪೂರೈಸಲು ಕೇಂದ್ರ ಸರ್ಕಾರ ಭರವಸೆ ನೀಡಿದೆ. ಕಲ್ಲಿದ್ದಲನ್ನು ರೈಲಿನ ಮೂಲಕ ತರಿಸಲಾಗುವುದು. ಈ ಮಾರ್ಗದಲ್ಲಿ ಜೋಡಿ ಮಾರ್ಗ ನಿರ್ಮಾಣ ಹಾಗೂ ಅಗತ್ಯ ಮೂಲಸೌಲಭ್ಯ ಕಲ್ಪಿಸುವಂತೆ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದು, ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ~ ಎಂದು ಈ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಆಸಿಮ್‌ಕುಮಾರ ಸಮಂತ ಹೇಳುತ್ತಾರೆ.

ಭೂಮಿಗೆ ಹೆಚ್ಚುವರಿ ಪರಿಹಾರ ನೀಡಬೇಕು ಎಂಬುದು ರೈತರ ಬಹು ದಿನಗಳ ಬೇಡಿಕೆಯಾಗಿತ್ತು. ಅದಕ್ಕಾಗಿ ಸತ್ಯಾಗ್ರಹಕ್ಕೂ ಅವರು ಮುಂದಾಗಿದ್ದರು. ಜಿಲ್ಲಾ ಆಡಳಿತ ಹಾಗೂ ಎನ್‌ಟಿಪಿಸಿ ಅಧಿಕಾರಿಗಳು ಶನಿವಾರ ರೈತರೊಂದಿಗೆ ಸಂಧಾನ ಸಭೆ ನಡೆಸಿ ವಿವಾದ ಬಗೆಹರಿಸಿದ್ದಾರೆ.

`ನಮ್ಮ ಸ್ಥಾವರಕ್ಕೆ ಪಡೆಯುವ ಮತ್ತು ಪಡೆದ ಜಮೀನಿಗೆ ಪ್ರತಿ ಎಕರೆಗೆ ರೂ 2 ಲಕ್ಷದಂತೆ ವಿಶೇಷ ಎಕ್ಸ್‌ಗ್ರೇಷಿಯಾ ನೀಡಲು ನಿರ್ಧರಿಸಿದ್ದೇವೆ.  ಇದರಿಂದಾಗಿ ರೈತರಿಗೆ ಈಗ ಒಟ್ಟಾರೆ ಖುಷ್ಕಿ ಜಮೀನಿಗೆ ಎಕರೆಗೆ ರೂ 7.25 ಲಕ್ಷ, ನೀರಾವರಿ ಜಮೀನಿಗೆ ಎಕರೆಗೆ ರೂ 9 ಲಕ್ಷ ದೊರೆಯಲಿದೆ~ ಎಂದು ಅವರು `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT