ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡುಂಕುಳಂ: ಮಾಹಿತಿ ವಿನಿಮಯ ಅಸಾಧ್ಯ- ಶ್ರೀಕುಮಾರ್ ಬ್ಯಾನರ್ಜಿ

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಭುವನೇಶ್ವರ: `ತಮಿಳುನಾಡಿನ ಕೂಡುಂಕುಳಂ ಅಣು ಸ್ಥಾವರ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರಿಗೆ ಪರಮಾಣು ಸುರಕ್ಷೆಗಿಂತ ಹೆಚ್ಚಾಗಿ ಸರ್ಕಾರದ ವರ್ಗೀಕೃತ ಮಾಹಿತಿಯೇ ಮುಖ್ಯವಾದಂತಿದೆ.

ಪ್ರತಿಭಟನಾಕಾರರು, ಕೂಡುಂಕುಳಂ ಯೋಜನೆಗೆ ಸಂಬಂಧಿಸಿದಂತೆ ಭಾರತ ಹಾಗೂ ರಷ್ಯಾ ನಡುವಿನ ಒಪ್ಪಂದದ ಪ್ರತಿಗಳನ್ನು ಹಾಗೂ ಮಾಹಿತಿಗಳನ್ನು  ಕೇಳುತ್ತಿದ್ದಾರೆ. ಆದರೆ ಇವುಗಳನ್ನು ವಿನಿಮಯ ಮಾಡಿಕೊಳ್ಳಲಾಗದು~ ಎಂದು ಪರಮಾಣು ಇಂಧನ ಆಯೋಗದ ಅಧ್ಯಕ್ಷ ಶ್ರೀಕುಮಾರ್ ಬ್ಯಾನರ್ಜಿ ಹೇಳಿದ್ದಾರೆ.

ಪರಮಾಣು ಸುರಕ್ಷೆಗೆ ಆಯೋಗವು ಸಾಕಷ್ಟು ಮಹತ್ವ ನೀಡಿದೆ. ಅಲ್ಲದೆ ಈ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆಗೂ ಸಿದ್ಧವಿದೆ. ಆದರೆ ಕೆಲವೊಂದು ಮಾಹಿತಿಗಳು ಸರ್ಕಾರದೊಳಗೇ ಇರುವಂಥವು. ಅವುಗಳನ್ನು ಯಾವುದೇ ಕಾರಣಕ್ಕೂ ವಿನಿಮಯ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಬ್ಯಾನರ್ಜಿ ಸ್ಪಷ್ಟಪಡಿಸಿದರು.

ಪ್ರಧಾನಿ ಮನಮೋಹನ್ ಸಿಂಗ್ ಅವರು ರಚಿಸಿರುವ 15 ಸದಸ್ಯರನ್ನೊಳಗೊಂಡ ತಜ್ಞರ ಸಮಿತಿ ಕೂಡ ಈ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಅಲ್ಲದೆ ಸಮಿತಿಯು ಕೂಡುಂಕುಳಂ ಸುರಕ್ಷೆ ಹಾಗೂ ಸಂಭವನೀಯ ಆರೋಗ್ಯ ಪರಿಣಾಮಗಳ ಬಗ್ಗೆ ಸ್ಥಳೀಯರು ಮತ್ತು ಸರ್ಕಾರದ ಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿದೆ. ಆದರೆ ಇದೀಗ ಪ್ರತಿಭಟನಾಕಾರರು ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ವರ್ಗೀಕೃತ ಮಾಹಿತಿಯ ಮೇಲೆ ಕಣ್ಣಿಟ್ಟಂತಿದೆ ಎಂದು ಬ್ಯಾನರ್ಜಿ ಆರೋಪಿಸಿದರು.

40 ವರ್ಷಗಳ ಹಿಂದೆ ತಾರಾಪುರ ಮರಳು ದಿಣ್ಣೆಯಾಗಿತ್ತು. ಇಲ್ಲಿ ಹುಲ್ಲು ಕೂಡ ಬೆಳೆಯುತ್ತಿರಲಿಲ್ಲ. ಆದರೆ ಪರಮಾಣು ಸ್ಥಾವರದಿಂದಾಗಿ ಅದು ಉಪನಗರವಾಗಿ ಮಾತ್ರವಲ್ಲ; ಕೈಗಾರಿಕಾ ನಗರ ಎಂಬ ಅಭಿದಾನಕ್ಕೂ ಪಾತ್ರವಾಗಿದೆ ಎಂದು ಹೇಳುವ ಮೂಲಕ ಬ್ಯಾನರ್ಜಿ ಕೂಡುಂಕುಳಂ ಯೋಜನೆಯ ಮಹತ್ವವನ್ನು ಬಿಚ್ಚಿಟ್ಟರು.
ಕೂಡುಂಕುಳಂ ಪ್ರತಿಭಟನಾಕಾರರು ಹಾಗೂ ಸಮಿತಿ ಮಧ್ಯೆ ಮುಂದಿನ ಸುತ್ತಿನ ಮಾತುಕತೆ ಇದೇ ತಿಂಗಳ 14-15 ರಂದು ನಡೆಯಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT