ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡುಂಕುಳಂ ಅಣು ವಿದ್ಯುತ್ ಸ್ಥಾವರ ಪ್ರತಿಭಟನೆ

Last Updated 29 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಚೆನ್ನೈ: ಕೂಡುಂಕುಳಂ ಅಣು ವಿದ್ಯುತ್ ಸ್ಥಾವರ ಸ್ಥಾಪನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೆ ನಾಲ್ಕು ಸರ್ಕಾರೇತರ ಸಂಸ್ಥೆ (ಎನ್‌ಜಿಒ)ಗಳು ಸುಮಾರು 12 ಕೋಟಿ ರೂಪಾಯಿ ನೆರವು ನೀಡಿರುವ ಮಾಹಿತಿ ಲಭ್ಯವಾಗಿದ್ದು, ಈ ಹಣವನ್ನು ಪ್ರತಿಭಟನಾಕಾರರಿಗೆ ಗಡಿಪಾರಾಗಿರುವ ಜರ್ಮನ್ ಪ್ರಜೆ ತಲುಪಿಸಿದ್ದ ಎಂದು ಹೇಳಲಾಗಿದೆ.

ಜರ್ಮನ್ ಪ್ರಜೆ ರೈನರ್ ಹರ್‌ಮಾನ್ ಎಂಬಾತ ಪ್ರವಾಸಿ ವೀಸಾ ಮೇಲಿದ್ದು, ವೀಸಾ ಉಲ್ಲಂಘನೆ ಹಿನ್ನೆಲೆಯಲ್ಲಿ ಆತನನ್ನು ಮಂಗಳವಾರವೇ ಸ್ವದೇಶಕ್ಕೆ ಗಡಿಪಾರು ಮಾಡಲಾಗಿದೆ. ಆತನಿಂದ ವಶಪಡಿಸಿಕೊಳ್ಳಲಾಗಿರುವ ಲ್ಯಾಪ್‌ಟಾಪ್‌ನಿಂದ ಅನೇಕ ಮಹತ್ವದ ಮಾಹಿತಿಗಳು ಲಭ್ಯವಾಗಿವೆ.

ಹರ್‌ಮಾನ್ ಕಳೆದ ಒಂದು ತಿಂಗಳಿನಿಂದ ನಾಗರಕೋಯಿಲ್‌ನಲ್ಲಿಯೇ ಬೀಡುಬಿಟ್ಟಿದ್ದ ಎಂದು ಪೊಲೀಸರು ಹಾಗೂ ಗುಪ್ತಚರ ಇಲಾಖೆ ಕಲೆ ಹಾಕಿರುವ ಮಾಹಿತಿಯಿಂದ ತಿಳಿದು ಬಂದಿದೆ.

ಅಣು ವಿದ್ಯುತ್ ಸ್ಥಾವರದ ವಿರುದ್ಧ ಹೋರಾಟ ಮಾಡುತ್ತಿದ್ದ ಜನರು ಹಾಗೂ ಎನ್‌ಜಿಒಗಳ ಜತೆ ಹರ್‌ಮಾನ್ ನಿಕಟ ಸಂಬಂಧ ಹೊಂದಿದ್ದ ಎನ್ನುವ ಶಂಕೆ ಮೂಡಿದೆ. ಆತನ ಲ್ಯಾಪ್‌ಟಾಪ್‌ನಲ್ಲಿನ ವಿವರಗಳನ್ನು ಕಲೆಹಾಕಿದ ನಂತರ ಆತನ ನಿಜವಾದ ಉದ್ದೇಶ ಬಹಿರಂಗವಾಗಲಿದೆ. ಸೈಬರ್ ಅಪರಾಧ ವಿಭಾಗದ ಪೊಲೀಸರೂ ಸಹ ಆತನ ಲ್ಯಾಪ್‌ಟಾಪ್‌ನಲ್ಲಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದರೆ ಯಾರೂ ತುಟಿ ಬಿಚ್ಚುತ್ತಿಲ್ಲ.

ಆದರೆ ಹರ್‌ಮಾನ್ ಚಲನವಲನಗಳ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆಯವರು ಸಾಕಷ್ಟು ಸಮಯದಿಂದ ನಿಗಾ ಇಟ್ಟಿದ್ದರು. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಿಂದ ಕೂಡುಂಕುಳಂನಲ್ಲಿ ಪ್ರತಿಭಟನೆ ತೀವ್ರಗೊಂಡ ನಂತರ, ಪ್ರತಿಭಟನೆಗೆ ಎಲ್ಲಿಂದ ಹಣಕಾಸಿನ ನೆರವು ಹರಿದು ಬರುತ್ತಿದೆ ಎನ್ನುವ ಕುರಿತು ಸಂಶಯಗಳು ಮೂಡಿದ್ದವು.

ನಾಟಕೀಯ ಬೆಳವಣಿಗೆ: ಪೀಪಲ್ಸ್ ಮೂವ್‌ಮೆಂಟ್ ಅಗೆನೆಸ್ಟ್ ನ್ಯೂಕ್ಲಿಯರ್ ಎನರ್ಜಿ (ಪಿಎಂಎಎನ್‌ಇ) ಚಳವಳಿ ನೇತೃತ್ವ ವಹಿಸಿರುವ ಎಸ್.ಪಿ.ಉದಯಕುಮಾರ್ ತಮ್ಮ ಮೂವರು ಸಹಚರರೊಂದಿಗೆ ಬುಧವಾರ ಬೆಳಿಗ್ಗೆ ಮುಖ್ಯಮಂತ್ರಿ ಜೆ.ಜಯಲಲಿತಾ ಅವರನ್ನು ಇಲ್ಲಿನ ಸಚಿವಾಲಯದಲ್ಲಿ ಭೇಟಿ ಮಾಡುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉದಯ ಕುಮಾರ್, ತಾವು ಯಾವುದೇ ವಿದೇಶಿ ಸಂಘಟನೆಗಳು ಅಥವಾ ಎನ್‌ಜಿಒಗಳಿಂದ ಹಣಕಾಸು ನೆರವು ಪಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಅಂಶವನ್ನು ತಾವು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದ್ದಾಗಿಯೂ ತಿಳಿಸಿದರು.

ನಾಲ್ಕು ಎನ್‌ಜಿಒಗಳ ಬ್ಯಾಂಕ್ ಖಾತೆಯನ್ನು ತನಿಖೆಯ ಸಂದರ್ಭದಲ್ಲಿ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿರುವ ಬಗ್ಗೆ ತಮಗೇನು ತಿಳಿದಿಲ್ಲ ಎಂದರು.

ಅಣುಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ಶ್ರೀನಿವಾಸನ್ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ನೇಮಿಸಿದ್ದ ನಾಲ್ವರು ತಜ್ಞರ ಸಮಿತಿ ಅಣುಸ್ಥಾವರಕ್ಕೆ ಭೇಟಿ ನೀಡಿ ಸುರಕ್ಷತೆ ಬಗ್ಗೆ ವರದಿ ನೀಡಿದ ಮರುದಿನವೇ ಉದಯಕುಮಾರ್ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.

ಕೂಡುಂಕುಳಂ ಅಣು ಸ್ಥಾವರದ ಸುರಕ್ಷತೆ ಬಗ್ಗೆ ಆತಂಕ ಇದ್ದು, ಅದನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದ್ದಾಗಿಯೂ ತಿಳಿಸಿದರು. ಶ್ರೀನಿವಾಸನ್ ನೇತೃತ್ವದ ಸಮಿತಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕ ಪಕ್ಷೀಯವಾಗಿ ವರದಿ ನೀಡಿದೆ ಎಂದು ಆರೋಪಿಸಿದರು.

ಪ್ರವಾಸಿ ವೀಸಾದ ಮಿತಿಗಳನ್ನು ಮೀರಿ ಹರ್‌ಮಾನ್ ವರ್ತಿಸಿದ್ದಾನೆ ಎನ್ನುವ ಗೃಹ ಸಚಿವ ಪಿ.ಚಿದಂಬರಂ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಇಂತಹ ಸಂದರ್ಭದಲ್ಲಿ ಆತನ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕಾಗಿತ್ತು. ಬದಲಾಗಿ ಆತನನ್ನು ಗಡಿಪಾರು ಮಾಡುವ ಉದ್ದೇಶ ಏನಿತ್ತು ಎಂದು ಪ್ರಶ್ನಿಸಿದರು.

ಸ್ಪಷ್ಟನೆಗೆ ಒತ್ತಾಯ: ಕೂಡುಂಕುಳಂ ಅಣು ವಿದ್ಯುತ್ ಸ್ಥಾವರ ಬೇಕೆ? ಅಥವಾ ಬೇಡವೇ? ಎನ್ನುವ ಕುರಿತು ರಾಜ್ಯ ಸರ್ಕಾರ ತನ್ನ ನಿಲುವು ಸ್ಪಷ್ಟ ಪಡಿಸಬೇಕು ಎಂದು ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಒತ್ತಾಯ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT