ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡಗಿ ವಿದ್ಯುತ್ ಸ್ಥಾವರಕ್ಕೆ ವಿರೋಧ

Last Updated 8 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ವಿಜಾಪುರ: ‘ಜಿಲ್ಲೆಯ ಕೂಡಗಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಲ್ಲಿದ್ದಲು ಆಧರಿತ ಉಷ್ಣ ವಿದ್ಯುತ್ ಸ್ಥಾವರ ಯೋಜನೆ ಕೈಬಿಡುವಂತೆ ಒತ್ತಾಯಿಸಿ, ಯೋಜನೆ ವ್ಯಾಪ್ತಿಯ ವಿವಿಧ ಹಳ್ಳಿಗಳ ಸಾವಿರಾರು ರೈತರು ಮಂಗಳವಾರ ನಗರದಲ್ಲಿ ಬೃಹತ್ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

“ಕಲ್ಲಿದ್ದಲು ಆಧರಿತ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಿಂದ ಪರಿಸರದ ಮೇಲೆ ಹಾನಿಯಾಗಲಿದೆ. ಈ ಸ್ಥಾವರವನ್ನು ರೈತರು ವಿರೋಧಿಸಿದರೂ ಸರ್ಕಾರ, ಮೊಂಡುತನದಿಂದ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಜನತೆಯನ್ನು ಕತ್ತಲೆಯಲ್ಲಿಟ್ಟು ಕೂಡಗಿಯಲ್ಲಿ ಸ್ಥಾವರ ಸ್ಥಾಪಿಸಲಾಗುತ್ತಿದೆ” ಎಂದು ಪರಿಸರ ರಕ್ಷಣಾ ಸೇವಾ ವೇದಿಕೆಯ ಮುಖಂಡ, ಕೇಂದ್ರ ಸರ್ಕಾರದ ಅಣುಶಕ್ತಿ ಇಲಾಖೆ ನಿವೃತ್ತ ವಿಜ್ಞಾನಿ ಎಂ.ಪಿ. ಪಾಟೀಲ ದೂರಿದರು.

ಕೂಡಗಿ ಸ್ಥಾವರದಲ್ಲಿ ಎಷ್ಟೇ ಆಧುನಿಕ ತಂತ್ರಜ್ಞಾನ ಬಳಸಿದರೂ ಹವಾಮಾನ, ನೀರು ಹಾಗೂ ಜನತೆಯ ಆರೋಗ್ಯದ ಮೇಲೆ ಈ ಘಟಕ ದುಷ್ಪರಿಣಾಮ ಬೀರುತ್ತದೆ. ಹಾರುಬೂದಿಯಿಂದ ಆಲಮಟ್ಟಿ ಜಲಾಶಯ ಹಾಗೂ ಸುತ್ತಲಿನ ಕೆರೆ-ಕಟ್ಟೆಗಳಿಗೂ ಅಪಾಯವಾಗಲಿದೆ ಎಂದರು.

ಸ್ಥಾವರದ ಕುಲುಮೆಯಿಂದ ಹೊರ ಹೊಮ್ಮುವ ದೂಳು ಮತ್ತು ಅನಿಲಗಳಲ್ಲಿ ಅನೇಕ ವಿಷಕಾರಿ ಧಾತುಗಳಾದ ಪಾದರಸ, ಸಿಲಿನಿಯಂ, ಕ್ಯಾಡ್ಮಿಯಂ, ಅರ್ಸೆನಿಕ್‌ಗಳು ಕೆಲ ವರ್ಷಗಳ ನಂತರ ಸುತ್ತಲಿನ ಹಳ್ಳ, ಬಾವಿ, ಕೆರೆ, ಭೂಮಿಯಲ್ಲಿ ಸೇರಿ ನೀರು ಮತ್ತು ಅಂತರ್ಜಲವನ್ನು ಮಲಿನಗೊಳಿಸುತ್ತವೆ ಎಂದರು.

ಈ ಅಪಾಯಕಾರಿ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರದ ಬದಲು ಸೌರ ವಿದ್ಯುತ್ ಘಟಕ ಸ್ಥಾಪಿಸಬೇಕು. ಈ ಸ್ಥಾವರ ಲಾಭಕ್ಕಿಂತ ಹಾನಿಯೇ ಹೆಚ್ಚು. ಇಲ್ಲಿನ  25 ಹಳ್ಳಿಗಳಲ್ಲಿ ಜನಜಾಗೃತಿ ಮೂಡಿಸಿದ್ದೇವೆ. ರೈತರ ವಿರೋಧದ ಮಧ್ಯೆಯೂ ಸರ್ಕಾರ ಸ್ಥಾವರ ನಿರ್ಮಾಣಕ್ಕೆ ಮುಂದಾದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪರಿಸರ ರಕ್ಷಣಾ ಸೇವಾ ವೇದಿಕೆಯ ಸದಾನಂದ, ಮೋಹನಗೌಡ ಪಾಟೀಲ, ಎಸ್.ಆರ್. ಹುಲ್ಯಾಳ, ಗರಸಂಗಿ, ಎಂ.ಎನ್. ಬಿಸ್ಟಗೊಂಡ, ಮಲ್ಲಿಕಾರ್ಜುನ ಕೆಂಗನಾಳ, ಬಾಬು ಪೋಳ, ಜಿ.ಎಂ. ಯರಂತಲಿ, ಆನಂದ ಬಿಸ್ಟಗೊಂಡ ಸೇರಿದಂತೆ 25 ಹಳ್ಳಿಗಳ 2 ಸಾವಿರಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT